ಬುಧವಾರ, ಜೂನ್ 23, 2021
23 °C

ಬಂಗಾರದ ಹೂ ಬ್ಯಾರಿ

ಬಿ.ಎಂ. ಹನೀಫ್ Updated:

ಅಕ್ಷರ ಗಾತ್ರ : | |

ಬಂಗಾರದ ಹೂ ಬ್ಯಾರಿ

`ಮದುವೆ ಎನ್ನುವುದು ಜನ್ಮ ಜನ್ಮಗಳ ಅನುಬಂಧವಲ್ಲ; ಅದು ನಾಲ್ವರು ಸಾಕ್ಷಿಗಳ ಸಮ್ಮುಖದಲ್ಲಿ ಮಾಡಿಕೊಳ್ಳುವ ಕಾನೂನುಬದ್ಧ ಒಪ್ಪಂದ~ ಎನ್ನುತ್ತದೆ ಷರೀಯತ್.ಷರೀಯತ್ ಎಂದರೆ ಇಸ್ಲಾಂ ಧರ್ಮಶಾಸ್ತ್ರ. ಒಪ್ಪಂದದಲ್ಲಿ ಗಂಡು ಅಥವಾ ಹೆಣ್ಣಿನ ಕಡೆಯಿಂದ ಉಲ್ಲಂಘನೆಗಳು ನಡೆದಲ್ಲಿ ಮದುವೆಯನ್ನು ರದ್ದು ಮಾಡಬಹುದು. ಗಂಡು ಮದುವೆಯನ್ನು ರದ್ದು ಮಾಡುವ ಅವಕಾಶಕ್ಕೆ ತಲಾಖ್ ಎನ್ನುತ್ತಾರೆ.

 

ಹಾಗೆಯೇ ಹೆಣ್ಣು ಮದುವೆಯನ್ನು ರದ್ದು ಮಾಡುವುದಕ್ಕೆ `ಫಸ್ಕ್~ ಎನ್ನುತ್ತಾರೆ. ಗಂಡಿನ ಸಮ್ಮತಿಯೊಂದಿಗೆ ಹೆಣ್ಣು ಮದುವೆ ರದ್ದು ಮಾಡಿದರೆ ಅದು ಖುಲಾ. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಫಸ್ಕ್‌ಗಿಂತ ತಲಾಖ್‌ಗಳ ಸಂಖ್ಯೆಯೇ ಭಾರೀ ಹೆಚ್ಚು.ಹಾಗೆ ತಲಾಖ್ ಕೊಡುವಾಗಲೂ ನ್ಯಾಯಬದ್ಧ ಕಾರಣಗಳಿಗಿಂತ ಹೆಚ್ಚಾಗಿ ಹಣದ ದಾಹ, ಪ್ರತಿಷ್ಠೆ, ಕೌಟುಂಬಿಕ ವಿರಸಗಳೇ ಹೆಚ್ಚು ಕಾರಣವಾಗುತ್ತಿವೆ ಎನ್ನುವುದು ವಾಸ್ತವ. ಹಾಗೆಯೇ ತಲಾಖ್ ಪಡೆದ ಸಾಕಷ್ಟು ಹೆಣ್ಣುಮಕ್ಕಳ ಮರುಮದುವೆಯೂ ನಡೆಯುತ್ತಿದೆ ಎನ್ನುವುದೂ ಸುಳ್ಳಲ್ಲ.`ಬ್ಯಾರಿ~ ಎನ್ನುವ ಬ್ಯಾರಿ ಭಾಷೆಯ ಸಿನಿಮಾವೊಂದು ಇದೀಗ `ಸ್ವರ್ಣಕಮಲ~ ರಾಷ್ಟ್ರ ಪ್ರಶಸ್ತಿಯನ್ನು ಮರಾಠಿ ಸಿನಿಮಾವೊಂದರ ಜತೆಗೆ ಹಂಚಿಕೊಂಡಿರುವುದು ಭಾಷೆಯ ಮಟ್ಟಿಗೆ ಹೆಮ್ಮೆಯ ಕ್ಷಣವೇ ಸರಿ. ಕರ್ನಾಟಕದ ಕರಾವಳಿಯಲ್ಲಿ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಬಹುತೇಕ ಮುಸ್ಲಿಮರು ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಸಾಕಷ್ಟು ಮುಸ್ಲಿಮರು ಮಾತನಾಡುವ ಭಾಷೆ ಬ್ಯಾರಿ. ತುಳುವಿನಲ್ಲಿ `ಬ್ಯಾರ~ ಎಂದರೆ ವ್ಯಾಪಾರ. ಬ್ಯಾರಿಗಳಲ್ಲಿ ಬಹುದೊಡ್ಡ ಜನವರ್ಗ ವ್ಯಾಪಾರಿಗಳು.ಒಂದು ಅಂದಾಜಿನ ಪ್ರಕಾರ, 10ರಿಂದ 14 ಲಕ್ಷ ಜನ ಬ್ಯಾರಿ ಭಾಷೆ ಮಾತನಾಡುವವರಿದ್ದಾರೆ. ಒಂದು ಕಾಲದಲ್ಲಿ ಈ ಭಾಷೆಗೆ ಪ್ರತ್ಯೇಕ ಲಿಪಿ ಇತ್ತೆಂದೂ, ಅದನ್ನು ಬಟ್ಟೆಗಳ ಮೇಲೆ ಬರೆಯುತ್ತಿದ್ದರೆಂದೂ (ಬಟ್ಟೆಳತ್ತು= ಬಟ್ಟೆಬರಹ) ಕೆಲವು ಭಾಷಾ ತಜ್ಞರು ಹೇಳುತ್ತಾರೆ.ಆದರೆ ಅದನ್ನು ಅಲ್ಲಗಳೆಯುವ ಭಾಷಾತಜ್ಞರೂ ಇದ್ದಾರೆ. ಈ ಭಾಷೆಗೆ ಸುಮಾರು 1200 ವರ್ಷಗಳ ಇತಿಹಾಸವಿದೆಯೆಂದೂ ಹೇಳಲಾಗುತ್ತಿದೆ. ಕಾಸರಗೋಡು- ಕರ್ನಾಟಕದ ಗಡಿ ಪ್ರದೇಶದಲ್ಲಿ ಮುಸ್ಲಿಮರಲ್ಲದ ಹಲವು ಕೆಳಜಾತಿಯವರೂ ಬ್ಯಾರಿ ಭಾಷೆಯನ್ನು ಮಾತನಾಡುತ್ತಿದ್ದಾರೆ.ಇಂತಹ ಭಾಷೆಯಲ್ಲಿ ತಯಾರಾದ ಮೊದಲ ಸಿನಿಮಾ `ಬ್ಯಾರಿ~. ಚಿತ್ರದ ಕಥೆಯ ಪ್ರಧಾನ ಅಂಶವೂ ತಲಾಖ್. ಎಳೆಯ ವಯಸ್ಸಿನ ಕಥಾನಾಯಕಿಗೆ ಮದುವೆಯಾಗುತ್ತದೆ. ಅಳಿಯ ಬಡ ಮೀನಿನ ವ್ಯಾಪಾರಿ. ಯಾವುದೋ ಒಂದು ಹಂತದಲ್ಲಿ ಅಳಿಯನ ಬಳಿ ಮಾವ ಸಾಲ ಕೇಳುತ್ತಾನೆ. ಹಣವಿಲ್ಲ ಎನ್ನುತ್ತಾನೆ ಅಳಿಯ.

 

ಸಿಟ್ಟಿಗೆದ್ದ ಮಾವ ಅಳಿಯನಿಗೆ ಹೇಳದೆ ಮಗಳನ್ನು ಮನೆಗೆ ಕರೆದೊಯ್ಯುತ್ತಾನೆ. ಬಲವಂತವಾಗಿ ತಲಾಖ್ ಕೊಡಿಸುತ್ತಾನೆ. ಮಗಳ ಕೊರಗನ್ನು ಲೆಕ್ಕಿಸದೆ ಇನ್ನೊಂದು ಮದುವೆಗೆ ಯತ್ನಿಸುತ್ತಾನೆ. ಹೀಗೆ ಎರಡನೇ ಮದುವೆಯನ್ನೇ ಕಸುಬು ಮಾಡಿಕೊಂಡಿರುವ ಮುದುಕನೊಬ್ಬ ಆಕೆಯನ್ನು ಮದುವೆಯಾಗಲು ಮುಂದೆ ಬರುತ್ತಾನೆ.ಆದರೆ ಆ ಮುದುಕನ ಮಗ ಸಕಾಲದಲ್ಲಿ ಬಂದು ಮದುವೆಯಾಗದಂತೆ ತಡೆಯುತ್ತಾನೆ. ಮುದುಕನ ಜತೆಗೆ ತನಗೆ ಎರಡನೇ ಮದುವೆ ಮಾಡಲು ಯತ್ನಿಸುವ ತಂದೆಯ ವಿರುದ್ಧ ಸಿಡಿದೆದ್ದ ಕಥಾನಾಯಕಿ ಮಾನಸಿಕ ಅಸ್ಥಿರತೆಗೆ ಒಳಗಾಗಿ ತಂದೆಯ ಮೇಲೆ ಹಲ್ಲೆ ನಡೆಸುತ್ತಾಳೆ. ಮಗಳ ಸ್ಥಿತಿ ಕಂಡು ಕೊರಗಿದ ಅಪ್ಪ ತಾನೂ ಚಿಂತೆಯಲ್ಲಿ ಬೀಳುತ್ತಾನೆ.ಈ ಮಧ್ಯೆ ತಲಾಖ್ ನೀಡಿದ ಗಂಡನೇ ಮರುಮದುವೆಗೆ ಸಿದ್ಧನಾಗುತ್ತಾನೆ. ಅದಕ್ಕಿಂತ ಮುಂಚೆ ಇನ್ನೊಬ್ಬನೊಡನೆ ಮದುವೆಯಾಗಿ ಒಂದು ರಾತ್ರಿ ಕಳೆಯಬೇಕು; ಬಳಿಕ ತಲಾಖ್ ಪಡೆಯಬೇಕು. ಆ ತಾತ್ಕಾಲಿಕ ಮದುವೆಗೆ ಆ ಹುಡುಗಿಯ ಹಳೆಯ ಸಹಪಾಠಿಯೊಬ್ಬ ಒಪ್ಪುತ್ತಾನೆ. ಹಾಗೆ ಇಬ್ಬರ ಮದುವೆ ನಡೆಯುತ್ತದೆ.ಆದರೆ ರಾತ್ರಿ ಆ ಹುಡುಗ ದೂರ ನಿಂತಿದ್ದರೆ ಹುಡುಗಿ ಪಾಪಪ್ರಜ್ಞೆಯಿಂದ ಬಳಲುತ್ತಾಳೆ. ಎರಡನೆ ಮದುವೆಯಾದ ಗಂಡನಿಗೆ ಅನ್ಯಾಯ ಮಾಡುತ್ತಿದ್ದೇನೆ, ಧರ್ಮದ ವಿಧಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೇನೆ ಎನ್ನುವ ಪಾಪಪ್ರಜ್ಞೆಯಿಂದ ತೀವ್ರ ಒತ್ತಡಕ್ಕೆ ಸಿಲುಕಿದ ಆಕೆ ಗಂಡನನ್ನು ದೈಹಿಕ ಮಿಲನಕ್ಕೆ ಒತ್ತಾಯಪಡಿಸುತ್ತಾಳೆ. ಆ ಕೊನೆಯ ದೃಶ್ಯದೊಂದಿಗೆ ಸಿನಿಮಾ ಮುಕ್ತಾಯ ಕಾಣುತ್ತದೆ.`ಮುಸ್ಲಿಮನೊಬ್ಬ ಮಾಡಬಹುದಾದ ಅತ್ಯಂತ ಕೆಟ್ಟ ಕೆಲಸವೆಂದರೆ ತಲಾಖ್ ನೀಡುವುದು~ ಎನ್ನುತ್ತದೆ  ಕುರಾನ್. ಅದಕ್ಕೆಂದೇ ತಲಾಖ್ ಬಳಿಕ ಅದೇ ಗಂಡ, ಪರಿತ್ಯಕ್ತ ಹೆಂಡತಿಯನ್ನು  ಮರುಮದುವೆ ಆಗುವುದಕ್ಕೂ ಕಠಿಣ ಷರತ್ತುಗಳನ್ನು ವಿಧಿಸಿದೆ.ಗಂಡಸರನ್ನು ತಲಾಖ್‌ನಿಂದ ನಿರುತ್ಸಾಹಗೊಳಿಸುವುದೇ ಇದರ ಉದ್ದೇಶ. ಆದರೆ ಧರ್ಮಕ್ಕೆ ಮಾನ್ಯತೆ ಕೊಡುವ ಜನರೇ ತಲಾಖ್‌ನ ವಿಧಿಯನ್ನು ಹೆಚ್ಚುಹೆಚ್ಚಾಗಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.`ಬ್ಯಾರಿ~ ಸಿನಿಮಾದ ಕಥೆ ತಲಾಖನ್ನು ಕಾನೂನಿನ ಕೋನದಿಂದ ಸಮಸ್ಯೆಯನ್ನು ನೋಡುವ ಬದಲು, ಹೆಣ್ಣೊಬ್ಬಳ ಅಂತರಂಗದ ತಮುಲವನ್ನೇ ಮುಖ್ಯವಾಗಿ ಇಟ್ಟುಕೊಂಡಿದೆ.ನಿರ್ದೇಶಕ ಸುವೀರನ್ ಚೊಚ್ಚಲ ಪ್ರಯತ್ನದಲ್ಲೇ ಹಲವು ಹೃದಯಂಗಮ ದೃಶ್ಯಗಳನ್ನು ಕಟ್ಟಿಕೊಟ್ಟು, ಬ್ಯಾರಿ ಸಂಸ್ಕೃತಿಯ ಹೊಳಹುಗಳನ್ನೂ ಮಿಂಚಿಸುತ್ತಾರೆ. ಹಿಂದೆ ರವಿಚಂದ್ರನ್ ಸಿನಿಮಾವೊಂದರಲ್ಲಿ ನಟಿಸಿದ್ದ ಮಲಯಾಳಿ ನಟಿ ಮಲ್ಲಿಕಾ, ಹೆಣ್ಣಿನ ಪಾತ್ರಕ್ಕೆ ಜೀವ ತುಂಬಿದ್ದಾರೆ.ಎಸ್.ಕುಮಾರ್‌ಗೆ ಅಸೋಸಿಯೇಟ್ ಆಗಿದ್ದ ಮುರಳಿ ಬೈಪೋರ್ ಕ್ಯಾಮೆರಾ ಇಡೀ ಚಿತ್ರಕ್ಕೆ ಗೌರವ ತಂದುಕೊಟ್ಟಿದೆ. ಆದರೆ ವಿಶ್ವಜಿತ್ ಸಂಗೀತ ಮಾತ್ರ ಚಿತ್ರದ ಋಣಾತ್ಮಕ ಅಂಶ. ಮಾಮುಕೋಯ ಮತ್ತು ಅಂಬಿಕಾ ಮೋಹನ್ ನಟನೆ ಚಿತ್ರದ ಪ್ಲಸ್ ಪಾಯಿಂಟ್.ಈ ಮಲಯಾಳಿಗಳ ಮಧ್ಯೆ ಕರ್ನಾಟಕದ ಬ್ಯಾರಿ ಹುಡುಗ ಅಲ್ತಾಫ್ ಚಿತ್ರದ ಹೀರೋ. ಆತನೇ ನಿರ್ಮಾಪಕ. ಸೌದಿ ಅರೇಬಿಯಾದಲ್ಲಿ 10 ವರ್ಷಗಳ ಕಾಲ ದುಡಿದು ಗಳಿಸಿದ ಹಣ ಸುರಿದು ಸಿನಿಮಾ ಮಾಡಿರುವ ನಿರ್ಮಾಪಕನ ಮೊದಲ ಯತ್ನಕ್ಕೇ ಈಗ ಸ್ವರ್ಣಕಮಲ ಲಭಿಸಿರುವುದು ಕರ್ನಾಟಕಕ್ಕೂ ಹೆಮ್ಮೆಯ ವಿಷಯವೇ.

 

ಆದರೆ ಚಿತ್ರದ ಟೈಟಲ್‌ಗೂ ಕಥೆಗೂ ಸಂಬಂಧವಿಲ್ಲ! ಮಾತ್ರವಲ್ಲ, ಇನ್ನಷ್ಟು ತಾಂತ್ರಿಕ ಶಿಸ್ತು ರೂಢಿಸಿಕೊಂಡಿದ್ದರೆ ಈ ಸಿನಿಮಾ, ಗುಣಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಬಹುದಿತ್ತು ಎನ್ನುವುದೂ ನಿಜ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.