ಭಾರತವನ್ನು ಗಾಂಧೀಜಿ `ಗ್ರಾಮ ಭಾರತ~ವೆಂದೇ ಕರೆದಿದ್ದರು. ಗ್ರಾಮೀಣ ಭಾರತದ ಅಭಿವೃದ್ಧಿ ಅವರ ಕನಸಾಗಿತ್ತು. ಅದು ಸ್ವತಂತ್ರ ಭಾರತದಷ್ಟೆ ಮುಖ್ಯವಾಗಿತ್ತು.
ಆದ್ದರಿಂದಲೇ ಗಾಂಧೀಜಿ `ಹಳ್ಳಿಗಳ ಉದ್ಧಾರವಾಗದೆ ಭಾರತದ ಉದ್ಧಾರವಾಗದು~ ಎಂದು ಘೋಷಿಸಿದ್ದರು.

ಇಂದಿನ ರಾಜಕಾರಣ, ಅಧಿಕಾರಶಾಹಿ, ವಿಶ್ವವಿದ್ಯಾನಿಲಯಗಳು, ಯುವ ಜನಾಂಗ ಸಂಪೂರ್ಣವಾಗಿ ಗಾಂಧೀಜಿಯನ್ನು ಮರೆತುಬಿಟ್ಟಿವೆ. ಇದು ಭಾರತದ ದೊಡ್ಡ ದುರಂತ. ಈಗಿನ ಜಾಗತೀಕರಣವನ್ನು `ಗಾಂಧಿ~ ಎಂಬ ಪದವಿಲ್ಲದೆ ಎದುರಿಸಲು ಸಾಧ್ಯವಾಗುವುದೇ ಇಲ್ಲವೇನೋ ಎಂಬ ಅನಿವಾರ್ಯ ಸ್ಥಿತಿಗೆ ತಲುಪಿ ಬಿಟ್ಟಿದ್ದೇವೆ.

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಗಾಂಧೀಜಿ ಯೂರೋಪಿನಲ್ಲಿ ಪ್ರಬಲವಾಗುತ್ತಿದ್ದ ಕೈಗಾರಿಕಾಭಿವೃದ್ಧಿ ಮತ್ತು ಸಂಶೋಧನೆಗಳನ್ನು ಕಂಡು ಈ ರೀತಿ ಗಾಬರಿ ವ್ಯಕ್ತಪಡಿಸುತ್ತಾರೆ:

`ಕೈಗಾರಿಕಾ ಕ್ರಾಂತಿಯಿಂದುಂಟಾದ ಕಂಪನಗಳಿಂದ ಮಾನವೀಯತೆ ಎಂದೆಂದಿಗೂ ಸುಧಾರಿಸಿಕೊಳ್ಳಲಾರದು. ಇದರ ಕ್ರೂರತೆ ಕುಟಿಲತೆಯ ಕವಚವನ್ನು ತೊಟ್ಟು ಕಾಲರಾ ಮಾರಿಯಂತೆ ವ್ಯಾಪಿಸುತ್ತಾ ಪ್ರತಿಯೊಬ್ಬ ವ್ಯಕ್ತಿಯ ಅಂತರಂಗವನ್ನು ಕುಬ್ಜ ಮಾಡುತ್ತಾ, ಕ್ಷಯಿಸುತ್ತಾ ಹೋಗುತ್ತದೆ.

ಈ ಅನಿಷ್ಟದಿಂದಾಗಿ ಇಡೀ ಜಗತ್ತು ವಾಸಿಯಾಗಲಾರದ ವ್ರಣದಿಂದ ನರಳುವ ರೋಗಿಯಂತೆ ಜೀವಿಸುತ್ತಿರುತ್ತದೆ...~ ಈ ಮಾತುಗಳನ್ನು ಗಾಂಧೀಜಿ ಒಬ್ಬ ದಾರ್ಶನಿಕನಾಗಿ ನುಡಿದಿದ್ದಲ್ಲ, ಬದಲಾಗಿ ಒಬ್ಬ ಸಮರ್ಥ ಆರ್ಥಿಕ ಚಿಂತಕನಾಗಿ ನುಡಿದದ್ದೆನ್ನುವುದಕ್ಕೆ ಇಂದಿನ ತೀರಾ ಹದಗೆಟ್ಟ ಮಾನವೀಯ ಸಂಬಂಧಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು ಸುಧೀರ್ಘ ಅರವತ್ತೈದು ವರ್ಷಗಳು ಕಳೆದಿವೆ. ಗಾಂಧೀಜಿಯ ಗ್ರಾಮೋದ್ಧಾರದ ಕನಸು ಹಿಂದೆಯೇ ನುಚ್ಚುನೂರಾಗಿದೆ. ಸ್ವಾವಲಂಬನೆ ಮತ್ತು ಸಹಕಾರಗಳ ಮಂತ್ರಗಳನ್ನು ಬಿತ್ತುವ ಮೂಲಕ ದೇಶದ ಕೃಷಿ ಮತ್ತು ಕೃಷಿ ಅವಲಂಬಿತ ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಗಾಂಧೀಜಿ ಹಂಬಲಿಸಿದ್ದರು.

ಆದರೆ ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಸರ್ಕಾರಗಳು ಕೃಷಿ ವಲಯವನ್ನು ನಿರ್ಲಕ್ಷಿಸಿ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡಲಾರಂಭಿಸಿದವು. ಭಾರತವು ಕೈಗಾರಿಕಾಭಿವೃದ್ಧಿಗಾಗಿ ಕೊಟ್ಟ ಪ್ರಾಮುಖ್ಯದಿಂದಾಗಿ `ಬಂಡವಾಳ ಶಾಹಿ~ ರಾಜಕಾರಣ ಹುಟ್ಟಿಕೊಳ್ಳಲು ಕಾರಣವಾಯಿತು.

ಈ ಬಂಡವಾಳಶಾಹಿ ರಾಜಕಾರಣ ಮೊದಮೊದಲು ನಗರ ಕೇಂದ್ರಗಳಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡು ಕ್ರಮೇಣ ಗ್ರಾಮೀಣ ಭಾರತದ ಮೇಲೂ ತನ್ನ ಸಾರ್ವಭೌಮತ್ವವನ್ನು ಸಾಧಿಸಿಕೊಳ್ಳತೊಡಗಿತು. ಗಾಂಧೀಜಿ ಯಾವುದನ್ನು ನಿರಾಕರಿಸಲು ಬಯಸಿದ್ದರೋ ಅದನ್ನು ಇಡೀ ದೇಶ ಸ್ವೀಕರಿಸಲು ಹಾತೊರೆಯತೊಡಗಿತು.

ಗ್ರಾಮೀಣ ಬದುಕು ಇಂದು ರಾಜಕೀಯ, ಆರ್ಥಿಕ, ಸಾಮಾಜಿಕ ಕೋಲಾಹಲಗಳಿಂದ ಜರ್ಝರಿತಗೊಂಡಿದೆ. ಭಾರತದ ಸಾವಿರಾರು ಹಳ್ಳಿಗಳು ಸ್ವಾತಂತ್ರ್ಯ ಬಂದಾಗ ಯಾವ ಸ್ಥಿತಿಯಲ್ಲಿದ್ದವೋ ಈಗಲೂ ಅದೇ ಸ್ಥಿತಿಯಲ್ಲಿವೆ. ಹಳ್ಳಿಗಾಡಿನ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ.

`ಐಟಿ ಬಿಟಿಗಳಲ್ಲಿ ಹಿಮಾಲಯದೆತ್ತರದಷ್ಟು ಸಾಧನೆ ಮಾಡಿದ್ದೇವೆ~ ಎಂದು ಹೇಳಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನ ಇನ್ನೂ ಗುಡಿಸಲುಗಳಲ್ಲೇ ಬದುಕನ್ನು ಸವೆಸುತ್ತಿದ್ದಾರೆ. ಲಕ್ಷಾಂತರ ಹಳ್ಳಿಗಳಿಗೆ ಇಂದಿಗೂ ಕುಡಿಯುವ ನೀರಿನ ಸೌಲಭ್ಯವಿಲ್ಲ. ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳೆಷ್ಟೋ ಇನ್ನೂ ನಮ್ಮ ದೇಶದಲ್ಲಿವೆ. ವಿದ್ಯುತ್ ಸಂಪರ್ಕವಿದ್ದರೂ ದೇಶದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾದ ವಿದ್ಯುತ್ ಸರಬರಾಜಿಲ್ಲದೆ ಕೃಷಿ ಚಟುವಟಿಕೆಗಳು ಮಾರಣಾಂತಿಕ ಸ್ಥಿತಿಯಲ್ಲಿ ಉಸಿರಾಡುತ್ತಿವೆ.

ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಂತೂ ಇಲ್ಲವೇ ಇಲ್ಲವೆನ್ನಬಹುದು. ಯಾವುದೇ ಕೈಗಾರಿಕಾ ಉತ್ಪನ್ನಕ್ಕೂ ಒಂದು ನಿರ್ದಿಷ್ಟ ಮಾರುಕಟ್ಟೆ, ನಿಖರವಾದ ಬೆಲೆ ಇವೆ. ರೈತರ ಉತ್ಪನ್ನಗಳಿಗೆ ಇಂಥ ನಿರ್ದಿಷ್ಟತೆ, ನಿಖರತೆಯನ್ನು ಕಲ್ಪಿಸಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಇದು ಬಂಡವಾಳಶಾಹಿ ರಾಜಕಾರಣಕ್ಕೆ ಬೇಕಾಗಿಯೂ ಇಲ್ಲ.

ಕೈಗಾರಿಕಾಭಿವೃದ್ಧಿಗೆ ಲಭ್ಯವಾದಂತೆ ಕೃಷಿ ಅಭಿವೃದ್ಧಿಗೆ ಸುಲಭದಲ್ಲಿ ಸಾಲಗಳು ಸಿಗುವುದಿಲ್ಲ. ಏಕೆಂದರೆ, ಈ ದೇಶದಲ್ಲಿ ರೈತರನ್ನು ಭಿಕ್ಷುಕರಿಗಿಂತಲೂ ಹೀನಾಯವಾಗಿ ಕಾಣಲಾಗುತ್ತಿದೆ. ಕೈಗಾರಿಕಾ ಉತ್ಪನ್ನಗಳಿಗೆ ನೀಡುವ ತೆರಿಗೆ ವಿನಾಯ್ತಿಯನ್ನು ಕೃಷಿ ಉತ್ಪನ್ನಗಳಿಗೆ ನೀಡಲು ಸರ್ಕಾರಗಳು ಹಿಂದು ಮುಂದು ನೋಡುತ್ತವೆ.

ಕೈಗಾರಿಕೆಗಳಲ್ಲಿ ಬಳಸುವ ಡೀಸೆಲ್ಗೆ ಸಬ್ಸಿಡಿ ಕೊಡುವ ಸರ್ಕಾರಗಳು ರೈತರು ಬಳಸುವ ಟ್ರ್ಯಾಕ್ಟರ್, ಪಂಪ್ಸೆಟ್ ಮುಂತಾದ ಯಂತ್ರೋಪಕರಣಗಳಿಗೂ ಹಾಗೂ ಅವುಗಳಿಗೆ ಬಳಸುವ ಡೀಸೆಲ್ಗೂ ಸಬ್ಸಿಡಿ ಕೊಡುವ ಮನಸ್ಸು ಮಾಡುವುದಿಲ್ಲ.

ಸಾರ್ವಜನಿಕ ಶಿಕ್ಷಣ ಇನ್ನೂ ಅಧ್ವಾನದ ಅವಸ್ಥೆಯಲ್ಲಿದೆ. ಹಳ್ಳಿ ಶಾಲೆಗಳು ಸೋರುವುದಿನ್ನೂ ನಿಂತಿಲ್ಲ. ಆಸನ ವ್ಯವಸ್ಥೆ, ಕುಡಿಯುವ ನೀರು ಮುಂತಾದ ವಿಷಯಗಳಲ್ಲಿ ಬಹಳಷ್ಟು ಸುಧಾರಣೆಯಾಗಬೇಕಾಗಿದೆ. ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ವ್ಯವಸ್ಥೆಗಳ ಮಧ್ಯೆ ಅಪಾರವಾದ ಅಂತರವಿದೆ. ಇಲ್ಲಿಯೂ ಬಂಡವಾಳಶಾಹಿ ರಾಜಕಾರಣದ ಕರಾಳ ಛಾಯೆ.

ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕಿಂಚಿತ್ತಾದರೂ ಪ್ರಯೋಜನಕಾರಿಯಾಗಿಲ್ಲ. ಏಳೆಂಟು ಊರುಗಳಿಗೊಂದು ಆರೋಗ್ಯ ಕೇಂದ್ರವಿದ್ದರೆ ಪುಣ್ಯ. ಆರೋಗ್ಯ ಕೇಂದ್ರಗಳಿದ್ದರೂ ಡಾಕ್ಟರುಗಳ, ಔಷಧಿಗಳ ತೀವ್ರ ಕೊರತೆ. ನಗರಗಳ ಸಾರ್ವಜನಿಕ ಆಸ್ಪತ್ರೆಗಳದೂ ಇದೇ ಕತೆ. ಭಾರತದುದ್ದಕ್ಕೂ ಸರಿಯಾದ ಚಿಕಿತ್ಸೆ ದೊರೆಯದೆ ಪ್ರಾಣ ಬಿಡುವ ರೋಗಿಗಳ ಸಂಖ್ಯೆಯನ್ನು ಲೆಕ್ಕ ಇಡಲು ಕೂಡ ಸಾಧ್ಯವಾಗುತ್ತಿಲ್ಲ.

ಗಾಂಧೀಜಿ ನೈರ್ಮಲ್ಯಕ್ಕೂ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದರು. ಇಂದಿಗೂ ದೇಶದ ಲಕ್ಷಾಂತರ ಹೆಣ್ಣು ಮಕ್ಕಳು ಸಮಾಧಾನದಿಂದ ಬಹಿರ್ದೆಶೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅನೇಕ ಹಳ್ಳಿಗಳಲ್ಲಿ ರಾತ್ರಿ ಹೊತ್ತು ರಸ್ತೆಬದಿಗಳಲ್ಲಿ ಕತ್ತಲಲ್ಲಿ ಹೆಂಗಸರು ತಮ್ಮ ಕರ್ಮಗಳನ್ನು ತೀರಿಸಿಕೊಳ್ಳುತ್ತಾರೆ. ಮಾತಿಗೆ ಮುಂಚೆ ಕೈಗಾರಿಕಾಭಿವೃದ್ಧಿಯ ಬಗ್ಗೆ, ಐಟಿ ಬಿಟಿಗಳ ಬಗ್ಗೆ ಕೊಚ್ಚಿಕೊಳ್ಳುವ ನಮ್ಮ ಜನನಾಯಕರಿಗೆ ಹಳ್ಳಿಗಳ ಹೆಣ್ಣು ಮಕ್ಕಳ ಸಂಕಷ್ಟಗಳು ಮಾತ್ರ ಕಾಣುವುದಿಲ್ಲ.

ಗಾಂಧೀಜಿ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಪಾನ ನಿರೋಧ ಅಭಿಯಾನವನ್ನು ನಮ್ಮ ರಾಜಕಾರಣಿಗಳು, ಆಡಳಿತಗಾರರು ಅತ್ಯಂತ ಹೀನಾಯವಾಗಿ ನಿರ್ಲಕ್ಷಿಸಿದ್ದಾರೆ. ಸರ್ಕಾರಗಳು `ವರಮಾನ~ವನ್ನು ಮುಂದಿಟ್ಟುಕೊಂಡು ಮದ್ಯಪಾನವನ್ನು ಉತ್ತೇಜಿಸಿದವು.

ಇಂದು ಇಡೀ ಹಳ್ಳಿಗಾಡು ಮದ್ಯಪಾನದ ಚಟದಿಂದ ಸ್ಮಶಾನ ರೂಪವನ್ನು ಪಡೆದುಕೊಂಡಿದೆ. ಜನ ಮದ್ಯಪಾನದಿಂದಾಗಿ ಕೆಲಸ ಮಾಡುವ ಸತುವನ್ನು ಕಳೆದುಕೊಂಡು ನಡೆದಾಡುವ ಹೆಣಗಳಂತಾಗಿದ್ದಾರೆ. ಹಳ್ಳಿಗಳು ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ ಸ್ವಾಸ್ಥ್ಯವನ್ನು ಕಳೆದುಕೊಂಡಿವೆ.

ರಾಜಕೀಯ ನಾಯಕರು ಓಟುಗಳಿಗಾಗಿ ಮದ್ಯ ಹಂಚುವುದನ್ನು ಅಭ್ಯಾಸ ಮಾಡಿ, ಗ್ರಾಮೀಣ ಜನರನ್ನು ವ್ಯಸನಿಗಳನ್ನಾಗಿ ಮಾಡಿ ಅವರನ್ನು ಕೇವಲ ಓಟು ನೀಡುವ ಕೈಗೊಂಬೆಗಳನ್ನಾಗಿ ಮಾಡಿಬಿಟ್ಟಿದ್ದಾರೆ.

ಹಾಲು ಮಾರಿ ಬಂದ ಹಣದಿಂದ ಮದ್ಯ ಕುಡಿಯುವ ಮಂದಿಯನ್ನು ಹಳ್ಳಿಗಳಲ್ಲಿ ನೋಡಬಹುದು. ಹಳ್ಳಿಗಳು ನಿರ್ನಾಮದ ಅಂಚಿಗೆ ಸರಿಯುತ್ತಿವೆ. ಗಾಂಧೀಜಿಯನ್ನು ಮರೆತ ಭಾರತಕ್ಕೆ ವರ್ತಮಾನವೂ ಇಲ್ಲ, ಭವಿಷ್ಯವೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.