ಸೋಮವಾರ, ಮೇ 23, 2022
20 °C

ಬಂದೋಬಸ್ತ್ ಮಧ್ಯೆ ಜ್ಯೋತಿಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಇಲ್ಲಿ ಮೂರು ದಿನ ನಡೆದ 10 ನೇ ಕಲ್ಯಾಣಪರ್ವದ ಕೊನೆಯ ದಿನ ಮಂಗಳವಾರ ಸಮಾರೋಪ ಸಮಾರಂಭಕ್ಕೂ ಮೊದಲು ಪ್ರತಿ ಸಲದಂತೆ ಬಸವಣ್ಣನವರ ಪರುಷಕಟ್ಟೆಯಿಂದ ಬಸವ ಮಹಾಮನೆವರೆಗೆ ಜ್ಯೋತಿಯಾತ್ರೆ ನಡೆಸಲಾಯಿತು.ಮಾತೆ ಮಹಾದೇವಿಯವರು ಬಸವಣ್ಣನವರ ವಚನಾಂಕಿತ ಬದಲಾಯಿಸಿದ ಕಾರಣಕ್ಕಾಗಿ ಅವರ ನೇತೃತ್ವದಲ್ಲಿ ನಡೆದ ಕಲ್ಯಾಣಪರ್ವಕ್ಕೆ ಸ್ಥಳೀಯ ಬಸವೇಶ್ವರ ದೇವಸ್ಥಾನ ಸಮಿತಿ ಮತ್ತು ವಚನ ಸಂರಕ್ಷಣಾ ಸಮಿತಿಯಿಂದ ವಿರೋಧ ವ್ಯಕ್ತಪಡಿಸಲಾಗಿತ್ತು.ಪರುಷಕಟ್ಟೆಯಿಂದ ಜ್ಯೋತಿಯಾತ್ರೆ ತೆಗೆದುಕೊಂಡು ಹೋಗಲು ಹಾಗೂ ಮೆರವಣಿಗೆ ನಡೆಸಲು ಸಹ ಅನುಮತಿ ಕೊಡಬಾರದು ಎಂದು ಒತ್ತಾಯಿಸಿದ್ದರಿಂದ ಇಂದು ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲದೆ ಮೆರವಣಿಗೆ ನಡೆಸಲು ಅನುಮತಿ ಕೊಡದೆ ಜ್ಯೋತಿಯನ್ನು ವಾಹನದಲ್ಲಿರಿಸಿ ಒಯ್ಯಲಾಯಿತು.ಧಾರವಾಡದ ಜಗದ್ಗುರು ಮಾತೆ ಗಂಗಾದೇವಿ, ದೆಹಲಿಯ ಜಗದ್ಗುರು ಚೆನ್ನಬಸವಾನಂದ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ವೀರಣ್ಣ ಲಿಂಗಾಯತ್, ತಾಲ್ಲೂಕು ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಪರುಷಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಜ್ಯೋತಿ ಹೊತ್ತಿಸಿಕೊಂಡು ಹೋದರು.ವಿರೋಧ: ಜ್ಯೋತಿ ಇರುವ ವಾಹನ ಬಸವೇಶ್ವರ ವೃತ್ತಕ್ಕೆ ಆಗಮಿಸಿದಾಗ ಇಲ್ಲಿದ್ದ ಅಖಿಲಭಾರತ ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶಶಿಕಾಂತ ದುರ್ಗೆ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ವಿಭೂತಿ ಬಸವಾನಂದ, ಗದಗೆಪ್ಪ ಹಲಶೆಟ್ಟಿ, ಸುಭಾಷ ಹೊಳಕುಂದೆ, ಬಸವರಾಜ ಬಾಲಕಿಲೆ, ರಾಜೀವ ಮಂಠಾಳೆ ಮುಂತಾದವರು ಮಾತೆ ಮಹಾದೇವಿ ವಿರುದ್ಧ ಘೋಷಣೆಗಳನ್ನು ಕೂಗಿದರು.ವೃತ್ತದಲ್ಲಿ ಮೊದಲೇ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಮತ್ತು ಜ್ಯೋತಿ ಹೊತ್ತ ವಾಹನ ಇಲ್ಲಿ ನಿಲ್ಲಿಸಲಿಲ್ಲವಾದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.