ಶುಕ್ರವಾರ, ಮೇ 7, 2021
19 °C

ಬಂಧನದಲ್ಲೇ ನಟ ದರ್ಶನ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ತೂಗುದೀಪ ಅವರ ಆರೋಗ್ಯ ಸ್ಥಿತಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ನಸುಕಿನಲ್ಲಿ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಯಾಧೀಶರು ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ನಂತರ ಪೊಲೀಸರು ಅವರನ್ನು ಶುಕ್ರವಾರ ರಾತ್ರಿ 8.39ಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದರು. ತೀವ್ರವಾಗಿ ಬಳಲಿದ್ದ ನಟನಿಗೆ ಜೈಲಿನ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಗ್ಲೂಕೋಸ್ ಹಾಕಲಾಗಿತ್ತು.`ದರ್ಶನ್ ಅವರು ನಿಶ್ಯಕ್ತರಾಗಿ ನಡುಗುತ್ತಿದ್ದರು. ಅವರ ತುಟಿಗಳು ಅದರುತ್ತಿದ್ದವು. ಈ ಸಂದರ್ಭದಲ್ಲಿ ಅವರು ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದರು. ಅವರ ದೇಹ ಸ್ಥಿತಿಯಲ್ಲಿ ಬಹಳ ಏರುಪೇರಾಗಿದ್ದನ್ನು ಗಮನಿಸಿದ ವೈದ್ಯರು ನಿಮ್ಹಾನ್ಸ್‌ಗೆ ಕರೆದೊಯ್ಯುವಂತೆ ಸಲಹೆ ನೀಡಿದರು~ ಎಂದು ಕಾರಾಗೃಹ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.ಬೆಳಗಿನ ಜಾವ 2.30ರ ಸುಮಾರಿಗೆ ದರ್ಶನ್ ಅವರನ್ನು ಕಾರಾಗೃಹದಿಂದ ನಿಮ್ಹಾನ್ಸ್‌ಗೆ ಕರೆದೊಯ್ಯಲಾಯಿತು. ಅವರ ತಪಾಸಣೆ ನಡೆಸಿದ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದರು. ಅಲ್ಲಿಂದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದ ಸಿಬ್ಬಂದಿ ನಂತರ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಾಖಲಿಸಿದರು.`ದರ್ಶನ್‌ಗೆ ಉಸಿರಾಟದ ತೊಂದರೆಯ ಜತೆಗೆ ಆಸ್ತಮ ರೋಗವಿದೆ. ವಾತಾವರಣದಲ್ಲಿ ತೀವ್ರ ಬದಲಾವಣೆ ಆದ ಕಾರಣ ಅವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎರಡು ದಿನ ಆಸ್ಪತ್ರೆಯಲ್ಲಿ ಇರಬೇಕಾಗಬಹುದು~ ಎಂದು ರಾಜೀವ್‌ಗಾಂಧಿ ಎದೆರೋಗ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ್ ಬುಗ್ಗಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.`ಅಗತ್ಯವಿದ್ದರೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ರಕ್ಷ ಪರೀಕ್ಷೆ ನಂತರ ದರ್ಶನ್‌ಗೆ ಕಾಮಾಲೆ ಇರುವುದು ಗೊತ್ತಾಗಿದೆ. ಆದ್ದರಿಂದ ಅವರಿಗೆ ಪ್ರತಿ ಎಂಟು ಗಂಟೆಗಳಿಗೊಮ್ಮೆ ಚುಚ್ಚುಮದ್ದು ನೀಡಬೇಕಾಗುತ್ತದೆ~ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.ದರ್ಶನ್ ಅವರ ಸಹೋದರ ನಿರ್ದೇಶಕ ದಿನಕರ್ ತೂಗುದೀಪ ಅವರು ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಮುನಿರತ್ನ, ಜೈಜಗದೀಶ್, ಎ.ಗಣೇಶ್, ನಟ ವಿಜಯ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.ಪ್ರತಿಭಟನೆ: ದರ್ಶನ್ ಅಭಿಮಾನಿಗಳು ಆಸ್ಪತ್ರೆ ಎದುರು ಶನಿವಾರವೂ ಪ್ರತಿಭಟನೆ ನಡೆಸಿದರು. ನಟನನ್ನು ಜೈಲಿನಿಂದ ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ನಟನನ್ನು ನೋಡಲು ಅವಕಾಶ ನೀಡಬೇಕೆಂದು ಅವರು ಗದ್ದಲ ಮಾಡಿದರು. ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವಿಜಯಲಕ್ಷ್ಮಿ ಮತ್ತೆ ಆಸ್ಪತ್ರೆಗೆ

ವಿಜಯಲಕ್ಷ್ಮಿ ಅವರು ಕೆಂಗೇರಿ ಬಳಿ ಇರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದ ಅವರು ವಿಜಯನಗರದಲ್ಲಿರುವ ಗಾಯತ್ರಿ ಆಸ್ಪತ್ರೆಗೆ ಗುರುವಾರ ರಾತ್ರಿ ದಾಖಲಾಗಿದ್ದರು.ಕಿವಿ ಮತ್ತು ತಲೆಗೆ ನಾಲ್ಕು ಹೊಲಿಗೆ ಹಾಕಿದ್ದ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದರು. ಸಂಜೆಯೇ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ನ್ಯಾಯಾಧೀಶರ ಮನೆಗೆ ಹೋಗಿ ಹೇಳಿಕೆ ನೀಡಿದ್ದ ಅವರು ಈಗ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.