ಮಂಗಳವಾರ, ಜೂನ್ 15, 2021
20 °C

ಬಜೆಟ್ ಮಂಡನೆ ನೀರಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರ ಚೊಚ್ಚಲ ಬಜೆಟ್ ಮಂಡನೆ ಸಪ್ಪೆಯಾಗಿತ್ತು. ಹಿಂದಿನ ರೈಲ್ವೆ ಸಚಿವರಾಗಿದ್ದ ಲಾಲೂ ಪ್ರಸಾದ್ ಮತ್ತು ಮಮತಾ ಬ್ಯಾನರ್ಜಿ ಅವರು ಬಜೆಟ್ ಮಂಡಿಸಿದಾಗ ಇದ್ದ ಲವಲವಿಕೆಯ ವಾತಾವರಣವಿರಲಿಲ್ಲ. 90 ನಿಮಿಷಗಳ ಬಜೆಟ್ ಭಾಷಣದ ಮಧ್ಯೆ ತ್ರಿವೇದಿ ಅವರು ಓದಿದ ಕೆಲವು ಕವನದ ಸಾಲುಗಳು ಮಾತ್ರ ನಗೆ ಬುಗ್ಗೆ ಎಬ್ಬಿಸಿದ್ದು ಬಿಟ್ಟರೆ ಇಡೀ ಸದನ ಮೌನಕ್ಕೆ ಶರಣಾಗಿತ್ತು.

 

ಬಹುತೇಕ ಸದಸ್ಯರು ತಮ್ಮ ಕ್ಷೇತ್ರಕ್ಕೆ ಹೊಸ ರೈಲು ಅಥವಾ ಯೋಜನೆಗಳನ್ನು ನೀಡಿರುವ ಬಗ್ಗೆ ಸಚಿವರು ಏನನ್ನಾದರೂ ಹೇಳುತ್ತಾರೆ ಎಂದು ಕುತೂಹಲದಿಂದ ಕಾದಿದ್ದರು. ಆದರೆ ಸಚಿವರು ವಿವರಗಳಿಗೆ ಬಜೆಟ್ ಅನುಬಂಧವನ್ನು ನೋಡಿ ಎಂದಾಗ ಸದಸ್ಯರು ನಿರಾಶರಾದರು. ಮಂಗಳವಾರ ಸದನದಲ್ಲಿ ಅಸ್ವಸ್ಥರಾಗಿದ್ದ ಕೃಷಿ ಸಚಿವ ಶರದ್ ಪವಾರ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಭಿನ್ನಮತದ ಹಾದಿ ಹಿಡಿದಿರುವ ಸಚಿವ ಹರೀಶ್ ರಾವತ್ ಸೇರಿದಂತೆ ಅನೇಕ ಹಿರಿಯ ಮುಖಂಡರು ಗೈರು ಹಾಜರಾಗಿದ್ದರು.ಪ್ರಕಾಶ್ ಸಿಂಗ್ ಬಾದಲ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಂಡೀಗಡಕ್ಕೆ ತೆರಳಿದ್ದರಿಂದ ಅಡ್ವಾಣಿ, ಶರದ್ ಯಾದವ್ ಮತ್ತು ಕೆಲವು ಅಕಾಲಿ ದಳದ ಸದಸ್ಯರು ಸದನದಲ್ಲಿ ಇರಲಿಲ್ಲ.

ಇದಲ್ಲದೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಸಹ ಗೈರು ಹಾಜರಿದ್ದರು.ಬಜೆಟ್ ಪ್ರತಿ ಓದಲು ಆರಂಭಿಸುತ್ತಿದ್ದಂತೆ ಲಾಲೂ ಅವರು ಹಿಂದಿಯಲ್ಲಿ ಓದುವಂತೆ ಎರಡು ಬಾರಿ ಒತ್ತಾಯಿಸಿದರು. ಬಿಹಾರದ ಬಗ್ಗೆ ಏನೂ ಪ್ರಸ್ತಾಪವಾಗಿದ್ದಾಗ ಎದ್ದು ನಿಂತ ಲಾಲೂ ಸಭಾಧ್ಯಕ್ಷರು ಮತ್ತು ರೈಲ್ವೆ ಸಚಿವರ ಗಮನ ಸೆಳೆಯಲು ಪ್ರಯತ್ನಿಸಿ ವಿಫಲರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.