ಗುರುವಾರ , ಜೂಲೈ 2, 2020
23 °C

ಬಟ್ಟೆ ಅಂಗಡಿಗೆ ಬೆಂಕಿ: ಐವರ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಟ್ಟೆ ಅಂಗಡಿಗೆ ಬೆಂಕಿ: ಐವರ ದಹನ

ಅಥಣಿ (ಬೆಳಗಾವಿ): ಇಲ್ಲಿಯ ಕರಣಿ ಗಲ್ಲಿಯಲ್ಲಿರುವ `ಸ್ವಾಮಿ ಕಲೆಕ್ಷನ್ಸ್~ ಎಂಬ ಐದು ಅಂತಸ್ತಿನ ಬೃಹತ್ ಬಟ್ಟೆ ಮಳಿಗೆಗೆ ಬುಧವಾರ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿದ್ದರಿಂದ  ಮಳಿಗೆಯಲ್ಲಿದ್ದ ಐವರು ಸಜೀವ ದಹನವಾಗಿದ್ದು, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.ಐದು ಕೋಟಿ ರೂಪಾಯಿಯಷ್ಟು ಬಟ್ಟೆ ಮತ್ತಿತರರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಂದಾಜು ಮಾಡಲಾಗಿದೆ. ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗಲಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಮೇಲ್ಮನೆೆಯಲ್ಲಿದ್ದ ಮೂರು ಸಿಲಿಂಡರ್‌ಗಳು ಬೆಳಿಗ್ಗೆ 8 ಗಂಟೆಯ ಸುಮಾರಿಗೆ            ಸ್ಫೋಟಗೊಂಡಿದ್ದರಿಂದ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.ಅಂಗಡಿಯ ಮಾಲೀಕರಾದ ದಾನಯ್ಯ ಹಿರೇಮಠ ಅವರ ಹಿರಿಯ ಪುತ್ರ ಮೃತ್ಯುಂಜಯ ಹಿರೇಮಠ (43), ಅವರ ಪತ್ನಿ ಲಕ್ಷ್ಮಿ  (37), ಮಳಿಗೆಯ ವ್ಯವಸ್ಥಾಪಕ ಬಸವನಬಾಗೇವಾಡಿಯ ಚನ್ನಬಸುವ ಬೈಚವಾಡ (28), ಕ್ಯಾಶಿಯರ್ ಗಿರೀಶ ನಿರ್ವಾಣಿಮಠ (25) ಹಾಗೂ ಕೆಲಸಗಾರ ಅಜಿತ್ (33) ಬೆಂಕಿಗೆ ಬಲಿಯಾಗಿದ್ದಾರೆ. ವಿನಾಯಕ ಬಡಿಗೇರ ಎಂಬ ಇನ್ನೊಬ್ಬರು  ಕಾಣೆಯಾಗಿದ್ದಾರೆ. ರಕ್ಷಣೆಗೆ ಮೊರೆ: ಬೆಳಿಗ್ಗೆ 4.30ರ ಸುಮಾರಿಗೆ ನೆಲ ಮಹಡಿಯಲ್ಲಿ ಹೊತ್ತಿಕೊಂಡ ಬೆಂಕಿ ಸ್ವಲ್ಪ ಹೊತ್ತಿನಲ್ಲಿಯೇ

ತನ್ನ ಕೆನ್ನಾಲಿಗೆಯನ್ನು ಮೇಲಿನ ಅಂತಸ್ತುಗಳಿಗೆ ವಿಸ್ತರಿಸಿತು. ಆಗ ಐದನೇ ಅಂತಸ್ತಿನಲ್ಲಿ ಮನೆ ಮಾಡಿಕೊಂಡಿದ್ದ ಮೃತ್ಯುಂಜಯ ಅವರಿಗೆ ಎಚ್ಚರವಾಗಿ ಕೆಳಗಡೆ ಬರಲು ಯತ್ನಿಸಿದರು. ಆದರೆ ದಟ್ಟವಾದ ಹೊಗೆ ಆವರಿಸಿದ್ದರಿಂದ ಸಾಧ್ಯವಾಗಲಿಲ್ಲ. ಕೂಡಲೇ ತಂದೆ ದಾನಯ್ಯ ಹಿರೇಮಠ ಅವರಿಗೆ ದೂರವಾಣಿ ಕರೆ ಮಾಡಿ, ಅಂಗಡಿಯಲ್ಲಿ ಕೆಳಗಿನಿಂದ ಹೊಗೆ ಬರುತ್ತಿದೆ. ಕೆಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಕೂಡಲೇ ಅಂಗಡಿ ಕಡೆಗೆ ಹೊರಟು ಬನ್ನಿ ಎಂದು ತಿಳಿಸಿದ್ದಾರೆ.`ಪಕ್ಕದ ಮನೆಯ ಮಾಳಿಗೆ ಮೇಲೆ ಮಲಗಿದ್ದ ಅಣವೀರ ಅಣ್ಣೆಪ್ಪನವರಿಗೆ ಗಾಜು ಹೊಡೆದ ಶಬ್ಧದಿಂದ ಎಚ್ಚರವಾಗಿ, ಕಟ್ಟಡದಿಂದ ಹೊಗೆ ಬರುತ್ತಿರುವುದು ಕಂಡು ಕೂಡಲೇ ಮೃತ್ಯುಂಜಯ ಅವರಿಗೆ ಕರೆ ಮಾಡಿದರು. ಅವರ ಕರೆಗೆ ಸ್ಪಂದಿಸಿದ ಮೃತ್ಯುಂಜಯ, ಹೊಗೆ ಬಹಳ ಬರುತ್ತಿದೆ. ಉಸಿರುಗಟ್ಟಿದೆ.ಹೇಗಾದರೂ ಮಾಡಿ ಕಾಪಾಡಿ ಎಂದು ಮನವಿ ಮಾಡಿಕೊಂಡರು. ಜತೆಗೆ ಇತರ ಕೆಲವರಿಗೂ  ದೂರವಾಣಿ ಕರೆ ಮಾಡಿ ಕಾಪಾಡುವಂತೆ ಕೋರಿಕೊಂಡರು. ಆದರೆ ಅಷ್ಟೊತ್ತಿಗೆ ಬೆಂಕಿ ಇನ್ನಷ್ಟು ವ್ಯಾಪಿಸಿತು. ನಂತರ ಒಂದು ಗಂಟೆಯ ಅಂತರದಲ್ಲಿ ಅವರ ಮೊಬೈಲ್ `ನಾಟ್ ರೀಚೆಬಲ್~ ಆಯಿತು. ಹೊರಗೆ ಸೇರಿದ ಜನರು ಕೂಗಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಮಧ್ಯಾಹ್ನ 4 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಎರಡನೇ ಮಹಡಿಯಲ್ಲಿ ಒಂದು, ಮೂರನೇ ಮಹಡಿಯಲ್ಲಿ ಎರಡು ಹಾಗೂ ಐದನೇ ಮಹಡಿಯಲ್ಲಿ ಎರಡು ಶವಗಳಿದ್ದುದನ್ನು ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ. ದೇಹಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಕೇವಲ , ಮೂಳೆಗಳಷ್ಟೇ ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ನಂದಿಸಲು ಹರ ಸಾಹಸ: ಬೆಳಿಗ್ಗೆ ಐದು ಗಂಟೆ ಹೊತ್ತಿಗೆ ಸ್ಥಳಕ್ಕೆ ಬಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗೆ, ಅಗ್ನಿ ಶಮನದ ನಂತರವೂ ಕೂಡಲೇ ಕಟ್ಟಡದ ಒಳಕ್ಕೆ ಹೋಗಲಾಗಲಿಲ್ಲ. ಕಟ್ಟಡದಲ್ಲಿ ಶಾಖದ ತೀವ್ರತೆ ಅಷ್ಟೊಂದು ಭಾರಿ ಪ್ರಮಾಣದಲ್ಲಿತ್ತು.ಮಧ್ಯಾಹ್ನ 1 ಗಂಟೆ ವೇಳೆಗಷ್ಟೇ ಕಟ್ಟಡ ಪ್ರವೇಶಿಸಲು ಅವರಿಗೆ ಸಾಧ್ಯವಾದುದು.ಪಟ್ಟಣ ಸೇರಿದಂತೆ ಜಮಖಂಡಿ, ಚಿಕ್ಕೋಡಿಯಿಂದ ಆರು ಅಗ್ನಿ ಶಾಮಕ ವಾಹನಗಳೊಂದಿಗೆ 30 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಅನಾಹುತದ ಸುದ್ದಿ ತಿಳಿಯುತ್ತಿದ್ದಂತೆಯೇ ಕಟ್ಟಡದತ್ತ ಜನ ಸಾಗರವೇ ಹರಿದು ಬಂದಿತು. ಜನರನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.