ಭಾನುವಾರ, ಜನವರಿ 26, 2020
29 °C
ಕೇತೇಶ್ವರ ಜಯಂತ್ಯುತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರ ಅಭಿಮತ

ಬಡತನದ ನೋವುಂಡವರೇ ಸಮಾಜ ಸುಧಾರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಬಡತನದ ನೋವು ಅನುಭವಿಸಿದ ಅದೆಷ್ಟೋ ಸಂತರು, ಸುಧಾರಕರು ಹಾಗೂ ದಾರ್ಶನಿಕರು ಮನುಕುಲದ ಸಮಾನತೆಗಾಗಿ ಶ್ರಮಿಸಿದ್ದಾರೆ. ಅಂತಹ ಸಾಲಿನಲ್ಲಿ ಶಿವಶರಣ ಮೇದರ ಕೇತಯ್ಯ ಹಾಗೂ ಲಿಂಗೈಕ್ಯ ಹನುಮಂತಯ್ಯ ಸ್ವಾಮೀಜಿ ಸೇರಿದ್ದಾರೆ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರದ ‘ಪಿ ಅಂಡ್‌ ಟಿ’ ವಸತಿಗೃಹ ಹಿಂಭಾಗದಲ್ಲಿರುವ ಕೇತೇಶ್ವರ ಸಮುದಾಯ ಭವನದ ಆವರಣದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಮೇದರ ಕೇತೇಶ್ವರ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಕೇತೇಶ್ವರ ಜಯಂತ್ಯುತ್ಸವ, ಮೇದರ ಸಂಸ್ಕೃತಿ ವೈಭವ–2013, ಪ್ರತಿಭಾ ಪುರಸ್ಕಾರ, ಸಮುದಾಯದ ಹಿರಿಯರಿಗೆ ಗೌರವಾರ್ಪಣೆ,  ಹಾಗೂ ಲಿಂಗೈಕ್ಯ ಹನುಮಂತಯ್ಯ ಕೇತೇಶ್ವರ ಸ್ವಾಮೀಜಿ ಅವರ 25ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.ಯಾತನೆ, ಶೋಷಣೆಯ ನೋವನ್ನು ಬಡವರ್ಗದಲ್ಲಿ ಮಾತ್ರ ಕಾಣಲು ಸಾಧ್ಯ. ಇದು ಶ್ರೀಮಂತಿಕೆಯಲ್ಲಿ ಜನಿಸಿದವರಲ್ಲಿ ಕಾಣಲಾಗುವುದಿಲ್ಲ. ಜಗತ್ತಿನಲ್ಲಿ ನೂರಾರು ಸಂತರು, ಸಾಧಕರು ಬಂದು ಹೋಗಿದ್ದಾರೆ. ಆದರೆ, ಅವರ ಜೀವಿತಾವಧಿಯಲ್ಲಿ ಏನೆಲ್ಲಾ ಉತ್ತಮ ಕಾರ್ಯಗಳನ್ನು ಮಾಡಿದ್ದಾರೋ ಅವುಗಳಿಂದ ನಾವು ಅವರನ್ನು ಸ್ಮರಿಸುವಂತಾಗಿದೆ ಎಂದರು.ನನ್ನೊಳಗೆ ಸಾತ್ವಿಕ ಅಂಶವುಳ್ಳ ಸುಧಾರಕನಿದ್ದಾನೆ ಎಂಬುದಾಗಿ ಪ್ರತಿಯೊಬ್ಬರು ಚಿಂತಿಸಬೇಕಿದೆ. ಈ ಮೂಲಕ ಒಳ್ಳೆಯ ಕೆಲಸ ಮಾಡಲು ಮುಂದಾದರೆ ಸರ್ವಕಾಲಕ್ಕೂ ಶ್ರೇಷ್ಠನಾಗಿಯೇ ಉಳಿಯಬಹುದು. ಉಪಕಾರವಿದ್ದೆಡೆ ಉದ್ಧಾರ, ಉದ್ಧಾರವಿದ್ದೆಡೆ ಸಹಕಾರ ಎನ್ನುವ ತತ್ವ ಅಳವಡಿಸಿಕೊಂಡರೆ ಎಲ್ಲರೂ ಸಮಾಜದಲ್ಲಿ ಉತ್ತಮ ಕೆಲಸ ಮಾಡಬಹುದು ಎಂದು ಸಲಹೆ ನೀಡಿದರು.ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಮುದಾಯ ಮುಂದುವರಿಯಲು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಡಬೇಕು. ಈ ಮೂಲಕ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದರು.ಪಟ್ಟಭದ್ರ ಹಿತಾಸಕ್ತಿಗಳು ಜಾತಿ ಸಮಾವೇಶ ಹಾಗೂ ಮಠಮಾನ್ಯಗಳಿಗೆ ವಿರೋಧ ಮಾಡುವುದುಂಟು. ಆದರೆ, ನಾವೆಲ್ಲರೂ ಸಂಘಟಿತರಾದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು.ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಮೇದರ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರುವಲ್ಲಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಅವರ ಪಾತ್ರ ಮಹತ್ವದಾಗಿದೆ. ಸದ್ಯ ಶೇ 3ರಷ್ಟು ಮೀಸಲಾತಿ ಸಮುದಾಯಕ್ಕೆ ದೊರೆತ್ತಿದ್ದು, ಪರಿಶಿಷ್ಟ ಪಂಗಡಗಳ ಎಲ್ಲ ಸಮುದಾಯಗಳಿಗೆ ಶೇ 7.5 ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಪಡೆಯಬೇಕು ಎಂದು ಸಲಹೆ ನೀಡಿದರು.ಮೈಸೂರು ನಗರ ಮೇದರ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಮಂಜುನಾಥ್‌ ಕುಮಾರ್‌ ಮಾತನಾಡಿ, ಚಿತ್ರದುರ್ಗದಲ್ಲಿ ಮಾತ್ರ ಸಮುದಾಯದ ಶಾಲೆಯಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಾಲೆ–ಗೋಶಾಲೆ ಪ್ರಾರಂಭ ಮಾಡಬೇಕು. ಅದಕ್ಕಾಗಿ ನಾವೆಲ್ಲರೂ ಸ್ವಾಮೀಜಿ ಅವರ ಬೆಂಬಲಕ್ಕೆ ನಿಲ್ಲಬೇಕು. ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ಬೆಂಗಳೂರಿನಲ್ಲಿ ಕೇಂದ್ರ ಸ್ಥಾಪಿಸಬೇಕು ಎಂದು ಹೇಳಿದರು.ಬಸವಪ್ರಭು ಕೇತೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ಬಸವ ನವಲಿಂಗ ಶರಣರು, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಅರಣ್ಯ ಸಂರಕ್ಷಣಾಧಿಕಾರಿ ಶೀಗೇಹಳ್ಳಿ,  ಸಮುದಾಯದ ಮುಖಂಡರಾದ ಎಂ.ಎಸ್‌. ಪ್ರಹ್ಲಾದಪ್ಪ, ಪ್ಯಾರಸಾನಿ ಬಾಲರಾಜು, ವೈ.ಕೆ. ಹಳೇಪೇಟೆ, ಜಿ. ಮೋಹನ್‌, ಗಣೇಶ್‌ ಅರಳಿಕಟ್ಟೆ ಸೇರಿದಂತೆ ಇತರೆ ಮುಖಂಡರು  ಹಾಜರಿದ್ದರು.

ಪ್ರತಿಕ್ರಿಯಿಸಿ (+)