ಬುಧವಾರ, ಜೂನ್ 16, 2021
28 °C

ಬಡತನ ನಿರ್ಮೂಲನೆಗಾಗಿ ಭಾರತಕ್ಕೆ ವಿಶ್ವಬ್ಯಾಂಕ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ವಿಶ್ವಬ್ಯಾಂಕ್ ಸುಮಾರು 4.3 ಶತಕೋಟಿ ಅಮೆರಿಕನ್ ಡಾಲರ್‌ಗಳ ಹಣಕಾಸು ನೆರವನ್ನು ಭಾರತಕ್ಕೆ ನೀಡುವುದಾಗಿ ಗುರುವಾರ ಪ್ರಕಟಿಸಿದೆ.ದೇಶದಲ್ಲಿರುವ ಬಡತನ ನಿರ್ಮೂಲನೆಗೆ ಅನುವಾಗುವಂತೆ ಹೊಸ ಬದಲಾವಣೆಯ ಮತ್ತು ಸರಳ ಆರ್ಥಿಕ ವ್ಯವಸ್ಥೆಯ ಮೂಲಕ ಇದನ್ನು ಒದಗಿಸುತ್ತಿದೆ. ಅಂತರರಾಷ್ಟ್ರೀಯ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ (ಐಬಿಆರ್‌ಡಿ) ಬ್ಯಾಂಕ್‌ನ ಸಾಲ ನೀತಿಯನ್ವಯ ಭಾರತಕ್ಕೆ ಈ ನೆರವನ್ನು ಅದು ನೀಡುತ್ತಿದೆ.ಈ ಸಂಬಂಧ ವಿಶ್ವಬ್ಯಾಂಕ್ ಹೇಳಿಕೆಯೊಂದನ್ನು ನೀಡಿ, ಹೊಸ ವ್ಯವಸ್ಥೆಯು ವಿಶೇಷ ಬಾಂಡ್‌ಗಳ ಬಿಡುಗಡೆಗೆ ಅವಕಾಶ ನೀಡಿದ್ದು, ಭಾರತವು ಹೆಚ್ಚುವರಿ ಯೋಜನಾ ಸಾಲಕ್ಕೆ ಸರಿದೂಗಿಸಲು ಇದನ್ನು ಖರೀದಿಸಲಿದೆ ಎಂದು ತಿಳಿಸಿದೆ.ಇದು ಬಡತನದಿಂದ ಹೊರಬರಲು ಸಿದ್ಧವಾದ ಮೂರನೇ ಒಂದರಷ್ಟು ಜನರ ಜೀವನ ಸುಧಾರಣಾ ಗುರಿ ಹೊಂದಿದ ಅಭಿವೃದ್ಧಿ ಯೋಜನೆಗಳಿಗೆ ದೀರ್ಘಾವಧಿಯ ಮತ್ತು ಕಡಿಮೆ ಬಡ್ಡಿಯ ಐಬಿಆರ್‌ಡಿ ನೆರವು ಪಡೆಯಲು ಭಾರತಕ್ಕೆ ಅನುವು ಮಾಡಿಕೊಡಲಿದೆ ಎಂದು ಹೇಳಿದೆ.ಈ ಕ್ರಮವನ್ನು ಕೈಗೊಳ್ಳದೆ ಸುಮಾರು 30 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ದೊಡ್ಡ ಸವಾಲನ್ನು ಎದುರಿಸುತ್ತಿರುವ ಭಾರತಕ್ಕೆ ಹಣಕಾಸಿನ ನೆರವನ್ನು ನೀಡಲು ಬ್ಯಾಂಕ್‌ಗೆ ಕಷ್ಟವಾಗುತ್ತದೆ ಎಂದು ವಿಶ್ವಬ್ಯಾಂಕ್ ದಕ್ಷಿಣ ಏಷ್ಯಾ ವಿಭಾಗದ ಉಪಾಧ್ಯಕ್ಷೆ ಇಸಾಬೆಲ್ ಗ್ಯುರೆರೊ ತಿಳಿಸಿದ್ದಾರೆ.ಹೊಸ ವ್ಯವಸ್ಥೆಯು ಭಾರತದ ಅಭಿವೃದ್ಧಿಯ ಅವಶ್ಯಕತೆಗಳಿಗೆ ಬೆಂಬಲವಾಗಿ ಕಾರ್ಯನಿರ್ವಹಿಸಲಿದ್ದು, ಇದು ಗ್ರಾಹಕ ರಾಷ್ಟ್ರಗಳ ವಿಭಿನ್ನ ಅವಶ್ಯಕತೆಗಳಿಗೆ ಅನುಗುಣವಾಗಿ ಬ್ಯಾಂಕ್‌ನ್ನು ಹೊಸತನ, ಸರಳ ಹಾಗೂ ಹೊಣೆಗಾರಿಕೆಯಲ್ಲಿ ತೋರಲಿದೆ ಎಂದು ಅವರು ಹೇಳಿದ್ದಾರೆ.ಇತರ ಹೊಸ ಆರ್ಥಿಕ ರಾಷ್ಟ್ರಗಳಂತೆಯೇ ಭಾರತ ಸಹ, ಮೂಲಭೂತ ಮತ್ತು ಮಾನವ ಕೌಶಲ್ಯ ಅಭಿವೃದ್ಧಿ ಅಡೆತಡೆಗಳನ್ನು ನಿವಾರಿಸುವ ಸವಾಲನ್ನು ಹೊಂದಿದ್ದು, ಇದು ಹಣದುಬ್ಬರ ನಿಯಂತ್ರಣ, ಕ್ಷಿಪ್ರ ಮತ್ತು ಅಂತರ್ಗತ ಬೆಳವಣಿಗೆ ಸಾಮರ್ಥ್ಯವನ್ನು ಪ್ರತಿಬಂಧಿಸುತ್ತದೆ ಎಂದು ಅವರು ನುಡಿದಿದ್ದಾರೆ.ಭಾರತದ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸುವ ಗುರಿಯೊಂದಿಗೆ ವಿಶ್ವಬ್ಯಾಂಕ್, ಸುಮಾರು 80 ಸಕ್ರಿಯ ಯೋಜನೆಗಳನ್ನು ಭಾರತದಲ್ಲಿ ಕೈಗೊಂಡಿದ್ದು, ಇವುಗಳಲ್ಲಿ ಹಲವು ಕ್ಲಿಷ್ಟಕರ ಮೂಲಭೂತ ಸಮಸ್ಯೆಗಳನ್ನು ಹೊಂದಿದ ಪ್ರದೇಶಗಳಾಗಿವೆ ಎಂದು ಅವರು ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.