ಗುರುವಾರ , ಮೇ 6, 2021
26 °C

ಬಡವರು, ಮಧ್ಯಮವರ್ಗದವರ ಆಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದ ಪ್ರತಿಯೊಬ್ಬ ನಿವಾಸಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡಲು ಆರಂಭಿಸಲಾಗಿರುವ `ಆಧಾರ್~ ಯೋಜನೆ ಜಿಲ್ಲೆಯಲ್ಲಿ ಇದೇ 29ರಂದು ಅಧಿಕೃತವಾಗಿ ಆರಂಭವಾಗಲಿದ್ದು, ನಾಲ್ಕು ತಿಂಗಳ ಒಳಗೆ ಜಿಲ್ಲೆಯ ಎಲ್ಲಾ 21 ಲಕ್ಷ ನಿವಾಸಿಗಳಿಗೂ ಆಧಾರ್ ಗುರುತಿನ ಸಂಖ್ಯೆ ಸಿಗುವ ನಿಟ್ಟಿನಲ್ಲಿ ವ್ಯಾಪಕ ವ್ಯವಸ್ಥೆ ಮಾಡಲಾಗುತ್ತಿದೆ.ಮೈಸೂರು ಮತ್ತು ತುಮಕೂರು ಜಿಲ್ಲೆಯಲ್ಲಿ 2010ರ ಅಕ್ಟೋಬರ್‌ನಲ್ಲಿ ಆಧಾರ್ ಯೋಜನೆ ಪ್ರಾಯೋಗಿಕವಾಗಿ ಆರಂಭವಾಗಿದ್ದು, ಅಲ್ಲಿ ಶೇ 97ರಷ್ಟು ಮಂದಿಗೆ ಆಧಾರ್ ಸಂಖ್ಯೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಆಧಾರ್ ಸಂಖ್ಯೆ ನೀಡುವ ಉದ್ದೇಶದೊಂದಿಗೆ ಸರ್ಕಾರದ ಮಟ್ಟದಲ್ಲಿ ಈ ಅಭಿಯಾನ ಮುಂದಿನ ವಾರ ಆರಂಭವಾಗಲಿದ್ದು, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಮಾತ್ರವಲ್ಲ, ಗ್ರಾಮ ಮಟ್ಟದಲ್ಲೂ ಆಧಾರ್ ಕೇಂದ್ರಗಳನ್ನು ತೆರೆದು ಜನರಿಗೆ ನೋಂದಣಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಿ.ಎಸ್.ರವೀಂದ್ರನ್ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮಂಗಳೂರಿನ ಅಂಚೆ ಕಚೇರಿಗಳಲ್ಲಿ ಈಗಾಗಲೇ ಈ ಸೌಲಭ್ಯ ಆರಂಭವಾಗಿದೆ. ಆದರೆ ಶೀಘ್ರ ಜನರಿಗೆ ಆಧಾರ್ ಸಂಖ್ಯೆ ಒದಗಿಸುವ ಉದ್ದೇಶದೊಂದಿಗೆ ದೊಡ್ಡ ಪ್ರಮಾಣದ ಅಭಿಯಾನ ಜಿಲ್ಲೆಯಲ್ಲಿ ಇನ್ನಷ್ಟೇ ಆರಂಭವಾಗಲಿದೆ.ಈಗ ತಾನೇ ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಲವು ಬಗೆಯ ಸೌಲಭ್ಯ ಪಡೆಯುವವರಿಗೆ ಈ ಗುರುತಿನ ಸಂಖ್ಯೆ ಮುಂದಿನ ದಿನಗಳಲ್ಲಿ ಕಡ್ಡಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಇದೊಂದು ಕಡ್ಡಾಯ ಯೋಜನೆ ಅಲ್ಲವಾದರೂ, ಬಡವರು, ಮಧ್ಯಮ ವರ್ಗದವರು ಅಗತ್ಯವಾಗಿ ಆಧಾರ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಅವರು ತಿಳಿಸಿದರು.ಉಚಿತ ಸೇವೆ:  ಆಧಾರ್ ಉಚಿತ ಸೇವೆಯಾಗಿದ್ದು, ಯಾವುದೇ ಶುಲ್ಕ ಇರುವುದಿಲ್ಲ. ಜನರು ಆಧಾರ್ ನೋಂದಣಿ ಕೇಂದ್ರಗಳಲ್ಲಿ ನಿಗದಿಪಡಿಸಿದ ದಿನದಂದು ನೋಂದಣಿ ಮಾಡಿಸಿಕೊಳ್ಳಬಹುದು. ಭಾವಚಿತ್ರ ಇರುವಂತಹ 17 ಬಗೆಯ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು(ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಡಿತರ ಚೀಟಿ... ಇತ್ಯಾದಿ), ವಿಳಾಸ ದೃಢೀಕರಿಸುವ 29 ಬಗೆಯ ದಾಖಲೆಗಳಲ್ಲಿ ಯಾವುದಾದರೂ ಒಂದು (ಬ್ಯಾಂಕ್ ಪಾಸ್ ಬುಕ್, ಚಾಲನಾ ಪರವಾನಗಿ ಪತ್ರ, ಪಡಿತರ ಚೀಟಿ, ಸ್ಥಿರ ದೂರವಾಣಿ ಬಿಲ್... ಇತ್ಯಾದಿ), ಜನ್ಮದಿನಾಂಕದ ದಾಖಲೆ ಹಾಗೂ ರಾಜ್ಯ/ಕೇಂದ್ರ ಸರ್ಕಾರಗಳಿಂದ ಪಡೆಯುತ್ತಿರುವ ಸೇವೆಗಳ ದಾಖಲೆ ಒದಗಿಸಿದರೆ ನೋಂದಣಿ ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಬೆರಳಚ್ಚುಗಳನ್ನು ತೆಗೆದು, ಅಕ್ಷಿಪಟಲದ ಸ್ಕ್ಯಾನ್ ಮಾಡಿಸಿ, ಭಾವಚಿತ್ರ ತೆಗೆಸಿದ ನಂತರ ಸ್ಥಳದಲ್ಲೇ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ. 30ರಿಂದ 60 ದಿನಗಳ ಒಳಗೆ ನೇರವಾಗಿ ಮನೆಗೇ ಆಧಾರ್ ಸಂಖ್ಯೆ ಬಂದುಬಿಡುತ್ತದೆ.

68 ಲಕ್ಷ ಜನಕ್ಕೆ ಆಧಾರ್:  ಬೆಂಗಳೂರಿನಲ್ಲಿ ಆಗಸ್ಟ್ 15ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಆಧಾರ್‌ಗೆ ಚಾಲನೆ ನೀಡಿದ ಬಳಿಕ ಅಲ್ಲಿ ಪ್ರತಿದಿನ 50 ಸಾವಿರ ಮಂದಿ ಆಧಾರ್ ಸಂಖ್ಯೆಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ 6.11 ಕೋಟಿ ಜನರ ಪೈಕಿ ಮೈಸೂರು-ತುಮಕೂರು ಜಿಲ್ಲೆಗಳ 52.11 ಲಕ್ಷ ಜನರು ಸೇರಿದಂತೆ ಒಟ್ಟು 68 ಲಕ್ಷ ಜನರು ಇದೀಗ ಆಧಾರ್ ಮಾಡಿಸಿಕೊಂಡಿದ್ದಾರೆ. ಇತರ ರಾಜ್ಯಗಳಲ್ಲಿ ಸಹ ಆಧಾರ್ ಅಭಿಯಾನ ಆರಂಭವಾಗಿದ್ದರೂ, ಕರ್ನಾಟಕದಲ್ಲಿ ಲಭಿಸಿದಂತಹ ಉತ್ತೇಜನ ಬೇರೆಡೆ ಸಿಕ್ಕಿಲ್ಲ. ಹೀಗಾಗಿ ಮುಂದಿನ 6ರಿಂದ 8 ತಿಂಗಳೊಳಗೆ ರಾಜ್ಯದ ಬಹುತೇಕ ಮಂದಿ ಆಧಾರ್ ಸಂಖ್ಯೆ ಪಡೆಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ರವೀಂದ್ರನ್ ಹೇಳಿದರು.ಆಧಾರ್ ಸಂಖ್ಯೆ ವ್ಯಕ್ತಿಯನ್ನು ನಿರ್ದಿಷ್ಟವಾಗಿ ಗುರುತಿಸಲು ಇರುವಂತಹ ವ್ಯವಸ್ಥೆ. ಇದನ್ನು ಬಳಸಿ ಸರ್ಕಾರಿ ಸೌಲಭ್ಯ ದುರ್ಬಳಕೆ ಮಾಡಲು ಸಾಧ್ಯವಿಲ್ಲ. ಸರ್ಕಾರಿ ಸೌಲಭ್ಯಗಳು ಸಿಗಬೇಕಾದರೆ ಇತರ ಮಾನದಂಡಗಳನ್ನು ಫಲಾನುಭವಿಗಳು ಹೊಂದಿರಬೇಕಾಗುತ್ತದೆ. ಬ್ಯಾಂಕ್ ಖಾತೆಗಳನ್ನು ನೀಡುವುದು ಕಡ್ಡಾಯವೇನಲ್ಲ. ಕೆಲವೊಂದು ಸಂದರ್ಭದಲ್ಲಿ ಸರ್ಕಾರದ ನೆರವು ನೇರವಾಗಿ ಬ್ಯಾಂಕ್ ಖಾತೆಗೇ ಬರುವ ಸಾಧ್ಯತೆ ಇರುತ್ತದೆ, ಹಾಗಿದ್ದಾಗ ಹೀಗೆ ನಮೂದಿಸಿದ್ದರಿಂದ ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದರು.ದೇಶದ ಯಾವುದೇ ಮೂಲೆಗೆ ವರ್ಗಾವಣೆ ಆದರೂ ವ್ಯಕ್ತಿಯ ಆಧಾರ್ ಸಂಖ್ಯೆ ಅದೇ ಆಗಿರುತ್ತದೆ. ಯಾವ ಸ್ಥಳಕ್ಕೆ ವರ್ಗವಾಗುತ್ತದೋ ಅಲ್ಲಿನ ಆಧಾರ್ ಕೇಂದ್ರಕ್ಕೆ ಬದಲಾದ ವಿಳಾಸವನ್ನು ತಿಳಿಸಿದರೆ ಸಾಕಾಗುತ್ತದೆ ಎಂದು ಅವರು ತಿಳಿಸಿದರು.ಸೌಲಭ್ಯಗಳಿಗೆ ರಹದಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್ ಮುಂದಿನ ದಿನಗಳಲ್ಲಿ ಆಧಾರವಾಗಲಿದೆ. ಎಲ್‌ಪಿಜಿ ಗ್ಯಾಸ್ ಪಡೆಯಲು, ಮಕ್ಕಳನ್ನು ಶಾಲೆಗೆ ಸೇರಿಸಲು, ವೃದ್ಧಾಪ್ಯ ವೇತನ ಪಡೆಯಲು, ಗ್ರಾಮೀಣ ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಆರೋಗ್ಯ ಸೇವೆಗಳ ಲಾಭ ಪಡೆಯಲು, ಭಾಗ್ಯಲಕ್ಷ್ಮಿ ಯೋಜನೆ ಪಡೆಯಲು ಮುಂದಿನ ದಿನಗಳಲ್ಲಿ ಆಧಾರ್ ಕಡ್ಡಾಯವಾಗುವ ಸಾಧ್ಯತೆ ಇದೆ.ಆಧಾರ್ ಯೋಜನೆಯ ಗುರುತಿನ ಸಂಖ್ಯೆಯನ್ನು ಆಧರಿಸಿ ಬ್ಯಾಂಕ್ ಖಾತೆ ತೆರೆಯಲು ಹಾಗೂ ಮೊಬೈಲ್ ಸೇವೆ ಪಡೆಯಲು ಆಧಾರ್ ಗುರುತಿನ ಮತ್ತು ವಿಳಾಸದ ದಾಖಲೆಯಾಗಿ ಉಪಯೋಗಿಸಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಇದೇ ಹಿನ್ನೆಲೆಯಲ್ಲಿ `ಕರ್ನಾಟಕ ರೆಸಿಡೆನ್ಷಿಯಲ್ ಡಾಟಾ ಹಬ್ ` ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.