ಸೋಮವಾರ, ಮೇ 10, 2021
26 °C

ಬಡಾವಣೆಯಲ್ಲಿ `ರಂಗೋತ್ಸವ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡಾವಣೆಯಲ್ಲಿ `ರಂಗೋತ್ಸವ'

ರಂಗಭೂಮಿ ಬೆಳೆಯಬೇಕಾದರೆ ಒಂದೋ ಜನರು ನಾಟಕ ನಡೆಯುವಲ್ಲಿಗೆ ಹೋಗಬೇಕು. ಅವರು ನಿರಾಸಕ್ತಿ ತೋರಿದರೆ ಜನರಿದ್ದಲ್ಲಿಗೆ ರಂಗಮಂದಿರವನ್ನೇ ಕೊಂಡೊಯ್ಯಬೇಕು ಎಂಬ ರಾಜಿಸೂತ್ರವನ್ನು ಮುಂದಿಟ್ಟುಕೊಂಡು `ಪಂಚಮ' ಸಾಂಸ್ಕೃತಿಕ ಸಂಘ `ಬಡಾವಣೆಯಲ್ಲಿ ರಂಗೋತ್ಸವ' ಎಂಬ ವಿಶಿಷ್ಟ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ.

ಇದರನ್ವಯ ಪ್ರತಿ ಎರಡು ತಿಂಗಳಿಗೊಮ್ಮೆ ನಗರದ ಒಂದೊಂದು ಬಡಾವಣೆಯಲ್ಲಿ ಸತತ ಮೂರು ದಿನಗಳ ಕಾಲ ಬಗೆ ಬಗೆಯ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಅವರ ಉದ್ದೇಶ. ಅದರ ಹೆಸರು `ಜನ ಸಂಸ್ಕೃತಿ ಉತ್ಸವ'. ನಾಟಕಕಾರ ತೊಟ್ಟವಾಡಿ ನಂಜುಂಡಸ್ವಾಮಿ ಮತ್ತು ರಂಗಾಸಕ್ತರ ವೇದಿಕೆಯಾದ `ಪಂಚಮ', ಕಳೆದೆರಡು ದಶಕಗಳಿಂದಲೂ ಹಲವಾರು ರಂಗ ಚಟುವಟಿಕೆಗಳಲ್ಲಿ ತೊಡಗಿಸುತ್ತಾ ಬಂದಿದೆ. ಇದೀಗ ರಂಗಭೂಮಿಯನ್ನೇ ಜನರ ಬಳಿ ಕೊಂಡೊಯ್ಯುವ ಮೂಲಕ ರಂಗ ಚಟುವಟಿಕೆಗಳಿಗೆ ಜನಬೆಂಬಲ ಗಿಟ್ಟಿಸಿಕೊಳ್ಳುವ ಪ್ರಯತ್ನವಾಗಿ ರೂಪುಗೊಂಡಿರುವುದು ಜನ ಸಂಸ್ಕೃತಿ ಉತ್ಸವ.`ರಂಗಾಸಕ್ತ ಜನರು ಈಗಲೂ ಎಲ್ಲಾ ಕಡೆ ಇದ್ದರೂ ಎಲ್ಲೋ ದೂರದಲ್ಲಿ ನಡೆಯುವ ನಾಟಕ ಪ್ರದರ್ಶನ, ವಚನ ಗಾಯನದಂಥ ಕಾರ್ಯಕ್ರಮಗಳಿಗೆ ಹಾಜರಾಗಲು ಸಾಧ್ಯವಾಗದೇ ಇರಬಹುದು. ಅವರ ಅಭಿರುಚಿಯನ್ನು ಉಳಿಸುವ ಜತೆಗೆ ರಂಗ ಚಟುವಟಿಕೆಗಳಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಉದ್ದೇಶದಿಂದ ಬಡಾವಣೆಗಳಲ್ಲಿ ಇಂತಹ ಉತ್ಸವಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಮುಂದಿನ ಕಾರ್ಯಕ್ರಮ ಕಲಾಗ್ರಾಮದಲ್ಲಿ ನಡೆಯಲಿದೆ. ಬಳಿಕ ಒಂದೊಂದೇ ಬಡಾವಣೆಗಳಲ್ಲಿ ಮುಂದುವರಿಯಲಿದೆ' ಎಂದು ಮಾಹಿತಿ ನೀಡುತ್ತಾರೆ ನಂಜುಂಡಸ್ವಾಮಿ.ಈ ಸರಣಿಯ ಮೊದಲ ಕಾರ್ಯಕ್ರಮ ವಿಜಯನಗರ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಇಂದಿನಿಂದ ಮೂರು ದಿನ (ಜೂ.12-14) `ಜನ ಸಂಸ್ಕೃತಿ ಉತ್ಸವ' ನಡೆಯಲಿದೆ. ಬುಧವಾರ ಸಂಜೆ ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳ ಶಾಸಕರಾದ ಎಂ. ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮವೂ ಇದೆ. ರಂಗಚೇತನ ಸಂಸ್ಕೃತಿ ಕೇಂದ್ರದ ಅಧ್ಯಕ್ಷ ಡಿ.ಕೆ. ಚೌಟ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ವೀರಣ್ಣ, ಸಿದ್ಧಾರ್ಥ ಕನ್ನಡ ಕಲಾ ಸಂಘದ ಅಧ್ಯಕ್ಷ ಎಸ್.ಬಿ. ಸಂಪತ್‌ಕುಮಾರ್ ಮತ್ತು ಮಿತ್ರಕೂಟದ ಅಧ್ಯಕ್ಷ ಬಿ.ಜಿ ವಾಲಿ ಅತಿಥಿಗಳಾಗಿರುತ್ತಾರೆ.ಇದೇ ಸಂದರ್ಭಲ್ಲಿ ಸಿ.ಜೆ. ಉಷಾ ರಾಮು ಅವರಿಂದ ಭಕ್ತಿಗೀತೆ, ಸುಬ್ಬಣ್ಣಗಾರ್ಡನ್‌ನ ಬಿಲ್ವಶ್ರೀ ತಂಡದಿಂದ ವಚನ ಗಾಯನವಿರುತ್ತದೆ. ಸಂಜೆ 7ಕ್ಕೆ ರಂಗೋತ್ಸವದ ಮೊದಲ ನಾಟಕ `ಆತಂಕವಾದಿಯ ಆಕಸ್ಮಿಕ ಸಾವು' ಪ್ರದರ್ಶನ- ನಗರದ ರಂಗಸಿರಿ ತಂಡದಿಂದ. ಇಟಲಿಯ ದಾರಿಯಾಫೋ ಅವರ ಮೂಲಕೃತಿಯನ್ನು ಎಸ್. ಸುರೇಂದ್ರನಾಥ್ ಕನ್ನಡಕ್ಕೆ ತಂದಿದ್ದಾರೆ. ಈ ನಾಟಕದ ಎರಡನೇ ಪ್ರದರ್ಶನವಿದು.ಗುರುವಾರ ಸಂಜೆ ವಿಜಯನಗರದ ವಚನಜ್ಯೋತಿ ಬಳಗದಿಂದ ವಚನ ಗಾಯನ, ಸಂಜೆ 7ಕ್ಕೆ ರಾಜಗುರು ನಿರ್ದೇಶನದ `ಶ್ರದ್ಧ' ನಾಟಕ ರಂಗಪಯಣ ತಂದಿಂದ ಪ್ರದರ್ಶನನ ರಚನೆ: ಶ್ರೀನಿವಾಸ ವೈದ್ಯ. ಶುಕ್ರವಾರ ಮಹಿಳೆಯರಿಂದ ವಚನ ಗಾಯನ, ಸಂಜೆ 7ಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಕಲಾ ಮೈತ್ರಿ ಸಾಂಸ್ಕೃತಿಕ ವೇದಿಕೆಯಿಂದ ಡಾ. ರಾಮಕೃಷ್ಣಯ್ಯ ನಿರ್ದೇಶನದ `ಮಂಟೇಸ್ವಾಮಿ ಕಥಾ ಪ್ರಸಂಗ' ನಾಟಕ ಪ್ರದರ್ಶನ. ರಚನೆ: ಡಾ. ಎಚ್. ಎಸ್. ಶಿವಪ್ರಕಾಶ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.