ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಕಣ್ಣು: ವೃಕ್ಷ ವಾಸುದೇವ್!

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕರ್ನಾಟಕದ ಚಿತ್ರಕಲಾ ಕ್ಷೇತ್ರವನ್ನು ಅವಲೋಕಿಸಿದಾಗ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಕಲಾವಿದರಲ್ಲಿ ಮೊದಲು ನೆನಪಾಗುವುದು ಕೆ.ಕೆ.ಹೆಬ್ಬಾರ್. ಅವರ ನಂತರದ ಸ್ಥಾನದಲ್ಲಿ ನಿಲ್ಲುವವರು ಎಸ್.ಜಿ. ವಾಸುದೇವ್ ಎಂದರೆ ತಪ್ಪಾಗಲಾರದು. ಬೆಂಗಳೂರನ್ನೇ ತಮ್ಮ ಕಲಾ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿರುವ ವಾಸುದೇವ್, ರಾಜ್ಯದ ಸಮಕಾಲೀನ ಕಲೆಯ ಪ್ರಮುಖ ಕಲಾವಿದರಾಗಿ, ಕಲಾಮೇಳದ ಸಾಧಕರಲ್ಲಿ ಒಬ್ಬರಾಗಿ, ಕರ್ನಾಟಕದ ಕಲೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಕಾರಣಕರ್ತರಾಗಿದ್ದಾರೆ. ತಮ್ಮ ಪತ್ನಿ ದಿವಂಗತ ಅರ್ನಾವಾಜ್‌ರ ಹೆಸರಿನಲ್ಲಿ ಪ್ರತಿವರ್ಷ ಕಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಶಿಷ್ಯವತ್ಸಲ ಅವರು. ತಮ್ಮ ಕಲಾಪಯಣದಲ್ಲಿ ಎಪ್ಪತ್ತು ವರ್ಷಗಳನ್ನು ಪೂರೈಸಿರುವ ವಾಸುದೇವ್ ಆಧುನಿಕ ಕರ್ನಾಟಕದ ಚಿತ್ರಕಲೆಯ ಬಹುದೊಡ್ಡ ಮೈಲಿಗಲ್ಲು.

ಜೀವನದ ವೃಕ್ಷ
‘ನಾನು ಸಮಸ್ಯೆಯೊಂದನ್ನು ನನ್ನೆದುರಿಗೆ ಇರಿಸಿಕೊಳ್ಳಬಯಸುತ್ತೇನೆ. ಕ್ಯಾನ್‌ವಾಸ್‌ಗಳಲ್ಲಿ ನಾನು ಬಣ್ಣ ತುಂಬಲು ಪ್ರಾರಂಭಿಸುವುದೇ ಹೀಗೆ. ಇದು ಒಗಟೊಂದನ್ನು ಬಿಡಿಸಿದಂತೆ. ಸಮಸ್ಯೆ ನನ್ನೊಳಗೇ ನಾನೇ ಎದುರಿಸುತ್ತಿರುವುದು ಆಗಬಹುದು ಅಥವಾ ತಾಂತ್ರಿಕ ಸ್ವರೂಪದ್ದು ಆಗಿರಬಹುದು. ಉದಾಹರಣೆಗೆ ಪಣಿಕರ್ ಅನೇಕ ಕಲಾತ್ಮಕ ಸಮಸ್ಯೆಗಳನ್ನು ನನ್ನೊಂದಿಗೆ ಚರ್ಚಿಸುತ್ತಿದ್ದರು ಮತ್ತು ಇದು ನನಗೆ ಸವಾಲಾಗಿ ಕಾಣುತ್ತಿತ್ತು. ಬಣ್ಣವನ್ನು ತೆಗೆಯುವುದು, ವಿನ್ಯಾಸದ ಬಳಕೆ ಈ ರೀತಿಯವು. ಹಾಗಾಗಿ ನನಗೆ ಪ್ರತಿ ವರ್ಣಚಿತ್ರವೂ ಉಳಿದುವುಗಳಿಗಿಂತ ಪೂರ್ಣ ಭಿನ್ನ’.

ವಾಸುದೇವ್ ಅವರು ತಮ್ಮ ಸೃಷ್ಟಿಕ್ರಿಯೆಯನ್ನು ಪರಿಭಾವಿಸಿರುವುದು ಹೀಗೆ. ಈ ಪರಿಕಲ್ಪನೆಯ ಹಿನ್ನೆಲೆಯಲ್ಲಿಯೇ, ಗಿರೀಶ ಕಾರ್ನಾಡರ ‘ಹಯವದನ’ ನಾಟಕಕ್ಕಾಗಿ ಅವರು ಮೊದಲ ಬಾರಿಗೆ ರಚಿಸಿದ ಚಿತ್ರಗಳನ್ನು ನೋಡಬಹುದು. ಅಲ್ಲಿನ ಕುದುರೆಯ ತಲೆಯನ್ನು ಹೊತ್ತ ಮನುಷ್ಯ ಈಗ ಪರಿಚಿತ ಸಂಕೇತಗಳಿಂದ ಸುತ್ತುವರಿದ ಅದೇ ರಾಜಕೀಯ ಆಕಾರವಾಗಿ ರೂಪುಗೊಂಡಿದ್ದಾನೆ. ಕೆಲವೊಮ್ಮೆ ಈ ಆಕಾರ ಕಡುಗಪ್ಪು ಕನ್ನಡಕ ಧರಿಸಿದ್ದರೆ, ಮತ್ತೆ ಕೆಲವೊಮ್ಮೆ ಸ್ತ್ರೀಗೆ ರಾಜದಂಡ ಒಂದನ್ನು ನೀಡುತ್ತಿರುವಂತೆ ತೋರುತ್ತದೆ. ಚಿತ್ರಗಳ ಈ ತರಹ ಭಾವಚಿತ್ರಗಳ ಮತ್ತೊಂದು ಗುಂಪಿನತ್ತ ನಮ್ಮನ್ನು ಒಯ್ಯುತ್ತದೆ.

‘ನನ್ನ ಕೃತಿಗಳಲ್ಲಿ ನನ್ನೆಲ್ಲ ಅನುಭವಗಳನ್ನು ಮಿಳಿತಗೊಳಿಸಿ ಲೀನವಾಗಿಸುವುದು ನನ್ನ ಪ್ರವೃತ್ತಿ. ಯಾವುದನ್ನೂ ನಾನು ತಿರಸ್ಕರಿಸುವುದಿಲ್ಲ. ನಾನು ಬೆಳೆದ ಪರಿಸರ ಹೇಗಿತ್ತೆಂದರೆ ವಿವಿಧ ವಿಭಾಗಗಳ ನಡುವೆ ಯಾವುದೇ ಭೇದಭಾವವಿರಲಿಲ್ಲ.

ಯಾವ ವಿಭಾಗಕ್ಕೆ ಬೇಕಿದ್ದರೂ ನಾವು ಹೋಗಬಹುದಿತ್ತು. ಮುನಿಸ್ವಾಮಿ, ಸಂತಾನ್‌ರಾಜ್, ಪಣಿಕರ್ ಇವರೆಲ್ಲ ಶಿಕ್ಷಕರಾಗಿದ್ದರು. ಚೋಳಮಂಡಲವನ್ನು ನಾವು ಸೇರಿದಾಗ ಪಣಿಕರ್ ಅಲ್ಲಿನ ಚಾಲಕಶಕ್ತಿಯಾಗಿದ್ದರು. ಅವರ ವ್ಯಕ್ತಿತ್ವ ನಮ್ಮನ್ನು ಪ್ರೇರೇಪಿಸಿತು ಮತ್ತು ಅವರೊಂದಿಗೆ ಕಲೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು’- ಎನ್ನುವ ವಾಸುದೇವ್‌ರ ಮಾತು ಅವರೊಳಗಿನ ಕಲಾವಿದ ರೂಪುಗೊಂಡ ಬಗೆಯನ್ನು ವಿವರಿಸುವಂತಿದೆ.

ಭಾರತದ ಆಧುನಿಕ ಚಿತ್ರಕಲೆಯ ಮುಖ್ಯ ಕಲಾವಿದರಲ್ಲಿ ಒಬ್ಬರಾದ ಫ್ರಾನ್ಸಿಸ್ ನ್ಯೂಟನ್ ಸೂಝೂ ವಾಸುದೇವ್ ಅವರನ್ನು ಪ್ರಭಾವಿಸಿದ ಕಲಾವಿದ. ರೇಖೆಯನ್ನು ಅವರು ಬಳಸುತ್ತಿದ್ದ ವಿಧ, ಸಂರಚನೆಯಲ್ಲಿನ ಸ್ಫುಟಭಾಗ, ವಿಚಾರಗಳ ದಕ್ಕಿಸಿಕೊಳ್ಳುವಿಕೆ, ಕ್ಯೂಬಿಸ್ಟ್ ಶೈಲಿ- ಈ ಎಲ್ಲಾ ಅಂಶಗಳನ್ನು ಮುಂಚಿನ ಕೆಲವು ಕಲಾಕೃತಿಗಳಲ್ಲಿ ಕಾಣಬಹುದಾಗಿದೆ.

ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಅವರು ಅಮೆರಿಕಾಗೆ ಹೋದಾಗ ಅಲ್ಲಿ ಡಿ ಕೂನಿಂಗ್ ಅವರ ಕೃತಿಗಳಲ್ಲಿನ ಚಲನೆ ಮತ್ತು ರೋದ್‌ಕೋನ ಬಣ್ಣದ ಬಳಕೆಗೆ ಮಾರುಹೋಗಿದ್ದರು. ನಂತರ ಯೂರೋಪ್‌ಗೆ ಹೋದಾಗ ಅಲ್ಲಿ ಪಾಲ್‌ಕ್ಲೀ, ಮಾಟಿಸ್ಸೆ ಮುಂತಾದ ಮಹಾನ್ ಕಲಾವಿದರನ್ನು ಕಂಡು, ಅವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಈ ಎಲ್ಲ ಕಾರಣಗಳಿಂದಾಗಿಯೇ ವಾಸುದೇವ್ ಅವರ ಕಲಾಕೃತಿಗಳು ಸಮಕಾಲೀನ ಕಲೆಯಾಗಿ ಹೊಸ ಮಜಲುಗಳನ್ನು ರೂಪಿಸಲು ಸಾಧ್ಯವಾದುದು.

ವಾಸುದೇವ್ ಭಾರತೀಯತೆಯ ಬಗ್ಗೆ ಯೋಚಿಸಲಿಲ್ಲವೆಂದೇನೂ ಅಲ್ಲ. ಅರವತ್ತರ ದಶಕದ ಹೆಚ್ಚಿನ ಕಲಾವಿದರ ಮುನ್ನೋಟವು ಇದೇ ಆಗಿತ್ತು. ಜಾನಪದ, ಬುಡಕಟ್ಟು, ಸಾಂಪ್ರದಾಯಿಕ- ಹೀಗೆ ವಿವಿಧ ಮೂಲಗಳಿಂದ ಅಂಶಗಳನ್ನು ಮಿಳಿತಗೊಳಿಸುವ ಪ್ರಯತ್ನ ಅವರದಾಗಿತ್ತು.

ಸಮಸೂತ್ರದಲ್ಲಿ ಅಸಮಸೂತ್ರವನ್ನು ಕಾಣುವ ಪ್ರಯತ್ನವಿದು. ಬಸ್ತಾರ್ ಕಲೆ, ತಂಜಾವೂರಿನ ವರ್ಣಚಿತ್ರಗಳು ಮತ್ತು ತಂತ್ರಕಲೆಯತ್ತ ಅವರ ಗಮನಹರಿಯಿತು. ಕಳೆದ ಮೂರು ದಶಕಗಳಲ್ಲಿ ವಾಸುದೇವ್‌ರ ಕೃತಿಗಳಲ್ಲಿ ತಾನೇ ತಾನಾಗಿದ್ದು ಎಲ್ಲವನ್ನು ವ್ಯಾಪಿಸಿಕೊಂಡಿದ್ದ ‘ವೃಕ್ಷ’ದ ಆಶಯ ಈಗ ಅವರು ‘ಅವನು ಮತ್ತು ಅವಳು’ ಎಂದು ಕರೆಯುವ ಶಿರಗಳ ಭಾವಚಿತ್ರಗಳಿಗೆ ದಾರಿ ಮಾಡಿಕೊಟ್ಟಿದೆ. ಮುಖ ಪುರುಷನೊಬ್ಬನ ಸುಕ್ಕುಗಟ್ಟಿದ ಮುಖವಾಗಿರಬಹುದು ಅಥವಾ ಬೇಸಾಯಗಾರರಿದ್ದಿರಬಹುದು ಅಥವಾ ತನ್ನದೇ ಭಾವಚಿತ್ರವಿರಬಹುದು. ಅವನು ಅನೇಕ ವೇಳೆ ಗೀರುಗಳುಳ್ಳ ಹೊಳೆಯುವ ಹತ್ತಿ ಅಂಗಿಯನ್ನು ಧರಿಸುತ್ತಾನೆ, ವರ್ಣಗಳು ಸ್ಫುಟವಾಗಿವೆ, ರೇಖೆಗಳು ನಿರ್ದಿಷ್ಟವಾಗಿವೆ. ವಿನ್ಯಾಸಗಳು ಉತ್ಕೃಷ್ಟ ಮತ್ತು ಸೂಕ್ಷ್ಮವಾಗಿವೆ.

ವಾಸುದೇವ್‌ರ ಚಿತ್ರಗಳು ಅವರ ಕ್ಯಾನ್‌ವಾಸ್‌ಗಳ ಬಿಗಿ ಎಲ್ಲೆಗಳನ್ನು ಸಡಿಲಗೊಳಿಸಿವೆ. ಪ್ರತಿಮೆಗಳು ಅವರ ಲೇಖನಿಯಿಂದ ಉರುಳುತ್ತ ಹೊಸಜೀವದ ಭಾವನೆ ಮೂಡಿಸುತ್ತದೆ. ಇದು ಆಶಾಭಾವದ, ಪ್ರೀತಿಯ ಸಂತಸದ ಸಂದೇಶ. ಆಳವಾದ ಮಾನವೀಯ ಹಾತೊರೆತದ ಸಂದೇಶ. ಇದು ಬದುಕನ್ನು ಅದರ  ಅಸಂಖ್ಯ ಮುಖಗಳೊಂದಿಗೆ ಸ್ವೀಕರಿಸಿದ ಕಲಾವಿದನೋರ್ವನ ಕೃತಿ. ಇಲ್ಲಿನ ಕಲಾವಿದ ತನ್ನ ಮನೋಹರತೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಆಹ್ವಾನವೀಯುತ್ತಿದ್ದಾನೆ.

ವಾಸುದೇವ್ ಅವರು ಕ್ಯಾನ್‌ವಾಸ್ ಮೇಲೆ ವರ್ಣಚಿತ್ರಗಳನ್ನು ಮೂಡಿಸುವ ಕಲಾಕಾರ ಮಾತ್ರವಾಗಿರದೆ ತಮ್ಮ ವರ್ಣಗಳಿಗೆ ವಿಶೇಷ ಪ್ರಭೆಯನ್ನು ನೀಡುತ್ತ ಅನನ್ಯವಾಗುತ್ತಾರೆ; ಅವರು ಲೋಹದ ಮೇಲೆ ಕೃತಿಗಳನ್ನು ನಿರ್ಮಿಸುವ ಕಲಾಕಾರ ಮಾತ್ರವಾಗಿರದೆ, ಚಕಿತಗೊಳಿಸುವ ಜೀವಂತ ಗುಣವನ್ನು ತನ್ನ ಲೋಹದ ಉಬ್ಬುಚಿತ್ರಗಳಿಗೆ ನೀಡುತ್ತಾರೆ.

‘ಸಂಸ್ಕಾರ’ ಮತ್ತು ‘ವಂಶವೃಕ್ಷ’ದಂತಹ ಚಲನಚಿತ್ರಗಳ ಕಲಾನಿರ್ದೇಶಕರು ಮಾತ್ರವಲ್ಲ; ರಂಗಭೂಮಿಯನ್ನು ಪ್ರಭಾವಿಸಿರುವ ಮತ್ತು ಸ್ವತಃ ರಂಗಕೃತಿಗಳಿಂದ ಪ್ರಭಾವಿತರಾಗಿರುವ ರಂಗಕರ್ಮಿಯೂ, ತನ್ನ ಕಲಾದೃಷ್ಟಿಯನ್ನು ರೇಷ್ಮೆವಸ್ತ್ರಗಳ ಮೇಲೆ ಅಭಿವ್ಯಕ್ತಿಸುವ ಚಿತ್ರವಸ್ತ್ರ ಕಲಾಕಾರರೂ ಹೌದು. ತಮ್ಮ ಕ್ಯಾನ್‌ವಾಸ್‌ಗಳಲ್ಲಿ ಅಕ್ಷರಗಳ ಬಳಕೆಯನ್ನು ವಾಸುದೇವ್ ಮೈಗೂಡಿಸಿಕೊಂಡದ್ದೂ ಸಹ ಪಣಿಕರ್ ಅವರಿಂದಲೇ. ಬಹುಮಟ್ಟಿಗೆ ದುಂಡಗಿದ್ದು ಜೀವ ತುಂಬುವಂತೆ ಕಲಾವಿದರಿಗೆ ಆಹ್ವಾನ ನೀಡುತ್ತಿದ್ದ ಕನ್ನಡ ಭಾಷೆಯ ಅಕ್ಷರಗಳು ವಾಸುದೇವ್‌ರಲ್ಲಿ ಓರ್ವ ಪರಿಣತ ಕಲಾಕಾರನನ್ನು ಪಡೆದವು.

‘ಶಿರ’ಗಳ ಮೇಲಿನ ವಾಸುದೇವ್‌ರ ಸರಣಿಗೆ ಫ್ರಾನ್ಸಿಸ್ ಸೂಝೂ ಪ್ರೇರಣೆಯಾದರು. ಅವರ ಮೇಲೆ ಕನ್ನಡ ಸಾಹಿತಿಗಳ ಪ್ರಭಾವಗಳೂ ಆದವು. ದ.ರಾ.ಬೇಂದ್ರೆ, ಎ.ಕೆ. ರಾಮಾನುಜನ್, ಗಿರೀಶ ಕಾರ್ನಾಡ್, ಯು.ಆರ್.ಅನಂತಮೂರ್ತಿ ಅವರಂಥ ಸಾರಸ್ವತ ಲೋಕದ ಸಾಧಕರಿಂದಾಗಿ, ತನ್ನ ಕ್ಷೇತ್ರದಿಂದ ಹೊರಗಿನ ಪ್ರಭಾವಗಳಿಗೂ ಮುಕ್ತವಾಗಿ ತೆರೆದುಕೊಂಡಿದ್ದ ವಾಸುದೇವ್, ತಮ್ಮನ್ನು ಮತ್ತು ತಮ್ಮೊಂದಿಗೆ ಕಲಾಸಂಬಂಧದಲ್ಲಿ ಒಂದಾದ ಇತರರನ್ನೂ ಶ್ರೀಮಂತಗೊಳಿಸಿದರು.

‘ನಿರ್ದಿಷ್ಟ ಯೋಜನೆಯೊಂದಿಗೆ ನಾನು ವರ್ಣಚಿತ್ರವನ್ನು ರಚಿಸುವುದಿಲ್ಲ. ನಾನು ಪ್ರಾರಂಭಿಸುತ್ತೇನೆ. ನಂತರ ಚಿತ್ರ ಬಿಡಿಸುವ ಪ್ರಕ್ರಿಯೆಯೇ ನನ್ನನ್ನು ನಡೆಸುತ್ತದೆ’ ಎನ್ನುವ ವಾಸುದೇವರ ಮಾತಿನಲ್ಲಿ ಸೃಜನಶೀಲ ಬರಹಗಾರನ ಧ್ಯಾನ ಇದ್ದಂತಿದೆ. ‘ವೃಕ್ಷ’ ಇಂತಹುದೇ ಒಂದು ಸರಣಿ. ಈ ಧ್ಯಾನವನ್ನು ಅವರ Earth scapes, Human scapesಗಳಲ್ಲೆ, ‘ಜೀವದ ವೃಕ್ಷ’ದಲ್ಲೂ ಕಾಣಬಹುದಾಗಿದೆ. ‘ಪುರಾಣ, ಐತಿಹ್ಯ, ಫಲವತ್ತತೆ, ಭೂತ ಮತ್ತು ಭವಿಷ್ಯ ಈ ಎಲ್ಲ ಅರ್ಥಗಳೂ ಈ ವೃಕ್ಷದಿಂದ ಹೊರಡುತ್ತವೆ’ ಎನ್ನುತ್ತಾರೆ ವಾಸುದೇವ್.

ಮೈಥುನ ಕೂಡ ವಾಸುದೇವ್‌ರ ಚಿತ್ರಚಿಂತನೆಯನ್ನು ಪ್ರಭಾವಿಸಿದೆ. ಈ ಬಗ್ಗೆ ಅವರು ಹೇಳುವುದು: ‘ಹಲವು ವರ್ಷಗಳ ಕಾಲ ನಾನು ಮೈಥುನದ ವಸ್ತುವನ್ನು ಕುರಿತು ಚಿಂತನೆ ನಡೆಸಿದ್ದೇನೆ. ಪುರುಷ ಮತ್ತು ಸ್ತ್ರೀ ಮಧ್ಯೆ ಮಾತ್ರವಲ್ಲ- ಸೂರ್ಯ ಮತ್ತು ಚಂದ್ರರ ನಡುವೆ, ಭೂಮಿ ಮತ್ತು ಬಾನಿನ ನಡುವೆ, ನಕ್ಷತ್ರಗಳು ಮತ್ತು ಮೋಡಗಳ ನಡುವೆ. ನನ್ನ ಪ್ರಪಂಚ ಚೈತನ್ಯಯುಕ್ತವಾದದ್ದು. ಅದರಲ್ಲಿ ಪಕ್ಷಿ ಮತ್ತು ಸರೀಸೃಪ, ಮೀನು ಮತ್ತು ನೀರುಹಕ್ಕಿ, ಬೀಜ ಮತ್ತು ಹಣ್ಣು, ಪುರುಷ ಮತ್ತು ಸ್ತ್ರೀ ಜೀವದಿಂದ ಚಿಮ್ಮುತ್ತಿರುವ ಅಲೆಗಳಾಕಾರದ ಬೆಟ್ಟಗಳು ಮತ್ತು ಶಿಖರಗಳಲ್ಲಿ ಒಟ್ಟಾಗಿ ಜೀವಿಸುತ್ತಾರೆ’.

ಆತ್ಮಶೋಧನೆಯ ಹಾದಿ
ವಾಸುದೇವ್ ಜನಿಸಿದ್ದು ಮಾರ್ಚ್ 3, 1941ರಲ್ಲಿ, ಮೈಸೂರಿನಲ್ಲಿ. ಬೆಳೆದದ್ದು ಬೆಂಗಳೂರಿನಲ್ಲಿ. ಕಲಾ ವಿದ್ಯಾಭ್ಯಾಸಕ್ಕಾಗಿ ಮದ್ರಾಸಿಗೆ ಹೋದರು. ಆರಂಭದಲ್ಲಿ ಡೇವಿಡ್ ಲೇ ಮತ್ತು ಆರ್.ಕೆ. ಲಕ್ಷ್ಮಣರ ಶೈಲಿಗಳನ್ನು ಆಧರಿಸಿ ವ್ಯಕ್ತಿಚಿತ್ರಗಳು ಮತ್ತು ಕಾರ್ಟೂನ್‌ಗಳನ್ನು ರಚಿಸಿದರು. 1959ರಲ್ಲಿ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡುವ ಅಗತ್ಯವನ್ನು ವಾಸುದೇವ್ ಮನಗಂಡರು. ಕಲಾವಿಮರ್ಶಕ ಮತ್ತು ಕುಟುಂಬ ಸ್ನೇಹಿತರಾದ ಜಿ.ವೆಂಕಟಾಚಲಂ ಅವರು, ಮದ್ರಾಸಿನ ಕಲೆ ಮತ್ತು ಕರಕುಶಲ ಕಾಲೇಜಿನ ಕೆ.ಸಿ.ಎಸ್.ಫಣಿಕರ್ ಬಳಿಗೆ ವಾಸುದೇವರನ್ನು ಕಳುಹಿಸಿದರು.

ವಾಸುದೇವ್ ಅವರು ಸೃಷ್ಟಿಸುವ ಮಾನವ ದುರ್ದೆಸೆಯ ಕಟುವಾಸ್ತವಗಳು, ಅವೆಷ್ಟೇ ನಿಜವಾಗಿದ್ದರೂ ಭಾವಗೀತೆಯ ಪ್ರತಿಮಾತ್ಮಕ ಶೋಧಕಗಳ ಮೂಲಕ ಸಾರ ಸಂಗ್ರಹಗೊಳ್ಳುತ್ತವೆ. ಹಾಗಾಗಿ ರಕ್ತ, ಮೃಗೀಯತೆ ಮತ್ತು ಹಿಂಸೆಗಳು ಅವರ ಕೃತಿಗಳಲ್ಲಿ ಪ್ರಶಾಂತವಾದ ಮೌನದ ರೂಪು ತಾಳುತ್ತವೆ. ಕಡಿದು ಹಾಕಿದ ಮರಗಳು, ಆಘಾತದ ಗುರುತು ಹೊತ್ತ ಲೂಟಿ ಹೊಡೆದ ಭೂ ದೃಶ್ಯಗಳು, ಶಿಥಿಲ ಮರಗಳು ಮತ್ತು ಚಿಮಣಿಗಳ ಗುಂಪು, ಹೊಗೆಯ ಅಲೆಯೆಬ್ಬಿಸುವ, ಘರ್ಜಿಸುವ ಮಲಿನ ಅನಿಲಗಳ ಮೋಡಗಳು- ಇವೆಲ್ಲ, ಸಂರಚನಾತ್ಮಕ ಅಂಗಗಳಾಗಿ ಮಾರ್ಪಟ್ಟು ಶ್ರೀಮಂತ ಪಾರದರ್ಶಕ ವರ್ಣಗಳು ಮತ್ತು ವೈವಿಧ್ಯಮಯವಾದ ವಿನ್ಯಾಸಗಳಲ್ಲಿ ಮರೆಯಾಗುತ್ತವೆ. ವಾಸುದೇವ್‌ರ ಮುಕ್ತವಾಗಿ ಹರಿಯುವ ಚಿತ್ರಕ ಶಕ್ತಿಯಲ್ಲಿ ವರ್ಣಗಳು ಅತ್ಯುನ್ನತವಾದ ಭಾವನಾತ್ಮಕ ಮತ್ತು ಕಾವ್ಯಾತ್ಮಕ ಗುಣಗಳನ್ನು ಸಾಧಿಸುತ್ತವೆ. ಅಕ್ಷರಗಳು ಮತ್ತು ಗೆರೆಗಳು ಉಲ್ಲಾಸದಾಯಕ ಚಲನೆಯ ಬಾಹುಳ್ಯದಲ್ಲಿ ಪ್ರಕಟವಾಗುತ್ತವೆ.

ವರ್ಣ ಪಯಣ
ತಮ್ಮ ಕೃತಿಗಳಲ್ಲಿ ಸಾಕಷ್ಟು ಪ್ರಮಾಣದ ಲಿನಿಸಿಡ್ ಆಯಿಲ್ ಬಳಸುವ ವಾಸುದೇವ್ ವರ್ಣಾರ್ಥವನ್ನು ಒತ್ತೊತ್ತಾಗಿಸುತ್ತಾರೆ. ಕೆಲವು ಬಣ್ಣದ ಹನಿಗಳ ಮೇಲೆ ಹೆಚ್ಚಿನ ವರ್ಣವನ್ನು ಸವರುತ್ತ ಹೊಸ ರೂಪಗಳನ್ನು ಸೃಷ್ಟಿಸುತ್ತಾರೆ. ಕ್ಯಾನ್‌ವಾಸ್ ಮೇಲೆ ತನ್ನ ನೆರಳನ್ನು ಉಳಿಸುವಂತೆ ತೀವ್ರ ಮತ್ತು ಭಾರೀ ವರ್ಣವನ್ನು ಬೇಕೆಂದೇ ತೆಗೆದುಹಾಕುತ್ತಾರೆ. ಆಗಾಗ ಟವಲ್ ಬಟ್ಟೆಯ ಚೂರುಗಳು ಮತ್ತು ಕುಂಚದ ಹಿಂಭಾಗಗಳನ್ನು ಬಳಸಿ ಮೈವಳಿಕೆಗಳನ್ನು ಸೃಷ್ಟಿಸುತ್ತಾರೆ. ಅವರಿಗೆ ವರ್ಣಚಿತ್ರಗಳನ್ನು ಸೃಷ್ಟಿಸುವ ಪ್ರಕ್ರಿಯೆ ಒಂದು ಪಯಣ. ಅದೊಂದು ಹುಡುಕಾಟ. ವಿನ್ಯಾಸಗಳು, ಮೇಲ್ಮೆಗಳು, ಕ್ಯಾನ್‌ವಾಸ್‌ನ ಆಳವನ್ನು ಉತ್ಖನಿಸುವ ಪ್ರಕ್ರಿಯೆಯೊಂದಿಗೆ ಆಟವಾಡುತ್ತ ವಾಸುದೇವ್ ವಾಸ್ತವ ಮತ್ತು ಪ್ಯಾಂಟಸಿಯನ್ನು ಒಂದರೊಳಗೊಂದು ಸೇರಿಸುತ್ತಾರೆ.

‘ಥಿಯೇಟರ್ ಆಫ್ ಲೈಫ್’ ಎನ್ನುವ ಹೆಸರಿನ ಕೃತಿಗಳ ಸರಣಿಯಲ್ಲಿ ಮುಂಚಿನ ಕೃತಿಗಳಲ್ಲಿ ಪ್ರಕಟವಾಗುವ ಚೇತನದ ಹಗುರತೆ ಮತ್ತು ನಂತರದ ಕೃತಿಗಳಲ್ಲಿ ಕಾಣುವ ಮನದ ಹೆಚ್ಚು ಆತ್ಮಶೋಧಕವಾದ ಒಳಗಿನ ವಿಶಾಲ ಆವರಣಗಳ ಸಾಕಾರವನ್ನು ಕಾಣುತ್ತೇವೆ. ಅರ್ಥಾತ್ ಒಳ ಮತ್ತು ಹೊರನೋಟಗಳ ಹದವಾದ ಮೇಳ, ನವನವೋನ್ಮೇಶಶಾಲಿನಿ ಆಗಬಲ್ಲ ಅದರ ಸಾಮರ್ಥ್ಯ ಪಾತ್ರಗಳ ಭಾವದೊಂದಿಗೆ ಸ್ಥಿರಗೊಳ್ಳುತ್ತದೆ. ಸಂದರ್ಭದ ಭಾವ ಉತ್ಸಾಹ-ಲವಲವಿಕೆಯಿಂದ ಕೂಡಿದ್ದರೂ ದೃಷ್ಟಿಯಲ್ಲಿನ ಪ್ರಬುದ್ಧತೆ ಸ್ಪಷ್ಟ. ಗೊಂದಲಗಳಿಲ್ಲದ ಜೀವಪ್ರಕೃತಿ ಇಲ್ಲಿದೆ. ಜೀವದ ವೃಕ್ಷವಿಲ್ಲಿ ಮತ್ತೆ ಪ್ರತ್ಯಕ್ಷ. ಆದರೆ ಅದನ್ನು ಹ್ಯೂಮನ್ ಸ್ಕೇಪ್‌ಗಳ ಮುಖಭಾವಗಳು ಮತ್ತು ವಿವಿಧ ಭಂಗಿಗಳ ಮುಖವಾಡಗಳ ಜೊತೆಗೆ ಇರಿಸಲಾಗಿದೆ. ಮಾನವ ಮತ್ತು ಆತನ ಸುತ್ತಮುತ್ತಲಿನ ಪರಿಸರದ ನಡುವಿನ ಯುದ್ಧವಿರಾಮ ವಿಧಿತವಾದದ್ದೇ. ಕಲಾವಿದರಾಗಿ ಮತ್ತು ವ್ಯಕ್ತಿಯಾಗಿ ಎರಡೂ ವಿಧಗಳಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ವಾಸುದೇವ್‌ರ ಪಯಣದ ಫಲವಂತಿಕೆ ಈ ಸರಣಿಯಲ್ಲಿ ಪ್ರಕಟವಾಗಿದೆ.
ಭಾರತದ ಮುಖ್ಯ ಕಲಾವಿದರಲ್ಲಿ ಒಬ್ಬರಾಗಿ ಮತ್ತು ದಕ್ಷಿಣ ಭಾರತದ ಅತ್ಯಂತ ಗೌರವಾನ್ವಿತ ಕಲಾವಿದರಾಗಿ ವಾಸುದೇವ್ ತಮ್ಮದೇ ಸಹೃದಯವಲಯ ಹೊಂದಿದ್ದಾರೆ. ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಾ, ಅವರ ಕಲಾ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ವಾಸುದೇವ್ ಬಗೆಗಿನ ಮಾತೆಂದರೆ, ಅದು ಕರ್ನಾಟಕದ ಆಧುನಿಕ ಚಿತ್ರಕಲೆಯ ವೈಭವದ ಕುರಿತ ಮಾತೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT