ಶನಿವಾರ, ಜೂನ್ 12, 2021
24 °C

ಬದಲಾದ ಭವಿಷ್ಯ, ಬಾದಲ್‌ಗೆ ಅದೃಷ್ಟ

ಪ್ರಜಾವಾಣಿ ವಾರ್ತೆ ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ವದೆಹಲಿ: ಪಂಜಾಬಿನಲ್ಲಿ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮತ್ತು ಬಿಜೆಪಿ ಮೈತ್ರಿಕೂಟ ಇತಿಹಾಸ ಸೃಷ್ಟಿಸಿದೆ. ರಾಜ್ಯದಲ್ಲಿ ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕ್ಯಾ. ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಆಗಲಿದ್ದಾರೆಂಬ ಚುನಾವಣೋತ್ತರ ಸಮೀಕ್ಷೆ ಮತ್ತು ರಾಜಕೀಯ ಪಂಡಿತರ `ಭವಿಷ್ಯ~ವನ್ನು ಚುನಾವಣೆ ಫಲಿತಾಂಶ ಸುಳ್ಳಾಗಿಸಿದೆ. ಒಮ್ಮೆ ಅಧಿಕಾರ ಹಿಡಿದ  ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೆಂಬ ಇದುವರೆಗಿನ ನಂಬಿಕೆಯನ್ನು ಮತದಾರರು ಛಿದ್ರಗೊಳಿಸಿದ್ದಾರೆ. ವಯೋವೃದ್ಧ ರಾಜಕಾರಣಿ ಪ್ರಕಾಶ್‌ಸಿಂಗ್ ಬಾದಲ್ ಮೇಲೆ ಪುನಃ ವಿಶ್ವಾಸ ತೋರಿದ್ದಾರೆ.ಉತ್ತರ ಪ್ರದೇಶದಂತೆ ಪಂಜಾಬ್ ಕೂಡಾ ಕಾಂಗ್ರೆಸ್‌ಗೆ `ಕೈ~ ಕೊಟ್ಟಿದೆ. ಪಂಜಾಬಿನವರೇ ಪ್ರಧಾನಿ ಆಗಿದ್ದರೂ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಸೋನಿಯಾ, ರಾಹುಲ್ ಎಷ್ಟೇ ಪ್ರಯತ್ನಪಟ್ಟರೂ ಮತದಾರರನ್ನು ಸೆಳೆಯಲು ಸಾಧ್ಯವಾಗಿಲ್ಲ. `ಆಡಳಿತ ವಿರೋಧಿ ಅಲೆ ಸಹಜವಾಗಿ ಕಾಂಗ್ರೆಸ್‌ಗೆ ನೆರವಿಗೆ ಬರಲಿದೆ~ ಎಂಬ ಲೆಕ್ಕಾಚಾರವೂ ತಲೆಕೆಳಗಾಗಿದೆ. ಸೋಲು ಒಪ್ಪಿಕೊಂಡಿರುವ ಕಾಂಗ್ರೆಸ್, `ಎಡವಿದ್ದು ಎಲ್ಲಿ?~ ಎಂದು ಆತ್ಮಾವಲೋಕನಕ್ಕೆ ಮುಂದಾಗಿದೆ. ಅಮರೀಂದರ್ ಸಿಂಗ್ ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪ ಮಾಡಿದ್ದಾರೆ.117ಸ್ಥಾನಗಳ ವಿಧಾನಸಭೆಯಲ್ಲಿ ಅಕಾಲಿದಳ- ಬಿಜೆಪಿ ಮೈತ್ರಿಕೂಟದ ಪಾಲು 68. ಕಾಂಗ್ರೆಸ್ 46. ಮೊದಲ ಸಲ ಚುನಾವಣೆ ಎದುರಿಸಿದ `ಪಂಜಾಬ್ ಪೀಪಲ್ ಪಾರ್ಟಿ~ (ಪಿಪಿಪಿ) ಯ ಸಂಪಾದನೆ ಶೂನ್ಯ. ಶೇಕಡವಾರು ಮತ ಗಳಿಕೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಇರುವ ಅಂತರ ಬರೀ ಎರಡರಷ್ಟು. ಹೊಸ ಪಕ್ಷದ ಷೇರು ಆರರಷ್ಟು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಮೈತ್ರಿಕೂಟ 69 ಸ್ಥಾನ ಪಡೆದಿತ್ತು. ಈ ಸಲ ಎಸ್‌ಎಡಿ ಆರು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಬಿಜೆಪಿ 7ಸ್ಥಾನ ಕಳೆದುಕೊಂಡಿದೆ. ಮಿತ್ರಪಕ್ಷ ಬಿಜೆಪಿಗೆ ಅಕಾಲಿದಳ 23ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಈ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗಿದ್ದು ಕೇವಲ 12ಸ್ಥಾನಗಳನ್ನು ಮಾತ್ರ. ಪಂಜಾಬಿನಲ್ಲಿ ಬಿಜೆಪಿ ಶಕ್ತಿ ಕುಗ್ಗಿರುವುದಕ್ಕೆ ಇದು ಸಾಕ್ಷಿ. ಅದು 12ಸ್ಥಾನಗಳನ್ನು ಗೆದ್ದಿರುವುದು ಎಸ್‌ಎಡಿ ಬೆಂಬಲದಿಂದ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಮೂವರು ಶಾಸಕರು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದು, ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ. `ಮತದಾರ ಅಭಿವೃದ್ಧಿಗೆ ಮತ ನೀಡಿದ್ದಾನೆ~ ಎಂದು ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ಹೇಳಿದ್ದಾರೆ. ಐದು ವರ್ಷ ಅಧಿಕಾರ ನಡೆಸಿದ ಬಾದಲ್ ಸ್ವರ್ಗವನ್ನೇನು ಇಳಿಸಿಲ್ಲ. ಆ ದಿಕ್ಕಿನಲ್ಲಿ ಹೆಜ್ಜೆ ಹಾಕುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಹೇಳಿಕೊಳ್ಳುವಂತಿಲ್ಲ. ವಿದ್ಯುತ್‌ಗೂ ಅಭಾವವಿದೆ. ಉದ್ಯೋಗಾವಕಾಶ ಸೃಷ್ಟಿಯಾಗುತ್ತಿಲ್ಲ. ಈ ಲೋಪಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವ ವಾಗ್ದಾನವನ್ನು ಅಕಾಲಿದಳ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದೆ. ಪ್ರಕಾಶ್‌ಸಿಂಗ್ ಬಾದಲ್ ಮಾತನ್ನು ಮತದಾರರು ನಂಬಿದ್ದಾರೆ. ಹಳ್ಳಿಗಾಡಿನ ಜನರಂತೂ ಪ್ರಕಾಶ್‌ಸಿಂಗ್ ಹಿಂದೆ `ಪೆರೇಡ್~ ಮಾಡಿದ್ದಾರೆ. ಉಚಿತ ವಿದ್ಯುತ್ ನೀಡಿದ ನಾಯಕನ ಋಣ ತೀರಿಸಿದ್ದಾರೆ.ಬಾದಲ್ ಕುಟುಂಬ ಕಲಹ ಅಕಾಲಿದಳದ ಜನಪ್ರಿಯತೆ ಕುಗ್ಗಿಸುವಲ್ಲಿ ಸೋತಿದೆ. ಹಿಂದಿನ ಅಕಾಲಿ-ಬಿಜೆಪಿ ಸರ್ಕಾರದ ಹಣಕಾಸು ಸಚಿವ ಮನಪ್ರೀತ್‌ಸಿಂಗ್ ಬಾದಲ್ ದೊಡ್ಡಪ್ಪನಿಗೆ ಸೆಡ್ಡು ಹೊಡೆದು ಮಣ್ಣು ಮುಕ್ಕಿದ್ದಾರೆ. ಇವರು ಪ್ರಕಾಶ್‌ಸಿಂಗ್ ಅವರ ಕಿರಿಯ ಸಹೋದರ ಗುರುದಾಸ್ ಬಾದಲ್ ಅವರ ಪುತ್ರ. ಇದುವರೆಗೆ ಅಣ್ಣನ ಎಲ್ಲ ಚುನಾವಣೆಗಳ ಉಸ್ತುವಾರಿ ಹೊರುತ್ತಿದ್ದ ಗುರುದಾಸ್ `ಲಂಬಿ~ಯಲ್ಲಿ ಅಣ್ಣನ ವಿರುದ್ಧವೇ ಸ್ಪರ್ಧಿಸಿ ಮನೆಯ ಹಾದಿ ಹಿಡಿದಿದ್ದಾರೆ. ಇಷ್ಟು ವರ್ಷ ಅನ್ಯೋನ್ಯವಾಗಿ ಬದುಕಿದ್ದ ಅಣ್ಣತಮ್ಮಂದಿರು ಮುಪ್ಪಿನ ಕಾಲದಲ್ಲಿ ವೈರಿಗಳಾಗಿದ್ದಾರೆ.ಅಕಾಲಿ ವಿರೋಧಿ ಅಲೆಯನ್ನು ಬಂಡವಾಳ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಪಟಿಯಾಲ ರಾಜವಂಶಸ್ಥ ಅಮರೀಂದರ್ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರು. ಅವರ ಕನಸಿಗೆ ಕಾಂಗ್ರೆಸ್ `ಯುವರಾಜ~ ರಾಹುಲ್ ಬಣ್ಣ ತುಂಬಿದ್ದರು. ಪಂಜಾಬಿನಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಮರೀಂದರ್ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದರು. ಬಹುಶಃ ಇದೇ ಕಾಂಗ್ರೆಸ್‌ಗೆ ಮುಳುವಾಗಿರಬಹುದೇನೋ. ಅಮರೀಂದರ್ ವಿರೋಧಿಗಳು ಎದುರಾಳಿಗಳ ಜತೆ ಕೈಜೋಡಿಸಿದ್ದಾರೆ ಎಂಬ ಗುಸುಗುಸು ಪಕ್ಷದೊಳಗಿದೆ. ಮುಖ್ಯಮಂತ್ರಿ ಆಯ್ಕೆಯನ್ನು ಮುಕ್ತವಾಗಿ ಇಟ್ಟುಕೊಂಡಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದಿತ್ತೇನೋ.ಅಮರ್‌ಸಿಂಗ್ ಅವರದ್ದು ಬಾದಲ್ ಅವರಿಗೆ ತದ್ವಿರುದ್ಧವಾದ ವ್ಯಕ್ತಿತ್ವ. ಮಡಿಲಲ್ಲಿ ಕೆಂಡ (ಪಕ್ಷದೊಳಗೆ ಶತ್ರು) ಇಟ್ಟುಕೊಂಡು ಓಡಾಡುವ ಮನುಷ್ಯ. ಜನರ ಕೈಗೆ ಸಿಗುವುದು ಕಷ್ಟ. ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅವರ ಕಾರ್ಯವೈಖರಿಯನ್ನು ಜನ ನೋಡಿದ್ದಾರೆ. ಅಷ್ಟೇಅಲ್ಲ, ಅಭ್ಯರ್ಥಿಗಳ ಆಯ್ಕೆಯಲ್ಲೂ ಕಾಂಗ್ರೆಸ್ ಎಡವಿದೆ. ಸರಿಯಾದ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿಲ್ಲ. ಇದರಿಂದ ಹಲವೆಡೆ `ಬಂಡಾಯ~ಕ್ಕೆ ಸಿಕ್ಕಿ ನಲುಗಿದೆ. ಮನಮೋಹನ್‌ಸಿಂಗ್ ಸರ್ಕಾರದ ಭಷ್ಟಾಚಾರ, ನಿಷ್ಕ್ರೀಯತೆಯೂ ಪಕ್ಷ ನೆಲಕಚ್ಚಲು ಕಾರಣವಾಗಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.ಬಾದಲ್ ಕುಟುಂಬದಂತೆ ಅಮರೀಂದರ್ ಕುಟುಂಬದಲ್ಲೂ ಕಲಹವಿದೆ. ಅಮರೀಂದರ್ ಸೋದರ ಅಣ್ಣನನ್ನು ತೊರೆದು ಅಕಾಲಿದಳ ಬೆಂಬಲಿಸಿದ್ದಾರೆ. ಈ ಅಣ್ಣತಮ್ಮನ ಕಿತ್ತಾಟದ ಲಾಭ ಪಡೆಯಲು ಆಡಳಿತರೂಢ ಮೈತ್ರಿಕೂಟ ಸ್ವಲ್ಪಮಟ್ಟಿಗೆ ಸಫಲವಾಗಿದೆ. ಅದೇನೇ ಇರಲಿ ಪಂಜಾಬಿನ ಜನ ಸಂಪ್ರದಾಯ ಮುರಿದಿದ್ದಾರೆ. 1966ರಲ್ಲಿ ಪಂಜಾಬ್ ವಿಭಜಿಸಿ ಹರಿಯಾಣ ರಾಜ್ಯ ರಚನೆಯಾದ ನಂತರದಿಂದ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದಿರಲಿಲ್ಲ. ಪ್ರಕಾಶ್‌ಸಿಂಗ್ ಬಾದಲ್ ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ದಾಖಲೆ ಮಾಡಿದ್ದಾರೆ.ಅಕಾಲಿದಳ ಅಧಿಕಾರಕ್ಕೆ ಬರಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಎಲ್ಲರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದೇ ಭಾವಿಸಿದ್ದರು. ನಿರೀಕ್ಷೆ- ಭವಿಷ್ಯಗಳೆಲ್ಲವೂ ಹುಸಿಯಾಗಿದೆ. ಪ್ರಕಾಶ್‌ಸಿಂಗ್ ಬಾದಲ್ ತಮ್ಮ ಪುತ್ರ ಉಪ ಮುಖ್ಯಮಂತ್ರಿ ಸುಖ್‌ಬೀರ್‌ಸಿಂಗ್ ಅವರಿಗೆ ಅಧಿಕಾರ ವಹಿಸಿಕೊಡಲಿದ್ದಾರೆಯೇ ಎಂಬ ಚರ್ಚೆ ಪಂಜಾಬಿನಲ್ಲಿ ನಡೆದಿದೆ. ಪ್ರಕಾಶ್‌ಸಿಂಗ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ಈ ಬಗ್ಗೆ ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಸುಖ್‌ಬೀರ್ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.