ಬಿಡಿಸಿದ ಏಲಕ್ಕಿ ಸಿಪ್ಪೆಗಳನ್ನು ಎಸೆಯಲು ಮನಸ್ಸಿಲ್ಲ, ಅದನ್ನು ಬಳಸಿ ಇನ್ನೇನೋ ಚೆಂದದ ವಸ್ತು ಮಾಡಬಹುದು ಅನಿಸಿದ್ದೇ ತಡ, ಕಲಾಕೃತಿಯೊಂದನ್ನು ರೂಪಿಸಿದರು. ತಿಂದು ಮುಗಿಸಿದ ಐಸ್ಕ್ರೀಂ ಕಡ್ಡಿಗೂ ಒಂದೊಳ್ಳೆ ರೂಪ ಸಿಕ್ಕಿತು. ಹೋಟೆಲ್ ಊಟ ಕಟ್ಟಿ ತಂದ ದಾರ ಉಪಯೋಗಿಸಿಕೊಂಡು ಇವರ ಕೈ ಇನ್ನೊಂದು ಕಲೆಯನ್ನು ಮೂಡಿಸಿತು. ಒಡೆದ ಗಾಜಂತೂ ಭಿತ್ತಿ ಚಿತ್ರದಲ್ಲಿ ಬೇರೆಯದೇ ರೂಪು ಪಡೆಯಿತು. ಎಲ್ಲೋ ಮೂಲೆಯಲ್ಲಿ ಬಿದ್ದಿರಬೇಕಿದ್ದ ಸೋರೆ ಬುರುಡೆಗಳು ಮನೆಯ ತೋರಣವಾಗಿ ಮಿಂಚುತ್ತಿವೆ...

ಹೀಗೆ ಬೇಡ ಎಂದು ಬಿಸಾಡುವ ಅನುಪಯುಕ್ತ ವಸ್ತುಗಳನ್ನೇ ತಮ್ಮ ಕಲೆಗೆ ಒಗ್ಗಿಸಿಕೊಂಡಿದ್ದಾರೆ ನಾಗರತ್ನ. ಒಂದಿಷ್ಟು ಸಮಯ ಸಿಕ್ಕರೂ ಇವರ ಕೈಗಳು ಬಣ್ಣದೆಡೆಗೆ ವಾಲುತ್ತವೆ. ಗೊತ್ತೇ ಆಗದಂತೆ ಮನಸ್ಸು ಕಲೆಯಲ್ಲಿ ತಲ್ಲೀನವಾಗುತ್ತದೆ. ಮಹಿಳೆಯಾಗಿ ಮನೆ ಜವಾಬ್ದಾರಿ ನಿಭಾಯಿಸುವುದರೊಂದಿಗೆ ಮನದ ಮಾತಿಗೂ ಸ್ಪಂದಿಸುವುದು ಬದುಕಲ್ಲಿ ನಾವು ಕಂಡುಕೊಳ್ಳಬಹುದಾದ ಅದಮ್ಯ ಸಂತೋಷ ಎನ್ನುತ್ತಾರೆ ನಾಗರತ್ನ.

ಮಾಳಗಾಳದಲ್ಲಿರುವ ನಾಗರತ್ನ ಅವರ ಮನೆಯೇ ಕಲಾ ಗ್ಯಾಲರಿಯಂತಿದೆ. ತೋರಣದಿಂದ ಹಿಡಿದು ಅಡುಗೆ ಮನೆಯಲ್ಲಿನ ಪ್ಲಾಸ್ಟಿಕ್ ತಟ್ಟೆಗೂ ಕಲೆಯ ಸ್ಪರ್ಶ ನೀಡಿದ್ದಾರೆ ಅವರು. ಹಲವು ಅಲಂಕಾರಿಕ ಕಲಾಕೃತಿಗಳನ್ನು ತಾವೇ ರೂಪಿಸಿ ಮನೆಗೆ ಮೆರುಗು ತಂದಿದ್ದಾರೆ.
‘ಸಣ್ಣ ವಸ್ತುವಿನಲ್ಲೂ ಕಲೆ ಅಡಗಿರುತ್ತದೆ. ಅದನ್ನು ಹೊರತರಲು ಕ್ರಿಯಾಶೀಲ ಮನಸ್ಸಿರಬೇಕಷ್ಟೆ’ ಎಂದು ಕಲೆಯ ಬಗ್ಗೆ ವ್ಯಾಖ್ಯಾನಿಸುತ್ತಾರೆ. ಅಷ್ಟಕ್ಕೂ ನಾಗರತ್ನ ಅವರು ಕಲೆಯನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಆದರೆ ಅವರ ಆಸಕ್ತಿ ಎಲ್ಲೆಗಳನ್ನೆಲ್ಲ ಮೀರಿ ಹೊಸದೊಂದು ಸಾಧ್ಯತೆಯನ್ನು ತೆರೆದಿಟ್ಟಿತು. ಬೆಂಗಳೂರಿಗೆ ಬಂದ ಹೊಸತರಲ್ಲಿ ಹವ್ಯಾಸವಾಗಷ್ಟೇ ಇದ್ದ ಕಲೆ ಅವಕಾಶವಾಗಿ ಮಾರ್ಪಟ್ಟಿತ್ತು. ನಂತರ ಕಲೆಯೇ ಇವರ ಬದುಕಾಯಿತು.

ಮೊದಲು ತಮ್ಮ ಮನದ ಗೊಂದಲಗಳ ಅನಾವರಣಕ್ಕೆ ಅವರು ಆರಿಸಿಕೊಂಡಿದ್ದು ಚಿತ್ರಕಲೆ. ಪ್ರಕೃತಿಯನ್ನು ಬಣ್ಣಗಳಲ್ಲಿ ಮೀಯಿಸುವುದೆಂದರೆ ಇವರಿಗೆ ಇನ್ನಿಲ್ಲದ ಹಿಗ್ಗು.

‘ಪ್ರಕೃತಿ ತಾಳ್ಮೆ ಕಲಿಸಿಕೊಡುತ್ತದೆ. ಕಲೆಯೂ ಅಷ್ಟೆ. ಆದ್ದರಿಂದಲೇ ಬೇಸರವಾದಾಗೆಲ್ಲಾ ಕಲೆಗೆ ಮೊರೆಹೋಗುತ್ತೇನೆ. ನಂತರ ಗೊತ್ತೇ ಆಗದೆ ಮನಸ್ಸಿನಲ್ಲಿ ಸಂತೋಷ ತುಂಬಿಕೊಳ್ಳುತ್ತದೆ’ ಎನ್ನುತ್ತಾರೆ. ಮೊದಲು ಪೇಂಟಿಂಗ್ ಆರಂಭಿಸಿದ ಇವರನ್ನು ತಾಂಜಾವೂರು ಮತ್ತು ಮೈಸೂರು ಶೈಲಿಯ ಚಿತ್ರಕಲೆ ಆಕರ್ಷಿಸಿತು. ಕಷ್ಟಪಟ್ಟು ಕಲಿತರು. ಕಾಲ ಕಳೆದಂತೆ ಒಂದೊಂದೇ ಕಲಾಪ್ರಕಾರ ಕಲಿಯುತ್ತಾ ಸಾಗಿದರು. ಈಗ ಕಡಿಮೆ ಎಂದರೂ ಅರವತ್ತು ಬಗೆಯ ಕಲಾ ಪ್ರಕಾರಗಳನ್ನು ಮೂಡಿಸಬಲ್ಲರು.

ಸೆರಾಮಿಕ್ ಪೇಂಟಿಂಗ್, ಭಿತ್ತಿ ಚಿತ್ರಗಳು, ಜ್ಯೂಟ್ ಬ್ಯಾಗ್ ತಯಾರಿಕೆ, ಅಲಂಕಾರಿಕ ಪರದೆಗಳು, ಬೋನ್ಸಾಯ್, ಮರಳಿನ ಕಲೆ, ಎಂಬ್ರಾಯ್ಡರಿ, ಗ್ಲಾಸ್ ಪೇಂಟಿಂಗ್, ಆಯಿಲ್ ಪೇಂಟಿಂಗ್, ನಿಬ್ ಪೇಂಟಿಂಗ್, ಸೋಲಾ ವುಡ್, ಡೆಕೊ ಪ್ಯಾಚ್, ಸ್ಟೋನ್ ಮ್ಯೂರಲ್, ಚಾರ್ಕೋಲ್ ಪೇಂಟಿಂಗ್, ಸ್ಮಾಲ್ ಪಾಟ್ ಪೇಂಟಿಂಗ್, ಸಾಕ್ಸ್ ಡಾಲ್ಸ್, ಗ್ಲಿಟರ್ ಫ್ಲವರ್, ಸೆರಾಮಿಕ್ ವಾಲ್ ಪ್ಲೇಟ್ಸ್ಗಳಲ್ಲದೆ ಸೀರೆಗಳ ಮೇಲೂ ತಮ್ಮ ಚಿತ್ರಕಲಾ ಕೌಶಲವನ್ನು ತೋರಿಸಬಲ್ಲರು.

ಇದರ ಹೊರತಾಗಿ ಪ್ಯಾಚ್ ವರ್ಕ್, ಸ್ಟ್ರೋಕ್ ವರ್ಕ್, ಕುಶನ್ ತಯಾರಿಕೆ, ಗೊಂಬೆ ತಯಾರಿಕೆ, ಗ್ರೀಟಿಂಗ್ ಕಾರ್ಡ್ಗಳನ್ನೂ ವಿನ್ಯಾಸಗೊಳಿಸುತ್ತಾರೆ. ಇನ್ನು ಇವರ ವಿಶೇಷತೆ ಎದ್ದು ಕಾಣುವುದು ಬಗೆ ಬಗೆ ಹೂವುಗಳ ತಯಾರಿಕೆಯಲ್ಲಿ. ಸೋಪಿನಿಂದ ತಯಾರಿಸಿದ ಹೂವು, ಪೇಪರ್ ಫ್ಲವರ್, ಟಿಶ್ಯೂ ಪೇಪರ್ನಿಂದ ತಯಾರಿಸಿದ ಹೂವುಗಳು, ಪಾಲಿಸ್ಟರ್ ಹೂವುಗಳನ್ನು ತಯಾರಿಸುವ ಕಲೆಯೂ ಇವರಿಗೆ ಒಲಿದಿದೆ. ಎಲ್ಲಿಗೇ ಹೋದರೂ ಅಲ್ಲಿನ ಕಲೆಯ ವಿಶೇಷತೆಯನ್ನು ಗಮನಿಸಿ ಅದನ್ನು ತಮ್ಮ ಮನಸ್ಸಿಗೆ ಹೊಳೆದಂತೆ ರೂಪು ನೀಡುವುದನ್ನೂ ರೂಢಿಸಿಕೊಂಡಿದ್ದಾರೆ.

ಇಷ್ಟೊಂದು ಕೆಲಸಕ್ಕೆ ಸಮಯವಾದರೂ ಎಲ್ಲಿರುತ್ತದೆ ಎಂದು ಕೇಳಿದರೆ, ಮನಸ್ಸಿದ್ದರೆ ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟವಾಗುವುದಿಲ್ಲ ಎಂದು ಮುಗುಳ್ನಗುತ್ತಾರೆ. ಜೊತೆಗೆ, ಸಮಯವನ್ನು ಸದುಪಯೋಗಪಡಿಸಿಕೊಂಡರೆ ಆರ್ಥಿಕವಾಗಿಯೂ ಮಹಿಳೆಯರು ಸ್ವಾವಲಂಬಿಗಳಾಗಬಹುದು ಎಂದು ಸಲಹೆ ನೀಡುತ್ತಾರೆ.

ಸವಾಲಾಗಿ ಬದುಕನ್ನು ಸ್ವೀಕರಿಸಿರುವ ನಾಗರತ್ನ ಅವರು ಇದುವರೆಗೂ ಸಾವಿರಾರು ಮಂದಿಗೆ ತರಬೇತಿಯನ್ನೂ ನೀಡಿದ್ದಾರೆ. ಕಲಾಧಾರೆ ಎಂಬ ಸಂಸ್ಥೆ ಕಟ್ಟಿ, ಸಮಾಜಕ್ಕೆ ಹಲವು ಪ್ರಕಾರದ ಕಲೆಯನ್ನು ಪರಿಚಯಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರ ಸಂಪರ್ಕಕ್ಕೆ: 94488 84699.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.