ಬುಧವಾರ, ಜನವರಿ 22, 2020
20 °C

ಬದುಕು ಬೆಚ್ಚಗಿರಿಸದ ಕಂಬಳಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆ ಮನೆಗೂ ದಾಂಗುಡಿಯಿಟ್ಟಿರುವ ರಂಗುರಂಗಿನ ರಗ್ಗು, ಶಾಲು, ಇತರ ಹೊದಿಕೆಗಳಿಗೆ ಮಾರು ಹೋಗಿರುವ ಜನ ಸಾಂಪ್ರದಾಯಿಕ ಬೆಚ್ಚನೆಯ ಕಪ್ಪು ಹೊದಿಕೆ ಕಂಬಳಿಯನ್ನು ಕಡೆಗಣಿಸುತ್ತಿದ್ದಾರೆ. ಇದರಿಂದ ಕಂಬಳಿ ನೇಯ್ಗೆಯನ್ನೇ ನೆಚ್ಚಿಕೊಂಡು ಬದುಕು ನಡೆಸುವ ಸಮುದಾಯ ಸಂಕಷ್ಟಕ್ಕೆ ಈಡಾಗಿದೆ.

ಇಂತಹ ವಿಷಮ ಸ್ಥಿತಿಯಲ್ಲೂ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಹಾಲುಮತ ಕುಟುಂಬಗಳು ಕಂಬಳಿ ನೇಯ್ಗೆ ವೃತ್ತಿಯನ್ನು ಕೈಬಿಟ್ಟಿಲ್ಲ. ಅಂತೆಯೇ ಕರಗಾಂವಿ ಕಂಬಳಿಯೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ.ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ಕಂಬಳಿ ನೇಯ್ಗೆ ಕೈಮಗ್ಗಗಳು ಎದುರಾಗುತ್ತವೆ. ಅತ್ತ ಬೀರಪ್ಪ ದೇವರ ಗುಡಿ ಕಟ್ಟೆಯ ಮೇಲೆ, ಮನೆಯಂಗಳಗಳಲ್ಲಿ ವಯೋವೃದ್ದರು, ಮಹಿಳೆಯರು ಕುರಿ ಉಣ್ಣೆ ನೂಲುವ ಕಾಯಕದಲ್ಲಿ ತಲ್ಲೀನರಾಗಿರುವುದು ಸಾಮಾನ್ಯ ದೃಶ್ಯ. ಗ್ರಾಮದಲ್ಲಿ 100ಕ್ಕೂ ಹೆಚ್ಚು ಹಾಲುಮತ ಕುಟುಂಬಗಳಿದ್ದು, ಆ ಪೈಕಿ 50ಕ್ಕೂ ಹೆಚ್ಚು ಕುಟುಂಬಗಳು ತಲೆತಲಾಂತರದಿಂದ ಬಂದಿರುವ ಕಂಬಳಿ ತಯಾರಿಕೆ ಕಾಯಕವನ್ನು ಶೃದ್ಧೆಯಿಂದ ಮುಂದುವರಿಸಿಕೊಂಡು ಬಂದಿವೆ. ವೃತ್ತಿಯಲ್ಲಿ ನಷ್ಟ ಅನುಭವಿಸಿದರೂ ಕುಲಕಸುಬನ್ನು ನಿಷ್ಠೆಯಿಂದ ಮುಂದಿನ ಪೀಳಿಗೆಗೆ ಪರಿಚಯಿಸುತ್ತಿದ್ದಾರೆ.ಕುಟುಂಬದ ಕೆಲವು ಸದಸ್ಯರು ಕುರಿಗಾರಿಕೆಯಲ್ಲಿ ತೊಡಗಿದ್ದರೆ, ಒಂದಿಬ್ಬರು ಕಂಬಳಿ ನೇಯ್ಗೆಯಲ್ಲಿ ತೊಡಗುತ್ತಾರೆ. ವೃದ್ಧರು, ಮಹಿಳೆಯರು ಕುರಿ ಉಣ್ಣೆ ನೇಯುವ ಕೆಲಸವನ್ನು ಉಪಕಸುಬಾಗಿ ಮಾಡುತ್ತಾರೆ. ಒಂದು ಕಿ.ಗ್ರಾಂ. ಉಣ್ಣೆ ನೂಲಿದರೆ ಅವರಿಗೆ ಸುಮಾರು 50 ರೂಪಾಯಿ ಕೂಲಿ ದೊರಕುತ್ತದೆ.

‘5 ಕಿ.ಗ್ರಾಂ ಉಣ್ಣೆ ಬಳಸಿ 7 ಮೊಳ ಉದ್ದ ಮತ್ತು ಎರಡೂವರೆ ಮೊಳ ಅಗಲದ ಕಂಬಳಿ ತಯಾರಿಕೆಗೆ 2 ರಿಂದ 3 ದಿನ ಬೇಕಾಗುತ್ತದೆ. ಉಣ್ಣೆ, ಉಣ್ಣೆ ನೂಲುವುದು, ಗಂಜಿ ಹಾಕಲು ಹುಣಸೆ ಬೀಜ, ನೇಯ್ಗೆ ಕೂಲಿ ಸೇರಿಸಿ ಕನಿಷ್ಠ ರೂ.500 ಖರ್ಚಾಗುತ್ತದೆ. ಆ ಕಂಬಳಿಯನ್ನು ಮಧ್ಯವರ್ತಿಗಳು ತಮ್ಮಿಂದ ₨ 400ಗಳಿಗೆ ಖರೀದಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಂಬಳಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಇದರಿಂದ ಕಂಬಳಿ ನೇಕಾರಿಕೆ ವೃತ್ತಿ ನೇಪಥ್ಯಕ್ಕೆ ಸರಿಯುತ್ತಿದೆ. ಈ ವೃತ್ತಿಯಲ್ಲಿ ತಮಗೆ ನಷ್ಟವಾಗುತ್ತಿದೆ. ಆದರೆ, ದಿನವೂ ದುಡಿಯಲು ಕೆಲಸ ಅರಸಿಕೊಂಡು ಹೋಗುವ ಬದಲು ತಲೆತಲಾಂತರದಿಂದ ಬಂದಿರುವ ಕಂಬಳಿ ನೇಯ್ಗೆಯಿಂದಲೇ ಉಪಜೀವನ ನಡೆಸುತ್ತಿದ್ದೇವೆ. ಇದರಲ್ಲಿ ತಮಗೆ ಸಂತೃಪ್ತಿಯೂ ಇದೆ, ನಮ್ಮ ಮಕ್ಕಳೂ ಕಂಬಳಿ ನೇಯ್ಗೆಯಲ್ಲಿ ಆಸಕ್ತಿ ಹೊಂದಿದ್ದಾರೆ’ ಎನ್ನುತ್ತಾರೆ ಬೀರಪ್ಪ ಬಾಬು ಮುನ್ನೋಳಿ.ಕರಗಾಂವ ಗ್ರಾಮದಲ್ಲಿ ಮರಿ ಉಣ್ಣೆ ಕಂಬಳಿ, ಬಿಳಿ ಉಣ್ಣೆ ಕಂಬಳಿ, ಪಟ್ಟಿ ಪಟ್ಟಿ ಕಂಬಳಿ, ಹೈಗಪಟ್ಟಿ ಕಂಬಳಿ, ಮಗ್ಗಿ ಕಂಬಳಿ, ಕರಿಬಿಳಿ ಪಟ್ಟಿ ಕಂಬಳಿ ಮೊದಲಾದ ತರಾವರಿ ಕಂಬಳಿಗಳನ್ನು ನೇಯಲಾಗುತ್ತದೆ. ಶುಭ ಸಂಕೇತವೆಂದು ಪರಿಗಣಿಸುವ ಕಂಬಳಿಯನ್ನು ಮಂಗಳ ಕಾರ್ಯಗಳಲ್ಲಿಯೂ ಬಳಸಲಾಗುತ್ತದೆ. ಅಂತೆಯೇ ಕರಗಾಂವಿಯಲ್ಲಿ ದೇವರ ಕಾರ್ಯಗಳಿಗಾಗಿಯೇ ವಿಶಿಷ್ಟ ಕಂಬಳಿಯನ್ನೂ ನೇಯಲಾಗುತ್ತದೆ.‘ಬೆಳಗಾವಿ ಜಿಲ್ಲೆಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಂಬಳಿ ನೇಕಾರರು ಕರಗಾಂವ ಗ್ರಾಮದಲ್ಲಿ ಇದ್ದಾರೆ. ಇಂದಿಗೂ ಅದೇ ವೃತ್ತಿಯನ್ನು ನಂಬಿಕೊಂಡು ಕಷ್ಟದ ಬದುಕು ನಡೆಸುತ್ತಿದ್ದಾರೆ. ಸರ್ಕಾರ ಇಂತಹ ಬಡ ನೇಕಾರರ ನೆರವಿಗೆ ಮುಂದೆ ಬರಬೇಕಿದೆ. ಜವಳಿ ಇಲಾಖೆ ಮೂಲಕ ನೇಕಾರರಿಗೆ ವಸತಿ ಸೌಕರ್ಯ, ನೇಯ್ಗೆ ಕೌಶಲ್ಯ ಹೆಚ್ಚಿಸಿಕೊಳ್ಳಲು ಅಗತ್ಯ ತರಬೇತಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲತೆಗಳನ್ನು ಕಲ್ಪಿಸುವುದು ಸೇರಿದಂತೆ ಕಂಬಳಿ ಉದ್ಯಮವನ್ನು ಮುಂದುವರಿಸಿಕೊಂಡು ಹೋಗಲು ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯವಿದೆ’ ಎಂಬುದು ಕರಗಾಂವದ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸಂಸ್ಥಾಪಕ ಬಿ.ಎಸ್‌.ಮಾಳಿಂಗೆ ಒತ್ತಾಯ.

- ಸುಧಾಕರ ತಳವಾರಎಣ್ಣೆ ಉದ್ಯಮದ ಭಾರಿ ವಹಿವಾಟಿನಿಂದ ‘ಆಯಿಲ್‌ ಸಿಟಿ’ ಎಂದು ಕರೆಸಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲೀಗ ಕಂಬಳಿಯ ಭರಾಟೆ. ಚಳಿಗಾಲ ಕಾಲಿಡುತ್ತಿದ್ದಂತೆ ‘ಕಂಬಳಿ ಸಂತೆ’ಗೆ ಭಾರಿ ಡಿಮಾಂಡ್‌.

ಕಂಬಳಿ ಮೂಲತಃ ಕುರಿಸಾಕಣೆಗೆ ಹೊಂದಿಕೊಂಡಂಥ ಉಪಕಸಬು. ಕುರಿಯ ಕೂದಲನ್ನು ಕತ್ತರಿಸಿ, ಆ ಕೂದಲಿನಿಂದ ನೂಲು ತೆಗೆದು, ಆ ನೂಲಿನಿಂದ ಕಂಬಳಿ ನೇಯಲಾಗುತ್ತದೆ. ಇಂದು ಕುರಿ ಸಾಕಣೆಯ ಪ್ರಮಾಣವೇ ಕಡಿಮೆಯಾಗುತ್ತಿರುವುದರಿಂದ ಸಹಜವಾಗಿ ಅದಕ್ಕೆ ಹೊಂದಿಕೊಂಡಂತಹ ಕಂಬಳಿ ನೇಯ್ಗೆಯೂ ಕುಸಿಯುತ್ತಿದೆ. ಈ ನಡುವೆಯೂ ಚಳ್ಳಕೆರೆಯಲ್ಲಿ  ಕಂಬಳಿ ಉದ್ಯಮ  ಪ್ರತಿ ವಾರವೂ ಹತ್ತಾರು ಲಕ್ಷಗಳ ವಹಿವಾಟು ನಡೆಸುತ್ತಿದೆ. ಈ ಉದ್ಯಮವನ್ನು ನಂಬಿ ಈ ಭಾಗದ ನೂರಾರು ಹಳ್ಳಿಗಳ ಜನರು ಕಂಬಳಿ ನೇಯುವ ಕುಲಕಸುಬಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.ಚಳ್ಳಕೆರೆಯ ಸಂತೆಪೇಟೆಯ ಕಂಬಳಿಕಟ್ಟೆ ಎನ್ನುವ ಪ್ರದೇಶದಲ್ಲಿ ಪ್ರತಿ ಭಾನುವಾರ ಕಂಬಳಿ ಸಂತೆ ನಡೆಯುತ್ತದೆ. ಆ ದಿನ ಕಂಬಳಿ ಅಂಡಿಗೆಗಳು ಬಂದು ಇಳಿಯುತ್ತವೆ. ಒಂದೆರಡು ಕಂಬಳಿಗಳನ್ನು ನೇಯ್ದು ವಾರದ ಮನೆ ಖರ್ಚಿಗೆಂದು ಮಾರಲು ಬಂದ ಬಿಡಿ ಕಂಬಳಿದಾರರೂ ಇರುತ್ತಾರೆ.  ಕಂಬಳಿಯನ್ನು ಕೊಳ್ಳಲು ಆಂಧ್ರ, ಮಹಾರಾಷ್ಟ್ರ, ಹಿಮಾಲಯ, ಕಾಶ್ಮೀರ, ಅಂಡಮಾನ್ ನಿಕೋಬಾರ್ ಭಾಗಗಳಿಂದಲೂ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ. ಹಿಮ ಚಳಿ ಹೆಚ್ಚಿರುವ ಉತ್ತರ ಭಾರತದಲ್ಲಿ ಇಲ್ಲಿಯ ಕಂಬಳಿಗೆ ದೊಡ್ಡ ಬೇಡಿಕೆಯೇ ಇದೆ. ಈ ಬೇಡಿಕೆಯನ್ನು ಆಧರಿಸಿಯೇ ಇಲ್ಲಿ ಕಂಬಳಿ ಸಂತೆ ಈಗಲೂ ಕಳೆಗಟ್ಟುತ್ತಿರುವುದು. ಉತ್ತರ ಭಾರತದ ರಾಜ್ಯಗಳ ಜನರು ಬೆಚ್ಚಗಿರಲು ಚಳ್ಳಕೆರೆ ಭಾಗದ ಕಂಬಳಿಯನ್ನು ನೆಚ್ಚಿದ್ದರಿಂದ ಕಂಬಳಿ ನೇಯ್ಗೆಯನ್ನು ನಂಬಿದ ಸಮುದಾಯಗಳ ಹೊಟ್ಟೆ ಇಷ್ಟರ ಮಟ್ಟಿಗಾದರೂ ತಣ್ಣಗಿದೆ. ಇಲ್ಲದಿದ್ದರೆ ಇವರ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿಯಾಗಿತ್ತೇನೋ!ನೇಕಾರರು ‘ಸಂತೆ ಕಂಬಳಿ’ಯನ್ನು ಎರಡು ದಿನಕ್ಕೆ ಒಂದರಂತೆ ಹಾಗೂ ‘ನೈಸ್ ಕಂಬಳಿ’ಯನ್ನು ವಾರಕ್ಕೆ ಒಂದರಂತೆ ನೇಯುತ್ತಾರೆ. ಒಂದು ಕಂಬಳಿಗೆ ೩೫೦ ರೂಪಾಯಿಗಳಿಂದ ಆರಂಭವಾಗಿ, ಎರಡು ಸಾವಿರ ರೂಪಾಯಿಗಳ ತನಕವೂ  ಬೆಲೆ ಇದೆ. ಈ ಬೆಲೆ ಆಯಾ ಕಂಬಳಿಯ ಗುಣಮಟ್ಟ ಮತ್ತು ಕಂಬಳಿಗೆ ಬಳಸಿದ ಉಣ್ಣೆಯ ಗುಣಮಟ್ಟವನ್ನು ಆಧರಿಸಿರುತ್ತದೆ.ಆಧುನಿಕ ಕಾಲಮಾನಕ್ಕೆ ಒಪ್ಪುವಂತೆ ನಯವಾದ ಕಂಬಳಿಯನ್ನು ನೇಯುವ ಬದಲಾವಣೆಯೂ ಈ ನೇಯ್ಗೆಯಲ್ಲಿ ಆಗಿದೆ. ಸಂತೆಯಲ್ಲಿ ಕಂಬಳಿ ಜೊತೆ ಉಣ್ಣೆ ಮತ್ತು ಕಂಬಳಿ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಮಾರಾಟವೂ ನಡೆಯುತ್ತದೆ.ಚಳ್ಳಕೆರೆ ಸುತ್ತಮುತ್ತಲ ಅನೇಕ ಗ್ರಾಮಗಳ ಕುರುಬರು, ಗೊಲ್ಲರು, ಬೇಡರು, ಒಕ್ಕಲಿಗರು ಉಣ್ಣೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಉಣ್ಣೆ ತೆಗೆಯುವುದು, ಅದನ್ನು ಸ್ವಚ್ಛಗೊಳಿಸುವುದು, ನೂಲು ತೆಗೆಯುವುದು, ನೇಯುವುದರಲ್ಲಿ ಮಹಿಳೆಯರ ಭಾಗವಹಿಸುವಿಕೆ ದೊಡ್ಡ ಪ್ರಮಾಣದಲ್ಲಿದೆ. ಕಂಬಳಿಯ ವ್ಯಾಪಾರದಲ್ಲಿ ಪುರುಷ ಪ್ರಧಾನತೆಯೇ ಎದ್ದು ಕಾಣುತ್ತದೆ.ಕುರಿಯವರಿಂದ ನೇಕಾರರು ಕುರಿಯ ಉಣ್ಣೆಯನ್ನು ಕತ್ತರಿಸಿ, ಅದಕ್ಕೆ ಬದಲಿಯಾಗಿ ಕುರಿಯವರಿಗೆ ಕಂಬಳಿಯನ್ನು ಕೊಡುವ ಪದ್ಧತಿ ಇದೆ. ಈಗೀಗ ಕುರಿಯ ಉಣ್ಣೆ ಕತ್ತರಿಸಲು ಕುರಿಯವರೇ ನೇಕಾರರಿಗೆ ಒಂದು ಕುರಿಗೆ ಎರಡು ರೂಪಾಯಿಯನ್ನು ಈಗ ಕೊಡುತ್ತಾರೆ. ಸ್ವಚ್ಛಗೊಂಡ ಒಂದು ಮಣ ಉಣ್ಣೆಗೆ ೩೫೦ ರಿಂದ ೪೦೦ ರೂಪಾಯಿಗಳವರೆಗೆ ಬೆಲೆ ಇದೆ.ಯೋಜನೆ ಪಡೆಯಲು ಹೋರಾಟ

ಕಂಬಳಿ ನೇಯುವ ನೇಕಾರ ಕುಟುಂಬಗಳಿಗೆ ಸ್ವಲ್ಪಮಟ್ಟಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರ ಕಲ್ಯಾಣ ಯೊಜನೆಯಡಿಯಲ್ಲಿ ಸಹಾಯ ದೊರೆಯುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಹಿಳೆಯರಿಗೆ ಹೆರಿಗೆ ಭತ್ಯೆ, ರಾಜೀವ್‌ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣ, ಹೀಗೆ ಹಲವಾರು ಯೋಜನೆಗಳಿವೆ. ಆದರೆ ವಿತರಣೆ  ಸರಿಯಾಗಿ ಆಗುತ್ತಿಲ್ಲ.  ಸೌಲಭ್ಯಕ್ಕೆ ನೇಕಾರರು ಹರಸಾಹಸ ಮಾಡಬೇಕಾಗಿದೆ.ಈ ಉದ್ಯಮವನ್ನು ಆಧರಿಸಿ ಚಳ್ಳಕೆರೆಯಲ್ಲಿ ಸರಕಾರ ‘ಉಣ್ಣೆ ಉತ್ಪಾದನಾ ಮಾರಾಟ ಸಹಕಾರ ಮಹಾ ಮಂಡಳಿ ಸ್ಥಾಪಿಸಿದೆ. ಈ ಮಂಡಳಿ ನೇಕಾರರಿಗೆ ಉಣ್ಣೆಯನ್ನು ಮಾರಾಟ ಮಾಡುತ್ತದೆ, ಅಂತೆಯೇ ಕಂಬಳಿಯನ್ನು ಕೊಳ್ಳುವ ಮತ್ತು ಮಾರುವ ಕೆಲಸಕ್ಕೆ ಸಹಕಾರವನ್ನೂ, ಕಂಬಳಿಗೆ ಪೂರಕವಾದ ಸಾಲ ಸೌಲಭ್ಯಗಳನ್ನೂ ಒದಗಿಸುತ್ತದೆ. ಆದರೆ ಅದು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ನೇಕಾರರಿಗೆ  ಸ್ಪಂದಿಸಿದಂತೆ ಕಾಣುವುದಿಲ್ಲ. ಕಂಬಳಿ ನೇಯ್ಗೆಯ ಉದ್ಯಮದಲ್ಲಿ ಯುವ ಜನತೆಯನ್ನು ಆಕರ್ಷಿಸುವಂತಹ ಗುಣ ಕಡಿಮೆ. ಅದರಲ್ಲೂ ವಿದ್ಯಾವಂತ ಯುವ ಜನತೆ ಈ ಕಂಬಳಿ ನೇಯ್ಗೆ ಉದ್ಯಮದ ಕಡೆ ಬರುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ.ನಗರಗಳತ್ತ ವಲಸೆ ಹೋಗುವ ಯುವಕರನ್ನು ಕಂಬಳಿ ಉದ್ಯಮದಲ್ಲಿ ತೊಡಗಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ಈ ಕಂಬಳಿ ಉದ್ಯಮವನ್ನು ಮತ್ತಷ್ಟು ಬೆಳೆಸುವ ಸಾಧ್ಯತೆಗಳಿವೆ.

- ಅರುಣ್ ಜೋಳದಕೂಡ್ಲಿಗಿ

ಪ್ರತಿಕ್ರಿಯಿಸಿ (+)