ಬೆಂಗಳೂರು- ಶಿವಮೊಗ್ಗ ಪ್ಯಾಸೆಂಜರ್ ರೈಲು ಗಾಡಿಯ ಉದ್ದವನ್ನೂ ಮೀರಿಸುವಂತೆ ದೂರ ದೂರ ಕುಳಿತ ಸಾಲು ಸಾಲು ಜನ. ರೈಲು ತುಮಕೂರು ನಗರಕ್ಕೆ ಕಾಲಿಟ್ಟ ಕೂಡಲೇ ಭೀಮಸಂದ್ರದಿಂದ ಕಾಣುವ ಈ ಗುಪ್ಪೆ, ಗುಪ್ಪೆ ಜನಗಳ ಸಾಲು ಕ್ಯಾತ್ಸಂದ್ರ ದಾಟುವವರೆಗೂ ಮುಂದುವರಿಯತ್ತದೆ. ರೈಲಿಗಿಂತ ಈ ಗುಪ್ಪೆ ಜನರ ಸಾಲೇ ಉದ್ದವೇನೋ ಎಂಬಂತೆ ಕಾಣುತ್ತದೆ. ಗಿಡಗಂಟಿಗಳ ಮರೆಯಲ್ಲಿ ಕೂತ ಒಬ್ಬೊಬ್ಬರೂ, ಮಾರು ದೂರದಲ್ಲಿ ಕೂತವರಿಗೆ ತಾವು ಕಾಣುತ್ತಿಲ್ಲ ಎಂದೇ ಸಮಾಧಾನ ಪಟ್ಟುಕೊಳ್ಳುತ್ತಾರೆ. ಆದರೆ ಇವರೆಲ್ಲರನ್ನೂ ದಾಟುತ್ತಾ ಚುಕುಬುಕು ಸಾಗುವ ರೈಲಿಗೆ ಮಾತ್ರ ಇವರೆಲ್ಲರ ದರ್ಶನವೂ ಆಗುತ್ತಿರುತ್ತದೆ. ಕುಕ್ಕರ ಗಾಲಿನಲ್ಲಿ ಕೂತ ಈ ಜನ ಸಮೂಹವನ್ನು ಕಂಡು ರೈಲು ಬೋಗಿಗಳೇ ಕಣ್ಣು ಮುಚ್ಚಿಕೊಳ್ಳಬೇಕೇ ಹೊರತು... ಈ ಜನರಲ್ಲ!

-ಇದು ಸ್ವಾಭಿಮಾನ ಕಳೆದುಕೊಂಡ ಜಿಲ್ಲೆಯೊಂದರ ಕಥೆ. ಜಿಲ್ಲೆಯನ್ನು ಸುತ್ತು ಹಾಕಿದಾಗ ಬಯಲುಸೀಮೆಯ `ಕಲ್ಪತರು ನಾಡಿ~ನ ಖ್ಯಾತಿಯ ತುಮಕೂರು ಜಿಲ್ಲೆಯ ಬಯಲೆಲ್ಲವೂ ಮಲ ವಿಸರ್ಜನೆಯ ಭಾಗವಾಗಿರುವಂತೆ ಭಾಸವಾಗುತ್ತದೆ. ಬಯಲು ವಿಸರ್ಜನೆ ನಿಲ್ಲಿಸಬೇಕೆಂಬ ಕೂಗಿಗೆ ಜಿಲ್ಲೆಯಲ್ಲಿ ಕವಡೆಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ.

ಜಿಲ್ಲೆಯ ಕುಗ್ರಾಮಗಳ ಕಥೆ ಪಕ್ಕಕ್ಕಿಟ್ಟು ನೋಡೋಣ. ನಗರದ ಜಿಲ್ಲಾಧಿಕಾರಿ ಕಚೇರಿಗೆ ಕೂಗಳತೆ ದೂರದಲ್ಲಿರುವ ಎನ್.ಆರ್.ಕಾಲೊನಿಯಲ್ಲೇ ಬಹುತೇಕರ ಮನೆಗಳಲ್ಲಿ ಶೌಚಾಲಯವಿಲ್ಲ. ಕಾಲೊನಿಯಲ್ಲಿರುವ ನೂರಾರು ಗಂಡಸರೆಲ್ಲ ಬೆಳಗಾಯಿತೆಂದರೆ ಪೂರಾ ಬಯಲ ಮೇಲೆ ಕೂತಿರುತ್ತಾರೆ.

ಬರಕ್ಕೆ ತುತ್ತಾಗಿರುವ ಜಿಲ್ಲೆಯ ಹೆಂಗಸರ ಶೌಚ ಕಾರ್ಯದ ಪಾಡಂತೂ ಅನೇಕ ಸಾಹಸ ಕಥೆಗಳಂತೆಯೇ ಇದೆ. ಗಂಡಸರ ಕಣ್ತಪ್ಪಿಸಿ ನೈಸರ್ಗಿಕ ಕರೆ ಮುಗಿಸುವುದೆಂದರೆ ಹೆಂಗಸರ ಪಾಲಿಗೆ ಆ ದಿನದ ಯುದ್ಧ ಗೆದ್ದಂತೆ ಎಂಬಂತಾಗಿದೆ. ಗಂಡಸರು ಬಹಿರ್ದೆಸೆಯ ನಂತರ ನೀರಿಗಾಗಿ ತೋಟ, ಹಳ್ಳ ತಿರುಗುವುದು ಹಳ್ಳಿಗಳಲ್ಲಿ ಸಾಮಾನ್ಯ. ತಾಲ್ಲೂಕು ಕೇಂದ್ರದ ಕನಸು ಹೊತ್ತಿರುವ, ರಾಜಧಾನಿಯಿಂದ ಕೇವಲ 80 ಕಿಲೊ ಮೀಟರ್ ದೂರದಲ್ಲಿರುವ ಹೆಬ್ಬೂರಿನ ಬಸ್ ನಿಲ್ದಾಣದಲ್ಲಿ ನಿಂತವರೇ ಧೀರರು ಎಂಬಷ್ಟರ ಮಟ್ಟಿಗೆ ದುರ್ನಾತ ಬಡಿಯುತ್ತದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೆರೆಯ ಅಂಗಳವೆಲ್ಲವೂ ಮಲದ ತಿಪ್ಪೆಯಾಗಿದೆ. ಬೆಳಕು ಕಣ್ಣು ಬಿಡುವ ಮುನ್ನವೇ ಹೆಂಗಸರು ತಡಕಾಡಿಕೊಂಡು ಊರಿನ ಸಂದಿಗೊಂದಿಗಳನ್ನು ಹುಡುಕಿಕೊಂಡರೆ ಗೆದ್ದರು, ಇಲ್ಲದಿದ್ದರೆ ಮತ್ತೆ ಕತ್ತಲು ಆವರಿಸುವವರೆಗೂ ನೈಸರ್ಗಿಕ ಕರೆ ತಡೆದಿಟ್ಟುಕೊಳ್ಳಬೇಕು. ಕತ್ತಲು ಆವರಿಸಿದಂತೆ ಜೊತೆಗೊಬ್ಬರನ್ನು ಕರೆದುಕೊಂಡು ಬಹಿರ್ದೆಸೆಯ ಜಾಗ ಹುಡುಕಿಕೊಳ್ಳಬೇಕು. ಒಬ್ಬೊಬ್ಬರೇ ಮಹಿಳೆಯರು ಬರ್ಹಿದೆಸೆಗೆ ಹೋದಾಗ ಅತ್ಯಾಚಾರ ನಡೆದ ಘಟನೆಗಳೂ ವರದಿಯಾಗಿವೆ.

ಜಿಲ್ಲೆಯನ್ನು ಬಯಲು ಶೌಚ ಮುಕ್ತವಾಗಿ ಮಾರ್ಪಡಿಸುವ ಕೆಲಸಗಳು ಪರಿಣಾಮಕಾರಿಯಾಗಿಲ್ಲ. ಸಂಪೂರ್ಣ ಸ್ವಚ್ಛತಾ ಯೋಜನೆಯಡಿ ಈಗಾಗಲೇ ಎರಡೂವರೆ ಕೋಟಿ ರೂಪಾಯಿ ಖರ್ಚಾಗಿದೆ. ಸರ್ಕಾರಿ ಲೆಕ್ಕದ ಪುಸ್ತಕದಲ್ಲಿ ಹಣ ಖಾಲಿಯಾಗಿದೆ ಹೊರತು ಶೌಚಾಲಯಗಳ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ. ಹಳೆಯ ಅಥವಾ ಬೇರೆಯವರ ಶೌಚಾಲಯಗಳನ್ನೇ ತೋರಿಸಿ ಹಣ ಲಪಟಾಯಿಸುತ್ತಿರುವ ಕಾರಣ ವೈಯಕ್ತಿಕ ಶೌಚಾಲಯಗಳ ಸಂಖ್ಯೆ ಹೆಚ್ಚುತ್ತಿಲ್ಲ.

ಶೌಚಾಲಯ ಬಳಕೆಯ ಜಾಗೃತಿಯೂ ಜಿಲ್ಲೆಯಲ್ಲಿ ಇಲ್ಲವಾಗಿದೆ. ಜಾಗತೀಕರಣದ ಎಲ್ಲ `ಮಾಯೆ~ಗಳೂ ಮನೆ ಅಂಗಳಕ್ಕೆ ಬಂದು ನಿಂತಿವೆ. ಟಿ.ವಿ, ಮೊಬೈಲ್ಗಳನ್ನು ಜಮೀನ್ದಾರನಿಂದ ಹಿಡಿದು ಕೂಲಿ ಕಾರ್ಮಿಕನವರೆಗೆ ಎಲ್ಲರೂ ಬಳಸುತ್ತಿದ್ದರೂ ಶೌಚಾಲಯದ ಬಳಕೆ ಮಾತ್ರ ಇಲ್ಲವಾಗಿದೆ.

ಕೆಂಪು ಪಟ್ಟಿಯಲ್ಲಿ

ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಭಾರತದ ನಗರ ಶೌಚಾಲಯ ಯೋಜನೆಯನ್ನು ರೂಪಿಸಿದೆ. ದೇಶದ 438 ನಗರಗಳಿಗೆ ಸ್ವಚ್ಛ ನೀರು, ಶೌಚಾಲಯ ಬಳಕೆ ಸ್ಥಿತಿಗತಿಯ ರ್ಯಾಂಕಿಂಗ್ ನೀಡಿದ್ದು, ಅದರಲ್ಲಿ ತುಮಕೂರು ನಗರ ಕೆಂಪು ಪಟ್ಟಿಯಲ್ಲಿದೆ. ಇಲ್ಲಿ ಬಯಲು ಶೌಚಾಲಯ ನಿರ್ಮೂಲನೆ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಅದು ಎಚ್ಚರಿಸಿದೆ.

`ಬಯಲು ಮಲ ವಿರ್ಸಜನೆಯಿಂದ ರೋಗ ರುಜಿನ ಬರುತ್ತದೆ, ಅಂತರ್ಜಲ ಕಲುಷಿತಗೊಳ್ಳುತ್ತದೆ ಎಂಬ ತಿಳಿವಳಿಕೆ ಮೂಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವುದೇ ಜಿಲ್ಲೆಯ ಈ ದುಃಸ್ಥಿತಿಗೆ ಕಾರಣ~ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ.

ಜಿಲ್ಲೆಯ ಶೇ 56ರಷ್ಟು ಗರ್ಭಿಣಿಯರು ಬಯಲು ಮಲ ವಿರ್ಸಜನೆಯಿಂದ ಕೊಕ್ಕೆ ಹುಳು ಅಂಟಿಸಿಕೊಂಡು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಶೇ 48ರಷ್ಟು ಮಕ್ಕಳು, ಮಹಿಳೆಯರು ರಕ್ತಹೀನತೆಗೆ ತುತ್ತಾಗಿರುವುದು ಈ ಸಮಸ್ಯೆಯ ಕರಾಳ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಜಿಲ್ಲೆಯಲ್ಲಿ ನೀರಿನ ಕೊರತೆ ಕೂಡ ಶೌಚಾಲಯ ಉಪಯೋಗ ಮಾಡದಂತೆ ಜನರನ್ನು ತಡೆದಿದೆ ಎಂಬ ಸಮೀಕ್ಷೆಯಿಂದ ಹೊರಬಂದ ಅಂಶ ದಿಗಿಲುಬಡಿಸುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.