ಮಂಗಳವಾರ, ಮೇ 18, 2021
22 °C

ಬರಗದ ಬೆರಗು!

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ರಸ್ತೆ ಪಕ್ಕದ ಹೊಲದಲ್ಲಿ ತೆನೆ ಹೊತ್ತು ನಿಂತಿರುವ ಬರಗ ನೋಡಿ, ಅತ್ತ ಬಂದ ದೊಡ್ಡಮ್ಮ ಮೇಟಿ ಎಂಬ ಮಹಿಳೆ ಅದರ ತೆನೆ ಹಿಡಿದುಕೊಂಡು ಉದ್ಗರಿಸಿದರು: `ಕಳ್ಕೊಂಡ್ ಬಿಟ್ಟಿದ್ವಿರಿ ಈ ಬರಗಾನ... ಮತ್ ಇಲ್ನೋಡಿ ಖುಷಿ ಆತ್ರಿ... ಒಂದಷ್ಟು ಬರಗದ್ ಬೀಜಾ ಕೊಡ್ರಿ~ಆಕೆ ನಿಂತಿದ್ದು ಬರಗ ಬೆಳೆದಿದ್ದ ಹೊಲದಲ್ಲಿ. ಹೊಸ ತಲೆಮಾರಿನ ರೈತರು ಬಹುಶಃ ಇದರ ಹೆಸರು ಕೇಳಿರಲಿಕ್ಕಿಲ್ಲ. ಕೆಲ ದಶಕಗಳ ಹಿಂದೆ ಊಟದ ಅವಿಭಾಜ್ಯ ಅಂಗವಾಗಿದ್ದ ಸಿರಿ ಧಾನ್ಯ(ಮಿಲೆಟ್ಸ್)ಗಳ ಪೈಕಿ ಬರಗ ಕೂಡ ಒಂದು.ಅತ್ಯಂತ ಕಡಿಮೆ ಮಳೆ ಬೀಳುವ ಅಷ್ಟೇನೂ ಫಲವತ್ತಲ್ಲದ ನೆಲದಲ್ಲೂ ಬೆಳೆಯುವ ಸಿರಿಧಾನ್ಯಗಳದ್ದು ಬೆರಗಿನ ಲೋಕ. ಸಿಕ್ಕಷ್ಟು ಮಳೆ ನೀರನ್ನೇ ಬಳಸಿಕೊಂಡು ಇವು ಬೆಳೆಯುತ್ತವೆ. ಸಾವಿರಾರು ವರ್ಷಗಳಿಂದ ವಾತಾವರಣಕ್ಕೆ ಹೊಂದಿಕೊಂಡು ಬೆಳೆದ ಸಿರಿಧಾನ್ಯಗಳಿಗೆ ಕೀಟ-ರೋಗ ನಿರೋಧಕ ಶಕ್ತಿಯಿದೆ. ಹೀಗಾಗಿ ಇವುಗಳ ಬೇಸಾಯಕ್ಕೆ ಹೆಚ್ಚಿನ ಹಣ ಬೇಕಿಲ್ಲ. ಆದರೆ ಹಸಿರು ಕ್ರಾಂತಿಯ ಪರಿಣಾಮವಾಗಿ ಕೃಷಿ ಕ್ಷೇತ್ರದಲ್ಲಿ ಅಧಿಕ ಇಳುವರಿಯ ವಾಣಿಜ್ಯ ಬೆಳೆಗಳು ಪ್ರವೇಶಿಸಿದ ನಂತರ  `ಕಿರುಧಾನ್ಯ~ ಎಂಬ ಮೂದಲಿಕೆಗೆ ಒಳಗಾದವು. ಕೃಷಿ ವಿಜ್ಞಾನಿಗಳು ಕಂಪೆನಿಗಳ ಹೈಬ್ರಿಡ್ ತಳಿಗಳಿಗೆ ಕೊಟ್ಟ ಆದ್ಯತೆಯನ್ನು ನಮ್ಮ ನೆಲದ ಈ ಧಾನ್ಯಗಳಿಗೆ ಕೊಡಲಿಲ್ಲವಾದ್ದರಿಂದ ಸಿರಿ ಧಾನ್ಯಗಳಿಗೆ ದುರ್ಗತಿ ಬಂತು.ಕೆಲವೇ ರೈತರು ಈ ಧಾನ್ಯಗಳನ್ನು ಪ್ರೀತಿಯಿಂದ  ಸಂರಕ್ಷಿಸಿಕೊಂಡು ಬರುತ್ತಿದ್ದಾರೆ.

ಕುಷ್ಟಗಿ ಸಮೀಪದ ನೆರೆಬೆಂಚಿ ಗ್ರಾಮದ ದುರಗಪ್ಪ ಬರಗ ಬೇಸಾಯದಲ್ಲಿ ಪರಿಣಿತರು. ತೊಗರಿ, ನವಣೆ ಜತೆಗೆ ಮನೆ ಬಳಕೆಗಾಗಿ ಬರಗ ಬೆಳೆಯುತ್ತಿದ್ದಾರೆ. ರೋಹಿಣಿ, ಮೃಗಶಿರಾ ಮಳೆ ನಕ್ಷತ್ರದ ಅವಧಿಯಲ್ಲಿ (ಮೇ ಹಾಗೂ ಜೂನ್) ಬರಗ ಬಿತ್ತನೆ ಮಾಡುತ್ತಾರೆ. ಬಿತ್ತನೆ ನಂತರ ನಾಲ್ಕಾರು ಸಣ್ಣ ಪ್ರಮಾಣದ ಮಳೆಯಾದರೂ ಸಾಕು.ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ 8-10 ಚೀಲ ಇಳುವರಿ ಪಡೆಯುತ್ತಾರೆ.`ಮುಂಜಾನಿ ಊಟಕ್ಕ ನಮ್ಗ ಬರಗ ಬೇಕು. ರೇಷನ್ ಅಕ್ಕಿ ಊಟ ಮಾಡಿದ್ರ ಎರಡ ತಾಸಿಗೆ ಹಸಿವಿ ಆದ್ರ, ಬರಗದ ಅನ್ನ ಉಂಡ್ರ ಐದಾರು ತಾಸು ಕೆಲ್ಸ ಮಾಡ್ತೀವ್ರಿ” ಎಂದು ಹೇಳುವ ದುರಗಪ್ಪ, ಬರಗದ ಅನ್ನಕ್ಕೆ ಮೊಸರು ಹಾಗೂ ಕಾರದ ಪುಡಿ ಇದ್ದರೆ ಬೇರೇನೂ ಬೇಡ. ಅದರ ರುಚಿಯೇ ವಿಶಿಷ್ಟ ಎಂದು ಬಣ್ಣಿಸುತ್ತಾರೆ. ಬರಗದ ಬೀಜಕ್ಕೆ ಹುಡುಕಾಟ ನಡೆಸಿದ್ದ ಅರಳಿಹಳ್ಳಿ ಗ್ರಾಮದ ರಾಮರಾವ್ ಕುಲಕರ್ಣಿ ಅವರಿಗೆ ದುರಗಪ್ಪ ಒಂದು ಕಿಲೊ ಬಿತ್ತನೆ ಬೀಜ ಕೊಟ್ಟರು. ಏನೂ ಬೆಳೆಯದಂತಿದ್ದ ಅವರ ಸವಳು ಹೊಲದಲ್ಲಿ ಬಿತ್ತನೆಗೆ ಮುಂದಾದಾಗ, ರಾಮರಾವ್ ಅವರ ಹುಮ್ಮಸ್ಸು ನೋಡಿ ಅನೇಕರು  `ಬುದ್ಧಿವಾದ~ ಹೇಳಿದರು. ಆದರೆ ದೃಢ ಮನಸ್ಸಿನಿಂದ ಅವರು ಮುಕ್ಕಾಲು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದರು.“ಆರಂಭದಲ್ಲಿ ಸ್ವಲ್ಪ ಮಳೆ ಬಂತು. ನಂತರ ತೀರಾ ಕಡಿಮೆ ಸುರಿಯಿತು. ಆದರೆ ಅಚ್ಚರಿಯಾಗುವಂತೆ ಬರಗದ ಪೈರು ಅತ್ಯುತ್ತಮವಾಗಿ ಬೆಳೆದು ನಿಂತಿದೆ. ಕಾಳುಗಳಂತೂ ನೋಡಲು ಚೆಂದ!” ಎಂದು ರಾಮರಾವ್ ಬಣ್ಣಿಸುತ್ತಾರೆ. ಅವರು ಮೇಲುಗೊಬ್ಬರ ಹಾಕಿಲ್ಲ; ಒಂದಿಷ್ಟೂ ಕೀಟ ಬಾಧೆ, ರೋಗ ಬಂದಿಲ್ಲ. ಹೊಸ ತಲೆಮಾರಿನ ರೈತರು ಬರಗದ ಬಗ್ಗೆ ಕುತೂಹಲ ತಾಳಿದ್ದರೆ, ಹಳೆಯ ರೈತರಿಗೆ ಬರಗದ ನೆನಪು ಕಣ್ಮುಂದೆ ಬರುತ್ತಿವೆ. “ಭಾಳ ದಿನಗಳ ಹಿಂದ ಹಾಕ್ತಿದ್ವಿ. ಮನೀಗೆ ಎಷ್ಟ್ ಬೇಕೋ ಅಷ್ಟು ಬೆಳ್ಕೋತಿದ್ವಿ. ಆಮೇಲೆ ಮರ್ತೇ ಹೋಗಿತ್ತು. ನಿಮ್ ಹೊಲ್ದಾಗ ಬರಗ ನೋಡಿ, ಮತ್ ಬೆಳೆಯೋ ಹಂಗಾಗ್ಯಾದ” ಎಂದು ರಾಮಣ್ಣ ಜಗ್ಗಲ ಎಂಬ ರೈತ ಆಸೆ ವ್ಯಕ್ತಪಡಿಸಿದರು.ಸುಮಾರು 7ರಿಂದ 8 ಚೀಲ ಇಳುವರಿ ನೀಡಲಿರುವ ಬರಗದ ಕಟಾವು ಇನ್ನೊಂದು ವಾರದಲ್ಲಿ ನಡೆಯಲಿದೆ. ನಂತರ ಇದರ ಬೀಜಗಳನ್ನು ಆಸಕ್ತ ರೈತರಿಗೆ ವಿತರಿಸುವ ಉದ್ದೇಶ ರಾಮರಾವ್ ಅವರದು.  ಆಸಕ್ತ ರೈತರಿಗೆ ಉಚಿತ ಬೀಜ ವಿತರಿಸುವುದಾಗಿ ಅವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್: 9342417875.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.