ಮಂಗಳವಾರ, ಮೇ 11, 2021
27 °C

ಬರದಲ್ಲೂ ಭರಪೂರ ರಾಜಕೀಯ: ಆಕ್ರೋಶ

ಪ್ರಜಾವಾಣಿ ವಾರ್ತೆ/ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ಬರದ ಛಾಯೆಯಲ್ಲಿ ನರಳುತ್ತಿರುವ ಜಿಲ್ಲೆಯನ್ನು ರಾಜ್ಯ ನಾಯಕರು ಒಂದೊಂದು ಸುತ್ತು ಹಾಕಿದ್ದು ಆಗಿದೆ. ಒಣಗಿರುವ ಕೆರೆ, ಹಾಳಾಗಿರುವ ಬೆಳೆ, ಕುಡಿಯುವ ನೀರಿನ ಸಮಸ್ಯೆ ಇದೆಲ್ಲವನ್ನೂ ನೋಡಿ ಹೋಗಿದ್ದಾರೆ. ನಾಯಕರ ಪ್ರವಾಸ ಮುಗಿದು ಒಂದು ವಾರ ಕಳೆದಿದ್ದರೂ, ಆಗಿರುವ ಪ್ರಯೋಜನವಾದರೂ ಏನು ಎಂಬ ಪ್ರಶ್ನೆಯನ್ನು ರೈತರು ಕೇಳುತ್ತಿದ್ದಾರೆ.ಬರದ ನಾಡಿನಲ್ಲಿ ಭರಾಟೆಯ ಪ್ರವಾಸ ಆರಂಭಿಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಜಿಲ್ಲೆಯ, ಅದರಲ್ಲೂ ಯಾದಗಿರಿ ತಾಲ್ಲೂಕಿನ ಬದ್ದೇಪಲ್ಲಿ, ಮಾದ್ವಾರ, ಕಾಳೆಬೆಳಗುಂದಿ, ಕಡೇಚೂರು ಗ್ರಾಮಗಳಿಗೆ ಭೇಟಿ ನೀಡಿದ ಯಡಿಯೂರಪ್ಪ, ಕೆರೆ, ಬೆಳೆಗಳನ್ನು ವೀಕ್ಷಿಸಿದರು. ರೈತರೊಂದಿಗೆ ಚರ್ಚೆಯನ್ನೂ ನಡೆಸಿದರು. ತರಾತುರಿಯಲ್ಲಿ ಪ್ರವಾಸ ಮೊಟಕುಗೊಳಿಸಿ, ಬೆಂಗಳೂರಿಗೂ ವಾಪಸ್ಸಾದರು.ನಂತರದ ಸರದಿ ಸಚಿವರ ತಂಡದ್ದು. ನಾಲ್ವರು ಸಚಿವರನ್ನು ಒಳಗೊಂಡ ತಂಡ ಯಾದಗಿರಿ ಜಿಲ್ಲೆಗೆ ಭೇಟಿ ನೀಡಬೇಕಿತ್ತು. ಆದರೆ ತಂಡದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹಾಗೂ ಪಶು ಸಂಗೋಪನಾ ಸಚಿವ ರೇವು ನಾಯಕ ಬೆಳಮಗಿ ಮಾತ್ರ ಜಿಲ್ಲೆಗೆ ಭೇಟಿ ನೀಡಿದರು.ಜಿಲ್ಲೆಯ ಉದ್ಘಾಟನೆಯ ನಂತರ ಯಾದಗಿರಿಗೆ ಜಿಲ್ಲೆಗೆ ಬರದೇ ಇರುವ ಸಚಿವ ಬಸವರಾಜ ಬೊಮ್ಮಾಯಿ, ಬರದಲ್ಲಿಯೂ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು. ಕೊಯ್ನಾ ನೀರಿನ ನೆಪ ಮಾಡಿ, ಯಾದಗಿರಿಗೆ ಬರದೇ ಮುಂಬೈಗೆ ತೆರಳಿದರು. ಇನ್ನೊಬ್ಬ ಸಚಿವ ಎ.ಎಸ್. ರಾಮದಾಸ, ಅದೇಕೋ ಬರದ ಸುದ್ದಿಯೇ ಬೇಡ ಎಂದು ಜಿಲ್ಲೆಯ ಪ್ರವಾಸದಿಂದ ದೂರವೇ ಉಳಿದರು.ಪ್ರತಿ ಬಾರಿ ಜಿಲ್ಲಾ ಪ್ರಗತಿ ಪರಿಶೀಲನೆ ನಡೆಸುವಂತೆ ಸಚಿವ ನರಸಿಂಹ ನಾಯಕ (ರಾಜುಗೌಡ) ಮಾತ್ರ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಆದರೆ ಪಕ್ಕದಲ್ಲಿಯೇ ಕುಳಿತಿದ್ದ ಸಚಿವ ರೇವು ನಾಯಕ ಬೆಳಮಗಿ ಮಾತ್ರ ಮೌನಕ್ಕೆ ಶರಣಾದರು ಎಂಬ ಆರೋಪ ಕಾಂಗ್ರೆಸ್ ನಾಯಕರಿಂದ ಕೇಳಿ ಬರುತ್ತಿದೆ.ಇದಾದ ನಂತರ ಜಿಲ್ಲೆಯಲ್ಲಿ ಅಧ್ಯಯನ ನಡೆಸಿದವರು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಮೋಟಮ್ಮ ನೇತೃತ್ವದ ಕಾಂಗ್ರೆಸ್ ತಂಡ. ಎಸ್.ಆರ್. ಪಾಟೀಲ, ನೆ.ಲ. ನರೇಂದ್ರಬಾಬು ಅವರನ್ನು ಒಳಗೊಂಡ ತಂಡ ರಾಜ್ಯದ ಹೆದ್ದಾರಿಯಲ್ಲಿ ಸಿಗುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿತೇ ಹೊರತು, ತೀರ ಒಳಗಿರುವ ಗ್ರಾಮಸ್ಥರ ಬವಣೆಯನ್ನು ಅರಿಯುವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ತಾವು ಭೇಟಿ ನೀಡಿರುವ ಹಳ್ಳಿಗಳ ಸಮಸ್ಯೆಯನ್ನು ಒಂದು ವಾರದಲ್ಲಿ ಪರಿಹರಿಸದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಗುಡುಗಿದ ಮೋಟಮ್ಮ, ಇಲ್ಲಿನ ಜನರಿಗೆ ಕುಡಿಯುವ ನೀರು ಸಿಕ್ಕಿದೆಯೇ ಎಂಬುದನ್ನೂ ವಿಚಾರಿಸಿದ್ದಾರಾ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಸತ್ಯಂಪೇಟ್ ಪ್ರಶ್ನಿಸುತ್ತಾರೆ.ಭತ್ಯೆ ಮಾತ್ರ ಖರ್ಚು: ಮಾಜಿ ಮುಖ್ಯಮಂತ್ರಿ, ಸಚಿವರು, ಪ್ರತಿಪಕ್ಷದ ನಾಯಕರು ಬರದ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಿದ್ದರಿಂದ ಅವರಿಗೆ ನೀಡಲಾಗುವ ಭತ್ಯೆ ಮಾತ್ರ ಖರ್ಚಾಗಿದೆ. ಜಿಲ್ಲೆಯ ಜನರಿಗೆ ಒಂದು ಪೈಸೆಯಷ್ಟೂ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಮಲ್ಲಿಕಾರ್ಜುನ ಸತ್ಯಂಪೇಟ್.ರಾಮ ರಾಜ್ಯ ಆಳಿದರೂ, ರಾಗಿ ಬೀಸುವುದು ತಪ್ಪಲಿಲ್ಲ ಎನ್ನುವಂತೆ, ಸಚಿವರು, ಮಾಜಿ ಮುಖ್ಯಮಂತ್ರಿಗಳು, ಮೋಟಮ್ಮನವರ ಪ್ರವಾಸದಿಂದ ಜಿಲ್ಲೆಯ ರೈತರಿಗಾಗಲಿ, ಜನರಿಗಾಗಲಿ ಯಾವುದೇ ಪ್ರಯೋಜನ ಆಗಿಲ್ಲ. ಬೋರವೆಲ್‌ಗಳ ದುರಸ್ತಿ, ಹೊಸ ಬೋರವೆಲ್ ಕೊರೆಸುವುದೂ ಸೇರಿದಂತೆ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಕೇವಲ ಹೇಳಿಕೆ ನೀಡುವುದು, ದಾಖಲೆಗಳಲ್ಲಿಯೇ ಕಾಮಗಾರಿ ಮಾಡಿ ಮುಗಿಸುವ ಅಧಿಕಾರಿಗಳು, ಜನಪ್ರತಿನಿಧಿಗಳಿಂದಾಗಿ ಜಿಲ್ಲೆಯ ಜನರಿಗೆ ತಾಪತ್ರಯಗಳು ಮಾತ್ರ ತಪ್ಪುತ್ತಿಲ್ಲ ಎನ್ನುವ ಆಕ್ರೋಶ ಅವರದ್ದು.ಸರ್ಕಾರಿ ಕಚೇರಿಗಳನ್ನು ಮೊದಲಿನ ವೇಳಾಪಟ್ಟಿಯಂತೆ ನಡೆಸಲು ಸರ್ಕಾರ ಆದೇಶ ಹೊರಡಿಸಿರುವುದು ಮಾತ್ರ ಇದುವರೆಗೆ ಸರ್ಕಾರ ಜಿಲ್ಲೆಯ ಜನರಿಗೆ ನೀಡಿರುವ ಬಹುದೊಡ್ಡ ಕಾಣಿಕೆ. ಅದೂ ಮಾಧ್ಯಮಗಳು ವರದಿ ಮಾಡಿದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ ಎಂದು ಹೇಳುತ್ತಾರೆ.ಯಡಿಯೂರಪ್ಪನವರಿಗಾಗಿ ಡೊಂಬರಾಟ: ಸರ್ಕಾರ, ಸಚಿವರ ಇಷ್ಟೆಲ್ಲ ಡೊಂಬರಾಟಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗಾಗಿಯೇ ಹೊರತು, ಜಿಲ್ಲೆಯ ಜನರ ಹಿತಕ್ಕಾಗಿ ಅಲ್ಲ ಎನ್ನುವುದು ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಚೆನ್ನಾರೆಡ್ಡಿ ತುನ್ನೂರ ಆರೋಪ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ರಾಜುಗೌಡ, ರೇವು ನಾಯಕ ಬೆಳಮಗಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. ಇದರಿಂದಾಗಿ ಏನು ಪ್ರಯೋಜನ ಆಗಿದೆ? ಜಿಲ್ಲೆಯಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಿಲ್ಲ. ಗೋಶಾಲೆ ತೆರೆದಿಲ್ಲ. ಉದ್ಯೋಗ ನೀಡುವ ಕಾರ್ಯಕ್ರಮ ಆರಂಭಿಸಿಲ್ಲ. ಕೇಂದ್ರ ಸರ್ಕಾರ ನೀಡಿರುವ ಹಣವನ್ನೇ ಸರಿಯಾಗಿ ಬಳಕೆ ಮಾಡಿಕೊಂಡಿದ್ದರೂ, ಜಿಲ್ಲೆಯ ಜನರಿಗೆ ಒಂದಿಷ್ಟಾದರೂ ನೆಮ್ಮದಿ ನೀಡಬಹುದಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಇದು ಬೇಕಾಗಿಲ್ಲ.

 

ಯಡಿಯೂರಪ್ಪನವರ ಪ್ರವಾಸ ಆರಂಭವಾಗಿದ್ದಕ್ಕೆ, ಮುಖ್ಯಮಂತ್ರಿ ಸದಾನಂದಗೌಡರು, ಸಚಿವರ ತಂಡ ರಚಿಸಿದರು. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಈ ಪ್ರವಾಸದಿಂದ ಅನಗತ್ಯ ಖರ್ಚು-ವೆಚ್ಚಗಳೇ ಹೆಚ್ಚಾದವು. ಇದೇ ಹಣವನ್ನು ವಿನಿಯೋಗಿಸಿದ್ದರೆ, ಒಂದೆರಡು ಹಳ್ಳಿಗಳಲ್ಲಿ ನೀರನ್ನಾದರೂ ಪೂರೈಕೆ ಮಾಡಬಹುದಿತ್ತು ಎಂದು ಅಭಿಪ್ರಾಯಪಡುತ್ತಾರೆ.  ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದಕ್ಕಾಗಿಯೇ ಪ್ರತಿಪಕ್ಷದ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕಾಯಿತು. ಸಚಿವರು, ಮಾಜಿ ಮುಖ್ಯಮಂತ್ರಿಗಳು ಪ್ರವಾಸ ಮಾಡಿ ವಾರದ ನಂತರ ಮೋಟಮ್ಮ ಜಿಲ್ಲೆಗೆ ಭೇಟಿ ನೀಡಿದ್ದರು. ಆದರೂ ಪರಿಸ್ಥಿತಿ ಸುಧಾರಣೆ ಆಗಿರಲಿಲ್ಲ. ಇದರರ್ಥ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಂತಾಗಿದೆ ಎಂದು ಚೆನ್ನಾರೆಡ್ಡಿ ಹೇಳುತ್ತಾರೆ.

`ಮೊದಲೇ ಇಷ್ಟು ಮಾಡಿದ್ದರೆ...?~

ಯಾದಗಿರಿ: ಯಾದಗಿರಿ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕ್ಷೇತ್ರದ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರು ಕ್ಷೇತ್ರವನ್ನು ಸುತ್ತಾಡಲು ಮೋಟಮ್ಮನವರೇ ಬರಬೇಕಾಯಿತು. ಶಾಸಕರು ಮೊದಲೇ ಇಷ್ಟು ಮಾಡಿದ್ದರೆ, ಕ್ಷೇತ್ರದ ಜನರ ಬವಣೆಯನ್ನಾದರೂ ಸ್ವಲ್ಪ ಮಟ್ಟಿಗೆ ನೀಗಿಸಬಹುದಿತ್ತು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ, ಬಿಜೆಪಿ ಮುಖಂಡ ದೇವರಾಜ ನಾಯಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಕಂದಳ್ಳಿ ಬ್ಯಾರೇಜ್‌ನಿಂದ ವಡಗೇರಾ, ಕಂದಳ್ಳಿ, ಕೋನಳ್ಳಿ ಗ್ರಾಮಗಳಿಗೆ ಭೀಮಾ ನದಿ ನೀರು ಪೂರೈಸುವ ಸುಮಾರು ರೂ.2.70 ಕೋಟಿ ವೆಚ್ಚದ ಯೋಜನೆ ಆರಂಭವಾಗಿ ಮೂರು ವರ್ಷ ಕಳೆದಿದೆ. ಇನ್ನೂ ಯೋಜನೆ ಆರಂಭವಾಗಿಲ್ಲ. ಹಲವಾರು ಹಳ್ಳಿಗಳಲ್ಲಿ ಬೋರವೆಲ್‌ಗಳು ಕೆಟ್ಟು ಹೋಗಿವೆ. ಜನರು ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಬ್ಯಾರೆಲ್‌ಗಳನ್ನು ಇಟ್ಟುಕೊಂಡು ನೀರು ತರುವಂತಾಗಿದೆ. ಇದೆಲ್ಲವನ್ನೂ ಶಾಸಕರು ಗಮನಿಸುತ್ತಲೇ ಇಲ್ಲ ಎಂದು ಹೇಳಿದ್ದಾರೆ.ಶಾಸಕರ ನೇತೃತ್ವದಲ್ಲಿಯೇ ಟಾಸ್ಕ್‌ಫೋರ್ಸ್ ಸಮಿತಿ ಇದೆ. ಕ್ಷೇತ್ರದ ಹಳ್ಳಿಗಳಲ್ಲಿರುವ ಸಮಸ್ಯೆಗಳನ್ನು ಸಮಿತಿ ಸಭೆಯಲ್ಲಿಯೇ ಪರಿಹರಿಸಬಹುದಿತ್ತು. ಆದರೆ ಅದಾವುದನ್ನೂ ಮಾಡದ ಶಾಸಕರು, ಮೋಟಮ್ಮನವರನ್ನು ಕ್ಷೇತ್ರಕ್ಕೆ ಕರೆಯಿಸಿ, ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಕ್ಷೇತ್ರದ ಜನರಿಗೂ ತಿಳಿದಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.