ಬುಧವಾರ, ಮೇ 12, 2021
19 °C

ಬರದ ಊರಲ್ಲಿ ಬಾವಿಯಲ್ಲೇ ಐವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬರ ಪೀಡಿತ ಗುಲ್ಬರ್ಗ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದ ಬಾವಿಯೊಂದನ್ನು ಸ್ವಚ್ಛಗೊಳಿಸಲು ಇಳಿದ ಐದು ಮಂದಿ ಅಸುನೀಗಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.ಫಿರೋಜಾಬಾದ್ ಗ್ರಾಮ ಪಂಚಾಯ್ತಿ ಮುಂಭಾಗದ ಸುಮಾರು 45 ಅಡಿ ಆಳದ ಬಾವಿ ಸ್ವಚ್ಛಗೊಳಿಸುವ ವೇಳೆಯಲ್ಲಿ ದುರ್ಘಟನೆ ಸಂಭವಿಸಿದೆ. ಗ್ರಾಮದ ಕೂಲಿ ಕಾರ್ಮಿಕರಾದ ಚಿದಾನಂದ ನಾಟಿಕಾರ್ (23), ಬಸವರಾಜ ಕೆರಟನಳ್ಳಿ (23), ಶರಣಯ್ಯ ಮಠಪತಿ (18), ಆಯತುಲ್ಲಾ ಮುಲ್ಲಾ (25) ಮತ್ತು ಪಂಚಾಯ್ತಿ ಸದಸ್ಯ ಹಮೀದ್ ಪಟೇಲ (45) ಮೃತಪಟ್ಟಿದ್ದಾರೆ.ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಫಿರೋಜಾಬಾದ್ ಕುಡಿವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿತ್ತು. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ನೀಡಿದ್ದರೂ ಪ್ರಯೋಜನವಾಗದ್ದರಿಂದ 3 ದಿನಗಳ ಹಿಂದೆ ಪಂಚಾಯ್ತಿ ನೇತೃತ್ವದಲ್ಲಿ ಸ್ಥಳೀಯರು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದ್ದರು. 2 ದಿನ ಹೂಳೆತ್ತುವ ಕಾರ್ಯವು ಸಾಂಗವಾಗಿ ನಡೆದಿತ್ತು. ಮೂರನೇ ದಿನವಾದ ಮಂಗಳವಾರ ನೀರು ಸಂಗ್ರಹವಾಗಿತ್ತು.ಹೀಗಾಗಿ ಬಾವಿಯಿಂದ ನೀರು ಹೊರತೆಗೆಯಲು ಪಂಪ್ ಅನ್ನು ಹಗ್ಗದ ಮೂಲಕ ಇಳಿಸಲಾಯಿತು. ಇನ್ನೊಂದು ಹಗ್ಗದಲ್ಲಿ ಶರಣಯ್ಯ, ಬಸವರಾಜ್ ಮತ್ತು ಆಯತುಲ್ಲಾ ಇಳಿದರು. ಸುಮಾರು ಎದೆ ತನಕದ ನೀರಿನಲ್ಲಿ ನಿಂತುಕೊಂಡು ಪಂಪ್ ಚಾಲನೆ ಮಾಡಿದ್ದಾರೆ. ಪಂಪ್‌ನಿಂದ ಹೊಮ್ಮಿದ ಹೊಗೆ ಹಾಗೂ ಆಮ್ಲಜನಕದ ಕೊರತೆಯಿಂದ ಮೂವರು ಪ್ರಜ್ಞೆ ಕಳೆದುಕೊಂಡು ನೀರಿಗೆ ಬಿದ್ದರು.  ಅವರನ್ನು ರಕ್ಷಿಸಲು ಮೊದಲಿಗೆ ಚಿದಾನಂದ, ರಜಾಕ್ ಹಾಗೂ ಹಮೀದ್ ಹಗ್ಗದ ಮೂಲಕ ಇಳಿದಿದ್ದಾರೆ.  ಅರ್ಧ ಇಳಿಯುತ್ತಿದ್ದಂತೆಯೇ ಉಸಿರಾಡಲಾಗದೇ ಅವರೂ ನೀರಿಗೆ ಬಿದ್ದಿದ್ದಾರೆ. ಈ ಪೈಕಿ ರಜಾಕ್‌ನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.ಹಮೀದ್ ಕಷ್ಟಪಟ್ಟು ನೀರಿನಿಂದ ಮೇಲೆದ್ದು ಬಂದರು. ಅವರನ್ನು ರಕ್ಷಿಸಲು ಶಾಂತಯ್ಯ ಮಠಪತಿ (ನೀರಿಗೆ ಬಿದ್ದಿದ್ದ ಶರಣಯ್ಯನ ತಂದೆ)  ತಕ್ಷಣ ಹಗ್ಗದ ಮೂಲಕ ಕೆಳಗೆ ಇಳಿದರು. `ಹಮೀದ್ ಹಗ್ಗದ ಮೂಲಕ ಕಷ್ಟಪಟ್ಟು ಮೇಲೆ ಬರುತ್ತಿದ್ದ. ನಾನು ಮೇಲಿನಿಂದ ಬಾಗಿ ಕೈಯನ್ನು ನೀಡಿದೆ. ಬೆರಳು ಕೈಗೆ ಸ್ಪರ್ಶಿಸಿತು. ಆದರೆ ಸ್ಮೃತಿ ಕಳೆದುಕೊಂಡ ಆತ `ನೀನು ಮೇಲೆ ಹೋಗು~ ಎಂದು ಹೇಳುತ್ತಿದ್ದಂತೆಯೇ ಆಯ ತಪ್ಪಿ ನೀರಿಗೆ ಬಿದ್ದ. ಉಸಿರುಗಟ್ಟುತ್ತಿದ್ದ ಕಾರಣ ನನ್ನ ಮಗ ಹಾಗೂ ಉಳಿದವರನ್ನು ಅಲ್ಲೇ ಬಿಟ್ಟು ಮೇಲೆ ಬರಬೇಕಾಯಿತು~ ಎಂದು ತೇವ ತುಂಬಿದ ಕಣ್ಣುಗಳ ಶಾಂತಯ್ಯ ಮಠಪತಿ `ಪ್ರಜಾವಾಣಿ~ಗೆ ತಿಳಿಸಿದರು.ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳವು ಆಗಮಿಸಿದ್ದು, ಮೂರು ಮಂದಿಯನ್ನು ಜೀವಂತ ಹೊರತೆಗೆಯಲಾಯಿತು.  ಆದರೆ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟರು. ಇಬ್ಬರು ಬಾವಿಯಲ್ಲೇ ಅಸುನೀಗಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.