ಮಂಗಳವಾರ, ಮಾರ್ಚ್ 2, 2021
31 °C

ಬರದ ಹೆಸರಲ್ಲಿ ಬಿಜೆಪಿ ರಾಜಕೀಯ: ಬಿಕೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರದ ಹೆಸರಲ್ಲಿ ಬಿಜೆಪಿ ರಾಜಕೀಯ: ಬಿಕೆಸಿ

ಬೆಂಗಳೂರು: ಬರಪೀಡಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಸಕಾಲದಲ್ಲಿ ಪರಿಹಾರ ಕಾರ್ಯ­ಕ್ರಮ­ಗಳನ್ನು ಕೈಗೆತ್ತಿಕೊಂಡಿದ್ದರೂ, ಬಿಜೆಪಿ ಮುಖಂಡರು ಬರದ ಹೆಸರಿನಲ್ಲಿ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್‌ ಆರೋಪಿಸಿದ್ದಾರೆ.‘ಬಿಜೆಪಿ ನಾಯಕರು ಇತ್ತೀಚೆಗೆ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ನಿಷ್ಕ್ರಿಯ­ವಾಗಿದೆ ಮತ್ತು ಕುಡಿಯುವ ನೀರು ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ. ಅವರ ಆರೋಪಗಳು ಸತ್ಯಕ್ಕೆ ದೂರ. ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ’ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.ಬರಪೀಡಿತ ಪ್ರದೇಶಗಳ ಕುರಿತು ವರದಿ ಪಡೆದ ಸರ್ಕಾರ, 2013ರ ಅಕ್ಟೋಬರ್‌ 15ರಂದೇ 64 ತಾಲ್ಲೂಕುಗಳಲ್ಲಿ ಬರ ಇದೆ ಎಂದು ಘೋಷಿಸಿತ್ತು. ನಂತರ ಮತ್ತೆರಡು ಬಾರಿ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 127 ತಾಲ್ಲೂಕು­ಗಳಲ್ಲಿ ಬರ ಪರಿಸ್ಥಿತಿ ಇದ್ದು, ಪರಿಹಾರ ಕಾರ್ಯಕ್ರಮ­ಗಳಿಗಾಗಿ ರಾಜ್ಯ ವಿಪತ್ತು ಸ್ಪಂದನ ನಿಧಿಯಿಂದ ಮೇ ಅಂತ್ಯದವರೆಗೆ ₨ 116 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಬೀಜ, ಗೊಬ್ಬರ  ಇತ್ಯಾದಿಗೆ ಅನುದಾನದ ರೂಪದಲ್ಲಿ ₨ 91.43 ಕೋಟಿ ನೀಡಿದೆ ಎಂದು ತಿಳಿಸಿದ್ದಾರೆ.ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಯಾವುದೇ ಸರ್ಕಾರ ಇದ್ದರೂ, ಇದಕ್ಕಿಂತ ಹೆಚ್ಚಾಗಿ ಏನು ಮಾಡಲು ಸಾಧ್ಯವಿದೆ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ.ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲಾ­ಧಿ­ಕಾರಿಗಳ ಖಾತೆಯಲ್ಲಿ ₨ 314 ಕೋಟಿ ಹಣ ಲಭ್ಯವಿದೆ. ಸಾರ್ವತ್ರಿಕ ಚುನಾವಣೆ ಇದ್ದುದ್ದರಿಂದ ಸರ್ಕಾರದ ಅಧಿಕಾರಿಗಳು ಚುನಾವಣಾ ಕಾರ್ಯ­ದಲ್ಲಿ ಭಾಗಿಯಾಗಿದ್ದರು. ಇದರಿಂದ ಕೆಲವು ಕಡೆ­ಗಳಲ್ಲಿ ಪರಿಹಾರ ಕಾರ್ಯ ಕುಂಠಿತ ಆಗಿರ­ಬಹುದು. ಆದರೆ, ಬರದ ಹೆಸರಿನಲ್ಲಿ ಕೆಟ್ಟ ರಾಜ­ಕಾರಣ ಮಾಡ­ಬಾರದು. ಎಲ್ಲರೂ ಒಗ್ಗೂಡಿ ಪರಿಸ್ಥಿತಿ­ಯನ್ನು ಎದು­ರಿಸಬೇಕು ಎಂದು ಸಲಹೆ ಮಾಡಿದ್ದಾರೆ.ಬರ ಪರಿಹಾರ, ಕೊಳೆರೋಗದಿಂದ ಹಾನಿಗೊಳ­ಗಾದ ಅಡಿಕೆ ಬೆಳೆಗಾರರಿಗೆ ಪರಿಹಾರ ಮತ್ತು ಪ್ರವಾಹ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ₨ 435 ಕೋಟಿ ಬಿಡುಗಡೆ ಮಾಡಿದೆ. ಆಲಿಕಲ್ಲು ಮಳೆಯಿಂದ ಹಾನಿ­ಗೊಳಗಾದ ರೈತರಿಗೆ ಕೇಂದ್ರ ಸರ್ಕಾರ ₨ 82 ಕೋಟಿ ಬಿಡುಗಡೆ ಮಾಡಿತ್ತು. ಆದರೆ, ‘ವಿದರ್ಭ ಮಾದರಿ’ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರವು ₨ 235 ಕೋಟಿ ಹೆಚ್ಚುವರಿ ಹೊರೆ ಅನು­ಭವಿಸ­ಬೇಕಾ­ಗಿದೆ ಎಂದು ಅಂಕಿಅಂಶಗಳನ್ನು ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.