ಭಾನುವಾರ, ಏಪ್ರಿಲ್ 18, 2021
32 °C

ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಸಾಗರ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ವಾಡಿಕೆಯ ಶೇ 30ರಷ್ಟು ಮಳೆ ಮಾತ್ರ ಆಗಿರುವುದರಿಂದ ಈ ಎರಡೂ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯಿಸಿದರು.ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೆ.ಎಸ್. ಈಶ್ವರಪ್ಪ ಅವರೇ ಕಂದಾಯ ಮಂತ್ರಿ ಆಗಿದ್ದು, ಈ ಎರಡೂ ತಾಲ್ಲೂಕುಗಳ ಬಗ್ಗೆ ಅವರು ಹೆಚ್ಚಿನ ಆಸಕ್ತಿ ವಹಿಸಿ ಬರ ಪರಿಹಾರ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ಉದ್ಯೋಗ ಖಾತ್ರಿ ಯೋಜನೆಯನ್ನು ಜಿಲ್ಲಾಡಳಿತ ಸಮರ್ಪಕವಾಗಿ ಬಳಸಿಕೊಂಡಿದ್ದರೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದಿತ್ತು. ಕಳೆದ ವರ್ಷ ಜಿಲ್ಲೆಗೆ ಕೇಂದ್ರದಿಂದ ರೂ280 ಕೋಟಿ ಮಂಜೂರಾಗಿದ್ದರೂ ರೂ55 ಕೋಟಿ ಮಾತ್ರ ಬಳಸಿಕೊಳ್ಳಲಾಗಿದೆ. ಈ ವರ್ಷ ರೂ280 ಕೋಟಿಗೆ ಕ್ರಿಯಾ ಯೋಜನೆ ಕಳುಹಿಸುವ ಯೋಜನೆ ಇದ್ದರೂ ಕೇವಲ ರೂ60 ಕೋಟಿಗೆ ಕಳುಹಿಸಿ ಈ ಪೈಕಿ ರೂ9 ಕೋಟಿ ಮಾತ್ರ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.ರಾಜ್ಯ ಸರ್ಕಾರವೇ ನೀಡಿರುವ ಅಂಕಿ- ಅಂಶದ ಪ್ರಕಾರ ರಾಜ್ಯದ 113 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಈ ತಾಲ್ಲೂಕುಗಳಲ್ಲಾದರೂ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಏನು ತೊಂದರೆ ಎಂದು ಪ್ರಶ್ನಿಸಿದ ಅವರು, ಸಚಿವರಾದವರು ಮಠ, ದೇವಸ್ಥಾನಗಳಿಗೆ ಸುತ್ತು ಹಾಕುವ ಬದಲು ಬರ ಇರುವಲ್ಲಿ ಖುದ್ದಾಗಿ ಹೋಗಿ ನೋಡಬೇಕು ಎಂದರು.ಸಾಗರ ತಾಲ್ಲೂಕಿನಲ್ಲಿ ಜಲಸಂವರ್ಧನೆ ಯೋಜನೆ ಅಡಿ 72 ಕೆರೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ  ತಲಾ ಒಂದು ಕೆರೆಗೆ ರೂ50 ಲಕ್ಷ   ಮಂಜೂರು  ಮಾಡಿದೆ. ಈ ಪೈಕಿ ರೂ10 ಕೋಟಿಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಕ್ಷೇತ್ರದ ಶಾಸಕರ ನಿರಾಸಕ್ತಿಯೆ ಇದಕ್ಕೆ ಕಾರಣ ಎಂದು ಟೀಕಿಸಿದರು.ಬಗರ್‌ಹುಕುಂ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ, ಆಶ್ರಯ ಮನೆಗಳಿಗೆ ಹಕ್ಕುಪತ್ರ ನೀಡುವಲ್ಲಿ ಶಾಸಕರಿಗೆ ಇಚ್ಛಾಶಕ್ತಿ ಇಲ್ಲವಾಗಿದೆ. 2004ನೇ ಸಾಲಿನಿಂದ ಈವರೆಗೆ ತಾಲ್ಲೂಕಿನಲ್ಲಿ 6,457 ಪ್ರಕರಣ ಪೈಕಿ ಕೇವಲ 44 ಬಗರ್‌ಹುಕುಂ ಪ್ರಕರಣಗಳನ್ನು ಮಾತ್ರ ಇತ್ಯರ್ಥ ಪಡಿಸಲಾಗಿದೆ ಎಂದು ದೂರಿದರು.ಜೋಗದ ಸಮೀಪ ಲಿಂಗನಮಕ್ಕಿಯಲ್ಲಿ ಉದ್ಯಾನ ನಿರ್ಮಿಸಲು ಕೇಂದ್ರ ಸರ್ಕಾರ ರೂ5 ಕೋಟಿ, ಜೋಗದ ಈಜುಕೊಳದ ಪುನಶ್ಚೇತನಕ್ಕೆ ರೂ4 ಕೋಟಿ ಮಂಜೂರಾಗಿದೆ. ಈ ಹಣವನ್ನು ಸದ್ಬಳಕೆ ಮಾಡುವಲ್ಲಿ ಶಾಸಕರು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.ಸಾಗರ ನಗರದ ಜನರಿಗೆ ಆಶ್ರಯ ನಿವೇಶನ ನೀಡುವ ಸಂಬಂಧ ಭೂಮಿ ಪಡೆಯಲು ಜಿಲ್ಲಾಧಿಕಾರಿಗೆ ಕಳುಹಿಸಿದ ಪ್ರಸ್ತಾವ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದನ್ನು ಬಗೆಹರಿಸುವ ಮೊದಲು ಜನರಿಂದ 3,560 ಅರ್ಜಿಗಳನ್ನು ಪಡೆಯಲಾಗಿದೆ. ಸರ್ಕಾರಕ್ಕೆ ಭೂಮಿ ಪಡೆಯುವ ಸಂಬಂಧ ಪ್ರಸ್ತಾವ ಕಳುಹಿಸಿ ಒಪ್ಪಿಗೆ ಪಡೆಯುವ ಬದಲು ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಶಾಸಕರು ಊರನ್ನೆ ಬಂದ್ ಮಾಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಮುಖಂಡರಾದ ತೀ.ನಾ. ಶ್ರೀನಿವಾಸ್, ಹೊಳಿಯಪ್ಪ, ಮಹಮದ್ ಖಾಸಿಂ, ಮಲ್ಲಿಕಾರ್ಜುನ ಹಕ್ರೆ, ಸುಂದರ್‌ಸಿಂಗ್, ಲಲಿತಮ್ಮ, ಐ.ಎನ್. ಸುರೇಶ್‌ಬಾಬು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.