ಗುರುವಾರ , ಏಪ್ರಿಲ್ 15, 2021
22 °C

ಬರಲಿದೆ ಭ್ರಷ್ಟಾಚಾರ ವಿರೋಧಿ ಬ್ಯಾಡ್ಜ್

ಪ್ರಜಾವಾಣಿ ವಾರ್ತೆ/ ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭ್ರಷ್ಟಾಚಾರಕ್ಕೆ ಹಲವು ಮುಖ. ಇದನ್ನು ಕಂಡು ನೊಂದ ಜನತೆಯ ಸಹನೆಯ ಕಟ್ಟೆ ಒಡೆದಿದೆ ಈಗ. ಹೀಗಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೂ ಹಲವು ಮುಖಗಳು. ಇಂಥ ಹೋರಾಟದ ಒಂದು ಮುಖ ಸದ್ಯದಲ್ಲೇ ಬ್ಯಾಡ್ಜ್ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಇದಕ್ಕೆ ಬೇಕಾದ ಸಿದ್ಧತೆಗಳು ನಗರದಲ್ಲಿ ನಡೆಯುತ್ತಿವೆ.ಅತ್ತ ನವದೆಹಲಿಯ ಜಂತರ್-ಮಂತರ್ ಬಳಿ ಗಾಂಧಿ ಹಾದಿಯ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಕೈಗೊಂಡು ಭ್ರಷ್ಟಾಚಾರವೆಂಬ ಮರವನ್ನು ‘ಬುಡ’ ಸಮೇತ ಅಲುಗಾಡಿಸುವ ಅಸ್ತ್ರವಾದ ಜನ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲು ಒತ್ತಾಯಿಸಿದಾಗ, ದೇಶದ ಎಲ್ಲ ಕಡೆಗಳಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲೂ ಅಪೂರ್ವ ಬೆಂಬಲ ವ್ಯಕ್ತವಾಗಿತ್ತು. ವಿದ್ಯಾರ್ಥಿ- ಅಧ್ಯಾಪಕರು, ಉದ್ಯಮಿ-ವ್ಯಾಪಾರಿಗಳು, ಹಿರಿ-ಕಿರಿ ಯರು ಮುಂತಾಗಿ ಅನೇಕರು ಬಿದಿಗಿಳಿದು ಹಜಾರೆ ಅವರಿಗೆ ನೈತಿಕ ಬೆಂಬಲ ಸೂಚಿಸಿದ್ದರು.ಭ್ರಷ್ಟಾಚಾರದ ವಿರುದ್ಧ ಹಾಗೂ ಹಜಾರೆ ಅಜ್ಜನ ಪರವಾಗಿ ಸಂದೇಶಗಳು ಮೊಬೈಲ್‌ನಲ್ಲಿ ಹರಿದಾಡಿದ್ದವು. ಈ-ಮೇಲ್‌ಗಳಲ್ಲೂ ಇದೇ ವಿಷಯದ ಸಂದೇಶಗಳು ಸಾಗಿದ್ದವು. ಹಜಾರೆ ಅವರ ಹೋರಾಟಕ್ಕೆ ಮಣಿದು ಜನಲೋಕಪಾಲ್ ಮಸೂದೆಗೆ ಸಂಬಂಧಿಸಿ ಸಮಿತಿ ರಚಿಸಲು ಸರ್ಕಾರ ಒಪ್ಪಿದಾಗಲೂ ಅವಳಿ ನಗರದ ಜನತೆ ಪುಳಕಗೊಂಡು ಖುಷಿ ವ್ಯಕ್ತಪಡಿಸಿದ್ದರು. ಈ ಉತ್ಸಾಹ, ಕಾಳಜಿ ಬ್ಯಾಡ್ಜ್ ಪರಿಕಲ್ಪನೆಗೆ ದಾರಿಮಾಡಿಕೊಟ್ಟಿತು. ಇಂಥ ಅಪರೂಪದ ಕೆಲಸಕ್ಕೆ ಸಿದ್ಧತೆ ಮಾಡಿರುವುದು ಉದ್ಯಮಿಗಳದ್ದೇ ಸಂಘಟನೆಯಾದ ‘ಟೈ’ (ದಿ ಇಂಡಸ್ ಎಂಟರ್‌ಪ್ರಾನರ್ಸ್) ಹುಬ್ಬಳ್ಳಿ.ಸಂಕಲ್ಪ ಸೆಮಿ ಕಂಡಕ್ಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿವೇಕ ಪವಾರ್ ಅವರ ಕಲ್ಪನೆ ಇದರ ಹಿಂದೆ  ಕೆಲಸ ಮಾಡಿದೆ. ಸದ್ಯದಲ್ಲೇ ಭ್ರಷ್ಟಾಚಾರ ವಿರೋಧಿಗಳ ಎದೆಯ ಭಾಗದಲ್ಲಿ ಅಥವಾ ತೋಳಿನಲ್ಲಿ ಈ ಬ್ಯಾಡ್ಜ್ ಹೊಳೆಯಲಿದೆ. ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಜಯ ಸಂದ ಹಿನ್ನೆಲೆಯಲ್ಲಿ ಶನಿವಾರ ಕಿಮ್ಸ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ ನಡೆದ ಕಾರ್ಯಕ್ರಮದಲ್ಲಿ ‘ಟೈ’ ಸದಸ್ಯರು ಇದರ ಮಾದರಿಯನ್ನು ಧರಿಸಿದ್ದರು. ಇದೇ ಮಾದರಿಯಲ್ಲಿ ಅಥವಾ ಬೇರೆ ರೂಪದಲ್ಲಿ ಬ್ಯಾಡ್ಜ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಈ ಸಂದರ್ಭದಲ್ಲಿ ‘ಟೈ’ ಪ್ರಕಟಿಸಿತ್ತು.ಏನು ಕೆಲಸ?

ವ್ಯಕ್ತಿಯೊಬ್ಬರು ಭ್ರಷ್ಟಾಚಾರದ ವಿರೋಧಿ ಎಂದು ಮೌನವಾಗಿ ತಿಳಿಸಿಕೊಡುವುದು ಈ ಬ್ಯಾಡ್ಜ್‌ನ ಕೆಲಸ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಿಜವಾದ ಕಾಳಜಿ ಇರುವವರಿಗೆ ಬ್ಯಾಡ್ಜ್ ವಿತರಿಸಲು ‘ಟೈ’ ಚಿಂತನೆ ನಡೆಸಿದೆ. ಇದನ್ನು ಕಟ್ಟಿಕೊಂಡು ಕಚೇರಿಗಳಿಗೆ, ವಿಶೇಷವಾಗಿ ಸರ್ಕಾರಿ ಕಚೇರಿಗಳಿಗೆ ಹೋದರೆ ಇವರು ಭ್ರಷ್ಟಾಚಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ‘ಹೆಗ್ಗಣ’ಗಳಿಗೆ ತಿಳಿಯಬೇಕು.ಈಗಾಗಲೇ ಸಿದ್ಧವಾಗಿರುವ ತಾತ್ಕಾಲಿಕ ಬ್ಯಾಡ್ಜ್‌ನಲ್ಲಿ ‘ನಾನು ಲಂಚ ನೀಡುವುದಿಲ್ಲ, ಅಂತೆಯೇ ನೀವು ಲಂಚದ ವಿರುದ್ಧ ಆಡುವ ಮಾತುಗಳು ಗಣನೆಗೆ ಬರುತ್ತವೆ’ ಎಂಬ ಘೋಷಣೆ ಇದೆ. ‘ಹೊಸ ಹಾಗೂ ಶಾಶ್ವತ ಬ್ಯಾಡ್ಜ್‌ನಲ್ಲಿ ಈ ಘೋಷಣೆ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ‘ಟೈ’ನ ಚಾಲಕ ಶಕ್ತಿ ವಿವೇಕ ಪವಾರ ತಿಳಿಸಿದರು.

‘ಬ್ಯಾಡ್ಜ್‌ನಲ್ಲಿ ವಾಕ್ಯ ರೂಪದಲ್ಲಿ ಅಥವಾ ಚಿತ್ರದ ರೂಪದಲ್ಲಿ ಭ್ರಷ್ಟಾಚಾರದ ವಿರುದ್ಧ ಸಂದೇಶ ಸಾರಲಾಗುವುದು. ಈ ಬ್ಯಾಡ್ಜ್ ಧರಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಸಂಕಲ್ಪ ತೊಟ್ಟವರನ್ನು ಹೊರ ಜಗತ್ತಿಗೆ ಪರಿಚಯಿಸುವುದು ನಮ್ಮ ಉದ್ದೇಶ’ ಎಂದು ಸಂಘಟನೆಯ ರವಿ ಕರ್ನೂಲ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.