ಗುರುವಾರ , ಏಪ್ರಿಲ್ 22, 2021
28 °C

ಬರಲಿದೆ ಮತ್ತೊಂದು ಬರ ಅಧ್ಯಯನ ತಂಡ

ಪ್ರಜಾವಾಣಿ ವಾರ್ತೆ/ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಬರ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಬರ ಅಧ್ಯಯನ ತಂಡ ಕಳುಹಿಸಲು ನಿರ್ಧರಿಸಿದೆ. ತಂಡದ ಆಗಮನದ ಕುರಿತು ಪ್ರಧಾನಿ, ವಿದೇಶಾಂಗ ಸಚಿವರು ಮತ್ತು ಮುಖ್ಯಮಂತ್ರಿ ಪುನರುಚ್ಚರಿಸಿರುವುದು ಜಿಲ್ಲೆಯ ಜನರಲ್ಲಿ ಅದರಲ್ಲೂ ಗ್ರಾಮಸ್ಥರನ್ನು ಕುತೂಹಲದ ಜತೆ ಹಲ ಪ್ರಶ್ನೆಗಳು ಕಾಡುತ್ತಿವೆ.ಎಂಟು ತಿಂಗಳ ಅವಧಿಯಲ್ಲಿ ಬರ ಅಧ್ಯಯನ ತಂಡ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದು, ಈಗ ಮೂರನೇ ಬಾರಿ ತಂಡವೊಂದು ಮತ್ತೆ ಬರುತ್ತಿರುವುದು ಬಹುತೇಕ ಗ್ರಾಮಸ್ಥರಲ್ಲಿ ಆಸಕ್ತಿ ಕೆರಳಿಸಿದೆ. ಆದರೆ ಬರ ಅಧ್ಯಯನ ತಂಡ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ವರದಿಯಿಂದ ಪ್ರಯೋಜನವಾಗುವುದೇ ಎಂಬ ಚಿಂತೆ ಗ್ರಾಮಸ್ಥರಲ್ಲಿ ಆವರಿಸಿದೆ.ಜಿಲ್ಲೆ ಬರಪೀಡಿತವೆಂದು ಘೋಷಣೆಯಾಗಿರುವ ಕಾರಣ ತಂಡವು ಖಚಿತವಾಗಿ ಬರಲಿದೆ ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರು ಇದ್ದಾರೆ. ಆದರೆ ಕಳೆದ ಬಾರಿ ಭೇಟಿ ನೀಡಿದ ಗ್ರಾಮಗಳಿಗೆ ಪುನಃ ಭೇಟಿ ನೀಡಲಾಗುವುದೇ ಅಥವಾ ಬೇರೆ ಗ್ರಾಮಗಳಲ್ಲಿ ಪರಿಶೀಲನೆ ನಡೆಸಲಾಗುವುದೇ ಎಂಬ ಕುತೂಹಲ ಗ್ರಾಮಸ್ಥರಲ್ಲಿ ಮನೆ ಮಾಡಿದೆ.ಒಂದು ವೇಳೆ ಭೇಟಿ ನೀಡಿದರೂ ತಮ್ಮ ತಮ್ಮ ಗ್ರಾಮಗಳ ಕುರಿತು ಸಂಪೂರ್ಣ ವಿವರಣೆ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿ ಎಂಬ ಆಶಾಭಾವನೆಯನ್ನು ಗ್ರಾಮಸ್ಥರು ಹೊಂದಿದ್ದಾರೆ. ವರದಿಯನ್ವಯ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡರೆ, ಬರ ಪರಿಹಾರದ ಜೊತೆಗೆ ಗ್ರಾಮದ ಅಭಿವೃದ್ಧಿಯಾಗುತ್ತದೆ ಎಂಬ ಬಯಕೆ ಹೊಂದಿದ್ದಾರೆ.ಜಿಲ್ಲೆಯಲ್ಲಿ ಬರ ಬಿದ್ದಾಗಲೆಲ್ಲ ದೂರದ ದೆಹಲಿ, ಪಂಜಾಬ್‌ನಿಂದ ಬರ ಅಧ್ಯಯನ ತಂಡದವರು ಬರುತ್ತಾರೆ. ಹಿಂದಿ-ಇಂಗ್ಲಿಷ್‌ನಲ್ಲಿ ಏನೇನೋ ಕೇಳುತ್ತಾರೆ. ನಾವು ಕನ್ನಡದಲ್ಲಿ ಉತ್ತರಿಸಿದರೆ, ಸ್ಥಳೀಯರ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಾರೆ. ಬರಕ್ಕೆ ತುತ್ತಾಗಿರುವ ನಮ್ಮ ಜಮೀನು ಮತ್ತು ಬೆಳೆ ತೋರಿಸುತ್ತೇವೆ.ಅವರವರೇ ಚರ್ಚಿಸಿಕೊಂಡು, ಬರೆದುಕೊಂಡು ವಾಪಸು ಹೋಗುತ್ತಾರೆ. ಆದರೆ ಅವರಿಂದ ನೆರವು ದೊರೆಯಿತೇ ಅಥವಾ ಇಲ್ಲವೇ ಎಂಬುದು ನಮಗೆ ಗೊತ್ತೇ ಆಗುವುದಿಲ್ಲ. ತಂಡವು ಸಲ್ಲಿಸುವ ವರದಿ ಪರಿಶೀಲಿಸಿ, ಕೇಂದ್ರ ಸರ್ಕಾರ ಬಿಡುಗಡೆಗೊಳಿಸುವ ಬರ ಪರಿಹಾರ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲೇ ಇರುತ್ತೇವೆ. ಆದರೆ ಬರ ಪರಿಹಾರವಷ್ಟೇ ಅಲ್ಲ, ವರದಿ ಸಲ್ಲಿಕೆ ನಂತರದ ಬೆಳವಣಿಗೆಗಳ ಬಗ್ಗೆ ಮಾಹಿತಿಯೇ ಸಿಗುವುದಿಲ್ಲ~ ಎಂದು ರೈತ ಶಿವಶಂಕರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.`ಇಲ್ಲಿನ ಬೌಗೋಳಿಕ ಪರಿಸರ, ಹವಾಮಾನದ ಬಗ್ಗೆಯೂ ಸಂಪೂರ್ಣ ಮಾಹಿತಿ ಹೊಂದಿಲ್ಲದ ತಂಡದ ಸದಸ್ಯರು ನಮ್ಮಿಂದ ಅಲ್ಪಸ್ವಲ್ಪ ವಿವರಣೆ ಪಡೆಯುತ್ತಾರೆ. ಅವರೇ ಆಯ್ದುಕೊಂಡ ಗ್ರಾಮಗಳಿಗೆ ಮಾತ್ರವೇ ಭೇಟಿ ನೀಡುವ ಅವರು ಅಷ್ಟೇ ತರಾತುರಿಯಲ್ಲಿ ಹೊರಟು ಬಿಡುತ್ತಾರೆ. ಕೆಲವೇ ಗಂಟೆಗಳಲ್ಲಿ ಜಿಲ್ಲೆಯ ಸಮಗ್ರ ಬರ ಪರಿಸ್ಥಿತಿ ಅಧ್ಯಯನ ಮಾಡಲಾಗುವುದಿಲ್ಲ. ತರಾತುರಿಯಲ್ಲಿ ಸಲ್ಲಿಕೆಯಾಗುವ ವರದಿಯಲ್ಲಿ ನಮ್ಮ ಜಿಲ್ಲೆ ಅಥವಾ ಗ್ರಾಮದ ಪ್ರಸ್ತಾಪ ಇರುವುದೋ ಇಲ್ವೋ ಗೊತ್ತಾಗಲ್ಲ~ ಎಂದು ಅವರು ತಿಳಿಸಿದರು.ಬರ ಪರಿಸ್ಥಿತಿಯ ಅಧ್ಯಯನ ಮಾಡಲಿಕ್ಕೆ ಬರುವ ತಂಡಗಳು ಪ್ರಮುಖ ಗ್ರಾಮಗಳಿಗೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಬೇಕು.ತರಾತುರಿಯಲ್ಲಿ ಭೇಟಿ ಮಾಡದೇ ಸಮಗ್ರವಾಗಿ ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಬೇಕು. ಕೇಂದ್ರ ಬರ ಅಧ್ಯಯನ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರದ ವಿವರಣೆಯನ್ನು ಅಧಿಕಾರಿಗಳು ಗ್ರಾಮಸ್ಥರಿಗೆ ಭೇಟಿ ನೀಡಬೇಕು. ಕೇಂದ್ರ ಸರ್ಕಾರ ಬಿಡುಗಡೆಗೊಳಿಸುವ ಅನುದಾನದಲ್ಲಿ ಜಿಲ್ಲೆ ಮತ್ತು ತಾಲ್ಲೂಕುಗಳ ಪಾಲು ಎಷ್ಟು ಎಂಬುದನ್ನು ಬಹಿರಂಗಪಡಿಸಬೇಕು. ಇದ್ಯಾವುದ ಬಗ್ಗೆ ಮಾಹಿತಿಯಿಲ್ಲದೇ ಬರ ಅಧ್ಯಯನ ತಂಡವು ಹಾಗೆ ಬಂದು-ಹೀಗೆ ಹೋದರೆ ಯಾರಿಗೂ ಹೆಚ್ಚಿನ ಪ್ರಯೋಜನ ಆಗುವುದಿಲ್ಲ~ ಎಂದು ಎಸ್.ದೇವರಾಜು ತಿಳಿಸಿದರು.

ತಂಡಗಳು ಭೇಟಿ ನೀಡಿದ ಗ್ರಾಮಗಳು ಎಷ್ಟು?

ಚಿಕ್ಕಬಳ್ಳಾಪುರ: ಬರ ಅಧ್ಯಯನ ತಂಡಕ್ಕೆ ಸಂಬಂಧಿಸಿದಂತೆ ಎಂಟು ತಿಂಗಳ ಅವಧಿಯಲ್ಲಿ ಜಿಲ್ಲೆಗೆ ಎರಡು ಬರ ಅಧ್ಯಯನ ತಂಡ ಭೇಟಿ ನೀಡಿವೆ. ಕಳೆದ ವರ್ಷ ಡಿಸೆಂಬರ್ 14ರಂದು ತಂಡದ ಸದಸ್ಯರಾದ ಎ.ನಂದಕುಮಾರ್, ಅರುಣ್‌ಕುಮಾರ್ ಮೂರು ತಾಲ್ಲೂಕುಗಳಿಗೆ ಭೇಟಿ ನೀಡಿದ್ದರು.ಗೌರಿಬಿದನೂರು ತಾಲ್ಲೂಕಿನ ತಿಪ್ಪಗಾನಹಳ್ಳಿ, ವೇದಲವೇಣಿ, ಗುಂಡಾಪುರ, ಹುದುಗೂರು, ಡಿ.ಪಾಳ್ಯ ಕ್ರಾಸ್ ಮತ್ತು ಜಿ.ಕೊತ್ತೂರು. ಬಾಗೇಪಲ್ಲಿ ತಾಲ್ಲೂಕಿನ ರಾಮನಪಾಡಿ, ಮರುಪಲ್ಲಿ ಮತ್ತು ಇದ್ದಲೂರಪಲ್ಲಿ ಗ್ರಾಮ. ಚಿಂತಾಮಣಿ ತಾಲ್ಲೂಕಿನ ಕೆಂಚಾರ‌್ಲಹಳ್ಳಿ, ಸೋಮಾಕಲಹಳ್ಳಿ, ಚಿಮ್ಮಾಕಲ್ಲಗುಂಟೆ, ಹನುಮನಾಯಕನಹಳ್ಳಿ ಮತ್ತು ಇತರ ಗ್ರಾಮಗಳಿಗೆ ಭೇಟಿ ನೀಡಿದ್ದರು.2012 ಮೇ 15ರಂದು ಪ್ರವೀಣ್ ಶರ್ಮಾ ನೇತೃತ್ವದ ತಂಡವು ಒಟ್ಟು ನಾಲ್ಕು ತಾಲ್ಲೂಕುಗಳನ್ನು ತರಾತುರಿಯಲ್ಲಿ ಭೇಟಿ ಮಾಡಿತು. ಸಮಯದ ಅಭಾವದಿಂದ ತಂಡದ ಸದಸ್ಯರಿಗೆ ಬಹುತೇಕ ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ, ವೀರಗೊಲ್ಲಹಳ್ಳಿ, ಗೌರಿಬಿದನೂರು ಪಟ್ಟಣ, ಗುಡಿಬಂಡೆ ತಾಲ್ಲೂಕಿನ ಚೌಟಕುಂಟನಹಳ್ಳಿ ಮತ್ತು ನೀಲಗಂಭ ಗ್ರಾಮಗಳಿಗೆ ಅವರು ಭೇಟಿ ನೀಡಲಿಲ್ಲ.ಬಾಗೇಪಲ್ಲಿ ತಾಲ್ಲೂಕಿನ ಬಾಗೇಪಲ್ಲಿ ಪಟ್ಟಣ, ಪಾತಪಾಳ್ಯ, ನಾರಮದ್ದೇಪಲ್ಲಿ, ಚಾಕವೇಲು ಮತ್ತು ಪುಲಿಗಲ್ ಗ್ರಾಮಗಳಿಗೆ ಭೇಟಿ ನೀಡಲಿಲ್ಲ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ, ಹಾರೋಬಂಡೆ, ನುಗ್ಗತಹಳ್ಳಿ ಮತ್ತು ಅಂಗಟ್ಟ ಗ್ರಾಮಗಳಿಗೂ ಅವರು ಭೇಟಿ ನೀಡಲು ಸಾಧ್ಯವಾಗಿರಲಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.