ಗುರುವಾರ , ಮೇ 13, 2021
32 °C

ಬರಸ್ಥಿತಿ ಅರಿಯಲು ಮೂರು ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬರಪೀಡಿತ ಜಿಲ್ಲೆಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಅನುಷ್ಠಾನ, ಕುಡಿಯುವ ನೀರು, ಮೇವಿನ ಪರಿಸ್ಥಿತಿ ಕುರಿತ ವಸ್ತುಸ್ಥಿತಿ ಅರಿಯಲು 12 ಸಚಿವರು 3 ತಂಡಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪ್ರಕಟಿಸಿದರು.ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆರಡು ದಿನಗಳಲ್ಲಿ ಸಚಿವರ ತಂಡ ಪ್ರವಾಸ ಕೈಗೊಂಡು ವರದಿ ನೀಡಲಿದೆ ಎಂದರು.`ಸಚಿವರಷ್ಟೇ ಅಲ್ಲದೆ ನಾನು ಸಹ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಆಯಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು 3-4 ದಿನಗಳಲ್ಲಿ ಪ್ರವಾಸ ಕೈಗೊಂಡು ವರದಿ ನೀಡಲಿದ್ದಾರೆ. ಮೂರು ದಿನಗಳ ಕಾಲ ಬೇರೆ ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಬರ ಪರಿಹಾರ ಕಾರ್ಯಗಳತ್ತ ಗಮನಹರಿಸಲಾಗುವುದು~ ಎಂದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್, ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಮತ್ತು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮೂರು ತಂಡಗಳಲ್ಲಿ ಪ್ರತ್ಯೇಕವಾಗಿ ಸಚಿವರು ಪ್ರವಾಸ ಮಾಡಲಿದ್ದಾಸೆ.ಶೆಟ್ಟರ್ ತಂಡದಲ್ಲಿ ಗೋವಿಂದ ಕಾರಜೋಳ, ಸಿ.ಎಂ.ಉದಾಸಿ, ವಿಶ್ವೇಶ್ವರ ಹೆಗಡೆ ಕಾಗೇರಿ; ಸುರೇಶ್‌ಕುಮಾರ್ ತಂಡದಲ್ಲಿ ಆರ್.ಅಶೋಕ, ಬಿ.ಎನ್.ಬಚ್ಚೇಗೌಡ, ಎಸ್.ಎ.ರವೀಂದ್ರನಾಥ್, ಬಸವರಾಜ ಬೊಮ್ಮಾಯಿ ತಂಡದಲ್ಲಿ ರೇವೂನಾಯಕ ಬೆಳಮಗಿ, ರಾಜೂಗೌಡ, ಎಸ್. ಎ.ರಾಮದಾಸ್ ಇರುತ್ತಾರೆ ಎಂದರು.`ಬರದ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಪ್ರತಿಷ್ಠೆಯ ಪ್ರಶ್ನೆಯೂ ಇಲ್ಲ. ಬರ ನಿರ್ವಹಣೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬುದು ನಮ್ಮ ಅಪೇಕ್ಷೆ. ಈ ಬಗ್ಗೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ~ ಎಂದರು.ಬರಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಒಟ್ಟು ರೂ158.59 ಕೋಟಿ ಹಣವಿದೆ. ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹಣದ ಕೊರತೆ ಇಲ್ಲ. ಎಷ್ಟು ಹಣ ಬೇಕಾದರೂ ಬಿಡುಗಡೆ ಮಾಡಲು ಸರ್ಕಾರ ಸಿದ್ಧ ಎಂದು ಪ್ರಕಟಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.