ಮಂಗಳವಾರ, ಮೇ 18, 2021
31 °C

ಬರ ಪರಿಹಾರಕ್ಕೆ ಕೇಂದ್ರದಿಂದ 4 ಕೋಟಿ: ಶೆಟ್ಟರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಕೇಂದ್ರ ವಿಪತ್ತು ಪರಿಹಾರ ನಿಧಿಯಡಿ ಜಿಲ್ಲೆಗೆ ಇದುವರೆಗೆ ಬರ ಕಾಮಗಾರಿ ಕೈಗೊಳ್ಳಲು 4 ಕೋಟಿ ರೂಪಾಯಿ ಬಿಡುಗಡೆ ಆಗಿದ್ದು, ಅದರಲ್ಲಿ ಒಂದು ಕೋಟಿ ರೂಪಾಯಿ ವೆಚ್ಚವಾಗಿದೆ~ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಬರ ಕಾಮಗಾರಿ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿರು.ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯು ಗ್ರಾಮೀಣ ನೀರು ಪೂರೈಕೆಗಾಗಿ ಜಿಲ್ಲೆಗೆ ಪ್ರತ್ಯೇಕವಾಗಿ 4.89 ಕೋಟಿ ರೂ.  ಬಿಡುಗಡೆ ಮಾಡಿದ್ದು, ಇದರಲ್ಲಿ 1.29 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಪ್ರತಿ ತಾಲ್ಲೂಕಿಗೆ ಬರ ನಿರ್ವಹಣೆಗಾಗಿ ತಲಾ 30 ಲಕ್ಷ ರೂ. ಬಿಡುಗಡೆ ಮಾಡಿದ್ದು, ಆಯಾ ತಾಲ್ಲೂಕಿನ ಶಾಸಕರ ಅಧ್ಯಕ್ಷತೆ ಸಮಿತಿ ಈ ಕುರಿತು ಕ್ರಮ ಕೈಗೊಳ್ಳಲಿದೆ. ಅಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 30 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.ಬರ ಪರಿಸ್ಥಿತಿಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಮೇವಿನ ಕೊರತೆಯನ್ನು ನೀಗಿಸಲು ಕುಂದಗೋಳ ತಾಲ್ಲೂಕಿನ ಹಿರೇಗುಂಜಾಳ, ಮುಳ್ಳೊಳ್ಳಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ. ರೈತರಿಗೆ ಶೇ 50ರ ರಿಯಾಯಿತಿ ದರದಲ್ಲಿ ಮೇವು ವಿತರಿಸಲಾಗುತ್ತಿದೆ.ಮುಳ್ಳೊಳ್ಳಿಯಲ್ಲಿ 19.1 ಮೆಟ್ರಿಕ್ ಟನ್, ಹಿರೇಗುಂಜಾಳದಲ್ಲಿ 20.1 ಮೆಟ್ರಿಕ್ ಟನ್ ಹಾಗೂ ಶಿರಗುಪ್ಪಿಯಲ್ಲಿ 5 ಮೆಟ್ರಿಕ್ ಟನ್ ಮೇವು ಸಂಗ್ರಹವಾಗಿದೆ. ಒಟ್ಟು ಇಡೀ ಜಿಲ್ಲೆಯಲ್ಲಿ 5.55 ಲಕ್ಷ ಮೆಟ್ರಿಕ್ ಟನ್ ಮೇವು ಸಂಗ್ರಹವಾಗಿದೆ ಎಂದರು.ಜಿಲ್ಲೆಯಲ್ಲಿ ಒಟ್ಟು 15 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದ ಅವರು, ಬರ ಪರಿಸ್ಥಿತಿ ಅರಿಯಲು ಈಗಾಗಲೇ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ. ಏ.17ರಂದು ಧಾರವಾಡ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಿಗೆ ಸಚಿವರ ತಂಡ ಭೇಟಿ ನೀಡಲಿದೆ ಎಂದು ಹೇಳಿದರು.ಕುಂದಗೋಳ ತಾಲ್ಲೂಕಿನ ಯರಿನಾರಾಯಣಪುರ, ಬೆಳ್ಳುಬ್ಬಿ, ಗುಡೇನಕಟ್ಟಿ ಗ್ರಾಮಗಳಲ್ಲಿ ಕೆರೆಗಳು ಒಣಗಿದ್ದು, ಅವುಗಳ ಹೂಳು ತೆಗೆಯಲು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಇದಲ್ಲದೆ ಇನ್ನೂ 5-6 ಹಳ್ಳಿಗಳಲ್ಲಿ ಕೆರೆಗಳು ಒಣಗಿದ್ದು ಅಲ್ಲೆಲ್ಲ ಕೆರೆ ಪುನಶ್ಚೇತನ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದುವರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 67 ಕೆರೆಗಳ ಹೂಳು ತೆಗೆಯುವ ಕಾರ್ಯ ಪೂರ್ಣಗೊಳಿಸಲಾಗಿದೆ. ಬೆಣ್ಣೆಹಳ್ಳಿ ಸಮಸ್ಯೆ ಕುರಿತು ಪರಮಶಿವಯ್ಯ ಸಮಿತಿ ಪುನರ್‌ವಿಮರ್ಶಿತ ವರದಿ ಇನ್ನೂ ನೀಡಿಲ್ಲ. ಅದಾಗ್ಯೂ ಜಲಸಂಪನ್ಮೂಲ ಇಲಾಖೆಗೆ ಪ್ರವಾಹ ತಡೆ ಕುರಿತ ಪೂರಕ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 56 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು, ಈ ಪೈಕಿ 7 ಕೋಟಿ ರೂ. ವಿತರಣೆ ಬಾಕಿ ಇದೆ. ಗುರುವಾರ (ಏ. 12) ಕೇಂದ್ರ ಸರ್ಕಾರ ಈ ಯೋಜನೆಯಡಿ ರಾಜ್ಯಕ್ಕೆ 700 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಬಾಕಿ ಬಟವಾಡೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು. ಉದ್ಯೋಗ ಖಾತರಿಯಿಂದಾಗಿ ಇಂದು ಹಿಂದಿನಂತೆ ಉದ್ಯೋಗವೇ ಇಲ್ಲ ಎಂದು ಜನ ವಲಸೆ ಹೋಗುತ್ತಿಲ್ಲ. ಆದರೆ ಹೆಚ್ಚಿನ ವರಮಾನ ಸಿಗುವ ಆಸೆಯಿಂದ ಜನ ಹೋಗುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ ಎಂದ ಸಚಿವರು, ಉದ್ಯೋಗ ಖಾತರಿ ಯೋಜನೆಯಲ್ಲಿ ಇದುವರೆಗೆ ಅವ್ಯವಹಾರ ಮಾಡಿದ 300 ಜನ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಕೆಲವರನ್ನು ಅಮಾನತ್ತು ಮಾಡಲಾಗಿದ್ದು, ಇನ್ನು ಕೆಲವರ ಪ್ರಕರಣ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.ರಾಜ್ಯದಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರವು ಕೇಂದ್ರದ ಅನುದಾನ ಸೇರಿದಂತೆ ಒಟ್ಟು 369.69 ಕೋಟಿ ರೂ. ಇದುವರೆಗೆ ಬಿಡುಗಡೆ ಮಾಡಿದೆ ಎಂದು ಸಚಿವ ಶೆಟ್ಟರ ತಿಳಿಸಿದರು.ಜಿಲ್ಲಾಧಿಕಾರಿ ದರ್ಪಣ ಜೈನ್ ಮಾತನಾಡಿ, ಹಿಂಗಾರಿ ಹಂಗಾಮಿನಲ್ಲಿ ಜಿಲ್ಲೆಯ 1.31 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಅಂದಾಜು 91 ಸಾವಿರ ಹೆಕ್ಟೇರ್ ಬೆಳೆನಾಶವಾಗಿದೆ ಎಂದು ತಾತ್ಕಾಲಿಕ ಅಂದಾಜು ಮಾಡಲಾಗಿದೆ. ಬರ ಪರಿಹಾರ ಅಂಗವಾಗಿ ರಾಜ್ಯ ಸರ್ಕಾರ ಭೂ ಕಂದಾಯ ವಿನಾಯ್ತಿಯಿಂದ ರೈತರಿಗೆ ಒಟ್ಟಾರೆ 15 ಲಕ್ಷ ರೂ. ಕಂದಾಯ ಪಾವತಿಯಿಂದ ವಿನಾಯಿತಿ ದೊರಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ, ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.