ಭಾನುವಾರ, ಮೇ 16, 2021
21 °C

ಬರ ಪರಿಹಾರ: ಅಡ್ಡಿಯಾದ ಕೆಲಸದ ಅವಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಪ್ರದೇಶದ ಸರ್ಕಾರಿ ನೌಕರರ ಕೆಲಸದ ವೇಳೆಯಲ್ಲಿ ಬದಲಾವಣೆ ಮಾಡಿರುವ ನಿರ್ಧಾರ ಬರ ಪರಿಹಾರ ಕಾಮಗಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕದ ಮಾತುಗಳು ಕೇಳಿಬಂದಿವೆ.ಬರಪೀಡಿತ ಜಿಲ್ಲೆಗಳಾದ ಗುಲ್ಬರ್ಗ, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ಬೀದರ್, ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ಬೆಳಿಗ್ಗೆ 10ರಿಂದ ಸಂಜೆ 5.30ರ ಬದಲು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ಕ್ಕೆ ಬದಲಾಯಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಬದಲಾವಣೆ ತಂದಿದೆ. ಇದೇ 2ರಿಂದ ಅನ್ವಯವಾಗಿರುವ ಇದು ಎರಡು ತಿಂಗಳವರೆಗೆ ಜಾರಿಯಲ್ಲಿರುತ್ತದೆ.ಬರ ಪರಿಹಾರ ಕಾಮಗಾರಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಆತಂಕದ ಕಾರಣ ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸರ್ಕಾರಿ ನೌಕರರ ಕೆಲಸದ ಸಮಯದಲ್ಲಿ ಬದಲಾವಣೆ ತರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ. ಗಣನೀಯ ಸಂಖ್ಯೆಯ ನೌಕರರು ತಮ್ಮ ಕಚೇರಿಗಳಿಗೆ ದೂರದ ಊರುಗಳಿಂದ ಬರುತ್ತಾರೆ.

 

ಬೆಳಿಗ್ಗೆ 8 ಗಂಟೆಗೆ ಕಚೇರಿ ತಲುಪುವುದು ಅವರಿಗೆ ಕಷ್ಟಸಾಧ್ಯ. ಉಷ್ಣಾಂಶ ತೀವ್ರವಾಗಿರುವ ಮಧ್ಯಾಹ್ನದ ವೇಳೆಯಲ್ಲಿ ಕಚೇರಿಯಿಂದ ಊರುಗಳಿಗೆ ವಾಪಸಾಗುವುದೂ ನೌಕರರಿಗೆ ಕಷ್ಟದ ಕೆಲಸ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.ವಾತಾವರಣದ ಉಷ್ಣಾಂಶ ಅಪಾಯಕಾರಿ ಮಟ್ಟ ತಲುಪಿದರೂ ಆಂಧ್ರಪ್ರದೇಶ ಸರ್ಕಾರ ತನ್ನ ನೌಕರರ ಕೆಲಸದ ವೇಳೆಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ. ಮಾನವೀಯ ನೆಲೆಯಲ್ಲಿ ಕರ್ನಾಟಕ ಸರ್ಕಾರ ತನ್ನ ನೌಕರರ ಕೆಲಸದ ವೇಳೆಯನ್ನು ಬೇಸಿಗೆ ಕಾಲದಲ್ಲಿ ಬದಲಾವಣೆ ಮಾಡಿದರೂ, ರಾಜ್ಯ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ಇಂಥ ನಿರ್ಧಾರದಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಿತ್ತು ಎಂದು ಮೂಲಗಳು ಹೇಳಿವೆ.ಇಷ್ಟೇ ಅಲ್ಲ, ರಾಜ್ಯದ ಎಲ್ಲೆಡೆ ಇದೇ 2ರಿಂದ ಜಾರಿಯಾಗಿರುವ `ಸಕಾಲ~ ಯೋಜನೆಯ ಅನುಷ್ಠಾನದ ಮೇಲೆ ಕೂಡ ಈ ನಿರ್ಧಾರ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.