ಮಂಗಳವಾರ, ಮೇ 18, 2021
28 °C

ಬರ ಮಾಡಿಕೊಂಡ ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಗಾಲಕ್ಕೆ ಹೆಚ್ಚು ದಿನಗಳಂತೆ. ಕೋಲಾರದ ಮಟ್ಟಿಗಂತೂ ವರ್ಷದ 365 ದಿನವೂ ಬರವೇ. `ಓಡಿಹೋಗಿ ಹಾಲು ಕುಡಿಯುವುದಕ್ಕಿಂತ ಇದ್ದಲ್ಲೇ ನೀರು ಕುಡಿಯುವುದು ಲೇಸು~ ಎಂಬ ಗಾದೆ ಜಿಲ್ಲೆಯ ಮಟ್ಟಿಗೆ ಈಗ ಸುಳ್ಳು. ಇದ್ದಲ್ಲಿ ನೀರು ಸಿಗುತ್ತಿಲ್ಲ. ಇ್ಲ್ಲಲೀಗ ನೀರಿಗೂ, ಹಾಲಿಗೂ ತತ್ವಾರ.ಶೇ 200ರಷ್ಟು ಅಧಿಕ ಅಂತರ್ಜಲ ಬಳಕೆ ಮಾಡಿರುವ ದಾಖಲೆಯುಳ್ಳ ಕೋಲಾರದಲ್ಲಿ ಕೆರೆಗಳು, ತೆರೆದ ಬಾವಿಗಳು ಮತ್ತು ಕಲ್ಯಾಣಿಗಳೂ ಸೇರಿದಂತೆ ಬಹುತೇಕ ಜಲಸಂಪನ್ಮೂಲಗಳ ಅಳಿವಿನ ಕಾಲ ಆರಂಭವಾಗಿ ಹಲವು ವರ್ಷಗಳೇ ಆಗಿವೆ.ಈ ಬರಗಾಲ ಸುಮ್ಮನೇ ಬಂದಿದ್ದಲ್ಲ. ಮಿತಿ ಮೀರಿ ಕೊಳವೆಬಾವಿಗಳನ್ನು ಕೊರೆದೂ ಕೊರೆದೂ ಬರಮಾಡಿಕೊಂಡ ಬರವಿದು. ಮೇವಿಗೂ, ಹಾಲಿಗೂ, ನೀರಿಗೂ ಕೊಳವೆಬಾವಿಯೇ ಮೂಲ. ಆದರೆ ಅದೀಗ ಪಾತಾಳ ಲೋಕದ ಮಾತು.ಚಿನ್ನದ ಗಣಿಯಾಳದಲ್ಲಿ ಹುದುಗಿರುವ ವಿಷಕಾರಿ ನೀರನ್ನು ತೆಗೆದು ಶುದ್ಧೀಕರಿಸಿ ಕುಡಿಯಬಹುದೇ? ಎನ್ನುವ ಪ್ರಶ್ನೆಯೀಗ ಚರ್ಚೆಯಲ್ಲಿದೆ. ಇದು ಅನಿವಾರ್ಯವೋ... ದುರಾಸೆಯೋ... ಈ ನೆಲದ ದುರದೃಷ್ಟವೋ... ಹೇಳುವುದು ಕಷ್ಟ. ರೈಲಿನಲ್ಲಿ ನೀರು ತರಿಸಿಕೊಳ್ಳುವ ದಿನಗಳೂ ಬರಬಹುದೇ ಎನ್ನುವ ಪ್ರಶ್ನೆಯೂ ತೆವಳುತ್ತಿದೆ.ಬರಗಾಲ ಇಲ್ಲಿ ಯಾರಲ್ಲೂ ಅಚ್ಚರಿಯನ್ನಾಗಲೀ ಸಂಕಟವನ್ನಾಗಲೀ ಮೂಡಿಸುವುದಿಲ್ಲ. `ಬರ ಬಂತು ಅಂತ ಕಲ್ಲು ಕುದಿಸುವುದಕ್ಕಾಗುವುದಿಲ್ಲ~ ಎಂದು ತಿಳಿದು ಹಗಲುರಾತ್ರಿ ತೋಟ-ಜಮೀನುಗಳಲ್ಲಿ ಕಷ್ಟಪಡುತ್ತಲೇ ಇರುವ ರೈತರು ಹಾಗೂ ಕೂಲಿ ಹುಡುಕಿ ನಡೆಯುತ್ತಿರುವ ಜನ- `ಹೊಸ ಕೊಳವೆ ಬಾವಿ ಹಾಕಿ, ಬೇರೇನೂ ಬೇಡ~ ಎನ್ನುತ್ತಿದ್ದಾರೆ. ನೆಲ ಕೊರೆದರೆ ಗಂಗಾಮಾತೆಯೇನೋ ಕಾಣುತ್ತಾಳೆ. ಆದರೆ ಕಂಡ ಕೆಲವೇ ದಿನಗಳಲ್ಲಿ ಕಾಣದಂತೆ ಮಾಯವಾಗುತ್ತಿದ್ದಾಳೆ.

ತೋಟಕ್ಕೆ ಟ್ಯಾಂಕರ್ ನೀರು!ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಬೆವರಿಳಿಸುವ ರೈತರು ಜಮೀನುಗಳಿಗೆ ಈಗ ಟ್ಯಾಂಕರ್ ನೀರು ಹರಿಸುತ್ತಿದ್ದಾರೆ. ಟೊಮೆಟೋಗಷ್ಟೆ ಸೀಮಿತವಾಗಿದ್ದ ಈ ಅನಿವಾರ್ಯತೆ ಪಪ್ಪಾಯ ಬೆಳೆಗೂ ಎದುರಾಗಿದೆ.ಇನ್ನು ಹಲವರು ಜಮೀನನ್ನು ಪಾಳು ಬಿಟ್ಟಿದ್ದಾರೆ. ಕೃಷಿ ಕೂಲಿಕಾರರು ಪಟ್ಟಣಗಳಲ್ಲಿ ಕೂಲಿ ಅರಸುತ್ತಾ ಕಾಣೆಯಾಗುತ್ತಿದ್ದಾರೆ. ವಿಪರ್ಯಾಸ ಎಂದರೆ, ಎರಡು ವರ್ಷದಿಂದ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ ನೂರಾರು ಮಂದಿಗೆ ಇನ್ನೂ ಕೂಲಿ ಹಣ ಸಿಕ್ಕಿಲ್ಲ.ಬಡತನ ರೇಖೆಗಿಂತ ಕೆಳಗಿರುವವರಿಗೆಂದೇ ಇರುವ ಈ ಯೋಜನೆ ಶ್ರೀಮಂತರು, ಪುಢಾರಿಗಳು, ಗುತ್ತಿಗೆದಾರರಿಗೆ ಸುಲಭದ ತುತ್ತಾಗುತ್ತಿದೆ.ಬರಗಾಲಕ್ಕೆ ರೊಕ್ಕ ಹಿಡಿದು ಭತ್ತಕ್ಕೆ ಅಲೆದರು ಎಂಬ ಗಾದೆ ಮಾತನ್ನೂ ಇಲ್ಲಿ ಬದಲಿಸಬೇಕಾಗಿದೆ. ಇಲ್ಲಿ ರೊಕ್ಕ ಹಿಡಿದ ಜನ ನೀರಿಗಾಗಿ ಅಲೆದಾಡುತ್ತಿದ್ದಾರೆ.ತೋಟಗಳಲ್ಲಿ ಇರುವ ಖಾಸಗಿ ಕೊಳವೆಬಾವಿ ಮಾಲೀಕರನ್ನು ಅಧಿಕಾರಿಗಳು ಓಲೈಸುತ್ತಿದ್ದಾರೆ. ಟ್ಯಾಂಕರುಗಳ ಮಾಲೀಕರ ಜೊತೆ ಚೌಕಾಸಿ ನಡೆಯುತ್ತಿದೆ. ಅವರೆಲ್ಲರಿಗೆ ಇದು ದುಡ್ಡು ಮಾಡುವ ಸಮಯ. ಜನಸಾಮಾನ್ಯರನ್ನು ಹೊರತುಪಡಿಸಿ ಮಿಕ್ಕೆಲ್ಲರಿಗೂ ಇದು ಒಳ್ಳೆಯ ಬರಗಾಲ. ಹೀಗಾಗಿ ಬಹಳ ಇಷ್ಟ.

ಹಣವಿದೆ... ಆದರೆ...

ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಲೇ ಇದ್ದಾರೆ. ಕೋಟ್ಯಂತರ ಹಣವೂ ಬಿಡುಗಡೆಯಾಗುತ್ತಿದೆ. ಆದರೆ ಕೆಲಸವಾಗುತ್ತಿದೆಯೇ ಎಂದು ಕೇಳಿದರೆ ಸ್ವತಃ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರೂ ನಿರಾಶೆ ವ್ಯಕ್ತಪಡಿಸುತ್ತಾರೆ. ಖಡಕ್ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಕೂಡ ವಿಷಾದಮುಖಿಯಾಗುತ್ತಾರೆ.

ಕೋಲಾರ ನಗರಸಭೆಯು ಕೊಳವೆಬಾವಿಗಳನ್ನು ಹಲವೆಡೆ ಕೊರೆದು ವರ್ಷಗಳಾದರೂ ಪಂಪ್‌ಮೋಟರ್ ಅಳವಡಿಸಿಲ್ಲ. ಬರಗಾಲ ಘೋಷಣೆಯಾದ ಬಳಿಕ ಕೊರೆದ ಕೊಳವೆಬಾವಿಗಳಿಗೂ ಇದೇ ಗತಿ. ಹಣವೇನೋ ಇದೆ. ಕೆಲಸ ಮಾತ್ರ ಆಗುತ್ತಿಲ್ಲ.ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿಯಲ್ಲಿ ಕೊಳವೆಬಾವಿ ಕೊರೆಸುವ ಕೋಲಾರ ನಗರಸಭೆಯು ಅದಕ್ಕಾಗಿ ಸಿದ್ಧಪಡಿಸಿದ್ದ ಕ್ರಿಯಾ ಯೋಜನೆಯಲ್ಲಿ ಪಂಪ್ ಮೋಟರ್ ಅಳವಡಿಸುವ ಅಂಶವನ್ನೇ ಸೇರಿಸಿರಲಿಲ್ಲ!ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಭಿನ್ನ. ಎಷ್ಟೋ ಹಳ್ಳಿಗಳಲ್ಲಿ ಕೊಳವೆಬಾವಿಗಳನ್ನು ಕೊರೆದು ನೀರು ಸಿಕ್ಕಿದ್ದರೂ ಪಂಪ್-ಮೋಟರ್ ಅಳವಡಿಸಿಲ್ಲ. ಅಳವಡಿಸಿರುವ ಕೆಲವು ಹಳ್ಳಿಗಳಲ್ಲಿ ಪೈಪ್‌ಲೈನ್ ಇಲ್ಲದಿರುವುದರಿಂದ ಜನರಿಗೆ ನೀರು ಹೊರುವ ಕಷ್ಟ ತಪ್ಪಿಲ್ಲ. ನೀರು ಪೂರೈಕೆಯ ಹಳೆಕಾಲದ ಮಾನದಂಡಗಳು ಮತ್ತು ಬರಗಾಲ ಸೃಷ್ಟಿಸಿರುವ ಹೊಸ ಸವಾಲುಗಳಿಗೂ ಹೊಂದಿಕೆಯಾಗುತ್ತಿಲ್ಲ.

ಬರಿದಾಯ್ತು ಮಾವು`ಹಣ್ಣುಗಳ ರಾಜ~ ಮಾವಿಗೆ ಈ ಬಾರಿ ಕಡಿಮೆ ಇಳುವರಿಯ ವರ್ಷ. ರಾಜ್ಯದ್ಲ್ಲಲೇ ಅತ್ಯಂತ ಹೆಚ್ಚು ಮಾವನ್ನು ಬೆಳೆಯುವ ಜಿಲ್ಲೆಯ ಮಾವಿನ ತೋಟಗಳಲ್ಲಿ ಜನವರಿ, ಫೆಬ್ರುವರಿಯಲ್ಲಿ ಭರ್ತಿಯಾಗಿ ಹೂವು ಅರಳಿದ್ದವು. ಇಳುವರಿ ಹೆಚ್ಚಾಗುವ ನಿರೀಕ್ಷೆಯೂ ಇತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಒಂದೇ ತಿಂಗಳ ಅವಧಿಯಲ್ಲಿ ಹೂವುಗಳು ಉದುರಿವೆ. ಮಾವಿನ ಮರಗಳೀಗ ಬೋಳು ಬೋಳು. ಹೂವೂ ಇಲ್ಲ, ಎಲೆಯೂ ಇಲ್ಲ.ಫಸಲು ಬಿಡುವ ಹೊತ್ತಿನ್ಲ್ಲಲಿ ನೂರಾರು ಮಾವಿನ ಮರಗಳು ಭೂಮಿಯಲ್ಲಿನ ತೇವಾಂಶದ ಕೊರತೆಯ ಪರಿಣಾಮವಾಗಿ ಒಣಗಲಾರಂಭಿಸಿವೆ. ಅಷ್ಟೋ ಇಷ್ಟೋ ಹಸಿರುಳಿದು ನೇತಾಡುತ್ತಿದ್ದ ಪೀಚು ಕಾಯಿಗಳು ಬಿಸಿಲ ಬೇಗೆಗೆ ಉದುರಿ ಮಣ್ಣಾಗುತ್ತಿವೆ. ಹಸಿರು ಮೈತುಂಬಿಕೊಂಡಿದ್ದ ಮಾವಿನ ಮರಗಳೂ ಸ್ವಲ್ಪಸ್ವಲ್ಪವಾಗಿ ಒಣಗಲಾರಂಭಿಸಿವೆ. ಕೋಗಿಲೆಗಳಿರಲಿ, ಇತರೆ ಹಕ್ಕಿಗಳೂ ಕಾಣೆ.ಮಾವನ್ನೇ ನೆಚ್ಚಿಕೊಂಡಿದ್ದವರಿಗೆ ಇದು ಕಷ್ಟದ ಕಾಲ. ದುರಂತವೆಂದರೆ ಬಹಳಷ್ಟು ಬೆಳೆಗಾರರಿಗೆ ಪರ್ಯಾಯ ಬೆಳೆಯ ಅವಕಾಶವೇ ಇಲ್ಲ.ಬರದಲ್ಲೂ ಬಾಡದವರು!ಬರಗಾಲದಲ್ಲಿ ಬಾಡುವ ಮಂದಿಯೇ ಹೆಚ್ಚು. ಆದರೆ ಬಾಡದ ಮಂದಿಯೂ ಇದ್ದಾರೆ!

ಕೋಲಾರ ತಾಲ್ಲೂಕಿನ ಪಾರ್ಶ್ವಗಾನಹಳ್ಳಿಯಲ್ಲಿ ಹನಿನೀರಾವರಿ ಪದ್ಧತಿಯಲ್ಲಿ ಕಬ್ಬನ್ನು ಬೆಳೆದಿರುವ ರೈತರಿದ್ದಾರೆ.ಇದೇ ತಾಲ್ಲೂಕಿನ ನೆನಮನಹಳ್ಳಿಯಲ್ಲಿ ಸಾವಯವ ಕೃಷಿಕ ಎನ್. ಆರ್. ಚಂದ್ರಶೇಖರ್ ಅವರ ಪಪ್ಪಾಯ ತೋಟದಲ್ಲಿ ಕ್ವಿಂಟಾಲ್‌ಗಟ್ಟಲೆ ಪಪ್ಪಾಯ ತೂಗುತ್ತಿವೆ. ಮೂರ‌್ನಾಲ್ಕು ವರ್ಷದಿಂದ ಅವರು ಮಳೆಯಾಶ್ರಿತ ಕೃಷಿ ಮಾಡುತ್ತಿದ್ದಾರೆ. ಮಾವಿನ ಸಸಿಗಳಿಗೆ ಅವರು ಬಾಟಲಿಯಲ್ಲಿ ನೀರುಣಿಸುತ್ತಿದ್ದಾರೆ. ಕೃಷಿ ಹೊಂಡ ತೋಡಿಕೊಂಡಿದ್ದಾರೆ.ಶ್ರೀನಿವಾಸಪುರ ತಾಲ್ಲೂಕಿನ ಬಂಡಪಲ್ಲಿಯಲ್ಲಿ ದಿನದ 24 ಗಂಟೆಯೂ ನೀರು ಬರುತ್ತದೆ ಎಂದರೆ ನಂಬಲೇಬೇಕು. ಹಳ್ಳಿಯಲ್ಲಿರುವ ಎರಡು ಕೊಳವೆಬಾವಿಗಳ ನೀರನ್ನು ಟ್ಯಾಂಕಿಗೆ ಹರಿಸಿ ಅಲ್ಲಿಂದ ಬೀದಿನಲ್ಲಿಗಳ ಮೂಲಕ ಪೂರೈಸಲಾಗುತ್ತಿದೆ.

 

ಟ್ಯಾಂಕಿನ ಬುಡದಲ್ಲಿರುವ ನಲ್ಲಿಯಲ್ಲಿ ಸದಾಕಾಲ ನೀರು. ಜಾನುವಾರುಗಳಿಗೂ ಪಕ್ಕದ ಕುಂಟೆ ನೀರು, ಅಲ್ಲಿಯೂ ನೀರು ಒಣಗುವುದಿಲ್ಲ. ಇದು ಹಳ್ಳಿಯವರೆಲ್ಲರೂ ಸೇರಿ ರೂಪಿಸಿಕೊಂಡ ಸಹಕಾರ ತತ್ವದ ವ್ಯವಸ್ಥೆಯ ಪರಿಣಾಮ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.