ಭಾನುವಾರ, ಏಪ್ರಿಲ್ 18, 2021
25 °C

ಬರ: 11 ಗೋಶಾಲೆ ಆರಂಭ, ಮೇವು ವಿತರಣೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ದಿನದಿಂದ ದಿನಕ್ಕೆ ಬರ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜಾನುವಾರುಗಳಿಗೆ ಆಶ್ರಯ ಒದಗಿಸುವ ಉದ್ದೇಶದಿಂದ ಹೊಸದಾಗಿ 11 ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.ನವನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಬರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.ಗೋಶಾಲೆ ಎಲ್ಲೆಲ್ಲಿ

ಜಮಖಂಡಿ ತಾಲ್ಲೂಕಿನ ಗೋಟೆ, ಸಾವಳಗಿ, ಕನ್ನೊಳ್ಳಿ, ಕಲಬೀಳಗಿ. ಹುನಗುಂದ ತಾಲ್ಲೂಕಿನ ಸಿದ್ದನಕೊಳ್ಳ, ಇಲಾಳ. ಬಾಗಲಕೋಟೆ ತಾಲ್ಲೂಕಿನ ರಾಮತಾಳ, ನಾಯನೇಗಲಿ ಹಾಗೂ ಮುಧೋಳ ತಾಲ್ಲೂಕಿನ ಲೋಕಾಪುರ, ಸೈದಾಪುರ ಮತ್ತು  ಬಾದಾಮಿ ತಾಲ್ಲೂಕಿನ ಗುಳೇದಗುಡ್ಡದಲ್ಲಿ ವಾರದೊಳಗೆ ಗೋಶಾಲೆ ತೆರೆಯುವುದಾಗಿ ಹೇಳಿದರು.ಗೋಶಾಲೆಯಲ್ಲಿ ವಾರದಲ್ಲಿ ಎರಡು ದಿನ ಜಾನುವಾರುಗಳಿಗೆ ಹಿಂಡಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಗೋಶಾಲೆ ಯಲ್ಲಿ ಜಾನುವಾರು ಬಿಡದೇ ಮನೆಯಲ್ಲೇ ಸಾಕುವವರಿಗೆ ಮೇವು ಖರೀದಿಗೆ ಶೇ. 50ರಷ್ಟು ಸಹಾಯಧನ ನೀಡಲಾಗುತ್ತದೆ ಹಾಗೂ ಹೊರಗಡೆಯಿಂದ ಮೇವನ್ನು ತರಿಸುವವರಿಗೆ ಸಾರಿಗೆ ವೆಚ್ಚ ನೀಡಲಾಗುತ್ತದೆ ಎಂದರು.ಕುಡಿವ ನೀರು ಪೂರೈಕೆ


ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಇದುವರೆಗೆ ರೂ. 20.25 ಕೋಟಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ರೂ.15.64ಕೋಟಿ ವಿವಿಧ ಕಾಮಗಾರಿಗೆ ಖರ್ಚಾಗಿದೆ. ರೂ. 4 ಕೋಟಿ ಉಳಿದಿದೆ. ಇದೀಗ ನೂತನ ಮುಖ್ಯಮಂತ್ರಿಗಳು ಪ್ರತಿ ತಾಲ್ಲೂಕಿಗೆ ರೂ.1 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ 1550 ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲಾಗಿದೆ. ಅದರಲ್ಲಿ 1225 ಕಾಮಗಾರಿ ಪೂರ್ಣಗೊಂಡಿವೆ. 325 ಕಾಮಗಾರಿ ಆರಂಭವಾಗಬೇಕಿದೆ. ಹಣಕಾಸಿನ ಕೊರತೆ ಇಲ್ಲ ಎಂದರು.180 ಗ್ರಾಮ ಗುರುತು

ಜಿಲ್ಲೆಯಲ್ಲಿ ಬರ ಭೀಕರವಾಗುವ ಸಾಧ್ಯತೆ ಇರುವುದರಿಂದ 180 ಹಳ್ಳಿಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಗುರುತಿಸಲಾಗಿದೆ. ಈ ಸಂಬಂಧ ರೂ.3 ಕೋಟಿ ಮೊತ್ತದ ಕ್ರೀಯಾಯೋಜನೆ ರೂಪಿಸಲಾಗಿದೆ ಎಂದರು.ಬ್ಯಾರೇಜ್ ಎತ್ತರ

ಗಲಗಲಿ ಬ್ಯಾರೇಜ್ ಅನ್ನು ರೂ. 4.25 ಕೋಟಿ ಮೊತ್ತದಲ್ಲಿ ಎರಡು ಮೀಟರ್ ಎತ್ತರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.ರೂ. 126 ಕೋಟಿ ಹಾನಿ

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯಾಗದೇ ಇರುವುದರಿಂದ 26 ಸಾವಿರ ಹೆಕ್ಟೇರ್ ಕಬ್ಬು ಒಣಗಿದೆ. ಜೊತೆಗೆ ವಿವಿಧ ಬೆಳೆಗಳು ಸಹ ನೀರಿಲ್ಲದೇ ಹಾನಿಯಾಗಿದೆ. ಒಟ್ಟಾರೆ ಇದುವರೆಗೆ ರೂ. 126 ಕೋಟಿ ಬೆಳೆ ಹಾನಿ ಸಂಭವಿಸಿದೆ ಎಂದರು.ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿ ಸುತ್ತಿದೆ. ಸೂಕ್ತ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಆರೋಪಿಸಿದರು.ಸೂಚನೆ

ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ, ಸಚಿವ ಮುರುಗೇಶ ನಿರಾಣಿ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಶಾಸಕರಾದ ಶ್ರೀಕಾಂತ ಕುಲಕರ್ಣಿ, ದೊಡ್ಡನಗೌಡ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಸಿರಸಗಿ ನಾಗಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜಿ ಪಾಟೀಲ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

`ಜಾನುವಾರು ಬಿಕರಿ~ ವರದಿಗೆ ಸ್ಪಂದನೆ

ಬಾಗಲಕೋಟೆ: ಬರದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ರೈತರು ತಮ್ಮ ಜಾನುವಾರುಗಳನ್ನು ಸಾಕಲಾಗದೇ, ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಇದೇ 14ರಂದು `ಪ್ರಜಾವಾಣಿ~ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಈ ಸಂಬಂಧ ಸೋಮವಾರ ನಡೆದ ಜಿಲ್ಲಾ ಬರ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ವಾಸ್ತವ ಮಾಹಿತಿ ಪಡೆದುಕೊಂಡರು. ಜಾನುವಾರುಗಳಿಗೆ ಮೇವು-ನೀರಿನ ಕೊರತೆ ಇರುವುದನ್ನು ಮನಗಂಡು ಜಿಲ್ಲೆಯಲ್ಲಿ ಹೊಸದಾಗಿ 11 ಗೋಶಾಲೆ ಆರಂಭಿಸಲು ಸೂಚಿಸಿದರು.ಜಾನುವಾರುಗಳಿಗೆ ನೀಡುವ ಮೇವು ಮತ್ತು ಹಿಂಡಿಯ ಬೆಲೆ ಏರಿಕೆಯಾಗಿರುವುದರಿಂದ ರೈತರಿಗೆ ಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಅಂಶವನ್ನು ಗ್ರಹಿಸಿದ ಸಚಿವರು, ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಮೇವನ್ನು ಮತ್ತು ಮೇವು ಸಾಗಾಟ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಭೆಯಲ್ಲಿ ಪ್ರಕಟಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.