ಗುರುವಾರ , ಮೇ 19, 2022
23 °C

ಬಲರಾಮನ ವಿದಾಯ ಪತ್ರ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಬಲರಾಮನ ವಿದಾಯ ಪತ್ರ

ಮೈಸೂರು: `ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಮೈಸೂರಿನ ಮಹಾಜನರಿಗೆ ಹೃದಯಪೂರ್ವಕ ನಮನಗಳು. ಎರಡು ತಿಂಗಳಿನಿಂದ ಇಲ್ಲಿ ಕಳೆದ ಸಮಯ ನಮಗೆ ಸದಾಕಾಲ ನೆನಪಿನಲ್ಲಿ ಉಳಿಯುವಂತದ್ದು. 401 ವರ್ಷಗಳ ಹಿಂದೆ ಮಹಾರಾಜರು ನಮ್ಮನ್ನು (ಗಜಪಡೆ) ಅತ್ಯಂತ ಪ್ರೀತಿ, ಗೌರವಗಳಿಂದ ದಸರೆಯ ಪ್ರಮುಖ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದರು. ಅವರ ಕಾಲದ ನಂತರ ಪ್ರಜಾಪ್ರಭುತ್ವದಲ್ಲಿ ತಾಯಿ ಚಾಮುಂಡೇಶ್ವರಿಯ ದಿವ್ಯಮೂರ್ತಿಯ ಚಿನ್ನದ ಅಂಬಾರಿಯಲ್ಲಿ ಸವಾರಿ ಮಾಡುವ ಅವಕಾಶ ಕೊಟ್ಟಿದ್ದೀರಿ. ಆ ಮೂಲಕ ಲಕ್ಷಾಂತರ ಹೃದಯಗಳಲ್ಲಿ ನಮ್ಮ ಬಗ್ಗೆ ಭಕ್ತಿ, ಭಾವ, ಗೌರವಗಳು ತುಂಬಲು ಕಾರಣರಾಗಿದ್ದೀರಿ. ನಮ್ಮ (ಆನೆ) ಮತ್ತು ಮಾನವರ ನಡುವಿನ ಸ್ನೇಹ, ವಿಶ್ವಾಸ, ಸಂಬಂಧ ಮತ್ತಷ್ಟು ಗಾಢವಾಗಿ ಬೆಸೆಯಲೂ ಈ ಅವಕಾಶವನ್ನು ಕೊಟ್ಟಿದ್ದೀರಿ.ಜಗತ್ತಿನಲ್ಲಿ ಎಲ್ಲಿಯೂ ನಮಗೆ ಸಿಗದಷ್ಟು ಗೌರವವನ್ನು ಇಲ್ಲಿ ಕೊಟ್ಟಿದ್ದೀರಿ. ಅದಕ್ಕೆ ನಾನು ಮತ್ತು ನನ್ನ ಸಂಗಡಿಗರು ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತೇವೆ. ಏಕದಂತ ಗಣಪತಿಗೆ ಕೊಟ್ಟಷ್ಟೇ ಗೌರವವನ್ನು ನಮಗೂ ತೋರಿಸಿದ್ದೀರಿ. ಆಗಸ್ಟ್ ಎರಡನೇ ವಾರದಲ್ಲಿ ಮೈಸೂರಿಗೆ ಬರುವಾಗ ನಮಗೆ ಸ್ವಲ್ಪ ಅಳುಕು ಇತ್ತು. ಏಕೆಂದರೆ ನಾವು ಬರುವ ಕೆಲವೇ ದಿನಗಳ ಮುನ್ನ ನನ್ನ ಸಂಬಂಧಿಕರಿಬ್ಬರು (ಪುಂಡಾನೆ) ಬಂದು ಈ ಊರಿನಲ್ಲಿ ದಾಂಧಲೆ ಮಾಡಿದ್ದರು. ಒಬ್ಬ ಅಮಾಯಕನ ಪ್ರಾಣವನ್ನೂ ತೆಗೆದಿದ್ದರು. ಅದಕ್ಕೆ ಕ್ಷಮೆಯಿರಲಿ. ಆದರೆ ಇಲ್ಲಿ ಅವರದ್ದಷ್ಟೇ ತಪ್ಪು ಇರಲಿಲ್ಲ ಅಲ್ಲವೇ. ಬ್ರಹ್ಮಾಂಡದಲ್ಲಿ ಅತ್ಯಂತ ಬುದ್ಧಿವಂತ ಜೀವಿಗಳಾದ ಮನುಷ್ಯರದ್ದು ತಪ್ಪು ಇತ್ತು,  ನೀವು ಕಾಡು ಕಡೆದು ನಮ್ಮ ಪಥವನ್ನು ಹಾಳು ಮಾಡಿದ್ದರಿಂದ ದಾರಿ ತಪ್ಪಿ ನಗರಕ್ಕೆ ಬಂದಿದ್ದರು. ಅವುಗಳಿಗೆ ಕಲ್ಲು ತೂರಿ ರೊಚ್ಚಿಗೆ ಎಬ್ಬಿಸಿದ್ದು ಸರಿಯಲ್ಲ. ನಡೆದದ್ದು ನಡೆದು ಹೋಯಿತು. ನೀವೂ ನಮ್ಮನ್ನು ಕ್ಷಮಿಸಿದ್ದೀರಿ. ನಮಗೂ ಬೇಜಾರಿಲ್ಲ.  ಮತ್ತೆ ಇಂತಹ ಘಟನೆಗಳು ಎಲ್ಲಿಯೇ ಆದರೂ ವಿವೇಚನೆ ಮತ್ತು ಸಂಯಮದಿಂದ ನಿರ್ವಹಿಸಿ. ನಮ್ಮ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಿ ಪ್ಲೀಸ್.ಅರಮನೆಯಲ್ಲಿ ಅದ್ದೂರಿ ಆತಿಥ್ಯ ನೀಡಿದ್ದೀರಿ. ನನ್ನ ತಂಡದ ಬಲಶಾಲಿ ಅರ್ಜುನ 470 ಕೆಜಿಯ  ತೂಕ ಮತ್ತು ಉಳಿದವರೂ ದಷ್ಟಪುಷ್ಟರಾಗಿ ತೂಕ ಹೆಚ್ಚಿಸಿಕೊಳ್ಳುವಷ್ಟು ಭೂರಿ ಭೋಜನವನ್ನು ನಮಗೆ ಉಣಬಡಿಸಿದ್ದೀರಿ. ಪಶುವೈದ್ಯಾಧಿಕಾರಿ ನಾಗರಾಜ್, ಅಕ್ರಮ್ ಮತ್ತಿತರ ತಂಡವು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ನಮ್ಮಂದಿಗೆ ಬಂದ ಮಾವುತ, ಕವಾಡಿಗಳ ಕುಟುಂಬಗಳನ್ನೂ ಚೆನ್ನಾಗಿ ನೋಡಿಕೊಂಡಿದ್ದೀರಿ. ಕಳೆದ 13 ವರ್ಷಗಳಿಂದ ಪವಿತ್ರವಾದ ಅಂಬಾರಿಯನ್ನು ಹೊತ್ತು ಸವಾರಿ ಮಾಡುತ್ತಿದ್ದೇನೆ. ನನ್ನ ನಂತರ ಬಂದವರಿಗೂ ಇದೇ ಆದರ ಆತಿಥ್ಯ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ.ಆದರೆ ಇನ್ನೂ ಒಂದು ಬೇಸರದ ಸಂಗತಿ ಈ ಬಾರಿ ನನ್ನ ಗಮನಕ್ಕೆ ಬಂತು. ಜಂಬೂ ಸವಾರಿಯನ್ನು ವೀಕ್ಷಿಸಲು ದೇಶ, ವಿದೇಶಗಳಿಂದ ಜನ ಬರುತ್ತಾರೆ. ಆದರೆ ಅದಕ್ಕಾಗಿ ಮಾಡುವ ವ್ಯವಸ್ಥೆಗಳಲ್ಲಿ ಹಲವಾರು ಲೋಪಗಳು ಈ ಬಾರಿ ಕಂಡವು. ಮೆರವಣಿಗೆಯಲ್ಲಿ ನಾವು ಸಾಗುವ ಹಾದಿಯಲ್ಲಿ ಅಡ್ಡಡ್ಡವಾಗಿ ಜನವೋ ಜನ. ನಮಗೆ ತಿಳಿಯದೇ ಏನಾದರೂ ಅನಾಹುತವಾದರೆ ನಮ್ಮ ಮಾವುತರು ಹಾಗೂ ನಮ್ಮ ಇಡೀ ಗಜಕುಲಕ್ಕೆ ಅವಮಾನ. ಆದ್ದರಿಂದ ಮುಂದಿನ ವರ್ಷದಿಂದಲಾದರೂ ಶಿಸ್ತು ಕಾಪಾಡಿಕೊಂಡರೇ ನಮಗೂ ನೆಮ್ಮದಿ. ನೋಡುವ ಜನರಿಗೂ ಖುಷಿ. ಇದರಿಂದ ಮೈಸೂರು ಮತ್ತು ಭಾರತ ದೇಶಕ್ಕೂ ದೊಡ್ಡ ಗೌರವ ಸಿಗುತ್ತದೆ.ಮೈಸೂರಿನ ಜನ ನಿಜಕ್ಕೂ ಸಹೃದಯರು. ಅವರಿಗೆ ನನ್ನ ಕಾಳಜಿ ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ. ಎರಡು ತಿಂಗಳ ಆತಿಥ್ಯಕ್ಕೆ ಧನ್ಯವಾದಗಳು. ನಾವು ಇವತ್ತು (ಅ. 9) ನಮ್ಮ ಶಿಬಿರಗಳಿಗೆ ಮರಳುತ್ತಿದ್ದೇವೆ. ಮತ್ತೆ ಮುಂದಿನ ದಸರೆಗೆ ಬರುತ್ತೇವೆ. ಐತಿಹಾಸಿಕ ಪರಂಪರೆಗೆ ಕಳೆಕಟ್ಟುತ್ತೇವೆ.

ಧನ್ಯವಾದಗಳೊಂದಿಗೆ.ಇಂತಿ ನಿಮ್ಮವನೇ ಆದ

ಬಲರಾಮ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.