ಭಾನುವಾರ, ಜೂಲೈ 12, 2020
22 °C

ಬಲವಂತದ ಮತಾಂತರ ನಿಷೇಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಲವಂತದ ಮತಾಂತರ ನಿಷೇಧಿಸಿ

ಬೆಂಗಳೂರು: ಬಲವಂತದ ಮತಾಂತರವನ್ನು ನಿಷೇಧಿಸುವಂತೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಸೋಮವಾರ ರಾಜಭವನದಲ್ಲಿ ರಾಜ್ಯಸಭಾ ಸದಸ್ಯ ಡಾ.ರಾಮಾಜೋಯಿಸ್ ಮತ್ತು ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಮಾಡಿತು.ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಾಮಾಜೋಯಿಸ್, ‘ಬಲವಂತದ ಮತಾಂತರದಿಂದ ಕುಟುಂಬ ಹಾಗೂ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಕುಟುಂಬದಲ್ಲಿನ ಒಬ್ಬ ವ್ಯಕ್ತಿ ಮತಾಂತರವಾದರೆ ಇಡೀ ಕುಟುಂಬದಲ್ಲಿ ಅಶಾಂತಿ ನೆಲೆಸುತ್ತದೆ. ಹಾಗೆಯೇ ಗ್ರಾಮದ ಒಂದೆರಡು ಕುಟುಂಬ ಅನ್ಯ ಧರ್ಮ ಸೇರಿದರೆ ಅಲ್ಲಿಯೂ ಗೊಂದಲಗಳು ಉಂಟಾಗುತ್ತವೆ. ಆದ್ದರಿಂದ ಬಲವಂತದ ಮತಾಂತರವನ್ನು ನಿಷೇಧಿಸಬೇಕು’ ಎಂದರು.‘ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ಔಚಿತ್ಯವನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ನ್ಯಾಯಾಲಯ ಸಹ ಕಾನೂನಿಗೆ ಸಮ್ಮತಿ ಸೂಚಿಸಿದೆ’ ಎಂದು ಅವರು ಹೇಳಿದರು.‘ರಾಜ್ಯದೆಲ್ಲೆಡೆ ಮತಾಂತರ ಅವ್ಯಾಹತವಾಗಿ ನಡೆಯುತ್ತಿದೆ. ಬೆಂಗಳೂರಿನ ಮಾರತ್‌ಹಳ್ಳಿ ಸಮೀಪ ಪ್ರಲೋಭನೆಯ ಮತಾಂತರ ಯತ್ನ ನಡೆಸಿದ್ದನ್ನು ಸ್ವತಃ ಗಮನಿಸಿದ್ದೇನೆ. ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಯಿತು’ ಎಂದು ಚಿದಾನಂದಮೂರ್ತಿ ಹೇಳಿದರು.‘ನಾಡಿನ ಸಾಹಿತಿಗಳು, ಚಿಂತಕರು, ಮಠಾಧೀಶರು ಮತ್ತು ವಿವಿಧ ಸಂಘಟನೆಗಳು ಮತಾಂತರ ನಿಷೇಧ ಕಾನೂನು ಜಾರಿಗೆ ತರುವಂತೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದಾರೆ. ಈ ಎಲ್ಲ ಪತ್ರಗಳನ್ನೂ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ರಾಜ್ಯಪಾಲರಿಗೆ ನೀಡಲಾಗಿದೆ’ ಎಂದರು.ವಿಧಾನಪರಿಷತ್ ಸದಸ್ಯ ಪ್ರೊ.ದೊಡ್ಡರಂಗೇಗೌಡ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕವಿ ಡಾ. ಸುಮತೀಂದ್ರನಾಡಿಗ್ ಮತ್ತಿತರರು ನಿಯೋಗದಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.