ಮಂಗಳವಾರ, ಏಪ್ರಿಲ್ 20, 2021
32 °C

ಬಲಿ ಅರಸಿ ಬಂದ ಚಿರತೆ: ಜನತೆ ಚಿಂತೆ

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ವ್ಯಾಪಿಸಿರುವ ಬರಗಾಲ ಸಮಸ್ಯೆ ನಗರಪ್ರದೇಶದ ನಿವಾಸಿಗಳಿಗೆ ಮತ್ತು ಗ್ರಾಮಸ್ಥರಿಗೆ ಮಾತ್ರವಲ್ಲ, ಕಾಡುಪ್ರಾಣಿಗಳಿಗೆ ಮತ್ತು ಜಾನುವಾರುಗಳಿಗೂ ಗಂಭೀರವಾಗಿ ಕಾಡುತ್ತಿದೆ. ಕಾಡಿನ ಸಾಧು ಪ್ರಾಣಿಗಳಾದ ಜಿಂಕೆ, ಮೊಲ ಮುಂತಾದವು ಅತ್ತ ಮೇವು ಹುಡುಕುತ್ತ ಕಾಡಿನಿಂದ ಹೊರ ಹೋಗುತ್ತಿದ್ದರೆ, ಇತ್ತ ಸಾಧುಪ್ರಾಣಿಗಳು ಸಿಗದೆ ಕಾಡುಪ್ರಾಣಿಗಳಾದ ಚಿರತೆ, ಕಾಡುಬೆಕ್ಕು ಮುಂತಾದವು ಗ್ರಾಮಗಳತ್ತ ದಾಳಿಯಿಟ್ಟಿವೆ.ಮೇವಿನ ಕೊರತೆಯಾಗಿರುವ ಕಾರಣ ಗ್ರಾಮಸ್ಥರು ಮೇಯಿಸಲು ದನಕರು ಮತ್ತು ಮೇಕೆಗಳನ್ನು ಕಾಡಿಗೆ ಬಿಡುತ್ತಿದ್ದು, ಅವು ನಿಧಾನವಾಗಿ ಕಾಡುಪ್ರಾಣಿಗಳಿಗೆ ಬಲಿಯಾಗುತ್ತಿವೆ. ಒಟ್ಟಾರೆ ಕಾಡು ಮತ್ತು ಗ್ರಾಮೀಣ ಪರಿಸರ ವಾತಾವರಣದಲ್ಲಿ ಆಹಾರದ ಅಸಮತೋಲನ ಕಾಡುತ್ತಿದೆ.ಉದಾಹರಣೆ ಎಂಬಂತೆ ಸ್ಕಂದಗಿರಿ ಬೆಟ್ಟದಲ್ಲಿನ ಚಿರತೆಯೊಂದು ಗುರುವಾರ ಸಂಜೆ ಸಮೀಪದ ಸುದ್ದಹಳ್ಳಿ ಗ್ರಾಮಕ್ಕೆ ನುಗ್ಗಿ, ಬೆಟ್ಟಕ್ಕೆ ಮೇಯಲು ಬಂದಿದ್ದ ನಾಲ್ಕು ಮೇಕೆ ಮತ್ತು ಕರುವೊಂದನ್ನು ಕೊಂದು ಹಾಕಿದೆ.ಇತ್ತೀಚಿನ ವರ್ಷಗಳಲ್ಲಿ ಎಂದಿಗೂ ಕಾಣಸಿಗದ ಚಿರತೆ ದಾಳಿಯು ಇತ್ತೀಚಿನ ಕೆಲ ದಿನಗಳಿಂದ ಜಾಸ್ತಿಯಾಗಿದ್ದು, ಬೆಟ್ಟದ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಭೀತಿ ಹೆಚ್ಚಿಸಿದೆ. ಕಾಡಿನಲ್ಲಿರಬೇಕಾದ ಪ್ರಾಣಿಗಳು ಗ್ರಾಮಗಳತ್ತ ಬರುತ್ತಿವೆ ಎಂಬ ಆತಂಕ ಒಂದೆಡೆಯಿದ್ದರೆ, ಮತ್ತೊಂದೆಡೆ ಮೇವಿಲ್ಲದೆ ಪರದಾಡುತ್ತಿರುವ ದನಕರು ಮತ್ತು ಮೇಕೆಗಳನ್ನು ಮೇಯಲು ಕಾಡಿಗೆ ಬಿಡುವುದು ಹೇಗೆ ಎಂದು ಗ್ರಾಮಸ್ಥರು ಚಿಂತೆಗೊಳಗಾಗಿದ್ದಾರೆ.ಚಿಕ್ಕಬಳ್ಳಾಪುರ ನಗರಪ್ರದೇಶದಿಂದ ಕೆಲವೇ ಕಿ.ಮೀ.ದೂರದಲ್ಲಿರುವ ಸ್ಕಂದಗಿರಿ ಬೆಟ್ಟದ ಬುಡದಲ್ಲಿರುವ ಸುದ್ದಹಳ್ಳಿ, ಕಳವಾರ, ಮೈಲಪ್ಪನಹಳ್ಳಿ, ಮುದ್ದೇನಹಳ್ಳಿ ಮುಂತಾದ ಗ್ರಾಮಗಳ ಜನರು ಸೌದೆಗಾಗಿ ಬೆಟ್ಟವನ್ನೇ ಅವಲಂಬಿಸಿದ್ದಾರೆ.

 

ದನಕರುಗಳನ್ನು ಮೇಯಿಸಲು ಮತ್ತು ಸೌದೆಗಳನ್ನು ತರಲು ಪ್ರತಿನಿತ್ಯ ಬೆಟ್ಟಕ್ಕೆ ಹೋಗುವ ಜನರು ಈಗ ಅಲ್ಲಿ ಓಡಾಡಲು ಭಯಪಡುತ್ತಿದ್ದಾರೆ. ಆದರೆ ಅನಿವಾರ್ಯ ಕಾರಣದಿಂದ 4 ರಿಂದ 5 ಮಂದಿ ಗುಂಪುಗುಂಪಾಗಿ ಬೆಟ್ಟವನ್ನೇರಿ ಜಾನುವಾರುಗಳನ್ನು ಮೇಯಿಸುವುದರ ಜೊತೆಗೆ ಸೌದೆಯನ್ನು ತರುತ್ತಿದ್ದಾರೆ.`ಸ್ಕಂದಗಿರಿ ಸುತ್ತಮುತ್ತಲ ಕಾಡುಪ್ರದೇಶದಲ್ಲಿ ಚಿರತೆ ಮತ್ತು ಬೇರೆ ಬೇರೆ ಕಾಡುಪ್ರಾಣಿಗಳು ಇರುವುದು ಗೊತ್ತಿತ್ತು. ಆದರೆ ಯಾವತ್ತೂ ನಮ್ಮ ಮೇಲೆ ಅಥವಾ ಹಳ್ಳಿಯ ಮೇಲೆ ದಾಳಿ ಮಾಡುವುದಿಲ್ಲವೆಂದು ಭಾವಿಸಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

 

ಇತ್ತೀಚಿನ ಎರಡು-ಮೂರು ತಿಂಗಳಿಂದ ಚಿರತೆ ಹಾವಳಿ ಹೆಚ್ಚಾಗಿದೆ. ಜಾನುವಾರುಗಳ ಮೇಲೆ ದಾಳಿ ಮಾಡುವುದು ಮತ್ತು ಗಾಯಗೊಳಿಸುವುದು ಸಾಮಾನ್ಯವಾಗಿದೆ. ಜಾನುವಾರುಗಳನ್ನು ಕಳೆದುಕೊಂಡು ನಾವು ಅತಂತ್ರರಾಗುತ್ತಿದ್ದೇವೆ. ಅದೃಷ್ಟವಶಾತ್ ಮನುಷ್ಯರ ಮೇಲೆ ಅಂತಹ ಯಾವುದೇ ರೀತಿಯಲ್ಲೂ ದಾಳಿ ನಡೆದಿಲ್ಲ~ ಎಂದು ಗ್ರಾಮಸ್ಥರು ಹೇಳುತ್ತಾರೆ.ಮೇವಿನ ಕೊರತೆ: `ಮಳೆ ಬಾರದೆ ತುಂಬಾ ಸಮಸ್ಯೆಯಾಗಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಗ್ರಾಮದಲ್ಲಿ ಅಥವಾ ತಾಲ್ಲೂಕಿನಲ್ಲಾಗಲಿ ಮೇವು ಬ್ಯಾಂಕ್ ಸ್ಥಾಪಿಸಿಲ್ಲ. ಬೇರೆ ದಾರಿಗಾಣದೆ ನಾವು ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

 

ಚಿರತೆ ದಾಳಿ ಮಾಡುತ್ತದೆ ಎಂಬ ಭಯವಿದ್ದರೂ ಅಲ್ಲಿ ಮೇವಿಗಾಗಿ ಜಾನುವಾರುಗಳನ್ನು ಬೆಟ್ಟಕ್ಕೆ ಕರೆದೊಯ್ಯಲೇಬೇಕು. ಜಿಂಕೆ, ಮೊಲಗಳು ಸಿಗದೇ ಚಿರತೆ ಮತ್ತು ಕಾಡುಪ್ರಾಣಿಗಳಿಗೆ ನಮ್ಮ ಜಾನುವಾರುಗಳು ಬಲಿಯಾಗುತ್ತಿವೆ~ ಎಂದು ಗ್ರಾಮಸ್ಥರು ಹೇಳಿದರು.ಎರಡು ಚಿರತೆಗಳಿವೆ: `ಸ್ಕಂದಗಿರಿ ಬೆಟ್ಟದಲ್ಲಿ ಅಲ್ಲಲ್ಲಿ ಗವಿಗಳಿವೆ. ಬಂಡೆಗಲ್ಲುಗಳು ಹೆಚ್ಚಿರುವ ಕಾರಣ ಚಿರತೆಗಳು ಗವಿಗಳಲ್ಲಿ ಮತ್ತು ಪೊದೆಗಳಲ್ಲಿ ಅಡಗಿಕೊಂಡಿರುತ್ತವೆ. ಮೇಯಲು ಬರುವ ದನಕರು ಅಥವಾ ಮೇಕೆಗಳನ್ನು ಕಂಡ ಕೂಡಲೇ ದಾಳಿ ಮಾಡಿ, ತಿಂದು ಹಾಕುತ್ತವೆ.ಮೇಯಿಸಿಕೊಂಡು ಮನೆಗೆ ಮರಳಿದಾಗ ಮೇಕೆಗಳ ಲೆಕ್ಕವೇ ಸರಿಯಾಗಿ ಸಿಗುತ್ತಿರಲಿಲ್ಲ. ಮೇಕೆ ಕಳೆದಿರಬಹುದು ಅಥವಾ ಬೇರೆಡೆ ಹೋಗಿರಬಹುದು ಎಂದು ಭಾವಿಸುತ್ತಿದ್ದೆವು.ಆದರೆ ಲೆಕ್ಕ ಸರಿಯಾಗಿ ಸಿಗದಿರುವುದಕ್ಕೆ ಚಿರತೆಯೇ ಕಾರಣ ಎಂಬುವುದು ಇತ್ತೀಚೆಗೆ ಗೊತ್ತಾಯಿತು~ ಎಂದು ಸುದ್ದಹಳ್ಳಿ ಗ್ರಾಮದ ಲಕ್ಷ್ಮಿನಾರಾಯಣ `ಪ್ರಜಾವಾಣಿ~ಗೆ ತಿಳಿಸಿದರು.`ಜಾನುವಾರುಗಳನ್ನು ಮೇಯಿಸಲು ಹೋದವರು ದೊಡ್ಡ ಮತ್ತು ಚಿಕ್ಕ ಚಿರತೆಯನ್ನು ನೋಡಿದ್ದಾರೆ. ಮೇಕೆಗಳ ಮೇಲೆ ದಾಳಿ ನಡೆದಾಗ, ತಮ್ಮ ಪ್ರಾಣ ರಕ್ಷಣೆಗಾಗಿ ಜನರು ಓಡಿಹೋದ ಘಟನೆಗಳೂ ನಡೆದಿವೆ. ಕಾಡಿನಲ್ಲೇ ಸುತ್ತಾಡಿಕೊಂಡು ಇರುತ್ತಿದ್ದ ಚಿರತೆಗಳು ಈಗ ಹಳ್ಳಿಯತ್ತ ಬರತೊಡಗಿದ್ದು, ದನಕರು ಮತ್ತು ಮೇಕೆಗಳನ್ನು ತಿನ್ನುತ್ತಿವೆ.ಒಂದು ವೇಳೆ ಮನುಷ್ಯನ ರುಚಿ ನೋಡಿಬಿಟ್ಟರೆ, ಅವು ಮನುಷ್ಯರನ್ನೂ ಬಿಡುವುದಿಲ್ಲ. ಅದಕ್ಕೂ ಮುನ್ನ ಚಿರತೆಗಳನ್ನು ಸೆರೆ ಹಿಡಿಯಬೇಕು~ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.