ಸೋಮವಾರ, ಏಪ್ರಿಲ್ 19, 2021
32 °C

ಬಳ್ಳಾರಿಯಲ್ಲಿ ಕೂಲಿಗಾಗಿ ಕಾರ್ಮಿಕರ ಪರದಾಟ

ಸಿದ್ದಯ್ಯ ಹಿರೇಮಠ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜುಲೈ ಆರಂಭವಾದರೂ ಜಿಲ್ಲೆಯಾದ್ಯಂತ ಮಳೆಯ ಸುಳಿವಿಲ್ಲ. ಸತತ ಎರಡನೇ ವರ್ಷವೂ ಬರಗಾಲದ ಛಾಯೆ ಆವರಿಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ನಗರದತ್ತ ಕೆಲಸ ಅರಸಿ ನಿತ್ಯವೂ ಕೂಲಿ ಕಾರ್ಮಿಕರ ದಂಡು ಆಗಮಿಸುತ್ತಿದೆ.ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಕೇಳಿಕೊಂಡು ಸುತ್ತಮುತ್ತಲಿನ ಗ್ರಾಮಗಳ ಕೃಷಿ ಕೂಲಿ ಕಾರ್ಮಿಕರು ಬೆಳಿಗ್ಗೆ 7 ಗಂಟೆ ವೇಳೆಗೆಲ್ಲ ಇಲ್ಲಿನ ಕಣೇಕಲ್ ಬಸ್‌ನಿಲ್ದಾಣದ ಬಳಿಯ ಕುಲಮಿ ಬಝಾರ್ ಹಾಗೂ ಕೌಲ್‌ಬಝಾರ್ ಪ್ರದೇಶಕ್ಕೆ ಆಗಮಿಸುತ್ತಿದ್ದು, ಮೇಸ್ತ್ರಿಗಳ ಬಳಿ ಕೆಲಸ ಕೇಳುವ ದೃಶ್ಯ ಸಾಮಾನ್ಯವಾಗಿದೆ.ತಾಲ್ಲೂಕಿನ ಜೋಳದರಾಶಿ, ಕಕ್ಕಬೇವಿನಹಳ್ಳಿ, ಬೆಳಗಲ್, ಕೊಳಗಲ್, ಶ್ರೀಧರಗಡ್ಡೆ, ಕಪಗಲ್ಲು, ಸಿರಿವಾರ, ಮೋಕಾ, ಡಿ.ಗೋನಾಳ್, ಬೆಳಗಲ್ ತಾಂಡಾ, ಆಂಧ್ರಪ್ರದೇಶದ ಓಬಳಾಪುರಂ, ಹಿರೇಹಾಳ್ ಮತ್ತಿತರ ಅನೇಕ ಗ್ರಾಮಗಳ ನೂರಾರು ಕೃಷಿ ಕಾರ್ಮಿಕರು ಊರಲ್ಲಿ ಕೃಷಿ ಕಾರ್ಯ ಇಲ್ಲದ ಕಾರಣ ಕಟ್ಟಡ ನಿರ್ಮಾಣ, ಗಾರೆ ಕೆಲಸ ಮಾಡಲು ನಗರಕ್ಕೆ ಧಾವಿಸುತ್ತಿದ್ದಾರೆ.ಮಹಿಳೆಯರು, ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಬರುತ್ತಿರುವ  ಕಾರ್ಮಿಕರಿಗೆ ನಿತ್ಯವೂ ತಲಾ ರೂ 150 ರಿಂದ ರೂ 220  ಕೂಲಿ ದೊರೆಯುತ್ತಿದೆ.ಕಟ್ಟಡ ನಿರ್ಮಾಣ ಪ್ರಮಾಣ ಕುಸಿತ: ಗಣಿಗಾರಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕಟ್ಟಡ ಕಟ್ಟುವವರ ಪ್ರಮಾಣವೂ ಕಡಿಮೆಯಾಗಿದೆ. ಆದರೆ, ಕೂಲಿಕಾರರು ಮಾತ್ರ ಹೆಚ್ಚು ಹೆಚ್ಚು ದೊರೆಯುತ್ತಿದ್ದಾರೆ. ಸದ್ಯ ಅಗತ್ಯಕ್ಕಿಂತ 2 ಪಟ್ಟು ಜನ ಕೆಲಸ ಕೇಳಿಕೊಂಡು ಬರುತ್ತಿದ್ದಾರೆ ಎಂದು ನಗರದಲ್ಲಿ ಮೇಸ್ತ್ರಿ ಕೆಲಸ ಮಾಡುವ ಹನುಮಂತಪ್ಪ  `ಪ್ರಜಾವಾಣಿ~ಗೆ ತಿಳಿಸಿದರು.`ಬೇಸಿಗೆ ಕಳೆದು ಮುಂಗಾರು ಆರಂಭವಾಗುವ ಜೂನ್, ಜುಲೈಗಳಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಲು ಕಾರ್ಮಿಕರೇ ಸಿಗುತ್ತಿರಲಿಲ್ಲ. ಆದರೆ, ಈಗ ಆ ಸ್ಥಿತಿ ಇಲ್ಲ~ ಎಂದು ಅವರು ಹೇಳಿದರು.~ಮಳೆ ಇಲ್ಲದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿಲ್ಲ. ಕೃಷಿ ಕೂಲಿಯೂ ಇಲ್ಲ. ಹೀಗಾಗಿ ಕಾರ್ಮಿಕರು ಇಲ್ಲಿಗೇ ಬರುತ್ತಿದ್ದಾರೆ. ಮೊದಲು ಎರಡು ಮತ್ತು ಮೂರನೇ ಮಹಡಿಗಳ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದವರು ಈಗ ಎಲ್ಲೆಂದರೆ ಅಲ್ಲಿ ಸೈ ಎನ್ನುತ್ತಿದ್ದಾರೆ. ಒಮ್ಮಮ್ಮೆ ನಮಗೇ ಕೆಲಸವಿರುವುದಿಲ್ಲ, ಹಳ್ಳಿಯಿಂದ ಬರುವವರಿಗೆ ಕೆಲಸ ಕೊಡುವುದಾದರೂ ಹೇಗೆ~ ಎಂದು  ಮೇಸ್ತ್ರಿ ರುದ್ರಣ್ಣ  ಪ್ರಶ್ನಿಸುತ್ತಾರೆ.`ಊರಲ್ಲಿ ಕೆಲಸವೇ ಇಲ್ಲ. ಬಳ್ಳಾರಿಗೆ ಬಂದರೆ ಕೆಲಸ ಸಿಕ್ಕು, ಅವತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಬಹುದು ಎಂದೇ ಬುತ್ತಿ ಕಟ್ಟಿಕೊಂಡು ಇಲ್ಲಿಗೆ ಬರುತ್ತೇವೆ. ಕೆಲವೊಮ್ಮೆ ಕೆಲಸವೇ ಸಿಗುವುದಿಲ್ಲ. ಆಗೊಮ್ಮೆ, ಈಗೊಮ್ಮೆ ಬರುವವರಿಗೆ ಕೆಲಸ ಸಿಗುವುದಿಲ್ಲ~ ಎಂದು ಕೊಳಗಲ್ ಗ್ರಾಮದ ಕಾರ್ಮಿಕ ರಾಮಾಂಜನೇಯ ವಿವರಿಸುತ್ತಾರೆ.

`ನಾವು ಮಳೆ ಸುರಿಯುವವರೆಗೂ ಕೆಲಸ ಕೇಳಿಕೊಂಡು ಇಲ್ಲಿಗೆ ಬರಲೇಬೇಕು. ಇನ್ನೂ ಕೆಲವರು ಈಗಾಗಲೇ ಬೆಂಗಳೂರು, ಮಂಗಳೂರು, ಉಡುಪಿ, ಗೋವಾ ಕಡೆಗೆ ಗುಳೆ ಹೋಗಲೂ ಅಣಿಯಾಗಿದ್ದಾರೆ~ ಎಂದೂ ಅವರು ಹೇಳುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.