ಬುಧವಾರ, ಏಪ್ರಿಲ್ 21, 2021
30 °C

ಬಳ್ಳಾರಿಯಲ್ಲಿ ರೆಡ್ಡಿ ಸೋದರರ ಹಿಡಿತ ಸಡಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಮಾಜಿಸಚಿವ ಜಿ.ಜನಾರ್ದನ ರೆಡ್ಡಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿ ಒಂದು ವರ್ಷ ಪೂರೈಸಲು ಇನ್ನೊಂದು ತಿಂಗಳು ಬಾಕಿ ಉಳಿದಿದ್ದು, ಇದೀಗ ಅವರ ಸೋದರ ಗಾಲಿ ಸೋಮಶೇಖರ ರೆಡ್ಡಿ ಸಹ ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಿಂದ ಸೋಮವಾರ ಬಂಧನಕ್ಕೆ ಒಳಗಾಗಿರುವುದು, ಬಳ್ಳಾರಿ ಜಿಲ್ಲೆಯ ಮೇಲಿನ ರೆಡ್ಡಿ ಸಹೋದರರ ಹಿಡಿತ ಬಹುತೇಕ ಸಡಿಲಗೊಂಡಂತಾಗಿದೆ.ಹೆಚ್ಚು ಕಡಿಮೆ ಒಂದು ದಶಕದ ಅವಧಿಯಲ್ಲಿ ಗಣಿ ಜಿಲ್ಲೆ ಬಳ್ಳಾರಿಯ ರಾಜಕೀಯದಲ್ಲಿ ಪ್ರಭುತ್ವ ಸಾಧಿಸಿ, ಅಧಿಕಾರದ ಸವಿ ಅನುಭವಿಸಿದ್ದ ರೆಡ್ಡಿ ಸಹೋದರರು ಹಾಗೂ ಅವರ ಆಪ್ತ, ಕಂಪ್ಲಿ ಶಾಸಕ ಟಿ.ಎಚ್. ಸುರೇಶಬಾಬು ಅವರಿಗೆ ಅಕ್ರಮ ಗಣಿಗಾರಿಕೆ ಹಾಗೂ `ಜಾಮೀನಿಗಾಗಿ ಲಂಚ~ ಪ್ರಕರಣ ಉರುಳಾಗಿ ಪರಿಣಮಿಸಿದೆ.ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಹೊಸ ಪಕ್ಷ ಸ್ಥಾಪಿಸಿರುವ ಬಿ. ಶ್ರೀರಾಮುಲು ಅವರ ಮುಂದಿನ ನಡೆಗೂ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಸಾಧ್ಯತೆಗಳಿವೆ. ಬಳ್ಳಾರಿ ಮಹಾನಗರ ಪಾಲಿಕೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿ, ಬಹುತೇಕ ಆಡಳಿತವನ್ನು ತಮ್ಮ ಕೈಯಲ್ಲೇ ಇರಿಸಿಕೊಂಡಿದ್ದ ಕೆಎಂಎಫ್ ಅಧ್ಯಕ್ಷ, ಬಳ್ಳಾರಿ ನಗರ ಕ್ಷೇತ್ರದ ಶಾಸಕ ಜಿ.ಸೋಮಶೇಖರರೆಡ್ಡಿ ಅವರ ಬಂಧನದಿಂದಾಗಿ ರೆಡ್ಡಿ ಸಹೋದರರು ನಗರದ ರಾಜಕೀಯದ ಮೇಲೆ ಹೊಂದಿದ್ದ ಪ್ರಾಬಲ್ಯ ಸಾವಕಾಶವಾಗಿ ಕೈಜಾರುತ್ತ ಸಾಗಿರುವುದು ಸ್ಪಷ್ಟವಾಗಿದೆ.ನುಂಗಲಾರದ ತುತ್ತು: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜನಾರ್ದನ ರೆಡ್ಡಿ ಜೈಲು ಪಾಲಾದಾಗಲೂ ಧೃತಿಗೆಡದೆ, `ತಾವೇನೂ ತಪ್ಪು ಮಾಡಿಲ್ಲ. ತಮ್ಮ ಮೇಲಿನ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತ~ ಎಂದೇ ಹೇಳಿಕೆ ನೀಡುತ್ತ ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೇ ಸೆಡ್ಡು ಹೊಡೆದು, ಶ್ರೀರಾಮುಲು ಪರ ಕೆಲಸ ಮಾಡಿ, ಗೆಲುವು ಸಾಧಿಸಿ ಬೀಗಿದ್ದ ಸೋಮಶೇಖರ ರೆಡ್ಡಿ ಬಂಧನ ಅವರ ಹಿಂಬಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಆಂಧ್ರಪ್ರದೇಶದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ)ಯ ಅಕ್ರಮದ ಹಿನ್ನೆಲೆಯಲ್ಲಿ  ಜನಾರ್ದನ ರೆಡ್ಡಿ ಬಂಧನ, ಕರ್ನಾಟಕದಲ್ಲೂ ಅಕ್ರಮ ಎಸಗಿರುವ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ವಿರುದ್ಧ ಸಿಬಿಐ ತನಿಖೆಯಂತಹ ಬೆಳವಣಿಗೆಗಳು ಜಿಲ್ಲೆಯಲ್ಲಿ ರೆಡ್ಡಿ ಸಹೋದರರ ಅಧಿಪತ್ಯಕ್ಕೆ ಕಡಿವಾಣ ಹಾಕಿದ್ದವು.2009ರ ಏಪ್ರಿಲ್‌ನಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿನ ಅಕ್ರಮದ ಆರೋಪದಲ್ಲಿ ಸಂಸದೆ ಜೆ.ಶಾಂತಾ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ನೀಡಿರುವ ಆದೇಶ, ಗಣಿ ಅಕ್ರಮಗಳ ಪಾಲುದಾರ ಮೆಹಫೂಜ್‌ಅಲಿ ಖಾನ್, ಅರಣ್ಯಾಧಿಕಾರಿ ಎಸ್. ಮುತ್ತಯ್ಯ ಬಂಧನ, ಬಳಿಕ ಬಹಿರಂಗಗೊಂಡಿರುವ `ಜಾಮೀನಿಗಾಗಿ ಲಂಚ~ ಪ್ರಕರಣ ರೆಡ್ಡಿ ಸಹೋದರರಿಗೆ ಮಾರಕವಾಗಿ ಪರಿಣಮಿಸಿದೆ.ಇದೀಗ ಸುರೇಶಬಾಬು ಮತ್ತು ಸೋಮಶೇಖರ ರೆಡ್ಡಿ ಬಂಧನದ ಬೆಳವಣಿಗೆಗಳು, ದಿಢೀರ್ ಬೆಳಕಿಗೆ ಬಂದ ರೆಡ್ಡಿ ಸಹೋದರರ `ಬಳ್ಳಾರಿ ರಾಜಕೀಯ~ ಮೇಲಾಟಕ್ಕೆ ಅಂತ್ಯ ಹಾಡಲಿದೆಯೇ ಎಂಬ ಪ್ರಶ್ನೆಗಳು ಸಹಜವಾಗಿಯೇ ಉದ್ಭವವಾಗಲು ಕಾರಣವಾಗಿವೆ.ಜಾಮೀನಿಗಾಗಿ ಲಂಚ ನೀಡಿರುವ ಪ್ರಕರಣದಲ್ಲಿ ಶಾಸಕ ಬಿ.ಶ್ರೀರಾಮುಲು ಅವರ ಪಾತ್ರವೂ ಇದೆ ಎಂಬ ಹೇಳಿಕೆಯನ್ನು ಸ್ವತಃ ಟಿ.ಎಚ್. ಸುರೇಶಬಾಬು ನೀಡಿದ್ದು, ಎಸಿಬಿಯು ಶ್ರೀರಾಮುಲು ವಿರುದ್ಧವೂ ಖೆಡ್ಡಾ ಸಿದ್ಧಪಡಿಸುತ್ತಿದೆ ಎಂಬ ಮಾತಗಳು ಕೇಳಿಬರುವಂತೆ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.