ಮಂಗಳವಾರ, ಜೂನ್ 15, 2021
23 °C

ಬಳ್ಳಾರಿಯಲ್ಲೆಗ ಬೇಸಿಗೆಯ ಚಿತ್ತಾರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಬಳ್ಳಾರಿಗೆ ಬರುವವರಿಗೆ ಬಿಸಿಲಿನದೇ ಭಯ. ಬಿಳಿ ಚರ್ಮವನ್ನು ಸುಟ್ಟು ಕಪ್ಪಾಗಿಸುವ ಸೂರ್ಯನ ಅಬ್ಬರಕ್ಕೆ ಬೆದರಿ, ಬಳಲಿ ಬೆಂಡಾಗುವ ಪರ ಊರುಗಳ ಜನರಿಗೆ ಇಲ್ಲಿ ಬೇಸಿಗೆ ಕಳೆಯುವುದೆಂದರೆ ದುಸ್ತರದ ಸಂಗತಿ.ಆದರೆ, ಪ್ರತಿ ವರ್ಷವೂ ಬಿರು ಬಿಸಿಲನ್ನೇ ಕಾಣುವ ಸ್ಥಳೀಯರು ನೆತ್ತಿ ಸುಡುತ್ತಿದ್ದರೂ, `ಇದ್ಯಾವ ಮಹಾ ಬಿಸಿಲು?~ ಎಂಬಂತೆ ಓಡಾಡಿ ಕೊಂಡಿರುತ್ತಾರೆ.ಚಳಿಗಾಲದಲ್ಲಿ ತುಸು ಹೆಚ್ಚು-ಕಡಿಮೆ ಶೀತ ಗಾಳಿ ಬೀಸಿದರೂ ನಲುಗಿ ಹೋಗುವ ಬಳ್ಳಾರಿಯ ಜನತೆಗೆ ಬಿಸಿಲೆಂದರೇನೇ ಅಪ್ಯಾಯಮಾನ. ಬೆಳ ಗಾಗುತ್ತಲೇ ಸೂರ್ಯನ ಹೊಂಗಿರಣ ಗಳು ಬಲಿಯುತ್ತ ಹೋದಂತೆಲ್ಲ ಒಂದು ರೀತಿಯ ಆನಂದ, ಉತ್ಸಾಹದೊಂದಿಗೆ ಕುಣಿದಾಡುವ ಇಲ್ಲಿನ ಜನರಲ್ಲೂ ಪ್ರಸಕ್ತ ಬೇಸಿಗೆ ನಡುಕ ಹುಟ್ಟಿಸಿದೆ.ಫೆಬ್ರುವರಿ ಮಧ್ಯಭಾಗದಿಂದಲೇ ನೇಸರ ಹೆಚ್ಚಿನ ಪ್ರಮಾಣದಲ್ಲೇ ಉರಿಯ ಲಾರಂಭಿಸಿದ್ದು, ಇದುವರೆಗೂ ರಾಜ್ಯ ದಲ್ಲೇ ಅತ್ಯಧಿಕ ತಾಪಮಾನ ಬಳ್ಳಾರಿ ಯಲ್ಲೇ ದಾಖಲಾಗಿದೆ. ಅಷ್ಟೇ ಅಲ್ಲ, ಬಿಸಿಲಿಗೆ ಹೆಸರಾಗಿರುವ ದೇಶದ ವಿವಿಧೆಡೆ ಇಲ್ಲದಂತಹ ಬಿಸಿಲು ಇಲ್ಲಿ ಕಾಣಿಸಿಕೊಂಡಿದೆ.ಬಿಸಿಲಿಗೆ ಬೆಚ್ಚಿಬಿದ್ದಿರುವ ಸರ್ಕಾರಿ ನೌಕರರಂತೂ ಏಪ್ರಿಲ್ ಬರುವುದನ್ನೇ ಕಾಯುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಏಪ್ರಿಲ್ ಒಂದರಿಂದ ಮೇ 31ರವರೆಗೆ ಪ್ರತಿ ವರ್ಷವೂ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಕೆಲಸದ ಅವಧಿ ಯನ್ನು ನಿಗದಿಪಡಿಸುವುದರಿಂದ ಅವರೆಲ್ಲ ಬೆಳಿಗ್ಗೆಯೇ ಕಚೇರಿಗೆ ಹೋಗಿ ಝಳ ಶುರುವಾಗುವುದರೊಳಗೆ ಮನೆ ಸೇರಿ ಕೊಳ್ಳುವ ತವಕದಲ್ಲಿದ್ದಾರೆ.ಬಿಸಿಲಿಗೆ ಕೊಡೆ ಹಿಡಿಯುವದನ್ನು `ಅವಮಾನ~ ಎಂದು ಪರಿಗಣಿಸುವ ಇಲ್ಲಿನ ಜನ, ಇದೀಗ ತಲೆಗೊಂದು ಟೊಪ್ಪಿ ಹಾಕಿಕೊಂಡೋ ಅಥವಾ ವಸ್ತ್ರ ಸುತ್ತಿಕೊಂಡೇ ಓಡಾಡುತ್ತಿದ್ದು, ದಾಹ ವನ್ನು ತಣಿಸಿಕೊಳ್ಳುವುದಕ್ಕಾಗಿ ತಂಪು ಪಾನೀಯ, ಕಲ್ಲಂಗಡಿ, ಕಬ್ಬಿನಹಾಲು, ಕರಬೂಜು, ಐಸ್‌ಕ್ರೀಮು, ಕೂಲ್ ಡ್ರಿಂಕ್‌ಗಳಿಗೆ ಮೊರೆ ಹೋಗಲಾರಂಭಿ ಸಿದ್ದಾರೆ.ಭರ್ಜರಿ ವ್ಯಾಪಾರ: ಕಲ್ಲಂಗಡಿ, ಕಬ್ಬಿನ ಹಾಲು ಅಥವಾ ತಂಪು ಪಾನೀಯ ಏನೇ ಇರಲಿ ಇಲ್ಲಿ ಮಾತ್ರ ಕನಿಷ್ಠ ರೂ 10 ನೀಡಿಯೇ ಕೊಂಡುಕೊಳ್ಳಬೇಕು. ಅಂತೆಯೇ ಬೇಸಿಗೆ ಸಮೀಪಿಸುತ್ತಿದ್ದಂತೆ ತಮ್ಮ ತಳ್ಳು ಗಾಡಿಗಳಲ್ಲಿ ಹಣ್ಣು, ಕಡಲೆ, ಸೇಂಗಾ, ಕಡ್ಲಿಗಿಡಗಳನ್ನು ಮಾರಾಟ ಮಾಡುತ್ತಿದ್ದವರೆಲ್ಲ `ಬೇಸಿಗೆ ವ್ಯಾಪಾರ~ಕ್ಕೆ ಸನ್ನದ್ಧರಾಗಿಬಿಡುತ್ತಾರೆ.

ಪ್ರತಿ ಬೀದಿಗಳಲ್ಲೂ ಇದೀಗ ಈ ತಂಪು ತಂಪು, ಕೂಲ್ ಕೂಲ್ ಸರಕುಗಳದ್ದೇ ಮಾರಾಟದ ಭರಾಟೆ ಶುರುವಾಗಿದ್ದು, ವ್ಯಾಪಾರವಂತೂ ಭರ್ಜರಿ ಆರಂಭ ಪಡೆದುಕೊಂಡಿದೆ.`ಈಗಷ್ಟೇ ಬೇಸಿಗೆ ಶುರುವಿಟ್ಟು ಕೊಂಡಿದೆ. ಮುಂದಿನ ಎರಡೂವರೆ ತಿಂಗಳು ನಮ್ಮ ವ್ಯಾಪಾರ ಮತ್ತಷ್ಟು ಚಿಗಿತುಕೊಳ್ಳಲಿದ್ದು, ಪ್ರತಿ ಬೇಸಿಗೆ ಯಂತೆಯೇ ಈ ವರ್ಷವೂ ಒಂದಷ್ಟು ಲಾಭ ಕಾಣಬಹುದಾಗಿದೆ~ ಎಂದು ಸಿರುಗುಪ್ಪ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದ ಬಳಿ ಕಲ್ಲಂಗಡಿ ಮಾರಾಟ ಮಾಡುವ ಮೌನೇಶ ಆಶಾಭಾವ ವ್ಯಕ್ತಪಡಿಸುತ್ತಾನೆ.ಈ ಬಾರಿ ಬಿಸಿಲಿನ ಪ್ರಮಾಣ ತುಸು ಜಾಸ್ತಿಯೇ ಇದೆ. ಮನೆಯಿಂದ ಒಂದಷ್ಟು ದೂರ ಹೋಗುವುದರೊಳಗೆ ಹೈರಾಣಾಗುವಂತಾಗಿದೆ. ಈಗಲೇ ಹೀಗೆ, ಇನ್ನು ಏಪ್ರಿಲ್ ಮೇ ತಿಂಗಳಲ್ಲಿ ಹೇಗೋ? ಎಂದು ಅಲ್ಲೇ ಕಲ್ಲಂಗಡಿ ತಿನ್ನುತ್ತಿದ್ದ ಕುರಿಹಟ್ಟಿ ನಿವಾಸಿ ಯಲ್ಲಪ್ಪ ಅವರು `ಪ್ರಜಾವಾಣಿ~ ಎದುರು ಗಾಬರಿ ಯಿಂದಲೇ ಪ್ರತಿಕ್ರಿಯಿಸಿದರು.

`ಚಿಕ್ಕ ಮಕ್ಕಳನ್ನು ಸಂಜೆ 4ಕ್ಕೆ ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗಲೂ ಬಿಸಿಲು ಕಡಿಮೆ ಆಗಿರು ವುದಿಲ್ಲ. ಆಗಲೂ ಬಿಸಿಗಾಳಿ ಬೀಸುತ್ತಲೇ ಇರುತ್ತದೆ. ಪರೀಕ್ಷೆಗಳು ಬೇಗ ಮುಗಿದು ಹೋದರೆ ಮಕ್ಕಳಿಗೆಲ್ಲ ತಾಪತ್ರಯ ಇರುವುದಿಲ್ಲ~ ಎಂದು ಆಟೋ ರಿಕ್ಷಾ ಓಡಿಸುವ ಮೊಹಿಸಿನ್ ಹೇಳುತ್ತಾನೆ.`ಬಿಸಿಲು ಹೆಚ್ಚುತ್ತಿರುವುದರಿಂದ ಈಗಂತೂ ನಾನು ಬೆಳಿಗ್ಗೆ 10ರೊಳಗೇ ಎಲ್ಲ ವ್ಯಾಪಾರ ಮುಗಿಸಿ ಮನೆ ಸೇರಿ ಕೊಳ್ಳುತ್ತೇನೆ. ಬೇಸಿಗೆಯಲ್ಲಿ ತರಕಾರಿ ತುಟ್ಟಿಯಾಗುವುದರಿಂದ ಎರಡು ಮೂರು ತಿಂಗಳ ಮಟ್ಟಿಗೆ ಬೇರೆ ಯಾವು ದಾದರೂ ವ್ಯಾಪಾರ ಮಾಡಿದರಾಯಿತು ಎಂಬ ಆಲೋಚನೆಯಲ್ಲಿದ್ದೇನೆ~ ಎಂದು ಹೇಳುತ್ತಾರೆ ಪಟೇಲನಗರದಲ್ಲಿ ಮನೆ ಮನೆಗೆ ತೆರಳಿ ತರಕಾರಿ ಮಾರುವ ಸರೋಜಮ್ಮ.ಕಕ್ಕಬೇವಿನಹಳ್ಳಿ, ಬೇವಿನಹಳ್ಳಿ, ಅಮರಾಪುರ, ಹಗರಿ ಮತ್ತಿತರ ಭಾಗಗಳಿಂದ ನಿತ್ಯವೂ ಹಾಲು ಮಾರಾಟ ಮಾಡಲು ಬರುತ್ತಿದ್ದ ಕೆಲವು ವೃದ್ಧೆ ಯರು ಈಗ ತಮ್ಮ ಬ್ರಾಂಡ್ ಬದಲಾಯಿಸಿದ್ದು, ಅದರಿಂದಲೇ ಅವರ ವ್ಯಾಪಾರ ಕುದುರಿದೆ.ಬಿಸಿಲಲ್ಲಿ ಮೊಸರು, ಮಜ್ಜಿಗೆಗೆ ಬೇಡಿಕೆ ಹೆಚ್ಚಿರುವುದರಿಂದ ಹಾಲು ಮಾರಾಟ ಮಾಡುವ ಬದಲು ಇದೀಗ ಮೊಸರು ಮಾಡಿ, ಬೆಣ್ಣೆ ಕಡಿದು, ಮಜ್ಜಿಗೆಯನ್ನೇ ಬಳ್ಳಾರಿಯವರೆಗೆ ಹೊತ್ತು ತಂದು ಮಾರುತ್ತಿರುವುದಾಗಿ ಮಾರೆಮ್ಮ, ಓಂಕಾಳಮ್ಮ ಹೇಳುತ್ತಾರೆ.ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ವರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಒಂದಷ್ಟು ನೆರಳನ್ನು ಸೃಷ್ಟಿಸಿಕೊಂಡು ನೆತ್ತಿ ಸುಡದಂತೆ ನೋಡಿಕೊಳ್ಳುತ್ತಿದ್ದಾರೆ.ಅಂತೂ ಬಿರುಬಿಸಿಲಿನ ಬಳ್ಳಾರಿಯಲ್ಲಿ ಬೇಸಿಗೆಯನ್ನೂ ನೋಡಿ, ಅನುಭವಿಸು ವುದೂ ಒಂದು ವಿಶಿಷ್ಟ ಅನುಭವವೇ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.