ಬುಧವಾರ, ಮೇ 18, 2022
24 °C

ಬಸವಣ್ಣನ ಆದರ್ಶದ ಅನುಷ್ಠಾನ ಆಗುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಣ್ಣನ ಆದರ್ಶದ ಅನುಷ್ಠಾನ ಆಗುತ್ತಿಲ್ಲ

ಬೆಂಗಳೂರು: `ಬಸವಣ್ಣನ ಆದರ್ಶ, ತತ್ವ ಸಿದ್ಧಾಂತಗಳ ಆಚರಣೆಯು ಇಂದು ನಾಟಕೀಯವಾಗಿದೆ. ಅವುಗಳ ನಿಜವಾದ ಅನುಷ್ಠಾನ ಯಾರಿಂದಲೂ ಆಗಿಲ್ಲ~ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.ಕನ್ನಡ ಅಭಿವೃದ್ಧಿ ಬಳಗವು ಸೋಮವಾರ ಕನ್ನಡಭವನದಲ್ಲಿ ಏರ್ಪಡಿಸಿದ್ದ ಅಣ್ಣ ಬಸವಣ್ಣ-ಅಣ್ಣ ರಾಜಣ್ಣನವರ ಜಯಂತ್ಯುತ್ಸವದ ಅಂಗವಾಗಿ `ಅಣ್ಣನಿಗೆ ನುಡಿ ನಮನ ಮತ್ತು ಜಗಜ್ಯೋತಿ ಬಸವೇಶ್ವರ ರಾಷ್ಟ್ರೀಯ ಸೇವಾ ಪುರಸ್ಕಾರ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಬಸವಣ್ಣ ಮತ್ತು ಡಾ. ರಾಜ್‌ರ ಜಯಂತಿಯನ್ನು ವರ್ಷಕ್ಕೆ ಒಂದು ಬಾರಿ ಮಾಡಬೇಕೆಂಬ ಯೋಚನೆಯಿಂದ ಮಾಡಲಾಗುತ್ತಿದೆ. ಬರೀ ಕೇವಲ ತೋರಿಕೆಗಾಗಿ ಮಾತ್ರ. ಅವರ ತತ್ವ ಸಿದ್ಧಾಂತಗಳ ಅನುಷ್ಠಾನ ಸರಿಯಾಗಿ ಆಗಬೇಕು~ ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಅವರು ಮಾತನಾಡಿ, `ರಾಷ್ಟ್ರದಲ್ಲಿ ಏಕನೀತಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಆಯಾ ರಾಜ್ಯದ ಮಾತೃಭಾಷೆಯಲ್ಲಿ ಕಲಿಸಬೇಕು. ನಂತರ ಇಂಗ್ಲಿಷನ್ನು ಕಲಿಸಬಹುದು. ಏಕೆಂದರೆ, ಇಂದಿನ ಪರಿಸ್ಥಿತಿಯಲ್ಲಿ ಯಾವುದು ಬೇಡ ಎನ್ನುವ ಪರಿಸ್ಥಿತಿಯಲ್ಲಿ ನಾವಿಲ್ಲ~ ಎಂದರು.`ಸರ್ಕಾರ ಯಾವುದೇ ಯೋಜನೆಯನ್ನು ಜಾರಿಗೆ ತಂದರೂ ಅದಕ್ಕೆ ಒಳ್ಳೆಯ ಉದ್ದೇಶವಿರುತ್ತದೆ. ಆದರೆ, ಕಡ್ಡಾಯ ಇಂಗ್ಲಿಷ್ ಶಿಕ್ಷಣ ನೀತಿಯನ್ನು ಕುರಿತಾಗಿ ಶಿಕ್ಷಣ ತಜ್ಞರು, ಪೋಷಕರು, ಸಾಹಿತಿಗಳ ಜತೆ ಚರ್ಚೆ ಮಾಡಿ ಜಾರಿಗೊಳಿಸಿದರೆ ಎಲ್ಲೂ ಗೊಂದಲದ ವಾತಾವರಣ ನಿರ್ಮಾಣವಾಗುವುದಿಲ್ಲ~ ಎಂದರು.`ಸರ್ಕಾರದ ಈ ತರಹದ ಗೊಂದಲದ ನೀತಿಗಳಿಂದ ಪ್ರಾದೇಶಿಕ ಭಾಷೆಗಳು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಸರ್ಕಾರ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಬೇಕು~ ಎಂದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಅವರಿಗೆ ಶ್ರೀ ಜಗಜ್ಯೋತಿ ಬಸವೇಶ್ವರ ರಾಷ್ಟ್ರೀಯ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಿ.ಬಿ.ಶಿವಪ್ಪ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.