ಬುಧವಾರ, ಮೇ 12, 2021
19 °C

ಬಸವಪೀಠದ ಗೋಡೆಯಲ್ಲಿ ಮ್ಯೂರಲ್ ಚಿತ್ತಾರ

ಮನೋಜ್‌ಕುಮಾರ್ ಗುದ್ದಿ/ಚಿತ್ರಗಳು: ಬಿ.ಎಂ.ಕೇದಾರನಾಥ Updated:

ಅಕ್ಷರ ಗಾತ್ರ : | |

ಕರ್ನಾಟಕ ವಿಶ್ವವಿದ್ಯಾಲಯದ ಬಸವಪೀಠದಲ್ಲಿ 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಬಗೆಗೆ ಬಿಡಿಸಲಾದ ಮ್ಯೂರಲ್ ಕಲೆ ಇದೀಗ ಗಮನ ಸೆಳೆಯುತ್ತಿದೆ.ವಿವಿಧ ವೃತ್ತಿಗಳನ್ನು ಮಾಡುತ್ತಿದ್ದವರು ಬಸವಣ್ಣನವರ ಪ್ರಭಾವದಿಂದ ಶರಣರಾದ ಬಗೆ, ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಅನುಭವ ಮಂಟಪ, ಅಕ್ಕಮಹಾದೇವಿ ಸಭೆಯಲ್ಲಿ ಮಾತನಾಡುವ ಚಿತ್ರ, ತಮ್ಮ ಮಕ್ಕಳನ್ನು ಅಂತರ್ಜಾತಿ ವಿವಾಹ ಮಾಡಿಕೊಟ್ಟ ಬ್ರಾಹ್ಮಣ ಮಧುವರಸ ಹಾಗೂ ಅಸ್ಪೃಶ್ಯ ಹರಳಯ್ಯನವರನ್ನು ಆನೆಯ ಕಾಲಿಗೆ ಕಟ್ಟಿ `ಎಳೆಹೂಟೆ'ಯಿಂದ ಎಳೆಯುವ ಚಿತ್ರಗಳು ಕಲ್ಯಾಣದ ಚಿತ್ರಣವನ್ನು ನಮ್ಮ ಕಣ್ಣ ಮುಂದೆ ಕಟ್ಟಿಕೊಡುತ್ತವೆ. ಮ್ಯೂರಲ್‌ಗಳನ್ನು 12/7 ಅಡಿ ಗಾತ್ರದಲ್ಲಿ ರಚಿಸಲಾಗಿದೆ.ನಗರದ ಚಿತ್ತಾರ ಕಲಾಬಳಗದ ಹಿರಿಯ ಕಲಾವಿದ ಬಿ.ಮಾರುತಿ ಅವರ ನೇತೃತ್ವದಲ್ಲಿ ಅಮೃತಸಿಂಗ್ ಹಾಗೂ ಸುನಿಲ್ ಅವರು ಸುದೀರ್ಘ ಮೂರು ತಿಂಗಳ ಅವಧಿಯನ್ನು ತೆಗೆದುಕೊಂಡು ಈ ಮ್ಯೂರಲ್‌ಗಳನ್ನು ಅಂದವಾಗಿ ಕೆತ್ತಿದ್ದಾರೆ.ಫೈಬರ್, ರೆಗ್ಜಿನ್ ಮತ್ತಿತರ ವಸ್ತುಗಳಿಂದ ಒಟ್ಟು ನಾಲ್ಕು ಮ್ಯೂರಲ್‌ಗಳನ್ನು ಕೆತ್ತಲಾಗಿದ್ದು, ಇದೀಗ ಬಸವಪೀಠದ ಒಳಭಾಗದ ಗೋಡೆಯಲ್ಲಿ ಅಳವಡಿಸಲಾಗಿದೆ. ಮಧ್ಯಭಾಗದಲ್ಲಿ ಬಸವೇಶ್ವರ ಪ್ರತಿಮೆ ಇದೆ. ಬಸವಪೀಠದ ಮುಖ್ಯಸ್ಥ, ಕರ್ನಾಟಕ ವಿ.ವಿ. ಕನ್ನಡ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರ ಅವರೊಂದಿಗೆ ಚರ್ಚಿಸಿ ಇವುಗಳನ್ನು ಸಿದ್ಧಪಡಿಸಲಾಗಿದೆ. ಬಹಳ ಬಾಳಿಕೆ ಬರುವ ಇವುಗಳಿಗೆ ತಲಾ 1.20 ಲಕ್ಷ ರೂಪಾಯಿ ವೆಚ್ಚ ತಗುಲಿದೆ ಎಂದು ಬಿ.ಮಾರುತಿ ವಿವರಿಸಿದರು.ಈ ಮ್ಯೂರಲ್‌ಗಳ ಅವಶ್ಯಕತೆಯನ್ನು ಒತ್ತಿ ಹೇಳಿದ ಡಾ.ವೀರಣ್ಣ ರಾಜೂರ, `ಮುರುಗೋಡ ಮಹಾಂತ ಸ್ವಾಮಿಗಳಿಗೆ 100 ವರ್ಷ ತುಂಬಿದ ಪ್ರಯುಕ್ತ ಶತಮಾನೋತ್ಸವ ಆಚರಿಸಲೆಂದು ಕೂಡಿಸಲಾದ ಹಣದಲ್ಲೇ ಎರಡು ಲಕ್ಷ ಹಣವನ್ನು ಬಳಸಿ ಕರ್ನಾಟಕ ವಿ.ವಿ.ಯಲ್ಲಿ ಬಸವೇಶ್ವರ ದತ್ತಿ ಪೀಠ ಆರಂಭಿಸಲಾಯಿತು. ಅದಕ್ಕೆ ಇನ್ನೂ ಒಂದು ಲಕ್ಷ ಸೇರಿಸಿ 1970ರಲ್ಲಿ ಮೊಟ್ಟಮೊದಲ ಪೀಠವಾಗಿ ಕವಿವಿ ಆವರಣದಲ್ಲಿ ಬಸವೇಶ್ವರ ಪೀಠ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಮೊತ್ತದಿಂದ ಬಂದ ಬಡ್ಡಿ ಹಣದಲ್ಲೇ ಬಸವಣ್ಣನವರ ತತ್ವ ಪ್ರಸಾರ ಮಾಡುವ ಉದ್ದೇಶದಿಂದ ಮೂರು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ. ಇದಲ್ಲದೇ, ಪೀಠ ನೋಡಲು ಬಂದವರಿಗೆ ಬಸವಣ್ಣನವರ ಬದುಕು ಸಾಧನೆ ತಿಳಿಯಲಿ ಎಂಬ ಉದ್ದೇಶದಿಂದ ಈ ಮ್ಯೂರಲ್‌ಗಳನ್ನು ಅಳವಡಿಸಲಾಗಿದೆ. ಇದಲ್ಲದೇ, ಪೀಠದ ಆವರಣದಲ್ಲಿ ಮ್ಯೂಸಿಯಂ ಮಾಡುವ ಅಪೇಕ್ಷೆ ಇದೆ. ಶಿಗ್ಗಾವಿ ಬಳಿಯ ಗೋಟಗೋಡಿಯ ರಾಕ್ ಗಾರ್ಡನ್ ಮಾದರಿಯಲ್ಲಿ ಶಿವಶರಣರ ಜೀವನದ ಒಂದೊಂದು ಘಟನೆಗಳನ್ನು ಕೆತ್ತಿಸಿ ಪೀಠದ ಆವರಣದಲ್ಲಿ ಪ್ರದರ್ಶಿಸುವ ಯೋಜನೆ ಇದೆ. ಅದಕ್ಕೆಂದೇ ವಿ.ವಿ. 10 ಲಕ್ಷ ಅನುದಾನ ನೀಡಿದ್ದು, ಅದರ ಮೊದಲ ಕಂತಾಗಿ ಐದು ಲಕ್ಷ ರೂಪಾಯಿ ಬಂದಿದೆ' ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.