ಶನಿವಾರ, ಮೇ 15, 2021
25 °C

ಬಸ್‌ನಿಲ್ದಾಣ ಕಾಮಗಾರಿ ಚುರುಕಿಗೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಹೈಟೆಕ್ ಬಸ್‌ನಿಲ್ದಾಣ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಶಾಸಕ ವೆಂಕಟರಾವ್ ನಾಡಗೌಡ ದೂರವಾಣಿ ಮೂಲಕ ತಾಕೀತು ಮಾಡಿದರು.ಬಸ್‌ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಮೇಲಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ಕಾಮಗಾರಿ ಬಹಳಷ್ಟು ವಿಳಂಬವಾಗಿತ್ತು. ಕೆಲ ತಿಂಗಳ ಹಿಂದೆ ಅದೇ ಅಧಿಕಾರಿಗಳು ನಿಗದಿತ ಕಾಲವನ್ನು ಕೇಳಿ ಅಷ್ಟರೊಳಗೆ ಕಾಮಗಾರಿ ಮುಗಿಸಿಕೊಡುವ ಭರವಸೆಯನ್ನೂ ನೀಡಿದ್ದರು. ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಕ್ರಮದ ಭರವಸೆ: ಬಸ್‌ನಿಲ್ದಾಣಕ್ಕೆ ಚರಂಡಿ ನೀರು ನುಗ್ಗಿ ದುರ್ವಾಸನೆ ಬೀರುತ್ತಿದೆ. ಇದರಿಂದ ಕಾಮಗಾರಿಗೆ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ನುಡಿದರು. ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಚರಂಡಿ ನೀರು ಒಳಗೆ ನುಗ್ಗದಂತೆ ಕ್ರಮಕೈಗೊಳ್ಳುವುದಾಗಿ ನಾಡಗೌಡ ಭರವಸೆ ನೀಡಿದರು.ಕಾರ್ಯನಿರ್ವಾಹಕ ಅಭಿಯಂತರ ಇಬ್ರಾಹಿಂಸಾಬ, ಇಲಾಖೆಯ ಅಧಿಕಾರಿ ಜಗನ್ನಾಥ, ಗುತ್ತಿಗೆದಾರರಾದ ರಂಗನಾಥ ದೇಸಾಯಿ, ಶ್ರೀನಿವಾಸ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ನಾಡಗೌಡ, ಎಪಿಎಂಸಿ ನಿರ್ದೇಶಕ ಲಿಂಗರಾಜ ಪಾಟೀಲ್, ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ ವೆಂಕೋಬ ಜಿನ್ನದ್, ಜೆಡಿಎಸ್ ರೈತಮೋರ್ಚಾ ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ಮಾವಿನಮಡು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಂಪಾರೆಡ್ಡಿ, ಜೆಡಿಸ್ ನಗರ ಘಟಕದ ಅಧ್ಯಕ್ಷ ಶಬ್ಬೀರ ಹುಸೇನ, ಯುವಮುಖಂಡರಾದ ಅಭಿಷೇಕ ನಾಡಗೌಡ, ಹನುಮನಗೌಡ, ಬಾಬಾಸಾಬ, ಸಂಗಮೇಶ ನಾಡಗೌಡ, ಅಮರೇಶ, ಮಹಿಬೂಬ ಮತ್ತಿತರರು ಇದ್ದರು.ನಂತರ ತಹಶೀಲ್ದಾರ್ ಕಚೇರಿಯ ಹಿಂದೆ ಆರಂಭಗೊಂಡಿರುವ ಮಿನಿವಿಧಾನಸೌಧ ಸೇರಿದಂತೆ ರಂಗಮಂಟಪ, ಕುಡಿಯುವ ನೀರಿನ ಕೆರೆ ಕಾಮಗಾರಿಗಳನ್ನು ವೀಕ್ಷಿಸಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.