ಶುಕ್ರವಾರ, ಮೇ 20, 2022
26 °C

ಬಸ್ ಉರುಳಿ ಏಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಧರ್ಮಸ್ಥಳ ಸಾರಿಗೆ ಘಟಕಕ್ಕೆ ಸೇರಿದ ಬಸ್ಸೊಂದು ಸುಮಾರು 40 ಅಡಿ ಆಳಕ್ಕೆ ಉರುಳಿ ಬಸ್‌ನ ನಿರ್ವಾಹಕ, ಮಗು, ಒಬ್ಬ ಮಹಿಳೆ ಸೇರಿದಂತೆ ಏಳು ಜನ ಮೃತಪಟ್ಟು, 15 ಮಂದಿ ಗಂಭೀರ ಗಾಯಗೊಂಡ ಘಟನೆ ಕುಮಟಾ ತಾಲ್ಲೂಕಿನ ಹರಕಡೆ ಕ್ರಾಸ್ ಸಮೀಪ ರಾ.ಹೆ.17ರಲ್ಲಿ ಸೋಮವಾರ ರಾತ್ರಿ 8.45ರ ಸುಮಾರಿಗೆ ನಡೆದಿದೆ.ಮೃತಪಟ್ಟವರನ್ನು ನಿರ್ವಾಹಕ ರಾಮಪ್ರಸಾದ ತಳವಾರ  (37), ಶಿರಸಿಯ ಅಶೋಕ ರೇವಣಕರ್, ಶೋಭಾ ಶಾಸ್ತ್ರಿ, ಹಾವೇರಿಯ ಮೃತ್ಯುಂಜಯ ಹೆಬ್ಬಾಳ, ಭಟ್ಕಳದ ನಾಗರಾಜ್ ನಾಯ್ಕ, ಈತನ ಪುತ್ರಿ ಒಂದು ವರ್ಷ ಎಂಟು ತಿಂಗಳ ಮಗು ರಕ್ಷಿತಾ ನಾಯ್ಕ ಮತ್ತು ಹೊನ್ನಾವರ ತಾಲ್ಲೂಕು ಸಂಶಿಯ ರಸೂಲ್ ಖಾಸಿಂ ಖಾನ್ ಎಂದು ಗುರುತಿಸಲಾಗಿದೆ.ಧರ್ಮಸ್ಥಳ ಘಟಕಕ್ಕೆ ಸೇರಿದ ಈ ಬಸ್ಸು ಬಾಗಲಕೋಟೆಗೆ ಹೊರಟಿತ್ತು. ಒಟ್ಟು 35 ಜನರ ಪ್ರಯಾಣಿಕರು ಬಸ್‌ನಲ್ಲಿದ್ದರು.ಜಿಟಿಜಿಟಿ ಮಳೆ ಬೀಳುತ್ತಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ 40 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಉಂಟಾದ ದೊಡ್ಡ ಶಬ್ದ ಕೇಳಿದ ಜನರು ಸ್ಥಳಕ್ಕೆ ಓಡಿ ಬಂದು ಪ್ರಯಾಣಿಕರ ರಕ್ಷಣೆಗೆ ಮುಂದಾದರು.  ಸ್ಥಳೀಯರೊಂದಿಗೆ ಪೊಲೀಸರು, ಮತ್ತು ಕುಮಟಾ ಸಾರಿಗೆ ಸಂಸ್ಥೆ ಸಿಬ್ಬಂದಿ  ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.ಮಳೆ ಸುರಿಯುತ್ತಿದ್ದರಿಂದ ಸ್ಥಳದಲ್ಲಿ ಕೆಸರಿದ್ದು, ರಕ್ಷಣಾ ಕಾರ್ಯಕ್ಕೂ ಅಡಚಣೆಯಾಗಿದೆ. ಕ್ರೇನ್ ಬಳಸಿ ಬಸ್ ಮೇಲೆತ್ತುವ ಕಾರ್ಯ ಮಧ್ಯರಾತ್ರಿ ವರೆಗೂ ನಡೆಯುತ್ತಿತ್ತು. ಘಟನಾ ಸ್ಥಳಕ್ಕೆ ಜನರು ಗುಂಪುಗುಂಪಾಗಿ ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.