ಬುಧವಾರ, ಮೇ 12, 2021
23 °C

ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಪಟ್ಟಣದಲ್ಲಿ ಸಿಪಿಎಂ ಕಾರ್ಯಕರ್ತರು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸೋಮವಾರ ರಸ್ತೆ ತಡೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಈ ಸಂದರ್ಭದಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯುವಲ್ಲಿ ವಿಫಲವಾಗಿವೆ. ಆಳುವ ಮಂದಿಗೆ ಬಡವರ ಪರ ಕಾಳಜಿ ಇಲ್ಲ ಎಂದು ಆಪಾದಿಸಿದರು.ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುವುದರ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆದಿದೆ. ಈಗ ತೈಲೋತ್ಪನ್ನಗಳನ್ನು ಕೇವಲ ಶ್ರೀಮಂತರು ಮಾತ್ರ ಬಳಸುತ್ತಿಲ್ಲ. ಸಮಾಜದ ಎಲ್ಲ ವರ್ಗದ ಜನರೂ ಬಳಸುತ್ತಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಗೆ ಬೆಂಬಲ ವ್ಯಕ್ತಪಡಿಸಿ ಬಸ್ ಪ್ರಯಾಣ ದರ ಹೆಚ್ಚಿಸುವುದರ ಮೂಲಕ ತನ್ನ ಜನ ವಿರೋಧಿ ಮುಖವಾಡವನ್ನು ಬಯಲು ಮಾಡಿದೆ ಎಂದು ಹೇಳಿದರು.ಹಾಲು, ಹಣ್ಣು ,ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೂಲಿ ನಾಲಿ ಮಾಡಿ ಬದುಕುವ ಜನರ ಜೀವನ ಅಲ್ಲೋಲ ಕಲ್ಲೋಲವಾಗಿದೆ. ಇನ್ನು ಮಧ್ಯಮ ವರ್ಗದ ಜನರ ಬದುಕು ಇನ್ನಷ್ಟು ಸೊರಗಿದೆ. ಇದಕ್ಕೆ ಸರ್ಕಾರದ ಜನವಿರೋಧಿ ನೀತಿ ಕಾರಣವಾಗಿದೆ. ಸರ್ಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಸಮಾಜದ ಎಲ್ಲ ವರ್ಗದ ಜನರೂ ಬದುಕುವಂಥ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.ರಾಜ್ಯ ಸರ್ಕಾರ ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಸಮಗ್ರ ಆಹಾರ ಪದ್ಧತಿ ನೀತಿ ಜಾರಿಗೆ ತರಬೇಕು. ಇಲ್ಲವಾದರೆ ತಮ್ಮ ಸಂಘಟನೆ ತೀವ್ರ ಪ್ರತಿಭಟನೆ ನಡೆಸುವುದು ಎಂದು ಎಚ್ಚರಿಸಿದರು.ಮುಖಂಡರಾದ ಪಿ.ಆರ್.ನವೀನ್ ಕುಮಾರ್, ವೀರಪ್ಪರೆಡ್ಡಿ,  ಜಿ.ಈಶ್ವರಮ್ಮ, ನಾಗಭೂಷಣ್, ವಿಜಯಲಕ್ಷ್ಮಿ, ಎಂ.ಜಯಮ್ಮ, ವಿ.ಆನಂದ್ ಪ್ರತಿಭಟನೆ ಇತರರು ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.