ಬುಧವಾರ, ಮೇ 12, 2021
19 °C
ನಾಲ್ಕೂ ಸಾರಿಗೆ ನಿಗಮದ ದರ ಏರಿಕೆ, ಶೇ 10.50 ಹೆಚ್ಚಳ

ಬಸ್ ಪ್ರಯಾಣ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡೀಸೆಲ್ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳದ ಕಾರಣ ನೀಡಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ `ಬೆಲೆ ಏರಿಕೆ'ಯ ಬರೆ ಎಳೆಯಲಾಗಿದೆ. ಪರಿಷ್ಕೃತ ದರ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.ಇದರಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಸರಾಸರಿ ಶೇ 10.50ರಷ್ಟು ದುಬಾರಿಯಾಗಿವೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಾಮಾನ್ಯ ಬಸ್‌ಗಳ ಪ್ರಯಾಣ ದರದಲ್ಲಿ ಶೇ 16ರಷ್ಟು ಹೆಚ್ಚಳ ಮಾಡಲಾಗಿದೆ.ಡೀಸೆಲ್ ದರ ಏರಿಕೆ, ಸಿಬ್ಬಂದಿಯ ವೇತನ ಹೆಚ್ಚಳ ಮತ್ತಿತರ ವೆಚ್ಚ ಸರಿದೂಗಿಸಲು ಪ್ರಯಾಣ ದರ ಏರಿಕೆಗೆ ಅನುಮತಿ ಕೊಡುವಂತೆ ನಾಲ್ಕೂ ನಿಗಮಗಳು ಆರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ಆದರೆ ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಬಳಿಕ ಚುನಾವಣಾ ಸಮಯದಲ್ಲೂ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡುವಂತೆ ಪುನಃ ಪ್ರಸ್ತಾವ ಸಲ್ಲಿಸಿದ್ದವು. ಆದರೆ ರಾಜಕೀಯವಾಗಿ  ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಅಂದಿನ ಬಿಜೆಪಿ ಸರ್ಕಾರ ದರ ಏರಿಕೆಗೆ ಸಮ್ಮತಿಸಿರಲಿಲ್ಲ. ಇದೀಗ ಪ್ರಯಾಣದರ ಏರಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಅಂಕಿತ ಹಾಕಿದ್ದಾರೆ.`ಕೇಂದ್ರ ಸರ್ಕಾರ ಆರು ತಿಂಗಳಲ್ಲಿ ಡೀಸೆಲ್ ದರವನ್ನು ಐದು ಬಾರಿ ಏರಿಸಿದೆ. ಇಂಧನ ದರ ಪರಿಷ್ಕರಣೆಯಿಂದ ಕೆಎಸ್‌ಆರ್‌ಟಿಸಿಯೊಂದಕ್ಕೇ ಪ್ರತಿ ವರ್ಷ  ರೂ120.10 ಕೋಟಿ ಆರ್ಥಿಕ ಹೊರೆ ಆಗುತ್ತದೆ. ನಿಗಮದ ನೌಕರರ ತುಟ್ಟಿಭತ್ಯೆಯನ್ನೂ ಪರಿಷ್ಕರಿಸಲಾಗಿದೆ. ಇದರಿಂದ ಕಾರ್ಯಾಚರಣೆಯಲ್ಲಿ ರೂ102.58 ಕೋಟಿ ಅಧಿಕ ವೆಚ್ಚವಾಗುತ್ತಿದೆ. ಒಟ್ಟಾರೆ ವೆಚ್ಚವು ವರ್ಷಕ್ಕೆ  ರೂ222.68 ಕೋಟಿ ಆಗುತ್ತದೆ' ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.`ದರ ಏರಿಕೆಯಿಂದ ವಾರ್ಷಿಕ ರೂ186.72 ಕೋಟಿ ಆದಾಯ ದೊರೆಯಲಿದೆ. ಆದರೂ  ರೂ35.96 ಕೋಟಿ ಕೊರತೆ ಆಗಲಿದ್ದು, ನಿರ್ವಹಣೆಯನ್ನು ಸುಧಾರಿಸಿ ಇದನ್ನು ಸರಿದೂಗಿಸಲಾಗುವುದು. ಆರ್ಥಿಕ ಹೊರೆ ಆಗುತ್ತಿದ್ದರೂ 2013-14 ಸಾಲಿನಲ್ಲಿ ವಿದ್ಯಾರ್ಥಿ ರಿಯಾಯಿತಿ ದರಗಳಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು. ನಿಗಮಕ್ಕೆ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ಸರಿದೂಗಿಸುವ ಸಲುವಾಗಿ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ' ಎಂದು ಸಮರ್ಥಿಸಿಕೊಂಡರು.

ಏರಿಕೆ ಅನಿವಾರ್ಯ

ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರದಿಂದ ಸಬ್ಸಿಡಿ ದೊರಕುತ್ತಿಲ್ಲ. ಪ್ರಯಾಣ ದರವೇ ಆದಾಯದ ಏಕೈಕ ಮೂಲ.  ಡೀಸೆಲ್ ದರ ಏರಿಕೆ, ಸಿಬ್ಬಂದಿಯ ವೇತನ ಹೆಚ್ಚಳದಿಂದ ಈಗ ದರ ಏರಿಕೆ ಅನಿವಾರ್ಯ ಆಗಿತ್ತು. ಸದ್ಯದಲ್ಲಿ ಮತ್ತೆ ದರ ಏರಿಕೆ ಮಾಡುವುದಿಲ್ಲ.

-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.