ಬುಧವಾರ, ಏಪ್ರಿಲ್ 14, 2021
23 °C

ಬಹುಕೋಟಿ ಹಗರಣದಲ್ಲಿ ಕೇಂದ್ರ ಸಚಿವ ಬನ್ಸಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಚಂಡೀಗಡ (ಐಎಎನ್‌ಎಸ್):ವ್ಯಾಪಾರಸ್ಥರಿಗೆ ಸಣ್ಣ ಮಳಿಗೆಗಳನ್ನು ಹಂಚಿಕೆ ಮಾಡುವ ಯೋಜನೆಯಲ್ಲಿ ನಡೆದಿರುವ ಬಹು ಕೋಟಿ ರೂಪಾಯಿಗಳ ಹಗರಣದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಬನ್ಸಲ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳ ಭಾಗಿಯಾಗಿದ್ದಾರೆ ಎಂದು ತನಿಖಾ ವರದಿ ಹೇಳಿದೆ.ಈ ಹಗರಣದ ಬಗ್ಗೆ ತನಿಖೆ ನಡೆಸಿದ ಹಿರಿಯ ಅಧಿಕಾರಿ ಪಿ.ಎಸ್.ಶೇರ್‌ಗಿಲ್ ಅವರು ನೀಡಿರುವ 700 ಪುಟಗಳ ವರದಿಯಲ್ಲಿ ಚಂಡೀಗಡದ ಸೆಕ್ಟರ್ 41ರಲ್ಲಿ ಸಣ್ಣ ಮಳಿಗೆಗಳನ್ನು ಹಂಚಿಕೆ ಮಾಡುವ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.ತನಿಖೆ ನಡೆಸಿದ ಸಮಯದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡದ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಅವರು, ಈ ಹಗರಣದಲ್ಲಿ ಸಚಿವ ಬನ್ಸಲ್ ಅವರ ಪಾತ್ರವೂ ಇದೆ ಎಂದು ಉಲ್ಲೇಖಿಸಿದ್ದಾರೆ.ಚಂಡೀಗಡ ಆಡಳಿತದ ಸಲಹೆಗಾರ ಪ್ರದೀಪ್ ಮೆಹ್ರಾ, ಚಂಡೀಗಡದ ಮಾಜಿ ಜಿಲ್ಲಾಧಿಕಾರಿ ಆರ್.ಕೆ. ರಾವ್ ಸೇರಿದಂತೆ ಅನೇಕ ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ.ಸೆಕ್ಟರ್ 22ರಲ್ಲಿದ್ದ ಬಜ್ವಾರ ಮಾರುಕಟ್ಟೆಯಲ್ಲಿ 1989ರಲ್ಲಿ ಬೆಂಕಿ ಅನಾಹುತದಿಂದ ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಪರಿಹಾರಾರ್ಥವಾಗಿ ಈ ಮಳಿಗೆಯನ್ನು ನಿರ್ಮಿಸಲಾಗಿದೆ. ಆದರೆ, ಬೆಂಕಿ ಅನಾಹುತದಲ್ಲಿ ಯಾವುದೇ ನಷ್ಟ ಅನುಭವಿಸದ ಹಲವಾರು ಮಂದಿ ಪೊಲೀಸರು, ಕಂದಾಯ ಇಲಾಖೆಗಳ ಅಧಿಕಾರಿಗಳೊಂದಿಗೆ ಸೇರಿಕೊಂಡು ಪಿತೂರಿ ನಡೆಸಿ ಸೆಕ್ಟರ್ 41ರಲ್ಲಿ ಮಳಿಗೆಗಳನ್ನು ಪಡೆದಿದ್ದಾರೆ.ರಾಜಕಾರಣಿಗಳು, ಪೊಲೀಸರು ಮತ್ತು ಇತರ ಇಲಾಖೆಗಳ ಅಧಿಕಾರಿಗಳಿಗೆ ನೀಡಲಾಗಿರುವ ಲಂಚದ ಹಣವೂ ಸೇರಿದಂತೆ ಮಳಿಗೆ ಹಂಚಿಕೆಯಲ್ಲಿ ಹಲವು ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವ ಶೇರ್‌ಗಿಲ್, ಈ ಹಗರಣವನ್ನು ವಿಸ್ತೃತವಾಗಿ ತನಿಖೆ ನಡೆಸಲು ಸಿಬಿಐಗೆ ವಹಿಸುವುದು ಸೂಕ್ತ ಎಂದು ಶಿಫಾರಸು ಮಾಡಿದ್ದಾರೆ.ಮಳಿಗೆ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಅನೇಕ ದೂರುಗಳು ಬಂದ ಕಾರಣ ಚಂಡೀಗಡ ಆಡಳಿತಾಧಿಕಾರಿ ಶಿವರಾಜ್ ಪಾಟೀಲ್ ಮಾರ್ಚ್ 2010ರಲ್ಲಿ ತನಿಖೆ ಆದೇಶ ನೀಡಿ ಶೇರ್‌ಗಿಲ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.