ಗುರುವಾರ , ಮೇ 13, 2021
36 °C

ಬಹುಕೋಟಿ ಹಗರಣ ತನಿಖೆ ಮತ್ತಷ್ಟು ವಿಸ್ತರಣೆ

ಪ್ರಜಾವಾಣಿ ವಾರ್ತೆ/ ವಿ.ಎಸ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಗಾಂಧಿನಗರ, ರಾಜರಾಜೇಶ್ವರಿನಗರ ಮತ್ತು ಮಲ್ಲೇಶ್ವರ ವಿಭಾಗಗಳ ವಿವಿಧ ಕಾಮಗಾರಿಗಳಲ್ಲಿ ನಡೆದಿರುವ ಬಹುಕೋಟಿ ಹಗರಣದ ತನಿಖೆಯನ್ನು ಮತ್ತಷ್ಟು ವಿಸ್ತರಿಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ. ಮೂರೂ ವಿಭಾಗಗಳಲ್ಲಿ ನಡೆದಿರುವ 150 ಕಾಮಗಾರಿಗಳ ಕುರಿತು ತನಿಖೆ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆದಿದೆ.3ವಿಭಾಗಗಳಲ್ಲಿ ನಡೆದಿರುವ 36 ಕಾಮಗಾರಿ ಕುರಿತ ತನಿಖೆ ಪ್ರಗತಿಯಲ್ಲಿದೆ. ಈ ಪೈಕಿ 2ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಪಾಲಿಕೆಯಿಂದ ವಶಕ್ಕೆ ಪಡೆದಿರುವ ಕಡತಗಳ ಪರಿಶೀಲನೆ ನಡೆಸಿ ವಿಭಾಗವಾರು ತಲಾ 50 ಕಾಮಗಾರಿಗುರುತಿಸಿದ್ದು, ಮುಂದಿನ ವಾರದ ವೇಳೆಗೆ ತನಿಖೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.ಗಾಂಧಿನಗರ, ರಾಜರಾಜೇಶ್ವರಿನಗರ ಮತ್ತು ಮಲ್ಲೇಶ್ವರ ವಿಭಾಗಗಳಲ್ಲಿ 2008-09ರಿಂದ 2011-12ರ ಅವಧಿಯಲ್ಲಿ ನಡೆದಿರುವ 1,539 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಪಾಲಿಕೆಯ ಆಯುಕ್ತರ ತಾಂತ್ರಿಕ ಜಾಗೃತ ಕೋಶ (ಟಿವಿಸಿಸಿ) ವರದಿ ಸಲ್ಲಿಸಿತ್ತು. ನಂತರ ಈ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರು ಮಹಾನಗರ ಕಾರ್ಯಪಡೆಗೆ (ಬಿಎಂಟಿಎಫ್) ಆದೇಶಿಸಲಾಗಿತ್ತು.

 

 

ಅಕ್ರಮ ನಂಟು
ಪಾಲಿಕೆ ಹಗರಣದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಂಟು ಇರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ಆದರೆ, ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಸಾಬೀತುಪಡಿಸಬಲ್ಲ ಯಾವುದೇ ಸಾಕ್ಷ್ಯಗಳು ಸಿಐಡಿ ಪೊಲೀಸರಿಗೆ ಇನ್ನೂ ದೊರೆತಿಲ್ಲ.

ಸಹಾಯಕ ಎಂಜಿನಿಯರ್‌ನಿಂದ ಆರಂಭವಾಗುವ ಹಗರಣ ಕಾರ್ಯನಿರ್ವಾಹಕ ಎಂಜಿನಿಯರ್‌ವರೆಗೂ ಹೋಗಿ ನಿಲ್ಲುತ್ತದೆ. ಎಲ್ಲ ಹಂತಗಳಲ್ಲಿ ಗುತ್ತಿಗೆದಾರರು ಸಕ್ರಿಯ ಪಾತ್ರ ನಿರ್ವಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕಾರ್ಯನಿರ್ವಾಹಕ ಎಂಜಿನಿಯರ್‌ಗಿಂತ ಹಿರಿಯ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾದ ಬಗ್ಗೆಯೂ ಸಿಐಡಿಗೆ ಯಾವುದೇ ಸುಳಿವು ಇಲ್ಲ.

ತನಿಖೆಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಕಳೆದ ನವೆಂಬರ್ 28ರಂದು ಆದೇಶ ಹೊರಡಿಸಲಾಗಿತ್ತು. ಮೂರೂ ವಿಭಾಗಗಳಲ್ಲಿ ತಲಾ ಎರಡು ಕಾಮಗಾರಿಗಳನ್ನು ಆರಂಭದಲ್ಲಿ ತನಿಖೆಗೆ ಆಯ್ಕೆ ಮಾಡಲಾಗಿತ್ತು. ಆರರ ಪೈಕಿ ಎರಡು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ   ಸಲ್ಲಿಸಲಾಗಿದೆ.ನಾಲ್ಕು ಕಾಮಗಾರಿಗಳಿಗೆ ಸಂಬಂಧಿಸಿದ ತನಿಖೆ ಮುಕ್ತಾಯ ಹಂತದಲ್ಲಿದೆ. ನಂತರ ತಲಾ ಹತ್ತು ಕಾಮಗಾರಿಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿದೆ.ತನಿಖೆಗೆ ಕಾಲಮಿತಿ: 2008-09ರಿಂದ 2011-12ರ ಅವಧಿಯಲ್ಲಿ ಗಾಂಧಿನಗರ, ರಾಜರಾಜೇಶ್ವರಿನಗರ ಮತ್ತು ಮಲ್ಲೇಶ್ವರ ವಿಭಾಗಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಶಂಕೆ ಇದೆ. ಆದರೆ, ಎಲ್ಲ ಕಾಮಗಾರಿಗಳನ್ನೂ ತಕ್ಷಣವೇ ತನಿಖೆಗೆ ಒಳಪಡಿಸಲು ಅಗತ್ಯವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಐಡಿಯಲ್ಲಿ ಇಲ್ಲ.ಈ ಹಿನ್ನೆಲೆಯಲ್ಲಿ 150 ಪ್ರಮುಖ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಮೂರನೇ ಹಂತದಲ್ಲಿ ತನಿಖೆ ನಡೆಸಲು ಸಿಐಡಿ ಇತ್ತೀಚೆಗೆ ತೀರ್ಮಾನ ಕೈಗೊಂಡಿದೆ.  ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಸಿಐಡಿ ಡಿಜಿಪಿ ರೂಪಕ್‌ಕುಮಾರ್ ದತ್ತ, `ಒಂದು ಸಾವಿರ ಕಾಮಗಾರಿಗಳ ಬಗ್ಗೆಯೂ ಏಕಕಾಲಕ್ಕೆ ತನಿಖೆ ನಡೆಸುವುದು ಅಸಾಧ್ಯ. ಸಿಐಡಿಯಲ್ಲಿ ಅಷ್ಟು ದೊಡ್ಡ ಪ್ರಮಾಣದ ಮೂಲಸೌಕರ್ಯ ಮತ್ತು ಸಿಬ್ಬಂದಿ ಇಲ್ಲ. ಈ ಕಾರಣದಿಂದ ವಿವಿಧ ಹಂತಗಳಲ್ಲಿ ತನಿಖೆಯನ್ನು ವಿಸ್ತರಿಸುವ ತೀರ್ಮಾನ ಕೈಗೊಂಡಿದ್ದೇವೆ.ಏಪ್ರಿಲ್ ಅಂತ್ಯದ ವೇಳೆಗೆ 150 ಕಾಮಗಾರಿಗಳ ಕುರಿತು ತನಿಖೆ ಆರಂಭಿಸಲು ನಿರ್ಧರಿಸಲಾಗಿದೆ~ ಎಂದರು.  ಮೊದಲು ಆರು ಕಾಮಗಾರಿಗಳ ಕುರಿತು ಆರಂಭವಾಗಿದ್ದ ತನಿಖೆ ಬಹುತೇಕ ಅಂತ್ಯಗೊಂಡಿದೆ. ಎರಡನೇ ಹಂತದಲ್ಲಿ ತನಿಖೆ ಕೈಗೆತ್ತಿಕೊಂಡ 30 ಕಾಮಗಾರಿಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ತಜ್ಞರ ಸಮಿತಿಯ ವರದಿ ಶೀಘ್ರದಲ್ಲಿ ಲಭ್ಯವಾಗಲಿದೆ. ನಂತರ ಆರೋಪಪಟ್ಟಿ ಸಿದ್ಧಪಡಿಸಲಾಗುವುದು. 150 ಕಾಮಗಾರಿಗಳಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದ ತನಿಖೆಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವ ಕಾಲಮಿತಿಯಲ್ಲಿ ಕೆಲಸ ಮಾಡಲಾಗುವುದು ಎಂದು ವಿವರಿಸಿದರು.ಅವ್ಯವಹಾರ ಪತ್ತೆ: ಈವರೆಗೆ ತನಿಖೆ ನಡೆಸಿರುವ ಬಹುತೇಕ ಪ್ರಕರಣಗಳಲ್ಲಿ ಅವ್ಯವಹಾರ ನಡೆದಿರುವುದು ದೃಢಪಟ್ಟಿದೆ. ಹಲವು ಕಾಮಗಾರಿಗಳನ್ನು ಮಂಜೂರಾದ ಸ್ಥಳದಲ್ಲಿ ನಡೆಸಿಲ್ಲ.  ಟಿವಿಸಿಸಿ ಸಲ್ಲಿಸಿರುವ ವರದಿ ನಿಜ ಎಂಬುದು ಈವರೆಗಿನ ತನಿಖೆಯಲ್ಲಿ ಖಚಿತವಾಗಿದೆ. ಟಿವಿಸಿಸಿ ವರದಿ ಮತ್ತು ಬಿಬಿಎಂಪಿ ಕಚೇರಿಯಿಂದ ವಶಪಡಿಸಿಕೊಂಡ ಕಡತಗಳನ್ನು ಪರಿಶೀಲಿಸಿ ಸಂಶಯಾಸ್ಪದ ಪ್ರಕರಣಗಳಲ್ಲಿ ತನಿಖೆ ಆರಂಭಿಸಲಾಗುತ್ತಿದೆ.ಬಿಬಿಎಂಪಿಯಲ್ಲಿ ಕಾಮಗಾರಿ ನಿರ್ವಹಿಸದೇ ಬಿಲ್ ಪಾವತಿಸುವ ಮತ್ತು ಕಳಪೆ ಕಾಮಗಾರಿಗೂ ಹಣ ಬಿಡುಗಡೆ ಮಾಡುವ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿತ್ತು ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳು ದೊರೆಯುತ್ತಿವೆ ಎಂದು ದತ್ತ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.