ಶನಿವಾರ, ಮಾರ್ಚ್ 25, 2023
29 °C

ಬಹು ಬೇಡಿಕೆಯ ಬಂಡೂರು ಕುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹು ಬೇಡಿಕೆಯ ಬಂಡೂರು ಕುರಿ

ಜನಸಂಖ್ಯೆ ಹೆಚ್ಚಳವಾದಂತೆ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೆಚ್ಚು ಮಾಂಸ ಕೊಡುವ ಕುರಿ, ಮೇಕೆಗಳ ತಳಿಗಳ ಅನ್ವೇಷಣೆಯೂ ನಡೆಯುತ್ತಿದೆ. ಕಡಿಮೆ ಖರ್ಚು ಹಾಗೂ ಕಡಿಮೆ ಕಾಲಾವಧಿಯಲ್ಲಿ  ಹೆಚ್ಚು ಉತ್ಪಾದನೆ ಮಾಡುವ ಕುಶಲತೆ ಬೆಳೆದಿದೆ. ಇದರ ಫಲವಾಗಿ ಮಾಂಸ ಮಾರಾಟದಲ್ಲಿ ಪೈಪೋಟಿ ಹೆಚ್ಚುತ್ತಿದೆ.ಬೇಡಿಕೆ ಹಾಗೂ ಗುಣಮಟ್ಟದ ಮಾಂಸ ಪೂರೈಕೆ ಮಾಡುವ ಪ್ರಯತ್ನಗಳು ತ್ವರಿತವಾಗಿ ನಡೆಯುತ್ತಿದೆ. ಸರ್ಕಾರ ಕುರಿ ಸಂವರ್ಧನಾ ಕೇಂದ್ರಗಳನ್ನು ಆರಂಭಿಸಿ ನೆರವಾಗುತ್ತಿದೆ. ಬಂಡೂರು ಕುರಿ ಸಂವರ್ಧನಾ ಕೇಂದ್ರ ಅಂತಹ ಪ್ರಯತ್ನಗಳಲ್ಲೊಂದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ 1965ರಿಂದ ಬಂಡೂರು ತಳಿಯ ಕುರಿಯನ್ನು ಉಳಿಸಿ, ಬೆಳೆಸುವ ಕೆಲಸ ನಡೆಯುತ್ತಿದೆ. ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರ ಮಳವಳ್ಳಿ ತಾಲ್ಲೂಕಿನ ಧನಗೂರು ಬಳಿ ಇದೆ. ಶಿಂಷಾ ನದಿ ದಡೆಯ 600 ಎಕರೆ ಪ್ರದೇಶದ ಈ ಕೇಂದ್ರದಲ್ಲಿ ಕುರಿ, ಟಗರು ಸಾಕಾಣಿಕೆ ಮತ್ತು ತಳಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಟಗರು ಮರಿಗಳನ್ನು ಉತ್ಪಾದಿಸಿ ಅವನ್ನು ಸಾಕುವವರಿಗೆ ಕೊಡುವುದು, ತಳಿ ಸಂರಕ್ಷಣೆ, ಕುರಿ ಸಾಕಾಣಿಕೆ ತರಬೇತಿ ಜೊತೆಗೆ ಮಾರ್ಗದರ್ಶನ ನೀಡುವುದು ಕೆಂದ್ರದ ಉದ್ದೇಶ. ಕೇಂದ್ರದಲ್ಲಿ 520 ತಾಯಿ ಕುರಿಗಳು ಹಾಗೂ 22 ಟಗರುಗಳಿವೆ.ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿ ಬಂಡೂರು ತಳಿಯ ಮೂಲ. ಬಂಡೂರು ತಳಿಯ ಕುರಿ ಮಾಂಸ ಬಲು ರುಚಿ. ಮಾಂಸದ ಎಳೆಗಳ ಮಧ್ಯದ ಕೊಬ್ಬಿನ ಅಂಶ ತಳಿಯ ವಿಶೇಷ. ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುವ ಗುಣ ಬಂಡೂರು ಕುರಿಗಳಿಗೆ ಇವೆ. ಬಂಡೂರು ಕುರಿ ಮಾಂಸ ಜನಪ್ರಿಯವಾಗಿದೆ.   ಗಿಡ್ಡ ಕಾಲು, ಉದ್ದನೆಯ ಶರೀರ, ಕೊಂಬಿಲ್ಲದ ಬಿಳಿಯ ಬಣ್ಣದ ಟಗರು ಸುಮಾರು 40ರಿಂದ 45ಕೆ.ಜಿ ತೂಕವಿರುತ್ತದೆ. ಹೆಣ್ಣುಕುರಿ 30-35ಕೆ.ಜಿ ತೂಗುತ್ತವೆ.ಬಂಡೂರು ಕೇಂದ್ರದಲ್ಲಿ ಕುರಿ, ಟಗರು ಹಾಗೂ ಮರಿಗಳ ಸಾಕಾಣಿಕೆಗೆ ಪ್ರತ್ಯೇಕ ವಿಭಾಗಗಳಿವೆ. ರೋಟ್ಸ್, ಕೋತ್ರಿ, ಎಂ.ಪಿ ಚರಿ, ಆಫ್ರಿಕನ್ ಟಾಲ್ ಮೇಜ್, ಹಿಪ್ಪುನೇರಳೆ, ಕುದುರೆ ಮಸಾಲೆ ಮತ್ತಿತರ ಮೇವುಗಳಲ್ಲಿ ಕೇಂದ್ರದಲ್ಲೇ ಬೆಳೆಯಲಾಗಿದೆ. ಮೇವಿನ ಬೆಳೆಗಳಿಗೆ ತುಂತುರು ನೀರಾವರಿ  ವ್ಯವಸ್ಥೆ ಇದೆ. ರಸ ಮೇವು ಘಟಕ ಸ್ಥಾಪಿಸಲಾಗಿದೆ. ಕುರಿಗಳನ್ನು ಕಾಡು ಪ್ರದೇಶದಲ್ಲಿ ವಲಸೆ ಪದ್ಧತಿಯಲ್ಲಿ ಹಗಲು ಹೊತ್ತಿನಲ್ಲಿ ಮೇಯಿಸುತ್ತಾರೆ. ಬೇಸಿಗೆ ಮತ್ತು ಮೇವಿನ ಕೊರತೆ ಇರುವಾಗ ರಸ ಮೇವು ನೀಡಿ ಸಾಕುತ್ತಾರೆ.ಸಂತಾನೋತ್ಪತ್ತಿಗೆ ಐವತ್ತು ಕುರಿಗಳಿಗೆ ಒಂದು ಟಗರು ಬಿಡುತ್ತಾರೆ. ಗರ್ಭ ಧರಿಸಿದ ಕುರಿಗಳನ್ನು ಹಿಂಡಿನಿಂದ ಬೇರ್ಪಡಿಸಿ ಬೆಳೆಸುತ್ತೇವೆ. ಎಲ್ಲವೂ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ ಎನ್ನುತ್ತಾರೆ ಕೇಂದ್ರದ ಉಪ ನಿರ್ದೇಶಕ ಜಿ.ಆನಂದ್.

ಇಂದು ಕುರಿ ಸಾಕಾಣಿಕೆ ಬೇಸಾಯಕ್ಕೆ ಪೂರಕವಾದ ಉದ್ಯಮವಾಗಿ ಬೆಳೆದಿದೆ. ಪ್ರಮುಖ ಉದ್ಯಮವಾಗಿ ಜನಪ್ರಿಯವಾಗುತ್ತಿದೆ.ಕಡಿಮೆ ಶ್ರಮ ಬೇಕಾಗುವ ಕುರಿ ಸಾಕಾಣಿಕೆ ಬಗ್ಗೆ ಅನೇಕರು ಆಸಕ್ತಿ ತೋರುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಸಮೃದ್ಧವಾಗಿ ಬೆಳೆಯುವ ತಳಿಗಳು ಈಗ ರಾಜ್ಯಕ್ಕೆ ಬಂದಿದ್ದರೂ  ರುಚಿ ಮತ್ತು ಹೆಚ್ಚು ಕೊಬ್ಬಿನಾಂಶದ ಬಂಡೂರು ಕುರಿಗಳನ್ನು ಸರಿಗಟ್ಟುವ ತಳಿ ಬಂದಿಲ್ಲ.ಬೇಡಿಕೆ ದೃಷ್ಟಿಯಿಂದ ಬಂಡೂರು ತಳಿ ಮೊದಲ ಸ್ಥಾನದಲ್ಲಿದೆ. ಅನೇಕ ಗಿಡಮೂಲಿಕೆ ತಿಂದು ಬೆಳೆಯುವುದರಿಂದ ಅವುಗಳ ಮಾಂಸ ಉತ್ತಮ ಎಂಬ ಅಭಿಪ್ರಾಯವಿದೆ. ಈ ಕಾರಣಗಳಿಂದ ಬಂಡೂರು ಟಗರು ಮರಿಗಳಿಗೆ ಬೇಡಿಕೆ ಹೆಚ್ಚು. ಬೇಡಿಕೆ  ಪೂರೈಸಲು ಸಾಧ್ಯವಾಗುತ್ತಿಲ್ಲ. ಟಗರು ಮರಿಗಳಿಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾಯಬೇಕು ಎಂಬುದು ರೈತರ ಅಳಲು.ಈಗ ಗ್ರಾಮೀಣ ಪ್ರದೇಶದಲ್ಲೂ ನಿರುದ್ಯೋಗ ಸಮಸ್ಯೆ ಇದೆ. ಯುವಕರು ಉದ್ಯೋಗದ ಬೆನ್ನು ಹತ್ತಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಬೇಸಾಯ ಲಾಭದಾಯಕವಾಗಿ ಉಳಿದಿಲ್ಲ. ಬೇಸಾಯದ ಜತೆಗೆ ಕುರಿಗಳನ್ನು ಸಾಕಿ ಜೀವನ ಮಾಡಲು ಸಾಧ್ಯವಿದೆ.ಮುಖ್ಯ ಉದ್ಯಮವಾಗಿ ಕುರಿ ಸಾಕಣೆ ಕೈಗೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಬೇಡಿಕೆ ಇರುವ ಬಂಡೂರು ಕುರಿ ಸಾಕಾಣಿಕೆ ಒಂದು ಪರ್ಯಾಯ ಉದ್ಯಮವಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಳಿಗೆ ಬಂಡೂರು ತಳಿ ಸಂವರ್ಧನಾ ಕೆಂದ್ರದ ಉಪ ನಿರ್ದೇಶಕ ಜಿ.ಆನಂದ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಅವರ ಮೊಬೈಲ್ ನಂಬರ್ - 9740926153. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.