ಗುರುವಾರ , ಫೆಬ್ರವರಿ 25, 2021
18 °C
ಕ್ರಿಕೆಟ್‌: ಆಫ್ಘಾನಿಸ್ತಾನಕ್ಕೆ ಇಂದು ಅರ್ಹತಾ ಪಂದ್ಯ, ಗೆಲುವಿನ ಮುನ್ನುಡಿ ಬರೆಯಲು ಕಾದಿರುವ ಆತಿಥೇಯರು

ಬಾಂಗ್ಲಾದಲ್ಲಿ ಇಂದಿನಿಂದ ಚುಟುಕು ವಿಶ್ವಕಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಗ್ಲಾದಲ್ಲಿ ಇಂದಿನಿಂದ ಚುಟುಕು ವಿಶ್ವಕಪ್‌

ಮೀರ್‌ಪುರ (ಪಿಟಿಐ/ಐಎಎನ್‌ಎಸ್‌): ಮೂರು ವರ್ಷಗಳ ಹಿಂದೆ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿ ಎಲ್ಲರ ಗಮನ ಸೆಳೆದಿದ್ದ ಬಾಂಗ್ಲಾದೇಶದಲ್ಲಿ ಈಗ ಮತ್ತೊಂದು ಕ್ರಿಕೆಟ್‌ ಹಬ್ಬದ ಸಂಭ್ರಮ.ಬಾಂಗ್ಲಾದೇಶ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟು ಕೆಲ ವರ್ಷಗಳಷ್ಟೇ ಕಳೆದಿವೆ. ಆದರೂ, ಈ ರಾಷ್ಟ್ರ ಏಷ್ಯಾಕಪ್‌ನಂಥ ಮಹತ್ವದ ಟೂರ್ನಿಗೆ ಆತಿಥ್ಯ ವಹಿಸಿತ್ತು. ಹೋದ ವಾರವಷ್ಟೇ ಮುಗಿದ ಏಷ್ಯಾಕಪ್‌ ಸಂಭ್ರಮದ ನೆನಪು ಹಸಿರಾಗಿರುವಾಗಲೇ ಈಗ ಟ್ವೆಂಟಿ–20 ವಿಶ್ವಕಪ್‌ ಆರಂಭ. 

ಚುಟುಕು ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ಭಾನುವಾರ ಆರಂಭವಾಗಲಿವೆ. ಮಾರ್ಚ್‌್ 21ರ ವರೆಗೆ ಈ ಹಂತದ ಪಂದ್ಯಗಳು ನಡೆಯಲಿವೆ.ಬಾಂಗ್ಲಾಕ್ಕೆ ಮೊದಲ ಸವಾಲು: ಮಹತ್ವದ ಟೂರ್ನಿಗಳನ್ನು ಆಯೋಜಿಸುವ ಜೊತೆಗೆ ದೇಶದಲ್ಲಿ ಕ್ರಿಕೆಟ್‌ ಪ್ರೇಮಿಗಳ ಸಂಖ್ಯೆಯನ್ನು ಹೆಚ್ಚಿಸಿರುವ ಬಾಂಗ್ಲಾ ತಂಡ ಅರ್ಹತಾ ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಆಫ್ಘಾನಿಸ್ತಾನದ ಎದುರು ಪೈಪೋಟಿ ನಡೆಸಲಿದೆ. ಈ ಪಂದ್ಯ ಮೀರ್‌ಪುರದ ಷೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.2010  ಮತ್ತು 12ರಲ್ಲಿ ಎರಡು ಸಲ ಚುಟುಕು ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಆಫ್ಘನ್‌ ತಂಡ ಆಡಿದ ನಾಲ್ಕೂ ಪಂದ್ಯಗಳಲ್ಲಿಯೂ ಸೋಲು ಕಂಡಿದೆ. 2007ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ ಆಡಿದ್ದ ಆತಿಥೇಯರು ‘ಸೂಪರ್‌–8’ ಹಂತ ಪ್ರವೇಶಿಸಿ ಅಚ್ಚರಿಗೆ ಕಾರಣರಾಗಿದ್ದರು. ಹೋದ ವಾರ ಏಷ್ಯಾಕಪ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಆಫ್ಘನ್‌ 32 ರನ್‌ಗಳ ಗೆಲುವು ಸಾಧಿಸಿ ಬಾಂಗ್ಲಾಕ್ಕೆ ಆಘಾತ ನೀಡಿತ್ತು. ಆದ್ದರಿಂದ ಅರ್ಹತಾ ಹಂತದ ಮೊದಲ ಪಂದ್ಯ ಕುತೂಹಲ ಕೆರಳಿಸಿದೆ.ಪಾಕ್‌–ಆಸೀಸ್‌ ನೆಚ್ಚಿನ ತಂಡ: ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳು ಎನಿಸಿವೆ.

2007ರಲ್ಲಿ ನಡೆದ ಚೊಚ್ಚಲ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿದ್ದ ಭಾರತ ನಂತರದ ವರ್ಷಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿಲ್ಲ.

ಲಂಕಾಕ್ಕೆ ಪ್ರಶಸ್ತಿಯ ಆಸೆ: ಫೈನಲ್‌ ಪ್ರವೇಶಿಸಿ ಎರಡು ಸಲ ನಿರಾಸೆ ಕಂಡಿರುವ ಶ್ರೀಲಂಕಾ ತಂಡ ಈ ಬಾರಿಯಾದರೂ ಚಾಂಪಿಯನ್‌ ಎನಿಸಿಕೊಳ್ಳಬೇಕು ಎನ್ನುವ ಆಸೆ ಹೊಂದಿದೆ.ಸಿಂಹಳೀಯ ನಾಡಿನ ತಂಡ 2009ರಲ್ಲಿ ಪಾಕ್‌ ಮೇಲೂ, 2012ರಲ್ಲಿ ವಿಂಡೀಸ್‌ ವಿರುದ್ಧವೂ ಸೋಲು ಕಂಡಿತ್ತು. ಅಗ್ರ ಹತ್ತರಲ್ಲಿ ಕೊಹ್ಲಿ, ರೈನಾ, ಯುವರಾಜ್‌:  ಚುಟುಕು ವಿಶ್ವಕಪ್‌ ಭಾನುವಾರ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಐಸಿಸಿ ರ್‍ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ  ಮಾಡಿದ್ದು, ಭಾರತ ಮೂವರು ಬ್ಯಾಟ್ಸ್‌ಮನ್‌ಗಳು ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ.ವಿರಾಟ್‌ ಕೊಹ್ಲಿ ನಾಲ್ಕನೇ ಸ್ಥಾನ ಹೊಂದಿದ್ದಾರೆ. ಸುರೇಶ್‌ ರೈನಾ (5) ಮತ್ತು ಯುವರಾಜ್‌ ಸಿಂಗ್‌ (6) ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆ್ಯರನ್‌ ಫಿಂಚ್‌ ಅಗ್ರಸ್ಥಾನದಲ್ಲಿದ್ದಾರೆ. ತಂಡ ವಿಭಾಗದಲ್ಲಿ ಶ್ರೀಲಂಕಾ ಅಗ್ರಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನ ಹೊಂದಿದೆ. ಒತ್ತಡದಲ್ಲಿ ಭಾರತ (ಕರಾಚಿ ವರದಿ): ಏಷ್ಯಾಕಪ್‌ನಲ್ಲಿ ನೀರಸ ಪ್ರದರ್ಶನ ತೋರಿರುವ ಭಾರತ ತಂಡ ಸಾಕಷ್ಟು ಒತ್ತಡದಲ್ಲಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ರಮೀಜ್‌ ರಾಜಾ ಹೇಳಿದ್ದಾರೆ.‘ಸುರೇಶ್‌ ರೈನಾ ಮತ್ತು ಯುವರಾಜ್‌ ಸಿಂಗ್‌ ಅವರು ಈಗ ಉತ್ತಮ ಫಾರ್ಮ್‌ನಲ್ಲಿಲ್ಲ. ಜೊತೆಗೆ ಒತ್ತಡದಲ್ಲಿದ್ದಾರೆ. ಪಾಕ್‌ ತಂಡ ಯುವ ಆಟಗಾರರನ್ನು ಒಳಗೊಂಡಿದೆ. ಕಮ್ರನ್‌ ಅಕ್ಮಲ್‌ ಮತ್ತು ಶೊಯಬ್‌ ಮಲೀಕ್‌ ಅವರು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯತ್ತಾರೆ ಎನ್ನುವ ನಂಬಿಕೆಯಿದೆ’ ಎಂದು ಅವರು ನುಡಿದಿದ್ದಾರೆ.

₨ 6.2 ಕೋಟಿ ಬಹುಮಾನ

ಐಸಿಸಿ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗುವ ತಂಡಕ್ಕೆ ಒಟ್ಟು ₨ 6.2 ಕೋಟಿ ಬಹುಮಾನ ಲಭಿಸಲಿದೆ. ರನ್ನರ್‌ ಅಪ್‌ ಸ್ಥಾನ ಪಡೆಯುವ ತಂಡ ₨ 3.1 ಕೋಟಿ ಬಹುಮಾನ ಪಡೆಯಲಿದೆ. ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸುವ ತಂಡಗಳಿಗೆ ತಲಾ ₨ 1.5 ಕೋಟಿ ಬಹುಮಾನ ಸಿಗಲಿದೆ.

ಮುಖ್ಯಾಂಶಗಳು

*ಇದು ಐದನೇ ಬಾರಿ ನಡೆಯುತ್ತಿರುವ ವಿಶ್ವಕಪ್‌

*ಟೂರ್ನಿಯಲ್ಲಿ ಒಟ್ಟು 25ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದು ಪಾಕಿಸ್ತಾನ (26) ಮತ್ತು ಶ್ರೀಲಂಕಾ (25).

*ಲಂಕಾ ಮತ್ತು ಪಾಕ್‌ ತಂಡಗಳು ಹೆಚ್ಚು ಗೆಲುವು (ತಲಾ 16) ಪಡೆದ ಸಾಧನೆ ಯನ್ನು ಜಂಟಿಯಾಗಿ ಹಂಚಿಕೊಂಡಿವೆ.

*ಗೆದ್ದರೆ 2 ಪಾಯಿಂಟ್‌. ಫಲಿತಾಂಶ ಲಭಿಸದೆ ಹೋದರೆ ಅಥವಾ ಪಂದ್ಯ ‘ಟೈ’ ಆದರೆ ಉಭಯ ತಂಡಗಳಿಗೂ ಒಂದು ಅಂಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.