ಗುರುವಾರ , ಫೆಬ್ರವರಿ 25, 2021
29 °C
ರೂ 12,822 ಕೋಟಿ ನೆರವು ನೀಡುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

ಬಾಂಗ್ಲಾ ಜತೆ 22 ಒಪ್ಪಂದಕ್ಕೆ ಭಾರತ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಗ್ಲಾ ಜತೆ 22 ಒಪ್ಪಂದಕ್ಕೆ ಭಾರತ ಸಹಿ

ಢಾಕಾ (ಪಿಟಿಐ): ಬಾಂಗ್ಲಾ  ಪ್ರವಾಸದ ಮೊದಲ ದಿನ  ಆ ದೇಶದ ಪ್ರಧಾನಿ ಶೇಖ್‌ ಹಸೀನಾ ಜತೆ ವಿಸ್ತೃತ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಾಗರ ಭದ್ರತೆ, ಮಾನವ ಕಳ್ಳ ಸಾಗಣೆ ತಡೆ ಹಾಗೂ ನಕಲಿ ನೋಟುಗಳ ಹಾವಳಿ ತಡೆ ಒಪ್ಪಂದ ಸೇರಿದಂತೆ ಬಾಂಗ್ಲಾ ಜತೆ ಒಟ್ಟು 22 ಒಪ್ಪಂದಗಳಿಗೆ ಸಹಿ ಹಾಕಿದರು.ಈ ಸಂದರ್ಭದಲ್ಲಿ ಬಾಂಗ್ಲಾ ದೇಶಕ್ಕೆ  ಹೊಸದಾಗಿ ರೂ 12,822 ಕೋಟಿ ನೀಡುವುದಾಗಿ ಮೋದಿ ಅವರು ಪ್ರಕಟಿಸಿದರು. ಈ ಹಿಂದೆ ಘೋಷಿಸಲಾಗಿದ್ದ ರೂ 5,120 ಕೋಟಿ ಹಾಗೂ ರೂ 1, 280 ಕೋಟಿ ಸಾಲದ ಹಣವನ್ನೂ ಶೀಘ್ರವೇ ನೀಡುವುದಾಗಿ ಭರವಸೆ ನೀಡಿದರು.ಉಭಯ ದೇಶಗಳೀಗೆ ಒಪ್ಪಿಗೆಯಾಗುವ ರೀತಿಯಲ್ಲಿ ತೀಸ್ತಾ ಹಾಗೂ ಫೆಣಿ ನದಿ ನೀರಿನ ವಿವಾದಗಳನ್ನು  ಬಗೆಹರಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಇನ್ನು ಮುಂದೆ ಉಭಯ ದೇಶಗಳ ನಡುವೆ ಬಸ್‌, ರೈಲು, ಜಲ ಸಾರಿಗೆ, ಸಮುದ್ರ ಮಾರ್ಗದ ಸಂಪರ್ಕಗಳು ಹೆಚ್ಚಲಿವೆ ಎಂದು ಮೋದಿ ಹೇಳಿದರು.ಸ್ವಾಗತ: ಬಾಂಗ್ಲಾದೇಶದಕ್ಕೆ ಎರಡು ದಿನಗಳ ಚೊಚ್ಚಲ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು.ಶಿಷ್ಟಾಚಾರ ಬದಿಗಿಟ್ಟು ಪ್ರಧಾನಿ ಶೇಖ್‌ ಹಸೀನಾ ಖುದ್ದಾಗಿ ಮೋದಿ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.

1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಮಡಿದ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸುವ ಮೂಲಕ ಅವರು ತಮ್ಮ ಪ್ರವಾಸ ಆರಂಭಿಸಿದರು.ನಂತರ ಅಲ್ಲಿಂದ ಬಂಗಬಂಧು ವಸ್ತು ಸಂಗ್ರಹಾಲಯದಲ್ಲಿ 20 ನಿಮಿಷ ಕಳೆದ ಅವರು, ಬಾಂಗ್ಲಾ ಸಂಸ್ಥಾಪಕ ಹಾಗೂ ಪ್ರಧಾನಿ ಶೇಖ್‌ ಹಸೀನಾ ಅವರ ತಂದೆ ಶೇಖ್‌  ಮುಜಿಬುರ್‌ ರಹಮಾನ್‌ ಅವರಿಗೆ ಸೇರಿದ ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಶೇಖ್‌ ಹಸೀನಾ ಅವರ ಸಂಪುಟದ ಹಿರಿಯ ಸಚಿವರು ಪ್ರಧಾನಿಗೆ ಸಾಥ್‌ ನೀಡಿದರು.ಹಸೀನಾ ತಂದೆ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಭಾಷಣದ ಧ್ವನಿಮುದ್ರಿಕೆ,  ಗಡಿ ಭೂ ವಿವಾದ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ನಡೆದ ಚರ್ಚೆಯ ಧ್ವನಿಮುದ್ರಿಕೆ ಅಡಕ ಹಾಗೂ ಆಂಧ್ರ ಪ್ರದೇಶದ ವೆಂಕಟಗಿರಿ ಜಾಮ್ದಾನಿ ಶೈಲಿಯ ಸುಂದರ ಕಸೂತಿ

ಚಿತ್ರವನ್ನು ಮೋದಿ ಅವರು ಶೇಕ್‌ ಹಸೀನಾ ಅವರಿಗೆ ಉಡುಗೊರೆಯಾಗಿ ನೀಡಿದರು.ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಾವಿದ ನೆಲ್ಲೂರಿನ  ಗೌರಬಾತಿನಿ ರಾಮಣ್ಣಯ್ಯ ಅವರು ಶ್ರೇಷ್ಟ ದರ್ಜೆಯ ಹತ್ತಿಯ ನೂಲು ಮತ್ತು ಬಂಗಾರದ ಎಳೆಯಿಂದ ಕಲ್ಪವೃಕ್ಷ ಮತ್ತು ಕಾಮಧೇನು ಕಸೂತಿ ಸಿದ್ಧಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಸೀನಾ ಅವರು, 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಪಾಕಿಸ್ತಾನ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಿದ ಐತಿಹಾಸಿಕ ಚಿತ್ರವನ್ನು ಮೋದಿ ಅವರಿಗೆ ಕಾಣಿಕೆಯಾಗಿ ನೀಡಿದರು.ಬಾಂಗ್ಲಾದಲ್ಲಿ ಅಂಬಾನಿ ವಿದ್ಯುತ್‌ ಘಟಕಭೀಕರ ವಿದ್ಯುತ್‌ ಕೊರತೆಯಿಂದ ಬಳಲುತ್ತಿರುವ ಬಾಂಗ್ಲಾದೇಶದಲ್ಲಿ  ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್‌ ಸಮೂಹ 18 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್‌ ವಿದ್ಯುತ್‌ ಉತ್ಪಾದನಾ ಘಟಕ  ಮತ್ತು ನೈಸರ್ಗಿಕ ಅನಿಲ ಘಟಕ ಸ್ಥಾಪಿಸಲಿದೆ.ಪ್ರತಿವರ್ಷ 20 ಲಕ್ಷ ಟನ್‌ ನೈಸರ್ಗಿಕ ಅನಿಲ ಉತ್ಪಾದಿಸುವ ಘಟಕ 3 ಸಾವಿರ ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಉತ್ಪಾದನಾ ಘಟಕವನ್ನು  ಮೂರು ವರ್ಷದೊಳಗೆ ಸ್ಥಾಪಿಸುವ ಒಪ್ಪಂದಕ್ಕೆ ರಿಲಯನ್ಸ್‌ ಮತ್ತು ಬಾಂಗ್ಲಾ ಅಧಿಕಾರಿಗಳು ಸಹಿ ಹಾಕಿದರು.ಮೋದಿ–ದೀದಿ ಅಚ್ಚರಿ!

ರಾಜಕೀಯವಾಗಿ ಕಡು ವಿರೋಧಿಗಳೆಂದು ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಟ್ಟಿಗೆ ಬಾಂಗ್ಲಾ ಪ್ರವಾಸ ಕೈಗೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.

ಹಿರಿಯ ಅಧಿಕಾರಿಗಳನ್ನು ಒಳಗೊಂಡ ನಿಯೋಗದೊಂದಿಗೆ ಮಮತಾ ಬ್ಯಾನರ್ಜಿ ಶುಕ್ರವಾರ ರಾತ್ರಿ ಇಲ್ಲಿಗೆ ಬಂದಿಳಿದಿದ್ದಾರೆ.

ಎರಡು ದಿನ ಮೋದಿ ಅವರೊಂದಿಗೆ ದೀದಿ ಅವರು ಬಾಂಗ್ಲಾದ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆಭಯದಲ್ಲಿ ಬಾಂಗ್ಲಾ ಹಿಂದುಗಳು!

ಮೂಲಭೂತವಾದಿಗಳ ನಿರಂತರ ಕಿರುಕಳದಿಂದಾಗಿ ಭಯದ ನೆರಳಲ್ಲಿ ಬದುಕುತ್ತಿದ್ದೇವೆ ಎಂದು ಬಾಂಗ್ಲಾದೇಶದ ಹಿಂದು ಸಮುದಾಯ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಹಿಂದು ಸಮುದಾಯ, ಇದನ್ನು ಬಾಂಗ್ಲಾ ನಾಯಕರ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಮನವಿ ಮಾಡಿದೆ.ಮುಖ್ಯಾಂಶಗಳು

* ಪ್ರಧಾನಿಯಾದ ನಂತರ  ಮೋದಿ ಅವರ 19ನೇ ವಿದೇಶ ಪ್ರವಾಸ

* ವಾಜಪೇಯಿ ಅವರಿಗೆ ನೀಡಿರುವ ‘ಫ್ರೆಂಡ್‌ ಆಫ್‌ ಬಾಂಗ್ಲಾದೇಶ ಲಿಬರೇಷನ್‌ ಅವಾರ್ಡ್‌’ ಸ್ವೀಕಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.