ಸೋಮವಾರ, ಏಪ್ರಿಲ್ 19, 2021
32 °C

ಬಾಕ್ಸಿಂಗ್‌ನ ತೆಂಡೂಲ್ಕರ್ ಎನಿಸಿಕೊಳ್ಳಬೇಕು

ಪ್ರಜಾವಾಣಿ ವಾರ್ತೆ ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕ್ರಿಕೆಟ್ ಎಂದರೆ ಸಚಿನ್ ತೆಂಡೂಲ್ಕರ್. ಹಾಗೇ, ನಾನು ಬಾಕ್ಸಿಂಗ್‌ನ ತೆಂಡೂಲ್ಕರ್ ಎನಿಸಿಕೊಳ್ಳಬೇಕು. ಸಚಿನ್ ರೀತಿ ಹೆಸರು ಮಾಡಬೇಕು. ಮತ್ತಷ್ಟು ಮಕ್ಕಳನ್ನು ಬಾಕ್ಸಿಂಗ್‌ನತ್ತ ಆಕರ್ಷಿಸಬೇಕು. ನಾನು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೇಲೆ ಭಾರತದ ಬಾಕ್ಸಿಂಗ್‌ನಲ್ಲಿ ಒಂದು ಕ್ರಾಂತಿಯೇ ಆಗಿದೆ. ಈ ಬಾರಿಯೂ ನನ್ನ ಮೇಲೆ ಪದಕದ ನಿರೀಕ್ಷೆ ಇಟ್ಟುಕೊಳ್ಳಬಹುದು~

-2008ರ ಬೀಜಿಂಗ್ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಜಯಿಸಿ ದೇಶದ ಕ್ರೀಡಾ ರಂಗದಲ್ಲಿ ಹೊಸ ಅಲೆ ಎಬ್ಬಿಸಿದ ವಿಜೇಂದರ್ ಸಿಂಗ್ ಅವರ ಹೆಮ್ಮೆಯ ನುಡಿಗಳಿವು. `ಬಾಕ್ಸಿಂಗ್ ತೊಟ್ಟಿಲು~ ಎನಿಸಿರುವ ಹರಿಯಾಣದ ಭಿವಾನಿಯ ವಿಜೇಂದರ್ ಅವರ ಈ ಸಾಧನೆಯಿಂದ ಇಂದು ಸಾವಿರಾರು ಮಕ್ಕಳು ಬಾಕ್ಸಿಂಗ್ ತರಬೇತಿ ಪಡೆಯಲು ಶುರು ಮಾಡಿದ್ದಾರೆ.ವಿಜೇಂದರ್ 2006ರ ಮೆಲ್ಬರ್ನ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ, ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಹಾಗೂ 2009ರಲ್ಲಿ ಮಿಲನ್‌ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕೃತ ಕೂಡ. ವಿಶ್ವ ಅಮೆಚೂರ್ ಬಾಕ್ಸಿಂಗ್ ರ‌್ಯಾಂಕಿಂಗ್‌ನಲ್ಲಿ ಒಮ್ಮೆ ಅಗ್ರಸ್ಥಾನ ತಲುಪಿದ್ದರು.ಸುಂದರ ರೂಪ, ಆಕರ್ಷಕ ಮೈಕಟ್ಟು ಹೊಂದಿರುವ 26 ವರ್ಷ ವಯಸ್ಸಿನ ವಿಜೇಂದರ್‌ಗೆ ಬಾಲಿವುಡ್‌ನಿಂದಲೂ ಆಹ್ವಾನ ಬಂದಿದೆ. ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದ `ದಸ್ ಕಾ ದಮ್~ ಹಾಗೂ `ನಾಚ್ ಬಾಲಿಯೇ~ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.ಇದು ಅವರಿಗೆ ಮೂರನೇ ಒಲಿಂಪಿಕ್ಸ್. ಈ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್. ಅವರು ಈ ಬಾರಿ 75 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.ವಿಜೇಂದರ್ ಲಂಡನ್‌ಗೆ ತೆರಳುವ ಮುನ್ನ `ಪ್ರಜಾವಾಣಿ~ ಜೊತೆ  ಹಲವು ವಿಚಾರ ಹಂಚಿಕೊಂಡಿದ್ದಾರೆ.  * ಲಂಡನ್‌ನಲ್ಲಿ ಬೀಜಿಂಗ್ ಒಲಿಂಪಿಕ್ಸ್ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸವಿದೆಯಾ?

ನಾನು ಮಾತ್ರವಲ್ಲ; ಪ್ರತಿಯೊಬ್ಬರೂ ಈಗ ವಿಶ್ವಾಸದಿಂದ ಇದ್ದಾರೆ. ಪ್ರತಿ ಯುವ ಬಾಕ್ಸರ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ ಪದಕದ ನಿರೀಕ್ಷೆ ಇಟ್ಟುಕೊಳ್ಳಬಹುದು. ಬೀಜಿಂಗ್ ಒಲಿಂಪಿಕ್ಸ್ ಸಾಧನೆಯನ್ನು ಮೀರಿಸುವ ವಿಶ್ವಾಸವನ್ನು ನಾನು ಹೊಂದಿದ್ದೇನೆ. ಅದಕ್ಕೆ ಪೂರ್ಣವಾಗಿ ಸಿದ್ಧವಾಗ್ದ್ದಿದೇನೆ. ನಾವೆಲ್ಲಾ ಪುಣೆ, ಪಟಿಯಾಲ ಹಾಗೂ ಐರ್ಲೆಂಡ್‌ನಲ್ಲಿ ತರಬೇತಿ ಪಡೆದಿದ್ದೇವೆ. ಈಗ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಲಂಡನ್‌ನಲ್ಲಿ ಬ್ರಿಟಿಷ್ ಬಾಕ್ಸರ್‌ಗಳೊಂದಿಗೆ ತರಬೇತಿ ನಡೆಸಲಿದ್ದೇವೆ.* ಭಾರತದ ಬಾಕ್ಸಿಂಗ್‌ನಲ್ಲಿ ಕ್ರಾಂತಿಗೆ ನೀವು ಕಾರಣರಾಗಿದ್ದೀರಿ. ಇದನ್ನು ಹೇಗೆ ವಿಶ್ಲೇಷಿಸುತ್ತೀರಿ?

ನೋಡಿ ಈ ಬಾರಿ ಏಳು ಬಾಕ್ಸರ್‌ಗಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದೊಂದು ಖಂಡಿತ ದೊಡ್ಡ ಕ್ರಾಂತಿ. ಮೇರಿ ಕೋಮ್ ಕೂಡ ಇದ್ದಾರೆ. ಅವರಿಂದ ಖಂಡಿತ ಒಂದು ಪದಕ ನಿರೀಕ್ಷಿಸಬಹುದು. ನಾನು ಬೀಜಿಂಗ್‌ನಲ್ಲಿ ಪದಕ ಗೆದ್ದ ಮೇಲೆ ಬಾಕ್ಸರ್‌ಗಳ ಸಂಖ್ಯೆ ಹೆಚ್ಚಿದೆ. ಹೆಚ್ಚಿನ ಮಕ್ಕಳಲ್ಲಿ ಆಸಕ್ತಿ ಮೂಡಿದೆ. ಇಷ್ಟು ಸಾಕಲ್ಲವೇ?* ಮಾಡೆಲಿಂಗ್ ಕ್ಷೇತ್ರದೆಡೆಗೆ ನೀವು ಆಕರ್ಷಿತರಾಗಲು ಕಾರಣ?


ಕೆಲ ರ‌್ಯಾಂಪ್ ಶೋ ಹಾಗೂ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡ್ದ್ದಿದೇನೆ. ಈ ಕ್ಷೇತ್ರ ಆಯ್ದುಕೊಂಡ ಉದ್ದೇಶ ಬಾಕ್ಸಿಂಗ್‌ನತ್ತ ಉಳಿದವರಲ್ಲಿ ಆಸಕ್ತಿ ಮೂಡಿಸುವುದು. ಒಬ್ಬ ಬಾಕ್ಸರ್ ಇಷ್ಟು ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ಮನದಟ್ಟು ಮಾಡಬೇಕು. ಅಖಿಲ್ ಕುಮಾರ್ ಅವರಂತಹ ಪ್ರತಿಭಾವಂತ ಬಾಕ್ಸರ್ ಇದ್ದರೂ ಬಾಕ್ಸಿಂಗ್‌ನತ್ತ ಹೆಚ್ಚು ಒಲವು ಇರಲಿಲ್ಲ. ಈಗ ನೋಡಿ ಭಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ ಸಾವಿರಾರು ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.* ನಿಮ್ಮ ತಂದೆ ಹರಿಯಾಣದಲ್ಲಿ ಬಸ್ ಚಾಲಕರಾಗಿದ್ದರು ಎಂಬುದನ್ನು ಕೇಳಿದ್ದೇವೆ. ಅವರು ನಿಮ್ಮ ಬೆಳವಣಿಗೆಗೆ ಯಾವ ರೀತಿ ಶ್ರಮಿಸಿದರು?

ನನ್ನ ತರಬೇತಿಗೆ ಬೇಕಾಗುತ್ತಿದ್ದ ಹೆಚ್ಚಿನ ಹಣವನ್ನು ಹೊಂದಿಸಲು ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿದ್ದಾರೆ. ಈಗ ಅವರಷ್ಟು ಖುಷಿಪಡುವ ವ್ಯಕ್ತಿ ಮತ್ತೊಬ್ಬರಿಲ್ಲ.* ಯುವ ಬಾಕ್ಸರ್‌ಗಳಿಗೆ ಯಾವ ರೀತಿ ಸಲಹೆ ನೀಡುತ್ತಿದ್ದೀರಿ?

ಹೆಚ್ಚಿನ ಯುವ ಬಾಕ್ಸರ್‌ಗಳು ನನ್ನನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸಹಾಯ ನೀಡುತ್ತೇನೆ. ಆದರೆ ಅವರು ನನ್ನ ಒತ್ತಡ ಕಡಿಮೆ ಮಾಡಿದ್ದಾರೆ. ಇವರೆಲ್ಲಾ ಪ್ರತಿಭಾವಂತ ಬಾಕ್ಸರ್‌ಗಳು. ಒತ್ತಡವನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವ ಸಾಮರ್ಥ್ಯ ಇವರಲ್ಲಿದೆ.* ಈ ಬಾರಿ ನೀವು ಒಲಿಂಪಿಕ್ಸ್‌ಗೆ ಕೊನೆಯ ಕ್ಷಣದಲ್ಲಿ ಅವಕಾಶ ಗಿಟ್ಟಿಸಿದ್ದೀರಿ. ಪ್ರದರ್ಶನ ಮಟ್ಟದಲ್ಲಿ ಕುಸಿತ ಕಂಡಿದ್ದೀರಾ?


ಯಾವಾಗಲೂ ಒಂದೇ ಮಟ್ಟದ ಪ್ರದರ್ಶನ ನೀಡಲು ಅಸಾಧ್ಯ. ಇದು ಎಲ್ಲಾ ಕ್ರೀಡಾಪಟುಗಳ ಜೀವನದಲ್ಲಿ ಸಂಭವಿಸುತ್ತದೆ. ಒಂದು ವರ್ಷದ ಹಿಂದೆಯೇ ಅರ್ಹತೆ ಗಳಿಸಲಿ ಅಥವಾ ಕೊನೆಯ ಕ್ಷಣದಲ್ಲಿ ಸಿಗಲಿ ನಾನೀಗ ಅರ್ಹತೆ ಗಿಟ್ಟಿಸಿದ್ದೇನೆ. ಮೊದಲಿಗಿಂತಲೂ ಈಗ ವಿಶ್ವಾಸ ಹೆಚ್ಚಿದೆ.* ವೈವಾಹಿಕ ಜೀವನ ಹೇಗಿದೆ?


ಮನೆಯಲ್ಲಿ ಇರಲು ಸರಿಯಾಗಿ ಸಮಯವೇ ಸಿಗುವುದಿಲ್ಲ. ಪತ್ನಿ ಅರ್ಚನಾ ಈ ಬಗ್ಗೆ ಕೋಪ ಮಾಡಿಕೊಳ್ಳುತ್ತಿರುತ್ತಾಳೆ. ಒಲಿಂಪಿಕ್ಸ್ ಮುಗಿದ ಮೇಲೆ ಜೊತೆಯಲ್ಲಿಯೇ ಇರುತ್ತೇನೆ ಎಂದು ಭರವಸೆ ನೀಡಿ ಸಮಾಧಾನಪಡಿಸುತ್ತೇನೆ. * ನೀವು ಬಾಕ್ಸಿಂಗ್ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಯಾರು ಸ್ಫೂರ್ತಿ?

ನನ್ನ ಕಿರಿಯ ಸಹೋದರ. ನನಗಿಂತ ಮೊದಲೇ ಅವನು ಬಾಕ್ಸಿಂಗ್ ಶುರು ಮಾಡಿದ್ದ. ಆ ನಂತರ ರಾಜಕುಮಾರ್ ಸಾಂಗ್ವಾನ್ ಅವರಿಗೆ ಬಾಕ್ಸಿಂಗ್‌ನಲ್ಲಿ ಅರ್ಜುನ ಪ್ರಶಸ್ತಿ ಸಿಕ್ಕಿದ್ದು ನಮ್ಮಲ್ಲಿ ಸ್ಫೂರ್ತಿಗೆ ಕಾರಣವಾಯಿತು. ಜೊತೆಗೆ ಸರ್ಕಾರಿ ಕೆಲಸ ಗಿಟ್ಟಿಸುವುದು ಬಾಕ್ಸಿಂಗ್ ಆಯ್ಕೆ ಮಾಡಿಕೊಳ್ಳಲು ಇನ್ನೊಂದು ಕಾರಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.