ಶುಕ್ರವಾರ, ಮೇ 14, 2021
32 °C

ಬಾದಲ್ ರಂಗಭೂಮಿಯ ಅನ್ವೇಷಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮೆಲುಸ್ತರದ ರಂಗಕರ್ಮಿಗಳ ಜತೆ ಬೆರೆಯದೆ ಬಾದಲ್ ಸರ್ಕಾರ್ ರಂಗಭೂಮಿಯನ್ನು ಹುಡುಕುತ್ತ ಹೊರಟರು. ಮನುಷ್ಯ ಮನುಷ್ಯರ ನಡುವೆ ನೇರ ಸಂವಹನ ಸೃಷ್ಟಿಸುವ ರಂಗಭೂಮಿಯನ್ನು ಪ್ರೀತಿಸಿದರು. ರಂಗಭೂಮಿಯ ಮಹತ್ವವನ್ನು ಮತ್ತೆ ಮತ್ತೆ ಹೇಳಿ ದಿಕ್ಕು ತಪ್ಪಿದ್ದ 20ನೇ ಶತಮಾನವನ್ನು ಸರಿದಾರಿಗೆ ತಂದರು~ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ತಿಳಿಸಿದರು.ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಬಾದಲ್ ಸರ್ಕಾರ್ ರಂಗನಮನ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ರಂಗಭೂಮಿಯ ಸಂದರ್ಭದಲ್ಲಿ 20ನೇ ಶತಮಾನಕ್ಕಿಂತಲೂ 21ನೇ ಶತಮಾನದ ಪರಿಸ್ಥಿತಿ ಕುಲಗೆಟ್ಟಿದೆ. ಕೈಗಾರಿಕೆಗಳನ್ನೂ ಮೀರಿಸುವಂತೆ ಮನರಂಜನಾ ಉದ್ಯಮ ಲಾಭದತ್ತ ನಡೆಯುತ್ತಿದೆ. ರಂಗಭೂಮಿಯ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಯನ್ನು ಅಧಿಕಾರರೂಢರು ಕೇಳುತ್ತಿದ್ದಾರೆ. ಇದನ್ನು ಬಾದಲ್ ಒಪ್ಪುತ್ತಿರಲಿಲ್ಲ~ ಎಂದರು.`ನಾಟಕಗಳ ದರ ಕಡಿಮೆ ಮಾಡಿದ ಅವರು ನಾಟಕಗಳ ನಿರ್ಮಾಣಕ್ಕೆ ತಗಲುತ್ತಿದ್ದ ವೆಚ್ಚವನ್ನು ಕಡಿಮೆ ಮಾಡಿ ಸರಳ ರೀತಿಯಲ್ಲಿ ಕೃತಿಗಳನ್ನು ಪ್ರಸ್ತುತ ಪಡಿಸುತ್ತಿದ್ದರು. ಆಳದಲ್ಲಿ ಎಡಪಂಥೀಯ ಸಿದ್ಧಾಂತವನ್ನು ವಿರೋಧಿಸುತ್ತಿದ್ದರೂ ಎಡಪಂಥೀಯ ನಾಟಕಗಳನ್ನು ಪ್ರೋತ್ಸಾಹಿಸುತ್ತಿದ್ದರು. ದೇಶದಲ್ಲಿ ಜನಪರ ಚಳವಳಿಗಳು ನಡೆಯುತ್ತಿದ್ದ ಕಡೆ ತೆರಳಿ ಅವರೊಂದಿಗೆ ಬೆರೆತರು~ ಎಂದು ಸ್ಮರಸಿದರು.ರಂಗ ವಿಮರ್ಶಕ ಪ್ರೊ. ಸಮಿಕ್ ಬಂದೋಪಾಧ್ಯಾಯ, `ಸಿವಿಲ್ ಎಂಜಿನಿಯರ್ ಪದವಿ ಪಡೆದ ಬಾದಲ್ ರಂಗಭೂಮಿಗೆ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡರು. ಮೊದ ಮೊದಲು ಹಾಸ್ಯ ನಾಟಕಗಳನ್ನು ಬರೆದ ಅವರು ಸಿನಿಮಾಗಿಂತಲೂ ನಾಟಕ ಪ್ರಧಾನ ಮಾಧ್ಯಮ ಎಂದು ನಂಬಿದ್ದರು. ಸಮಾಜ ವಿಜ್ಞಾನಿಗಳು, ಕಲಾವಿದರು ಹೀಗೆ ಸಣ್ಣ ಸಮೂಹದ ಜತೆ ಸೇರಿ ನಾಟಕ ಪ್ರಯೋಗ ಆರಂಭಿಸಿದರು~ ಎಂದರು.ರಾಷ್ಟ್ರೀಯ ನಾಟಕ ಶಾಲೆಯ ಪ್ರಾಧ್ಯಾಪಕಿ ಡಾ.ತ್ರಿಪುರಾರಿ ಶರ್ಮ, `ಬಾದಲ್ ಅವರು ದಾರ್ಶನಿಕರಾಗಿಯೂ ಮತ್ತು ಪ್ರದರ್ಶಕನಾಗಿಯೂ ಕಾಣುತ್ತಿದ್ದರು. ಅವರ ಮಾನವೀಯ ಗುಣಗಳು ಭಾವನೆಗಳು ವಿಭಿನ್ನವಾಗಿದ್ದವು~ ಎಂದು ತಿಳಿಸಿದರು.ನಂತರ `ಆಧುನಿಕ ಚಹರೆಗಳ ಹುಡುಕಾಟ: ಬಾದಲ್ ಸರ್ಕಾರರ ರಂಗಭೂಮಿ~ ಮತ್ತು `ಕನ್ನಡ ರಂಗಭೂಮಿಯಲ್ಲಿ ಬಾದಲ್ ಸರ್ಕಾರ್~ಕುರಿತ ವಿಚಾರ ಸಂಕಿರಣ  ನಡೆದವು. ಅವರ `ಮೆರವಣಿಗೆ~ ನಾಟಕವನ್ನು ಇದೇ ವೇಳೆ ಪ್ರದರ್ಶಿಸಲಾಯಿತು. ರಂಗಕರ್ಮಿ ಬಿ. ಸುರೇಶ ನಿರೂಪಿಸಿದರು.

 

`ಸಮಗ್ರತೆಯ ಕೊರತೆ~
ನಗರದಲ್ಲಿ ಎನ್‌ಎಸ್‌ಡಿಗಾಗಿ ಜಾಗ ಮೀಸಲಿಟ್ಟು ನಾಲ್ಕು ವರ್ಷ ಕಳೆದಿವೆ. ಆದರೆ ಅಲ್ಲಿ ಯಾವುದೇ ಪ್ರಗತಿ ಕಂಡು ಬರುತ್ತಿಲ್ಲ. `ರಾಷ್ಟ್ರೀಯ~ ಎಂಬ ಹೆಸರಿನಲ್ಲಿ ಅದು ಕಟ್ಟುತ್ತಿರುವುದು ದೆಹಲಿಯನ್ನೇ ಹೊರತು ಭಾರತವನ್ನಲ್ಲ” ಎಂದು ಪ್ರಸನ್ನ ಟೀಕಿಸಿದರು.`ರಂಗಾಯಣವನ್ನು ಮೂರು ಸಂಸ್ಥೆಗಳನ್ನಾಗಿ ರೂಪಿಸಲಾಗಿದೆ. ಸರ್ಕಾರಕ್ಕೆ ರಂಗಭೂಮಿಯ ಯೋಗ್ಯತೆ ಅರಿವಾಗಿಲ್ಲ. ನಿಯಮಗಳನ್ನು ರೂಪಿಸದೆಯೇ ರಂಗಾಯಣ ಸಂಸ್ಥೆಗಳಿಗೆ ನಿರ್ದೇಶಕರನ್ನು ನೇಮಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.