ಬುಧವಾರ, ಮೇ 12, 2021
24 °C

ಬಾಯಲ್ಲಿ ನೀರೂರಿಸಿದ ಪಂಚರಸ ಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಸಿಹಿ, ಕಹಿ ಒಗರು ಹಾಗೂ ಹುಳಿ ತುಂಬಿದ ಪಂಚರಸಭರಿತ ಬೆಟ್ಟದ ನೆಲ್ಲಿ ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಬರುತ್ತಿರವ ರೈತರ ಬಾಯಲ್ಲಿ ನೀರೂರಿಸುತ್ತಿದೆ.ಮಳಿಗೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವ ಮೊಟ್ಟೆಯಾಕಾರದ ಕಾಡ ನೆಲ್ಲಿ. ಇದರ ಜತೆಗೆ ನೆಲ್ಲಿಯಿಂದಲೇ ತಯಾರಿಸಲಾದ ಕ್ಯಾಂಡಿ, ಅಡಿಕೆ ಹಾಗೂ ಚೂರ್ಣ ಗಮನೆ ಸೆಳೆಯುತ್ತಿದೆ. ನೆಲ್ಲಿಕಾಯಿ ಮಳಿಗೆಗೆ ಭೇಟಿ ನೀಡವವರ ಬಾಯಿ ತೊಯ್ದು ತೆಪ್ಪೆಯಾಗುತ್ತಿದೆ. ಮಳಿಗೆಯವರು ಒಂದಿಷ್ಟು ನೆಲ್ಲಿ ಅಡಿಕೆ ಒದಗಿಸಿ ಅದರ ರುಚಿ ಸವಿಯುವಂತೆ ಮಾಡಿ ಕೃಷಿಕರ ಕುತೂಹಲ ಕೆರಳಿಸುತ್ತಿದ್ದಾರೆ.ಬರ ನಿರ್ವಹಣೆಗಾಗಿ ಬೆಳೆಯ ಗಿಡ ಬೆಟ್ಟದ ನೆಲ್ಲಿ. ಇದನ್ನು ಪರ್ಯಾ ಬೆಳೆಯಾಗಿಯೂ ಬೆಳೆಯಬಹುದು. ಯಾವ ಬೆಳೆ ಕೈಕೊಟ್ಟರೂ ನೆಲ್ಲಿ ರೈತನ ಕೈಬಿಡುವುದಿಲ್ಲ. ಬರಗಾದಲ್ಲೂ ಫಲಕೊಡುವ ವೃಕ್ಷ ಇದು. ಅಂತೆಯೇ ನೆಲ್ಲಿ ಮಹತ್ವ, ನೆಲ್ಲಿ ಗಿಡದ ನಿರ್ವಹಣೆ  ಹಾಗೂ ಮಾರುಕಟ್ಟೆಯ ಕುರಿತು ಮಾರಾಟ ಮಳಿಗೆಯಲ್ಲಿ ದೊರೆಯುತ್ತಿದ್ದ ಮಾಹಿತಿ ಪಡೆಯಲು ರೈತರು ಮುಗಿಬಿದ್ದಿದ್ದರು.ವಿಪುಲ ಔಷಧೀಯ ಗುಣಗಳನ್ನು ಹೊಂದಿರುವ ಈ ಹಣ್ಣು ಮನುಷ್ಯನ ಅಡಿಯಿಂದ ಮುಡಿಯವರೆಗಿನ ಆರೋಗ್ಯ ರಕ್ಷಣೆಯಲ್ಲಿ ಉಪಯುಕ್ತವಾಗಿದೆ. ಕೃಷಿ ಭೂಮಿ ಹಾಗೂ ಬರಡು ಜಮೀನಿನಲ್ಲಿಯೂ ಬೆಳೆಯುವ ಗಿಡ ಇದಾಗಿದೆ ಎಂದು ಕೃಷಿ ಮೇಳದಲ್ಲಿ ಮಳಿಗೆಯನ್ನು ತೆರೆದಿರುವ  ಗದಗ ಜಿಲ್ಲೆ ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಲ್.ಎಚ್. ಹಿರೇಗೌಡರ ಮಾಹಿತಿ ನೀಡಿದರು.ರಾಜ್ಯದ ಎಲ್ಲ ಪ್ರದೇಶದಲ್ಲಿ ಕಾಡು ನೆಲ್ಲಿ ಬೆಳೆಯಬಹುದು. ಜೂನ್, ಜುಲೈ ನಾಟಿಗೆ ಸೂಕ್ತ ಸಮಯ. ಬನಾರಸ, ಕೃಷ್ಣಾ, ಚಕೈಯಾ, ಕಂಚನ  ಈ ಭಾಗದಲ್ಲಿ ಬೆಳೆಯಬಹುದಾದ ಪ್ರಮುಖ ತಳಿಗಳು. ಎನ್-6, ಎನ್-7, ಎನ್-10 ಸುಧಾರಿತ ತಳಿಗಳೂ ಇವೆ. ಪ್ರತಿ 75 ಅಡಿಗಳ ಅಂತರದಲ್ಲಿ ಒಂದು ಎಕರೆ ಪ್ರದೇಶದಲ್ಲಿ 24 ಗಿಡಗಳನ್ನು ಬೆಳೆಯಬಹುದು. ಇದರೊಂದಿಗೆ ಹೆಸರು, ಹುರಳಿ ಹಾಗೂ ಅಲಸಂದೆಯನ್ನೂ ಬೆಳೆಯಬಹುದು. ನೆಲ್ಲಿಯ ಬೇರುಗಳು ಪಸರಿಸುವುದಿಲ್ಲ.  ನೇರವಾಗಿ ನೆಲದೊಳಗೆ ಇಳಿಯುತ್ತವೆ. ಹೀಗಾಗಿ ಇತರೆ ಬೆಳೆಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು ಹಿರೇಗೌಡರ.ನಾಟಿ ಮಾಡಿದ 4-5 ವರ್ಷಗಳ ನಂತರ ಗಿಡಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಆರಂಭದಲ್ಲಿ ಒಂದು ಗಿಡ 20ರಿಂದ 25 ಕೆಜಿ ನಲ್ಲಿಕಾಯಿ ಬಿಡುತ್ತದೆ. ಸದೃಢವಾದ ಮರ 50ರಿಂದ 55 ಕೆಜಿ  ನೆಲ್ಲಿಕಾಯಿ ಕೊಡುತ್ತದೆ. ಕಾಯಿಯನ್ನು ಮರದಿಂದ ಇಳಿಸಿದ ನಂತರ ತಕ್ಷಣ ಮಾರಾಟ ಮಾಡುವ ಒತ್ತಡ ಇದಕ್ಕಿಲ್ಲ. ಒಂದು ತಿಂಗಳವರೆಗೂ ಶೇಖರಿಸಿಡಬಹುದು.ರೈತರಿಗೆ ಸಸಿಗಳನ್ನು ಪೂರೈಸುವವರು ನೆಲ್ಲಿಕಾಯಿಂದ ತಯಾರಿಸಬಹುದಾದ ಪದಾರ್ಥಗಳು ಬಗ್ಗೆಯೂ ಮಾಹಿತಿ ಒದಗಿಸುತ್ತಾರೆ. ಇದರಿಂದ ಕ್ಯಾಂಡಿ, ಅಡಿಕೆ ತಯಾರಿಸಿ ಮಾರಾಟ ಮಾಡಬಹುದು. ಈ ಮೂಲಕ ಇನ್ನುಳಿದವರಿಗೂ ಉದ್ಯೋಗ ಕಲ್ಪಿಸಬಹುದು. ಅದರಿಂದ ಉತ್ತಮ ಆದಾಯವನ್ನೂ ಪಡೆಯಬಹುದು.ಈಗಾಗಲೇ ಗದಗ ಜಿಲ್ಲೆಯ ಹುಲಕೋಟಿ, ಬೆಂಗಳೂರು ಬೃಹತ್ ಮಾಲ್‌ಗಳಿವೆ.  ಅಂತಹ ಮಳಿಗೆಗಳ ಮೂಲಕ ಗ್ರಾಹಕರಿಗೆ ನೆಲ್ಲಿ ಪದಾರ್ಥ ಪೂರೈಸಬಹುದು ಎಂದರು ಮಾರಾಟ ಮಳಿಗೆಯಲ್ಲಿದ್ದವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.