ಬುಧವಾರ, ಫೆಬ್ರವರಿ 24, 2021
23 °C

ಬಾರಿನೊಳಗೆ ನಿಂತು...

ಸಂದರ್ಶನ:ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಬಾರಿನೊಳಗೆ ನಿಂತು...

ಕುಡಿತದ ಮೂಲಕ ಸಾಮಾಜಿಕ ವಿಶ್ಲೇಷಣೆಗೆ ಪ್ರಯತ್ನಿಸುವ ಸಿನಿಮಾ ‘ಪರಪಂಚ’. ಬದುಕಿನ ಹಲವು ಆಯಾಮಗಳಿಗೆ ಕನ್ನಡಿ ಹಿಡಿಯುವ ‘ಪರಪಂಚ’ದ ಬಗ್ಗೆ ನಿರ್ದೇಶಕ ಕ್ರಿಷ್ ಜೋಶಿ ಅವರಿಗೆ ಅಪರಿಮಿತ ವಿಶ್ವಾಸ.* ಈ ವಾರ, ಮುಂದಿನ ವಾರ ಎನ್ನುತ್ತಲೇ ‘ಪರಪಂಚ’ದ ಬಿಡುಗಡೆ ಸಾಕಷ್ಟು ವಿಳಂಬವಾಯಿತಲ್ಲ?

ಅದೇನೋ ಹೌದು; ಆದರೆ ಎಲ್ಲವೂ ನಮ್ಮ ಕೈಲಿ ಇಲ್ಲವಲ್ಲ? ಮೊದಲಿಗೆ ನಾನು ಪ್ಲಾನ್ ಮಾಡಿದ್ದು ನಾಲ್ಕೂವರೆ ತಿಂಗಳ ಪ್ರಾಜೆಕ್ಟ್‌ ಅಂತ. ಒಂದೂ ಮುಕ್ಕಾಲು ವರ್ಷ ತೆಗೆದುಕೊಂಡಿತು. ಒಂದು ತಂಡದಲ್ಲಿನ ನೂರು ಜನರು ಕುಳಿತು ಮಾಡುವ ಕೆಲಸ ಇದಲ್ಲವೇ? ಹೀಗಾಗಿ ಸ್ವಲ್ಪ ಹೆಚ್ಚೇ ತಡ ಆಯಿತು! ಅಂತೂ ಇಂತೂ ಈಗ ಬಿಡುಗಡೆಯಾಗುತ್ತಿದೆ. ಆ ಖುಷಿಯಲ್ಲಿ ಇದ್ದೇನೆ.

* ‘ಪರಪಂಚ’ದಲ್ಲಿ ನೀವು ತೋರಿಸುವ ಪ್ರಪಂಚ ನಾವು ಸುತ್ತಲೂ ನೋಡುವಂಥದೋ ಅಥವಾ ಕಾಲ್ಪನಿಕವೋ?

ಜಗತ್ತಿನ ಚಿಕ್ಕ ಪ್ರತಿಕೃತಿಯನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಇದು. ನಮ್ಮ ಸುತ್ತಲಿನ ಪ್ರಪಂಚದಲ್ಲಿ ಕಾಣಿಸುವ ಎಲ್ಲ ತರಹದ ಭಾವನೆಗಳು ಇದರಲ್ಲಿವೆ. ಪ್ರಪಂಚದಲ್ಲಿನ ಒಂದು ಬಾರ್‌ ಅಂಡ್ ರೆಸ್ಟೊರೆಂಟ್ ಹೆಸರೇ ‘ಪರಪಂಚ’. ಇದರ ಟ್ಯಾಗ್‌ಲೈನ್– ‘ವೆಜ್‌ ಅಂಡ್ ನಾನ್‌ವೆಜ್‌’ ಅಂತಿದೆ. ಸೋಲು– ಗೆಲುವು, ಸುಖ– ದುಃಖ, ಒಳ್ಳೆಯದು– ಕೆಟ್ಟದ್ದು, ಮಾನವೀಯತೆ– ದುಷ್ಟತನ... ಹೀಗೆ ಇದು ಎಲ್ಲಕ್ಕೂ ಅನ್ವಯವಾಗುತ್ತದೆ. ಅವಧೂತ, ಬಾರ್ ಡ್ಯಾನ್ಸರ್, ವೇದಾಂತಿ, ಉದ್ಯಮಿ, ಆಟೋ ಕವಿ, ವಿಮೆ ಏಜೆಂಟ್ ಪಾತ್ರಗಳ ಮೂಲಕ ನಾನು ಅದನ್ನು ತೋರಿಸಿದ್ದೇನೆ.* ಪಾತ್ರಗಳ ಹೆಸರುಗಳೇ ವಿಚಿತ್ರವಾಗಿವೆ. ಅದಕ್ಕೆಲ್ಲ ಬಣ್ಣ ಹಚ್ಚಿದವರ ಬಗ್ಗೆ ಒಂದಷ್ಟು ಹೇಳಿ.

ಹಾಂ! ಅದರಲ್ಲಿನ ಪಾತ್ರಗಳ ಹೆಸರು ನಾಕಾಣೆ, ಖಾಲಿ–ಪೀಲಿ ಹೀಗೆ... ಯೋಗರಾಜ ಭಟ್ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಒಂದು ಪಾತ್ರವನ್ನು ಸೃಷ್ಟಿಸಿದ್ದೆ. ಅವರು ಒಲ್ಲೆ ಅಂದಾಗ ನಾನು ನಿರ್ದೇಶನ ಮಾಡೋದಿಲ್ಲ ಅಂತ ಹೇಳಿ ಹೊರಟುಬಿಟ್ಟೆ. ಕೊನೆಗೆ ಭಟ್ಟರೇ ಸಮಾಧಾನ ಮಾಡಿ, ನಟಿಸಲು ಒಪ್ಪಿದರು. ಅನಂತನಾಗ್ ಅವರೂ ಅಷ್ಟೇ. ನನ್ನ ಚಿತ್ರಕಥೆ ಮೆಚ್ಚಿಕೊಂಡರು. ಬೇರೆ ದೃಶ್ಯ ಚಿತ್ರೀಕರಿಸುವಾಗಲೂ ಸೆಟ್‌ನಲ್ಲಿ ಬಂದು ನೋಡುತ್ತಿದ್ದರು. ಅವರೇ ಹಾಡಿರುವ ಒಂದು ಹಾಡು ಶೀರ್ಷಿಕೆಗೆ ಸೂಕ್ತವಾಗುವಂತಿದೆ. ಇನ್ನು ಬಾರ್‌ ಡಾನ್ಸರ್ ಪಾತ್ರಕ್ಕೆ ರಾಗಿಣಿ ಅವರೇ ಸೂಕ್ತ ಅಂದುಕೊಂಡೆ. ಅವರಿಗೆ ಚಿತ್ರಕಥೆ ಹೇಳುತ್ತಲೇ ‘ನಾನೇ ಈ ಪಾತ್ರ ಮಾಡ್ತೀನಿ. ಬೇರೆಯವರಿಗೆ ಕೊಟ್ಟರೆ ನಿಮ್ಮನ್ನ ಸಾಯಿಸಿ ಬಿಡ್ತೀನಿ’ ಅಂತ ನಗುತ್ತಲೇ ಬೆದರಿಕೆ ಹಾಕಿದ್ದರು! ಪೊಲೀಸ್ ಅಧಿಕಾರಿಯಾಗಿ ಯೋಗೀಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

* ಅಂದರೆ ಕಲಾವಿದರನ್ನು ಗಮನದಲ್ಲಿ ಇಟ್ಟುಕೊಂಡು ಪಾತ್ರ ಸೃಷ್ಟಿಸಿದ್ದಾ?

ಪೂರ್ಣವಾಗಿ ಹಾಗಲ್ಲ. ಕಾದಂಬರಿ ಬರೆಯುವಾಗ ಪಾತ್ರವೊಂದನ್ನು ಧ್ಯಾನಿಸುತ್ತೇವೆ, ಅಲ್ಲವೇ? ಆದರೆ ಸಿನಿಮಾ ಸ್ಕ್ರಿಪ್ಟ್ ವಿಷಯದಲ್ಲಿ ಹಾಗಿಲ್ಲ. ಚಿತ್ರಕಥೆ ಬರೆದಾದ ಮೇಲೆ, ಅದರಲ್ಲಿನ ಪಾತ್ರಕ್ಕೆ ಯಾರು ಸೂಕ್ತವಾಗುತ್ತಾರೋ ಅವರಿಗೆ ಹೊಂದಿಕೆಯಾಗುವಂತೆ ಸಂಭಾಷಣೆ ಬರೆಯಬೇಕು. ‘ಪರಪಂಚ’ದಲ್ಲಿ ಯೋಗರಾಜ ಭಟ್ ಪಾತ್ರವನ್ನು ಅನಂತನಾಗ್ ಮಾಡಿದರೆ ಬೇರೆಯ ತರಹದ ಸಂಭಾಷಣೆ ಬರೆಯುತ್ತಿದ್ದೆ. ಅದು ದಿಗಂತ್, ರಂಗಾಯಣ ರಘು, ರಾಗಿಣಿಗೂ ಅನ್ವಯವಾಗುತ್ತದೆ.* ಬಾರ್‌– ರೆಸ್ಟೊರೆಂಟ್‌ನಂಥ ಚಿಕ್ಕ ಜಾಗದಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಸುವುದು ಕಷ್ಟವಾಯಿತೆ?

ವಾಸ್ತವವಾಗಿ ಮೊದಲು ನನ್ನ ಪ್ಲಾನ್‌ ಇದ್ದಿದ್ದು ಒಂದು ಸಣ್ಣ ಸಿನಿಮಾ ನಿರ್ಮಾಣ. ಜನನಿಬಿಡ ರಸ್ತೆಯೊಂದರಲ್ಲಿರುವ ಬಾರ್‌ ಅಂಡ್ ರೆಸ್ಟೊರೆಂಟ್‌ನ ಬಾಗಿಲು ತೆರೆದು, ಅಲ್ಲೊಂದಷ್ಟು ಘಟನೆ ನಡೆದು ಕೊನೆಗೆ ಬಾಗಿಲು ಮುಚ್ಚುತ್ತದೆ. ಅದಷ್ಟೇ ಕಥೆ. ಆದರೆ ದೊಡ್ಡ ದೊಡ್ಡ ನಿರ್ಮಾಪಕರು ಬಂಡವಾಳ ಹಾಕಲು ಬಂದರು. ಇದರಿಂದ ಸಿನಿಮಾ ದೊಡ್ಡದಾಯಿತು. ಶೇಕಡ 10ರಷ್ಟು ಭಾಗ ಔಟ್‌ಡೋರ್‌ ಹೊರತುಪಡಿಸಿದರೆ, ಉಳಿದಿದ್ದೆಲ್ಲ ಬಾರ್‌ನೊಳಗೇ ಚಿತ್ರೀಕರಿಸಲಾಗಿದೆ. ಹೌದು... ಅದೊಂದು ಸವಾಲು. ಇದಕ್ಕಾಗಿ ಹಲವು ಪ್ರಯೋಗ ಮಾಡಿದೆವು.* ಹುಚ್ಚ ವೆಂಕಟ್ ಅವರಿಂದ ಹಾಡು ಹಾಡಿಸಿ, ಪಾತ್ರ ಕೊಟ್ಟಿದ್ದು ಗಿಮಿಕ್‌ ಅಲ್ಲವೇ?

ಖಂಡಿತ ಅಲ್ಲ. ವೆಂಕಟ್ ಅವರಲ್ಲಿನ ಪ್ರತಿಭೆ ಬಳಸಿಕೊಳ್ಳಬೇಕು ಅಂತ ಯೋಗರಾಜ ಭಟ್ ಹೇಳಿದಾಗ ನಮಗೆಲ್ಲ ಒಳಗೊಳಗೇ ಅಸಮಾಧಾನ ಮೂಡಿತ್ತು. ಈಗಾಗಲೇ ಆಡಿಯೋ ಸಿ.ಡಿ ಬಿಡುಗಡೆಯಾಗಿದೆ. ಅದರಿಂದ ಈಗೇನು ಲಾಭ ಅಂತ ನಾನು ಕೇಳಿದಾಗ, ‘ಚಿತ್ರದ ಪ್ರಚಾರಕ್ಕೆ ಅದನ್ನು ಬಳಸಿಕೊಳ್ಳೋಣ’ ಎಂದು ಭಟ್ಟರು ಸಲಹೆ ಮಾಡಿದರು. ನಾವೆಲ್ಲ ಅರೆಮನಸ್ಸಿನಿಂದ ಒಪ್ಪಿದೆವು. ಆದರೆ, ಅದು ಯೂಟ್ಯೂಬಿನಲ್ಲಿ ಸೂಪರ್ ಹಿಟ್ ಆಗಿಬಿಟ್ಟಿತು. ಭಟ್ಟರು ‘ವೆಂಕ್ಟಪ್ಪ, ಆಟೋ ಡ್ರೈವರ್ ಆಗಿ ಆ್ಯಕ್ಟ್ ಮಾಡಿ ಬಿಡು’ ಅಂದಾಗ ವೆಂಕಟ್ ‘ಓಕೆ’ ಅಂದರು. ಅದೂ ಆಗಿ ಹೋಯಿತು. ಅದಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ಕಂಡು ನಾನು ಅಚ್ಚರಿಪಟ್ಟೆ. ಬಳಿಕ ಭಟ್ಟರಿಗೆ ಫೋನ್ ಮಾಡಿ ‘ನಾವೆಲ್ಲ ತಪ್ಪು ಯೋಚಿಸಿದ್ದೆವು. ಆದರೆ ನೀವೇ ಸರಿ’ ಎಂದೆ. ಆ ಹಾಡಿನಿಂದ ಸಿನಿಮಾಕ್ಕಂತೂ ದೊಡ್ಡ ಟರ್ನ್ ಸಿಕ್ಕಿದೆ.* ‘ಪರಪಂಚ’ದ ವಿಶೇಷ ಏನು? ಪ್ರೇಕ್ಷಕನಿನೆ ಏನು ಸಿಗುತ್ತದೆ?

ಇದರಲ್ಲಿನ ಬಹುತೇಕ ಪಾತ್ರಗಳನ್ನು ನೀವು ಈ ಹಿಂದೆ ನೋಡಿರಲಿಕ್ಕಿಲ್ಲ; ಸಂಭಾಷಣೆಯನ್ನು ಎಲ್ಲೂ ಕೇಳಿರಲಿಕ್ಕಿಲ್ಲ. ಪ್ರೇಕ್ಷಕ ಬುದ್ಧಿವಂತ. ಆತನಲ್ಲಿರುವ ಜಾಣತನ ಆತನ ಅರಿವಿಗೆ ಬರುವಂತೆ ಚಿತ್ರಕಥೆ ಹೆಣೆದಿದ್ದೇನೆ. ಸಂಭಾಷಣೆಗಳು ಒಂದೆರಡು ಸೆಕೆಂಡ್ ತಡವಾಗಿ ಅರ್ಥವಾಗಬಹುದೇನೋ, ಆದರೆ ಅದು ಆತನ ಮನಸ್ಸಿನೊಳಗೆ ಆಳವಾಗಿ ಬೇರೂರುತ್ತದೆ. ನಾವೆಲ್ಲ ಯಾವುದೋ ದೃಷ್ಟಿಯಿಂದ ನೋಡುವ ಬಾರ್‌ ಡಾನ್ಸರ್‌, ತನ್ನ ಬದುಕಿನಲ್ಲಿ ಅನುಭವಿಸುವ ಸಂಕಟವೇನು? ಹಳ್ಳಿ ಬಿಟ್ಟು ಬರುವ ಯುವಕನ ಬಾಳಿನಲ್ಲಿ ನಡೆಯುವ ಬದಲಾವಣೆಯೇನು? ಬದುಕು ಸಾಗಿಸಲು ಏನೆಲ್ಲಾ ಸರ್ಕಸ್ ಮಾಡಬೇಕು ಎಂಬಿತ್ಯಾದಿ ಎಳೆಗಳು ಲಹರಿಯಂತೆ ಸಾಗುತ್ತವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.