ಮಂಗಳವಾರ, ಜನವರಿ 21, 2020
27 °C

ಬಾಲಕನ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಚಂದ್ರಾಲೇಔಟ್ ಸಮೀಪದ ಅರುಂಧತಿನಗರದಲ್ಲಿ ನಡೆದಿದೆ.ಅರುಂಧತಿನಗರ ನಿವಾಸಿ ಕಿರಣ್ (17) ಮೃತಪಟ್ಟ ಬಾಲಕ. ಆತನ ಪೋಷಕರು ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದಾಗಿ ಆತ ಚಿಕ್ಕಮ್ಮ ಸವಿತಾ ಅವರ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.15 ದಿನಗಳ ಹಿಂದೆ ಮನೆಯಿಂದ ಹೋಗಿದ್ದ ಕಿರಣ್ ವಾಪಸ್ ಬಂದಿರಲಿಲ್ಲ. ಅರುಂಧತಿನಗರದ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡದ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಆತನ ಶವ ಪತ್ತೆಯಾಗಿದೆ. ಆತನ ತಲೆಯ ಭಾಗದಲ್ಲಿ ಗಾಯದ ಗುರುತು ಇದೆ. ಈ ಅಂಶವನ್ನು ಗಮನಿಸಿದಾಗ ದುಷ್ಕರ್ಮಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.`ಕಿರಣ್ ಶವದ ಪಕ್ಕದಲ್ಲೇ ಸಲೂಷನ್ ಸಿಕ್ಕಿದೆ. ಮಾದಕ ವ್ಯಸನಿಯಾಗಿದ್ದ ಆತ ಸಲೂಷನ್ ಅನ್ನು ಮಾದಕ ವಸ್ತುವಾಗಿ ಬಳಕೆ ಮಾಡುತ್ತಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.ಚಂದ್ರಾಲೇಔಟ್ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಕೊಲೆ ಆರೋಪಿಗಳ ಬಂಧನ

ಜೆ.ಪಿ.ನಗರ ಎರಡನೇ ಹಂತದಲ್ಲಿ ನಡೆದಿದ್ದ ಮೈಕೊ ರವಿ (35) ಕೊಲೆ ಪ್ರಕರಣದ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಜಯನಗರದ ಬಾಲು ಮುರುಗನ್ (23), ಅನಿಲ (22), ಬಾಲರಾಜ್ (23), ಜೆ.ಪಿ.ನಗರದ ರಾಘವೇಂದ್ರ (23), ಕೆಂಪೇಗೌಡನಗರದ ಶಿವ ಅಲಿಯಾಸ್ ಕೋಳಿ ಫಯಾಜ್ (21), ಗವಿಪುರದ ಹರೀಶ್‌ಕುಮಾರ್ (21), ಚಂದ್ರಬಾಬು (21) ಮತ್ತು ಚಾಮರಾಜಪೇಟೆಯ ಜಗದೀಶ (20) ಬಂಧಿತರು. ಆರೋಪಿಗಳಿಂದ ಎರಡು ಕಾರು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದ ಮೈಕೊ ರವಿಯ ಸಹಚರರು ಪರಮೇಶ್ ಎಂಬುವರನ್ನು ತಿಲಕ್‌ನಗರ ಸಮೀಪ ಕೊಲೆ ಮಾಡಿದ್ದರು. ಪರಮೇಶ್ ಅವರ ಸಂಬಂಧಿಕನಾದ ಆರೋಪಿ ಬಾಲು ಮುರುಗನ್ ಪ್ರತೀಕಾರವಾಗಿ ಇತರೆ ಆರೋಪಿಗಳ ಜತೆ ಸೇರಿ ಮೈಕೊ ರವಿಯನ್ನು ಕೊಲೆ ಮಾಡಿದ್ದಾನೆ. ಪ್ರಕರಣದ ಇತರೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, ಜಯನಗರ ಉಪ ವಿಭಾಗದ ಎಸಿಪಿ ಜಿ.ಬಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಿ.ಎಸ್.ಅಂಗಡಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಮನೆ ಬೀಗ ಮುರಿದು ಕಳವು

ಮನೆಯ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಎರಡು ಲಕ್ಷ ನಗದು ಹಾಗೂ ಆಭರಣಗಳು ಸೇರಿದಂತೆ 4.40 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬಸವನಗುಡಿಯಲ್ಲಿ ನಡೆದಿದೆ.ಬಸವನಗುಡಿ ಕೃಷ್ಣ ರಸ್ತೆ ನಿವಾಸಿ ಸಚಿನ್ ಸುರೇಶ್ ಅವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಅವರು ಡಿ.31ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಸಂಬಂಧಿಕರ ಮನೆಗೆ ಹೋಗಿದ್ದರು. ಕಿಡಿಗೇಡಿಗಳು ಈ ಸಂದರ್ಭದಲ್ಲಿ ಅವರ ಮನೆಗೆ ನುಗ್ಗಿ ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ದುಷ್ಕರ್ಮಿಗಳು ಹಣ, ವಜ್ರದ ಉಂಗುರಗಳು ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

ನಗರದ ಎಚ್‌ಎಎಲ್, ಸದಾಶಿವನಗರ ಮತ್ತು ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿ ಸೇರಿದಂತೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವಿಜಯನಗರ ಸಮೀಪದ ಮಾರೇನಹಳ್ಳಿಯ ನಿವಾಸಿ ಕೆಂಪಮ್ಮ (28) ಎಂಬುವರು ಸೋಮವಾರ ಮಧ್ಯಾಹ್ನ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತಿ ಚಂದ್ರಶೇಖರ್ ಅವರು ಇತ್ತೀಚೆಗೆ ಮೃತಪಟ್ಟಿದ್ದರು.ಅತ್ತೆ ಮತ್ತು ಮಾವನ ಜತೆ ಮಾರೇನಹಳ್ಳಿ ಒಂದನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದ ಕೆಂಪಮ್ಮ ಕುಟುಂಬ ಸದಸ್ಯರೆಲ್ಲ ಹೊರಗೆ ಹೋಗಿದ್ದಾಗ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ವಿಜಯನಗರ ಪೊಲೀಸರು ತಿಳಿಸಿದ್ದಾರೆ.

`ಅತ್ತೆ, ಮಾವ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ~ ಎಂದು ಕೆಂಪಮ್ಮನ ತಾಯಿ ಪಾರ್ವತಮ್ಮ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಸದಾಶಿವ ನಗರದಲ್ಲಿ

ಯುವತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆವರಣದ ವಸತಿ ಸಮುಚ್ಚಯದಲ್ಲಿ ಭಾನುವಾರ ರಾತ್ರಿ ನಡೆದಿದೆ. ಐಐಎಸ್‌ಸಿಯಲ್ಲಿ ಡಿ ಗ್ರೂಪ್ ನೌಕರರಾಗಿರುವ ಲಕ್ಷ್ಮಮ್ಮ ಎಂಬುವರ ಪುತ್ರಿ ಶಶಿರೇಖಾ (25) ಆತ್ಮಹತ್ಯೆ ಮಾಡಿಕೊಂಡವರು.ಕುಟುಂಬ ಸದಸ್ಯರೆಲ್ಲ ಹೊರಗೆ ಹೋಗಿದ್ದಾಗ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.`ಪ್ರತಿ ವರ್ಷ ಆತ್ಮೀಯ ವ್ಯಕ್ತಿಯೊಬ್ಬರು ಹೊಸ ವರ್ಷದ ಶುಭಾಶಯ ಕೋರುತ್ತಿದ್ದರು. ಆ ವ್ಯಕ್ತಿ ಈ ವರ್ಷವೂ ಶುಭಾಶಯ ಕೋರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ, ಆ ವ್ಯಕ್ತಿ ಶುಭಾಶಯ ಕೋರಲಿಲ್ಲ. ಇದರಿಂದ ಬೇಸರವಾಗಿದೆ~ ಎಂದು ಶಶಿರೇಖಾ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೊಡ್ಡ ನೆಕ್ಕುಂದಿಯಲ್ಲಿ

ಎಚ್‌ಎಎಲ್ ಸಮೀಪದ ದೊಡ್ಡನೆಕ್ಕುಂದಿ ನಿವಾಸಿ ಡೊಮ್ನಿಕ್ (40) ಎಂಬುವರು ಭಾನುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಯಿ ಮರಿಗಳ ಮಾರಾಟ ಮಳಿಗೆ ಇಟ್ಟುಕೊಂಡಿದ್ದ ಅವರು ಸಹೋದರಿಯ ಮನೆಯಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎಚ್‌ಎಎಲ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)