ಗುರುವಾರ , ಮಾರ್ಚ್ 4, 2021
26 °C
ಇನ್ನೂ ದೊರೆಯದ ನೈಜೀರಿಯಾ ಅಪಹೃತ ವಿದ್ಯಾರ್ಥಿನಿಯರ ಸುಳಿವು

ಬಾಲಕಿಯರ ಪತ್ತೆಗೆ ಬಲಾಢ್ಯ ದೇಶಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಕಿಯರ ಪತ್ತೆಗೆ ಬಲಾಢ್ಯ ದೇಶಗಳು

ಕನೊ, ನೈಜೀರಿಯಾ (ಎಎಫ್‌ಪಿ): ಬೊಕೊ ಹರಮ್‌ ಉಗ್ರರು ಅಪಹರಿ­ಸಿರುವ ೨೦೦ಕ್ಕೂ ಹೆಚ್ಚು ಶಾಲಾ ಬಾಲಕಿಯರನ್ನು ಪತ್ತೆ ಮಾಡಲು ವಿಶ್ವದ ಬಲಾಢ್ಯ ದೇಶಗಳು ಕೈಜೋಡಿ­ಸಿವೆ. ಬಾಲಕಿಯರ ಶೋಧ ಕಾರ್ಯ­ದಲ್ಲಿ ಅಮೆರಿಕ, ಚೀನಾ, ಬ್ರಿಟನ್‌ ಮತ್ತು ಫ್ರಾನ್ಸ್‌ ಭಾಗಿಯಾಗಿವೆ.ಬಾಲಕಿಯರ ಅಪಹರಣದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ದೇಶಗಳು ತಜ್ಞರ ತಂಡಗಳನ್ನು ನೈಜೀರಿ­ಯಾಕ್ಕೆ ಕಳುಹಿಸಿವೆ.‘ತನ್ನ ಉಪಗ್ರಹ­ಗಳಲ್ಲಿ ಮತ್ತು ಗುಪ್ತಚರ ಸೇವೆಗಳಲ್ಲಿ ದಾಖಲಾಗುವ ಯಾವುದೇ ಉಪ­ಯುಕ್ತ ಮಾಹಿತಿ’­ಯನ್ನು ಹಸ್ತಾಂತರಿಸು­ವುದಾಗಿ ಚೀನಾ ಭರವಸೆ ನೀಡಿದೆ. ಬಾಲಕಿಯರ ಬಿಡುಗಡೆಗೆ ನೆರ­ವಾಗುವ ಮಾಹಿತಿ ನೀಡುವವರಿಗೆ ಸುಮಾರು ₨೧೮೦ ಲಕ್ಷ (3 ಲಕ್ಷ ಡಾಲರ್‌) ಉಡುಗೊರೆ ನೀಡುವುದಾಗಿ ನೈಜೀರಿಯಾ ಪೊಲೀಸರು ಘೋಷಿಸಿದ್ದಾರೆ.ಮುಂದುವರಿದ ಅಟ್ಟಹಾಸ: ಈ ವಾರದಲ್ಲಿ ಬೊಕೊ ಹರಮ್‌ ಮುಸ್ಲಿಮ್‌ ಮೂಲಭೂತವಾದಿ ಉಗ್ರರು ನೈಜೀರಿಯಾದ ಈಶಾನ್ಯ ಭಾಗದಲ್ಲಿ ನೂರಾರು ಜನರನ್ನು ಕೊಂದಿದ್ದಾರೆ.ಕ್ಯಾಮರೂನ್‌ ಗಡಿ ಭಾಗದಲ್ಲಿರುವ ಗಂಬುರು ಪಟ್ಟಣದ ಮೇಲೆ ಇತ್ತೀಚೆಗೆ ಬೊಕೊ ಹರಮ್‌ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ೩೦೦ಕ್ಕೆ ಏರಿದೆ ಎಂದು ಈ ಪ್ರದೇಶದ ಸೆನೆಟರ್‌ ಅಹ್ಮದ್‌ ಜನ್ನಾ ತಿಳಿಸಿದ್ದಾರೆ.ಈ ಪ್ರದೇಶದಲ್ಲಿ ನಿಯೋಜಿಸ­ಲಾಗಿದ್ದ ಯೋಧರನ್ನು ಅಪಹರಣ­ವಾಗಿರುವ ಬಾಲಕಿಯರ ಪತ್ತೆ ಕಾರ್ಯಾಚರಣೆಗೆ ನಿಯೋಜಿಸ­ಲಾಗಿತ್ತು. ಹಾಗಾಗಿ ಇಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ.ಭಾನುವಾರ ಉಗ್ರರು ಮತ್ತೊಂದು ಸುತ್ತಿನ ಅಪಹರಣ ನಡೆಸಿದ್ದು ೧೨–೧೫ ವರ್ಷ ವಯಸ್ಸಿನ ೧೧ ಬಾಲಕಿಯರನ್ನು ಅಪಹರಿಸಿದ್ದಾರೆ.

ಅಪಹೃತ ಬಾಲಕಿಯರ ಬಿಡುಗಡೆಗೆ ನೈಜೀರಿಯಾ ನಡೆಸುತ್ತಿರುವ ಪ್ರಯತ್ನದ ಬಗ್ಗೆಯೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಪಹೃತ ಬಾಲಕಿಯರ ಪೋಷಕರು ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.ಉಗ್ರವಾದದ ಕೊನೆ: ಈ ಅಪಹರಣ ಮೂಲಭೂತವಾದಿ ಇಸ್ಲಾಂ ಭಯೋ­ತ್ಪಾ­ದ­ಕರ ವಿರುದ್ಧದ ಹೋರಾಟ­ದಲ್ಲಿ ಮಹತ್ವದ ತಿರುವಾಗಿದೆ ಎಂದು ನೈಜೀರಿಯಾ ಅಧ್ಯಕ್ಷ ಗುಡ್‌ಲಕ್‌ ಜೊನಾಥನ್‌ ಹೇಳಿದ್ದಾರೆ.‘ಈ ಬಾಲಕಿಯರ ಅಪಹರಣ ನೈಜೀರಿಯಾದಲ್ಲಿ ಭಯೋತ್ಪಾದನೆ ಅಂತ್ಯವಾಗುವುದರ ಆರಂಭ ಎಂದು ನಾನು ಭಾವಿಸಿದ್ದೇನೆ’ ಎಂದು ಜೊನಾಥನ್‌ ಹೇಳಿದ್ದಾರೆ.ಜಗತ್ತು ಮೌನ ವಹಿಸಬಾರದು: ಮಲಾಲಾ

ಲಂಡನ್‌(ಪಿಟಿಐ):
ನೈಜೀರಿಯಾದ ೨೦೦ಕ್ಕೂ ಹೆಚ್ಚು ಶಾಲಾ ಬಾಲಕಿಯರನ್ನು ಅಪಹರಣ ಮಾಡಿರುವ ಬೊಕೊ ಹರಮ್‌ ಉಗ್ರರು ‘ಮೊದಲು ಹೋಗಿ ಇಸ್ಲಾಂ ಎಂದರೇನೆಂದು ಕಲಿತುಕೊಂಡು ಬರಬೇಕು’ ಎಂದು ತಾಲಿಬಾನ್‌ ಉಗ್ರರ ಗುಂಡೇಟಿನಿಂದ ಬದುಕಿ ಬಂದಿರುವ ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕುಗಳ ಕಾರ್ಯ­ಕರ್ತೆ ಮಲಾಲಾ ಯೂಸುಫ್‌ಜಾಯ್‌ ಹೇಳಿದ್ದಾರೆ.

‘ಈ ಅಪಹರಣದ ಬಗ್ಗೆ ಜಗತ್ತು ಮೌನ ವಹಿಸಬಾರದು’ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ 16 ವರ್ಷದ ಮಲಾಲಾ ವಿನಂತಿಸಿಕೊಂಡಿದ್ದಾರೆ.‘ಈ ಬಾಲಕಿಯರನ್ನು ತಮ್ಮ ಸಹೋದರಿಯರೆಂದು ಅವರು ಭಾವಿಸಬೇಕು. ತಮ್ಮ ಸ್ವಂತ ಸಹೋದರಿಯರನ್ನು ಅವರು ಬಂಧನಕ್ಕೊಳಪಡಿಸುವುದು ಮತ್ತು ಇಷ್ಟೊಂದು ಕೆಟ್ಟದಾಗಿ ನಡೆಸಿಕೊಳ್ಳುವುದು ಹೇಗೆ ಸಾಧ್ಯ’ ಎಂದು ಅಪಹರಣ ಮಾಡಿರುವ ಬಾಲಕಿಯರನ್ನು ಮಾರಾಟ ಮಾಡುತ್ತೇವೆ ಎಂಬ ಉಗ್ರರ ಬೆದರಿಕೆಗೆ ಮಲಾಲಾ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.